ಬುಕ್ಕಾಂಬುಧಿ ಪ್ರಾದೇಶಿಕ ಕನ್ನಡ ಶಬ್ದಕೋಶ

 

ಮೊದಲಿಗೊಂದು ಮಾತು

ಸುಮಾರು 1935-40ರ ಕಾಲ. ಸ್ವಾತಂತ್ರ್ಯಪೂರ್ವಕಾಲ, ಬ್ರಿಟಿಶರ ಆಡಳಿತಕಾಲ, ಹಳೇಮೈಸೂರಿನ ಅರಸರಕಾಲ. ಆಗೆಲ್ಲ ರುಪಾಯಿ, ಆಣೆ, ಕಾಸುಗಳ ವ್ಯವಹಾರ. ಅದೂ ಹಳ್ಳಿಗಾಡಿನಲ್ಲಿ ಅಪರೂಪ. ಕಾರಣ, ಜನಗಳು ಹಣ ಕೊಟ್ಟು-ಕೊಳ್ಳುವ ಪದಾರ್ಥಗಳು ಬಹಳ ಕಡಿಮೆ. ಪ್ರತಿಯೊಂದು ಸಂಸಾರದವರೂ ಬೇಕಾದ ದವಸಧಾನ್ಯಗಳನ್ನು ಹೊಲ-ಗದ್ದೆಗಳಲ್ಲಿ ಬೆಳೆದುಕೊಳ್ಳುತ್ತಿದ್ದರು. ಅವರ ಬೇಕು-ಬೇಡಗಳು ಕ್ಲುಪ್ತ. ಅವರವರಿಗೆ ಅವರದೇ ಆದ ನಿತ್ಯದ ಬದುಕು. ತೃಪ್ತಿಕರವಾದ ವಿನಿಮಯ ಜೀವನ. ಹಾಗಾಗಿ ಹಣವನ್ನು ಕೊಟ್ಟು-ಕೊಳ್ಳುವ ಪದಾರ್ಥಗಳು ಕೇವಲ ನಾಲ್ಕಾರು ಮಾತ್ರ. ನನಗೆ ತಿಳಿದಂತೆ ನಮ್ಮ ಹಳ್ಳಿಯಾದ ಬುಕ್ಕಾಂಬುಧಿಯಲ್ಲಿ (ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ) ವೀಳ್ಯದೆಲೆ, ಸೂಜಿ, ಹೊಲಿಯುವ ದಾರ ಮುಂತಾದುವನ್ನು ಕೊಳ್ಳುವಾಗ ಹಣದ ಬದಲು ರಾಗಿಯನ್ನೋ, ಅಕ್ಕಿಯನ್ನೋ ಕೊಡುತ್ತಿದ್ದರು. ಚಲಾವಣೆಯಲ್ಲಿದ್ದ ನಾಣ್ಯಗಳೆಂದರೆ - ಕಾಸು, ಮೂರುಕಾಸು (ತಾಮ್ರದ್ದು), ನಾಲ್ಕು ಕಾಸು, ಒಂದಾಣೆ, ಎರಡಾಣೆ (ನಿಕ್ಕಲ್ ಲೋಹ), ನಾಲ್ಕಾಣೆ (ನಿಕ್ಕಲ್ ಮತ್ತು ಬೆಳ್ಳಿ), ಎಂಟಾಣೆ, ರೂಪಾಯಿ ಬೆಳ್ಳಿಯದು. ನಾಲ್ಕಾಣೆಯನ್ನು ‘ಪಾವಲಿ’ ಎಂದೂ ಹೇಳುತ್ತಿದ್ದರು. ನಾಲ್ಕು ಕಾಸುಗಳಿಗೆ ‘ದುಡ್ಡು’ ಎಂದು ಹೆಸರು.

ಹಣಕಾಸಿನಂತೆಯೆ, ಅಳತೆಮಾಡುವ ಉಪಕರಣಗಳಾದ ಚಟಾಕು, ಅರ್ಧಪಾವು, ಪಾವು, ಅಚ್ಚೇರು, ಸೇರುಗಳನ್ನು ಅಕ್ಕಿ, ರಾಗಿ ಮುಂತಾದ ದವಸಧಾನ್ಯಗಳನ್ನು ಅಳತೆಮಾಡಲು ಉಪಯೋಗಿಸುತ್ತಿದ್ದರು. ಸೇರಿಗಿಂತಲೂ ದೊಡ್ಡದಾದ ಅಳತೆಗೆ ‘ಬಳ್ಳ’ (ಬಳ್ಳ ಎಂದರೆ ನಮ್ಮಲ್ಲಿ 8ಸೇರು ಕೊಳಗ) ಎಂದು ಹೇಳುತ್ತಾರೆ. ನೂರು ಸೇರಿಗೆ ‘ಪಲ್ಲ’ ಎಂದು, ಮುನ್ನೂರು ಸೇರಿಗೆ ‘ಖಂಡುಗ’ ಎಂದು ಹೆಸರು. ಬಟ್ಟೆಯನ್ನು ಅಳೆಯಲು - ಚೋಟು, ಗೇಣು, ಮೊಳ, ಮಾರು ಪದಗಳು ಬಳಕೆಯಲ್ಲಿದ್ದವು. ಜನಸಾಮಾನ್ಯರು ಕೈಯಲ್ಲೆ ಸೂಜಿಯಿಂದ ಬಟ್ಟೆ ಹೊಲಿದುಕೊಳ್ಳುತ್ತಿದ್ದರು. ಈಗ ನಾನಾರೀತಿಯ ಹೊಲಿಗೆಯಂತ್ರಗಳು ಬಂದಿವೆ. ಅಳತೆಮಾಡಲು ಮೀಟರ್‌ಪದ್ಧತಿ ಬಳಕೆಗೆ ಬಂದಿದೆ. ಬೆಲ್ಲ ಮುಂತಾದ ಪದಾರ್ಥಗಳನ್ನು ತಕ್ಕಡಿಯಲ್ಲಿ ತೂಕ ಮಾಡಿ ಕೊಡುವ ಅಳತೆಕಲ್ಲುಗಳಿಗೆ ‘ತೂಕದ ಬಟ್ಟು’ ಎಂದು ಹೆಸರು. ಅದು ಕಬ್ಬಿಣದ್ದು. ಅವುಗಳಿಗೂ ಕೂಡ - ಸೇರು, ಸವ್ವಾಸೇರು, ಅಡಿಸೇರು, ವೀಸೆ, ಪಂಚೇರು, ಧಡಿಯ, ಮಣ ಎಂದೆಲ್ಲ ಹೆಸರುಗಳು. ಈಗ ಕೇಜಿ, ಪೌಂಡು ತೂಕಗಳು, ಸೆಂಟಿಮೀಟರ್, ಕಿಲೋಮೀಟರ್ ದೂರದ ಅಳತೆಗಳು ಬಳಕೆಗೆ ಬರುತ್ತಿವೆ. ಆ ಕಾಲಕ್ಕೆ ಹೊತ್ತುಹೇಳಲು ಗಡಿಯಾರಗಳೇನೂ ಇರಲಿಲ್ಲ. ನಮ್ಮ ಅಜ್ಜಿ ಬಿಸಿಲಿನ ನೆರಳನ್ನು ನೋಡಿ ಎಷ್ಟುಗಂಟೆ ಇರಬಹುದೆಂದು ತಿಳಿಸುತ್ತಿದ್ದರು. ಸೂರ್ಯನಿಗೆ ಅಭಿಮುಖವಾಗಿ ನಿಂತು ನೆಲದಮೇಲೆ ಬೀಳುವ ನೆರಳಿನಿಂದ ಗಂಟೆಗಳನ್ನು ಗೊತ್ತುಮಾಡುತ್ತಿದ್ದರು, ಸೂರ್ಯನು ನೆತ್ತಿಯಮೇಲೆ ಬಂದಾಗ ಮಧ್ಯಾಹ್ನ 12 ಗಂಟೆ. ಸೂರ್ಯ ಮುಳುಗುವ ಸಮಯವಾದರೆ ಸುಮಾರು ಆರು ಗಂಟೆ, ಹೀಗೆಲ್ಲ ಇತ್ತು. ಈಗ ಮಕ್ಕಳ ಕೈಗೂ ಗಡಿಯಾರಗಳು ಬಂದಿವೆ, ನಾನಾರೀತಿಯ ಗಡಿಯಾರಗಳು ಬಳಕೆಗೆ ಬಂದಿವೆ. ಒಂದುಕಾಲದಲ್ಲಿ ಬೆಂಗಳೂರು, ಮೈಸೂರು ಅಂತಹ ದೊಡ್ಡನಗರಗಳಲ್ಲಿ ಕಲ್ಲುಗೋಪುರದ ಗಡಿಯಾರಗಳು ನಿರ್ಮಾಣವಾಗಿದ್ದವು. ನಮ್ಮ ಹಳ್ಳಿಗಾಡಿನಲ್ಲಿ (ಬುಕ್ಕಾಂಬುಧಿ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ) ಉಪಯೋಗಿಸುತ್ತಿದ್ದ ಶಬ್ದಗಳನ್ನು ಆಗಾಗ್ಗೆ ಮೆಲುಕುಹಾಕಬೇಕೆಂದು ಬಯಸಿ, ಒಂದೊಂದನ್ನೂ ಜ್ಞಾಪಕಕ್ಕೆ ಬಂದಬಂದಹಾಗೆ ಬರೆಯಹೊರಟಿದ್ದೇನೆ. ಎಷ್ಟೋ ವಸ್ತುಗಳ ಹೆಸರುಗಳು, ಆಚರಣೆಗಳು ನಮ್ಮ ಮಕ್ಕಳಿಗೆ ಗೊತ್ತಿಲ್ಲ. ಅಂದಮೇಲೆ ಮುಂದಿನ ಪೀಳಿಗೆಗೆ ಇವುಗಳನ್ನು ತಿಳಿಸಿದಾಗ ನಮ್ಮ ಮೊಮ್ಮಕ್ಕಳು, ಮರಿಮಕ್ಕಳು ಆ ಹೆಸರುಗಳನ್ನು ಯಾವುದಾದರೂ ಪ್ರಾಣಿಯೋ ಅಥವಾ ಹಳ್ಳಿಯ ಹೆಸರೋ ಎಂದು ತಪ್ಪಾಗಿ ಭಾವಿಸಿದರೆ ಆಶ್ಚರ್ಯವೇನಿಲ್ಲ! ಬುಕ್ಕಾಂಬುಧಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಳಸುವ ಪದಗಳನ್ನು ಅದೇರೂಪದಲ್ಲಿ ಅಥವಾ ಬೇರೆ ರೂಪದಲ್ಲಿ ಬಳಕೆ ಇರುವುದನ್ನು ನನ್ನ ತಿಳಿವಳಿಕೆಗೆ ಬಂದುದನ್ನು ಹಾಗೂ ಜಾನಪದಕೋಶ ಮೊದಲಾದ ಆಕರಗಳಿಂದಲೂ ಆರಿಸಿಕೊಟ್ಟಿದ್ದೇನೆ. ಆ ಸಂಪಾದಕರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಹೀಗೆ ಬರೆದು ಸಿದ್ಧಪಡಿಸಿದ ಸಾಮಗ್ರಿಯನ್ನು ನನ್ನ ಮಿತ್ರರಾದ ಪ್ರೊ. ಜಿ. ಅಶ್ವತ್ಥನಾರಾಯಣ ಅವರಿಗೆ ತೋರಿಸಿದಾಗ, ಅವರು “ಇದು ಶ್ಲಾಘನೀಯವಾದ ಕಾರ್ಯ. ಕನ್ನಡದಲ್ಲಿ ನಾನಾ ಬಗೆಯ ನಿಘಂಟುಗಳು ಪ್ರಕಟವಾಗಿವೆ. ಆದರೆ ಪ್ರಾದೇಶಿಕ ಶಬ್ದಗಳನ್ನೇ ಕುರಿತು ಬರೆದಿರುವ ಪ್ರತ್ಯೇಕ ನಿಘಂಟು ಎಂದರೆ ‘ಚಿಗಟೇರಿ ಶಬ್ದಕೋಶ’ವನ್ನು ಬಿಟ್ಟರೆ ಬೇರಾವುದೂ ನನ್ನ ಗಮನಕ್ಕೆ ಬಂದಿಲ್ಲ. ಕನ್ನಡದ ಉಳಿದ ನಿಘಂಟುಗಳಲ್ಲಿ ಆಡುಮಾತುಗಳು, ಪ್ರಾದೇಶಿಕ ಶಬ್ದಗಳು, ಅರ್ಥವಿವರಣೆಗಳು, ಅಲ್ಲಲ್ಲಿ ಸಾಂದರ್ಭಿಕವಾಗಿ ಸೇರಿವೆ. ಪ್ರತ್ಯೇಕವಾಗಿ ಪ್ರಕಟವಾಗಿಲ್ಲ. ಕನ್ನಡದಲ್ಲಿ ನಿಮ್ಮದೇ ಎರಡನೆಯ ಪ್ರಾದೇಶಿಕ ಕನ್ನಡ ನಿಘಂಟು. ಅಮೆರಿಕೆಯಲ್ಲಿ ನೆಲೆಸಿದ್ದು ಒಬ್ಬಂಟಿಗರಾಗಿ ಇಳಿವಯಸ್ಸಿನಲ್ಲಿ (88ದಾಟಿದವರಾಗಿ) ಈ ಸಾಹಸಕ್ಕೆ ಇಳಿದಿರುವುದು ಇತರರಿಗೆ ಸ್ಫೂರ್ತಿದಾಯಕವಾದ ಸಂಗತಿಯಾಗಿದೆ” ಎಂದು ಹೇಳಿದ್ದಷ್ಟೇ ಅಲ್ಲದೆ ನಾನಾರೀತಿಯಲ್ಲಿ ಶ್ರಮವಹಿಸಿ ಈ ನಿಘಂಟು ನಿರ್ಮಾಣಕಾರ್ಯದಲ್ಲಿ ಸಹಸಂಪಾದಕರಾಗಿ ಕೆಲಸಮಾಡಿದ್ದಾರೆ. ಇದರ ಯಶಸ್ಸಿಗೆ ಭಾಗಿಗಳಾಗಿದ್ದಾರೆ. ಅವರ ಶ್ರಮಕ್ಕೆ, ಸೇವೆಗೆ, ಸ್ನೇಹಾಭಿಮಾನಕ್ಕೆ ನಾನು ಕೃತಜ್ಞನಾಗಿದ್ದೇನೆ. ಹಾಗೂ ಕಂಪ್ಯೂಟರ್ ವಿಜ್ಞಾನದಲ್ಲಿ ಪರಿಶ್ರಮ ಪಡೆದಿರುವ ಸ್ವಾತಿ ವಿವೇಕ್‌ರವರು ಗೂಗಲ್ ಮೂಲಕ ಚಿತ್ರಗಳನ್ನು ಅಳವಡಿಸಿಕೊಟ್ಟರು. ಅಲ್ಲದೆ ಅನೇಕ ತಿದ್ದುಪಡಿಗಳನ್ನು ಮಾಡುವಾಗ ಪದ್ಮ ಮತ್ತು ಅನಂತ್‌ಹೆಗ್ಡೆಯವರು ಬಹಳವಾಗಿ ಸಹಕರಿಸಿದರು. ಅವರಿಗೂ ನನ್ನ ಅಭಿವಂದನೆಗಳು.

“ಬುಕ್ಕಾಂಬುಧಿ ಪ್ರಾದೇಶಿಕ ಕನ್ನಡ ಶಬ್ದಕೋಶ”ವನ್ನು ತಯಾರುಮಾಡುವಲ್ಲಿ ಈ ಕೆಳಕಂಡ ಶಬ್ದಕೋಶಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದೇನೆ. ಆ ಕೋಶಗಳ ಎಲ್ಲ ಸಂಪಾದಕರಿಗೂ ನಾನು ಆಭಾರಿಯಾಗಿದ್ದೇನೆ.

ಕನ್ನಡ ಜಾನಪದ ಕೋಶ: ಕರ್ನಾಟಕ ಜಾನಪದ ಪರಿಷತ್ತು (ನಂ. ೭, ೫ನೇ ರಸ್ತೆ, ೪ನೇ ಬ್ಲಾಕು, ಕುಮಾರಾಪಾರ್ಕ್ ವೆಸ್ಟ್, ಬೆಂಗಳೂರು ೫೬೦ ೦೨೦)
ಸಂಕ್ಷಿಪ್ತ ಕನ್ನಡ ನಿಘಂಟು: ಕನ್ನಡ ಸಾಹಿತ್ಯ ಪರಿಷತ್ತು (೨೦೧೦) (ಚಾಮರಾಜಪೇಟೆ, ಬೆಂಗಳೂರು ೫೬೦ ೦೧೮)
ಕನ್ನಡ ರತ್ನಕೋಶ: ಕನ್ನಡ ಸಾಹಿತ್ಯ ಪರಿಷತ್ತು (೨೦೦೧) (ಚಾಮರಾಜಪೇಟೆ, ಬೆಂಗಳೂರು ೫೬೦ ೦೨೦)
ಜಾನಪದ ಕೋಶ: ಸಂಪಾದಕರು: ಹೆಚ್. ನಂಜೇಗೌಡ (೨೦೦೨) ನಿವೃತ್ತ ಕನ್ನಡ ಪ್ರಾಧ್ಯಾಪಕರು, ಸರಸ್ವತಿನಿವಾಸ, ಹಾರೋಹಳ್ಳಿ, ಪಾಂಡವಪುರ
ಚಿಗಟೇರಿ ಪದಕೋಶ: ಸಂಪಾದಕರು: ಮುದೇನೂರು ಸಂಗಣ್ಣ (೧೯೯೭) ಎಂ. ಜಿ. ಎಂ ಕಾಲೇಜು, ಉಡುಪಿ

ನಮ್ಮೂರಿನ ಅನೇಕ ವೃತ್ತಿಕಾರರ ಮನೆತನಗಳಲ್ಲಿ ಧಾರ್ಮಿಕ ಆಚಾರವಿಚಾರಗಳಿಗೆ ಸಂಬಂಧಿಸಿದಂತೆ ವೃತ್ತಿಗೆ ಸೇರಿದ ಅನೇಕ ಪದಗಳು ಬಳಕೆಯಲ್ಲಿವೆ. ಆ ಪೈಕಿ ಬಾಲ್ಯದಲ್ಲಿ ನಾನು ನಮ್ಮೂರಿನಲ್ಲಿ, ಸುತ್ತಮುತ್ತಲ ಜನರು ನಿತ್ಯಜೀವನದಲ್ಲಿ ಬಳಸುತ್ತಿದ್ದ ಶಬ್ದಗಳನ್ನು, ಅವರ ಜೀವನವಿಧಾನಗಳನ್ನು, ಆಚರಣೆಗಳನ್ನು ನನಗೆ ತಿಳಿದಮಟ್ಟಿಗೆ ಈ ಕೋಶದಲ್ಲಿ ವಿವರಣೆಸಹಿತ ಕೊಟ್ಟಿದ್ದೇನೆ. ಇಲ್ಲಿ ಬಿಟ್ಟುಹೋದ ಶಬ್ದಗಳನ್ನೂ ಮತ್ತು ಇಲ್ಲಿ ಕೊಟ್ಟ ವಿವರಣೆಯಲ್ಲಿ, ಆಚರಣೆಯ ವಿಧಾನಗಳನ್ನು ತಿಳಿಸಿರುವುದರಲ್ಲಿ ತಪ್ಪುಗಳಿದ್ದರೆ, ಅವುಗಳನ್ನೂ ವಿದ್ವಾಂಸರು, ಭಾಷಾತಜ್ಞರು, ನಮ್ಮ ಊರಿನ ಬೇರೆಬೇರೆ ವೃತ್ತಿಜನರು, ಹಿರಿಯರು ನನ್ನ ಗಮನಕ್ಕೆ ತಂದರೆ ಕೃತಜ್ಞತೆಯಿಂದ ಈ ಕೋಶದ ಮುಂದಿನ ಆವೃತ್ತಿಯಲ್ಲಿ ಅಳವಡಿಸುತ್ತೇನೆ. ಸಹೃದಯರೆಲ್ಲರೂ ಈ ಕಾರ್ಯದಲ್ಲಿ ನೆರವಾಗುತ್ತಾರೆಂದು ನಂಬಿದ್ದೇನೆ. ಸನ್ಮಾನ್ಯ ಓದುಗರು ಈ ಕೋಶದ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ಕೆಳಕಂಡ ಸಂಪಾದಕರ ವಿಳಾಸಕ್ಕೆ ತಿಳಿಸಬೇಕಾಗಿ ಕೋರುತ್ತೇನೆ.


ಬುಕ್ಕಾಂಬುಧಿ ಕೃಷ್ಣಮೂರ್ತಿ (ಸಂಪಾದಕ)
Iselin, NJ 08830, USA
ಸೆಪ್ಟೆಂಬರ್ 16, 2014


ನಿಘಂಟಿನ ರಚನೆಯನ್ನು ಕುರಿತು

ಕನ್ನಡದಲ್ಲಿ ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶೆ ಇತ್ಯಾದಿ ಸಾಹಿತ್ಯಕೃತಿಗಳು ಅಪಾರ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಆದರೆ ನಿಘಂಟು, ಛಂದಸ್ಸು, ವ್ಯಾಕರಣ, ಅಲಂಕಾರಶಾಸ್ತ್ರ, ವಿಜ್ಞಾನ, ಕಲೆ, ಭಾಷೆ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟ ಶಾಸ್ತ್ರಗ್ರಂಥಗಳು ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗುತ್ತಿದ್ದರೂ ಕನ್ನಡದ ಅವಶ್ಯಕತೆ, ಬೆಳವಣಿಗೆಯ ದೃಷ್ಟಿಯಲ್ಲಿ ಏನೇನೂ ಸಾಲದು. ಪಾಂಡಿತ್ಯದಫಲವಾಗಿ ಮೂಡಿಬರುವ ಈ ಬಗೆಯ ಗ್ರಂಥಗಳನ್ನು ರಚಿಸಬೇಕಾದರೆ ಹತ್ತಾರು ವರ್ಷಗಳ ಅಧ್ಯಯನ, ಶ್ರಮ, ನಿಷ್ಠೆ, ಸತತಪ್ರಯತ್ನ ಬೇಕಾಗುತ್ತದೆ. ಈ ರೀತಿಯ ವಿದ್ವಾಂಸರು ನಮ್ಮಲ್ಲಿ ವಿರಳ. ಏಕೆಂದರೆ ಇಂದು ಓದುವುದಕ್ಕಿಂತ ಬರೆಯುವುದು ಹೆಚ್ಚಾಗಿದೆ. ಶೀಘ್ರಪ್ರಚಾರಕ್ಕೆ ಸಾಹಿತಿಗಳೂ ವಿದ್ವಾಂಸರೂ ಆಸಕ್ತರಾಗಿದ್ದಾರೆ. ಎಲ್ಲೋ ಕೆಲವು ಆಸಕ್ತಅಧ್ಯಯನಕಾರರು, ವಿದ್ವಾಂಸರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೇವಲ ಕನ್ನಡಕ್ಕೊಂದು ವಿಶೇಷ ಕೊಡುಗೆಯನ್ನು ತಮ್ಮ ಕೈಲಾದಮಟ್ಟಿಗೆ ಶ್ರಮಿಸಿ ನೀಡಬೇಕೆಂಬ ಹಂಬಲವುಳ್ಳವರಾಗಿದ್ದಾರೆ. ತಾವು ವಿದ್ವಾಂಸರಾಗದಿದ್ದರೂ, ವಿಶೇಷಾಧ್ಯಯನಕ್ಕೆ ಅನುಕೂಲಗಳಿಲ್ಲದಿದ್ದರೂ ಇದ್ದಷ್ಟೇ ಸಾಧ್ಯತೆಗಳಲ್ಲಿ ನಿರಂತರ ಪರಿಶ್ರಮದಿಂದ ಕನ್ನಡಕ್ಕೆ ದುಡಿಯುವ ಕನ್ನಡಿಗರು, ನಮ್ಮಲ್ಲಿ ಮತ್ತು ವಿದೇಶಗಳಲ್ಲಿ ಹಲವಾರು ಜನ ಇದ್ದಾರೆ. ಅವರಲ್ಲಿ ಬುಕ್ಕಾಂಬುಧಿ ಕೃಷ್ಣಮೂರ್ತಿ ಅವರೂ ಒಬ್ಬರು. ‘ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡಸೇವೆ ಮಾಡುತ್ತಿರು’ ಎಂಬ ಧ್ಯೇಯದ ಕನ್ನಡಿಗರಲ್ಲಿ ಅವರೊಬ್ಬರು.

ಹತ್ತಾರು ವರ್ಷಗಳಿಂದ (1997) ಅಮೆರಿಕೆಯಲ್ಲಿ ನೆಲಸಿರುವ, ಬೆಂಗಳೂರಿನಲ್ಲಿ ಬಾಳಿದ ಕನ್ನಡಿಗರು. ಚಿಕ್ಕಮಗಳೂರಿನ ಬುಕ್ಕಾಂಬುಧಿ ಊರಿನಲ್ಲಿ ಹುಟ್ಟಿ ಬೆಳೆದವರು. ಒಳ್ಳೆಯ ಸಾಹಿತ್ಯಾಭಿರುಚಿ ಉಳ್ಳವರು. ಹಲವು ವರ್ಷಗಳ ಕೆಳಗೆ ‘ಬರಹ’ ಖ್ಯಾತಿಯ ವಾಸು ಅವರ ತಂದೆಯವರೂ, ಅನಕೃ ಅವರ ಪರಮಭಕ್ತರೂ ಆದ ಕೆ. ಟಿ. ಚಂದ್ರಶೇಖರ್ ಅವರು ಅವರ ಪುಸ್ತಕವೊಂದಕ್ಕೆ ಮುನ್ನುಡಿ ಬರೆಸಲು ನನಗೆ ಬುಕ್ಕಾಂಬುಧಿ ಕೃಷ್ಣಮೂರ್ತಿ ಅವರ ಪರಿಚಯ ಮಾಡಿಸಿದರು. ಹತ್ತಾರು ವರ್ಷಗಳಿಂದ ಬೆಂಗಳೂರಿನ ಜಯನಗರದಲ್ಲಿ ನಮ್ಮ ಮನೆಯಿಂದ ಇನ್ನೂರಡಿ ದೂರದಲ್ಲಿದ್ದರೂ ಅವರ ಪರಿಚಯ ಇರಲಿಲ್ಲ. ಪಕ್ಕದಮನೆಯಲ್ಲಿದ್ದರೂ ಏನೇನೂ ಪರಿಚಯವಿಲ್ಲದ ಪರಿಸ್ಥಿತಿ ಇಂದು ಬೆಂಗಳೂರಿನಲ್ಲಿದೆ. ನಿಸಾರ್ ಅಹಮದ್, ಕೆ. ಎಸ್. ನರಸಿಂಹಸ್ವಾಮಿ, ಪು.ತಿ.ನ ಮೊದಲಾದ ಅನೇಕ ಸಾಹಿತಿಗಳು ನಮ್ಮ ಬಡಾವಣೆಯಲ್ಲಿ ಅಕ್ಕಪಕ್ಕದ ರಸ್ತೆಗಳಲ್ಲಿ ಹತ್ತಾರು ವರ್ಷಗಳು ಇದ್ದರೂ ಸುತ್ತಮುತ್ತಲಿನ ಅನೇಕರಿಗೆ ಗೊತ್ತೇ ಇರಲಿಲ್ಲ. ಅವರ ಮನೆ ಎಲ್ಲಿ? ಎಂದು ಅನೇಕರು ನನ್ನಲ್ಲಿ ಹುಡುಕಿಕೊಂಡು ಬರುತ್ತಿದ್ದರು. ಹೀಗಾಗಿ ಬುಕ್ಕಾಂಬುಧಿಯವರ ಪರಿಚಯ ನನಗಾಗಿರಲಿಲ್ಲ. ಅಂತೂ ಒಟ್ಟಿನಲ್ಲಿ ಕೆ. ಟಿ. ಚಂದ್ರಶೇಖರ್ ಅವರಿಂದ ಪರಿಚಯವಾಯಿತು.

ಪರಿಚಯವಾದಮೇಲೆ ಬುಕ್ಕಾಂಬುಧಿ ಅವರು ತಾವು ಬರೆದ ಹಲವು ಪುಸ್ತಕಗಳನ್ನು, ಪ್ರಕಟಣೆಗೆ ಮೊದಲು ಅಭಿಪ್ರಾಯಕ್ಕೆ, ಪರಿಷ್ಕರಣೆಗೆ ನನಗೆ ತೋರಿಸಿದರು. ಅಮೆರಿಕೆಯಲ್ಲಿ ಇಳಿವಯಸ್ಸಿನಲ್ಲಿ ಹತ್ತಾರು ವರ್ಷಗಳಿಂದ ಇದ್ದರೂ, ಸುಮ್ಮನೆ ಕೂಡದೆ ಕನ್ನಡಗ್ರಂಥ ರಚನೆಯಲ್ಲಿ ನಿರತರಾದುದನ್ನೂ ಅವರ ಕನ್ನಡಾಭಿಮಾನವನ್ನೂ ಕಂಡು ಬೆರಗಾದೆ. ಅವರ ತಂದೆಯನ್ನು ಕುರಿತು ಗ್ರಂಥ ಬರೆದಾಗ ಹೇಳಿದರು “ನಮ್ಮ ಕುಟುಂಬದವರಿಗೆ ನಮ್ಮ ವಂಶದ ಹಿರಿಯರ ಪರಿಚಯವಿಲ್ಲ, ಅವರೆಲ್ಲ ಅದ್ಭುತ ಸಾಧನೆಮಾಡಿದ್ದಾರೆ. ಆದರ್ಶ ಬದುಕಿನಲ್ಲಿ ಬಾಳಿದ್ದಾರೆ. ಅದಕ್ಕಾಗಿ ವೆಂಕಟರಮಣ ಭಾಗವತರನ್ನು (ನಮ್ಮ ತಂದೆ) ಕುರಿತು ಬರೆದೆ. ನಾಳೆ ಮಕ್ಕಳು-ಮೊಮ್ಮಕ್ಕಳಿಗೆ ನಾವು ಎಂಥ ವಂಶದವರು ಎಂಬ ಅಭಿಮಾನವಿರಲಿ ಎಂದು ನನ್ನಾಸೆ ಎಂದರು.”

ಈಚೆಗೆ ಅವರು ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಬಂದು ಹಸ್ತಪ್ರತಿಯೊಂದನ್ನು ತೋರಿಸಿದರು. ಪ್ರತಿಸಲ ಬೆಂಗಳೂರಿಗೆ ಬಂದಾಗ ಎಲ್ಲಾ ಬಂಧುವರ್ಗವನ್ನು, ಕುಟುಂಬದವರನ್ನು, ಮಿತ್ರರನ್ನು ಭೇಟಿಮಾಡುವುದು, ಯಾವುದಾದರೂ ಪ್ರದೇಶಕ್ಕೆ ಪ್ರವಾಸಹೋಗಿಬರುವುದು ಅವರ ಹವ್ಯಾಸ. ಜಗತ್ತಿನ ನಾನಾ ಪ್ರದೇಶಗಳನ್ನೂ, ಭಾರತದ ಎಲ್ಲ ಪ್ರದೇಶಗಳನ್ನೂ ಸುತ್ತಿದ್ದಾರೆ. ಪ್ರವಾಸಗ್ರಂಥವೊಂದನ್ನು ಬರೆದಿದ್ದಾರೆ. ಪ್ರತಿಬಾರಿ ಬೆಂಗಳೂರಿಗೆ ಬಂದಾಗ ಯಾವುದಾದರೂ ಸಾಹಿತ್ಯಕೃತಿಯ ಹಸ್ತಪ್ರತಿ ತಂದು, ನೋಡಿಕೊಡಿ; ತಿದ್ದಿಕೊಡಿ; ಅಭಿಪ್ರಾಯಕೊಡಿ; ಎನ್ನುತ್ತಿದ್ದರು. ಈ ಬಾರಿ ಅವರು ತಂದದ್ದು ಸಾಹಿತ್ಯಕೃತಿ ಅಲ್ಲ. ನಿಘಂಟುಪ್ರತಿ. ನನಗೆ ಆಶ್ಚರ್ಯವಾಯಿತು. ಅಮೆರಿಕೆಯಲ್ಲಿ ಒಬ್ಬರೇ ಕೂತು ಯಾವುದೇ ತಕ್ಕ ಆಕರಗಳ ಮತ್ತು ಗ್ರಂಥಗಳ ನೆರವೂ ಇಲ್ಲದೆ, ಸ್ವಂತ ಅನುಭವ ಅಭಿಮಾನದಿಂದ, ತಮ್ಮ ಊರಿನ ಜನ ಬಳಸುತ್ತಿದ್ದ ಭಾಷೆಯನ್ನು ಕುರಿತು, ತಮ್ಮ ಕಾಲದ ಆಚರಣೆಗಳನ್ನು ಕುರಿತು, ಹಿರಿಯರ ಪದ್ಧತಿಗಳನ್ನು ಕುರಿತು ರಚಿಸಿದ ಪ್ರಾದೇಶಿಕ-ಸಾಮಾಜಿಕ ನಿಘಂಟಿನ ಕರಡುಪ್ರತಿ ತಂದಿದ್ದರು. “ನಮ್ಮೂರಿನ ಭಾಷೆಯನ್ನು ಕನ್ನಡವನ್ನು, ನಮ್ಮ ಹಿರಿಯರ ಆಚರಣೆ ಅನುಭವಗಳನ್ನು ಕುರಿತು ನಮ್ಮ ಈಗಿನ ತಲೆಮಾರಿನವರಿಗೆ ಪರಿಚಯವೇ ಇಲ್ಲ. ಅದರಲ್ಲೂ ಯುವಕರಿಗೆ ಏನೇನೂ ಪರಿಚಯವಿಲ್ಲ. ಅದನ್ನು ತಿಳಿಸಬಲ್ಲ ಹಿರಿಯರೂ ಕಡಿಮೆ ಆಗುತ್ತಿದ್ದಾರೆ. ಇನ್ನು ನಮ್ಮ ಆಡುಮಾತಿನಲ್ಲಿ ನಾವು ಬಳಸುತ್ತಿದ್ದ ಅಚ್ಚಕನ್ನಡಪದಗಳು, ನುಡಿಗಟ್ಟುಗಳು ಮರೆಯಾಗುತ್ತಿವೆ. ಇವೆಲ್ಲವನ್ನೂ ನನಗೆ ತಿಳಿದಮಟ್ಟಿಗೆ ಒಂದುಕಡೆ ಬರೆದಿಟ್ಟಿರುವ ಗ್ರಂಥವೇ ‘ಬುಕ್ಕಾಂಬುಧಿ ಕೋಶ’. ನಾನು ವಿದ್ವಾಂಸನಲ್ಲ, ಪಾಂಡಿತ್ಯವಿಲ್ಲ, ಕನ್ನಡದ ವಿಶೇಷ ಅಧ್ಯಯನ ಮಾಡಿದವನೂ ಅಲ್ಲ. ಕನ್ನಡಸೇವೆಯನ್ನು ಕೈಲಾದಷ್ಟು ಮಾಡಬೇಕು, ಎಂಬ ಆಸೆಯಿಂದ ಈಗಿನ ಯುವಜನರಿಗೆ ತಿಳಿಸಬಹುದಾದ ನಮ್ಮ ಹಿರಿಯರ ಜೀವನಸಾಧನೆ, ಅವರ ಕನ್ನಡಭಾಷೆಯ ಬಳಕೆಯಲ್ಲಿ ಇದ್ದ ಕನ್ನಡಪದ ಬಳಕೆ, ನುಡಿಗಟ್ಟು ಬಳಕೆ, ಭಾಷೆಯ ಸೊಗಸು, ನಮ್ಮ ಸಂಸ್ಕೃತಿ, ಹಬ್ಬಹರಿದಿನಗಳ ಆಚರಣೆ ಇಲ್ಲಿದೆ. ಬುಕ್ಕಾಂಬುಧಿ ಮತ್ತು ಸುತ್ತಮುತ್ತಲ ಜನರ ಬದುಕಿನ ಭಾಷೆ ಇತ್ಯಾದಿ ತಿಳಿಸುವ ಪ್ರಯತ್ನಮಾಡಿದ್ದೇನೆ” ಎಂದು ಗ್ರಂಥವನ್ನೂ ಕೊಟ್ಟರು.

ನಾನು ಪುಟಗಳನ್ನು ತಿರುವಿ ಹಾಕಿದಂತೆಲ್ಲಾ ಬುಕ್ಕಾಂಬುಧಿ ಕೃಷ್ಣಮೂರ್ತಿಗಳ ಕನ್ನಡಭಾಷಾ ಪರಿಚಯ, ಅಭಿಮಾನ, ಆಸಕ್ತಿ ಮುಂದಿನ ತಲೆಮಾರಿಗೆ ಕನ್ನಡಪದಸಂಪತ್ತು, ಊರಿನ ಆಚರಣೆಗಳು, ಜನರ ಜೀವನಪರಿಚಯಗಳನ್ನು ತಿಳಿಸಬೇಕೆಂಬ ಹಂಬಲ ಕಂಡು, ಅಮೆರಿಕೆಯಲ್ಲಿ ಕುಳಿತು ಈ ಬಗ್ಗೆ ಒಂಟಿಯಾಗಿ ನಡೆಸಿದ ಪ್ರಯತ್ನಕಂಡು, ಹೆಮ್ಮೆಯಾಯಿತು. ಸಂತೋಷವಾಯಿತು. ಬೆಂಗಳೂರಿನ ಕಾಫ಼ಿಬೋರ್ಡಿನಲ್ಲಿ ಉದ್ಯೋಗಿಯಾಗಿ ನಿವೃತ್ತರಾದಮೇಲೆ ಅಮೆರಿಕೆಯಲ್ಲಿ ಮಗಳಮನೆಗೆ ಹೋದವರು ಅಲ್ಲಿಯೇ ನೆಲಸಿದ ಇವರ ಕನ್ನಡಕಾಯಕ ಕಂಡಾಗ ಇವರಂತೆಯೇ ಎಲ್ಲಾ ಅಮೆರಿಕಾ ಕನ್ನಡಿಗರೂ ಕನ್ನಡಚಿಂತನೆ ಮಾಡಿದರೆ ಎಷ್ಟು ಚೆನ್ನ ಎನ್ನಿಸಿತು!

ಇವರ ನಿಘಂಟಿನ ಹಸ್ತಪ್ರತಿ ಕಂಡಾಗ ಇದೊಂದು ವಿಶೇಷ ಕೃತಿ ಎನ್ನಿಸಿತು. ಏಕೆಂದರೆ ಕನ್ನಡದಲ್ಲಿ ಹತ್ತಾರು ಬಗೆಬಗೆಯ ನಿಘಂಟುಗಳಿವೆ ನಿಜ. ಆದರೆ ಸಚಿತ್ರ-ಸೋದಾಹರಣೆಯ ಪ್ರಾದೇಶಿಕ-ಸಾಮಾಜಿಕ ನಿಘಂಟುಗಳಿಲ್ಲ. ಚಿಗಟೇರಿ ಶಬ್ದಕೋಶವೊಂದು ನನ್ನ ಗಮನಕ್ಕೆ ಬಂದಿದೆ. ಇನ್ನು ಜಾನಪದಕೋಶಗಳು ಕೆಲವು ಪ್ರಕಟವಾಗಿವೆ. ಅವುಗಳು ನಿರ್ದಿಷ್ಟ ಪ್ರದೇಶದ ಆಚಾರವಿಚಾರಗಳನ್ನು ತಿಳಿಸಲು ಸೀಮಿತವಾಗಿಲ್ಲ. ಇನ್ನು ಕನ್ನಡ ನಿಘಂಟುಗಳಲ್ಲಿ ಸಾಂದರ್ಭಿಕವಾಗಿ ಆಡುಮಾತುಗಳು, ಗ್ರಾಮ್ಯಪ್ರಯೋಗಗಳು, ರೂಢಿಯನುಡಿಗಳು, ನುಡಿಗಟ್ಟುಗಳು, ಗಾದೆಗಳು ಉದಾಹರಣೆಯಾಗಿ ಬಂದಿವೆ. ಆದರೆ ಸಮಗ್ರವಾಗಿ, ಪ್ರತ್ಯೇಕವಾಗಿ ಬಂದಿಲ್ಲ. ಅದು ಆ ನಿಘಂಟುಗಳ ಉದ್ದೇಶವೂ ಅಲ್ಲ. ಒಂದು ಪ್ರದೇಶದ ಜನರ ಆಡುಭಾಷೆಯ ಪದಗಳನ್ನೂ, ಆ ಮೂಲಕ ಅಲ್ಲಿಯ ಜನರ ಆಚಾರ, ವಿಚಾರ, ಸಂಪ್ರದಾಯ ನುಡಿಗಟ್ಟುಗಳನ್ನೂ ವಿಶೇಷವಾಗಿ ಮಧ್ಯಮವರ್ಗದವರ (ಬ್ರಾಹ್ಮಣವರ್ಗದವರ) ನಡೆನುಡಿಗಳನ್ನು ತಿಳಿಸುವ ಪ್ರಯತ್ನದ ಸಚಿತ್ರ-ಸೋದಾಹರಣ ಪದವಿವರಣೆಗಳ ಸಾಮಾಜಿಕ ನಿಘಂಟು ಎಂದರೆ ನನಗೆ ತಿಳಿದಮಟ್ಟಿಗೆ ಕನ್ನಡದಲ್ಲಿ ಇದೇ ಮೊದಲನೆಯದು ಎಂದು ಹೇಳಿದರೆ ತಪ್ಪಾಗದು.

ಈ ನಿಘಂಟನ್ನು ಅಕಾರಾದಿಯಾಗಿ ರಚಿಸಿದೆ. ಪರಿಷತ್ತಿನ ನಿಘಂಟಿನ ಅಕಾರಾದಿಕ್ರಮವನ್ನು ಅನುಸರಿಸಿದೆ. ಏಕೆಂದರೆ ಕನ್ನಡದ ನಿಘಂಟುಗಳಲ್ಲಿ ಹಲವುರೀತಿಯ ಅಕಾರಾದಿಕ್ರಮಗಳನ್ನು ಅನುಸರಿಸಲಾಗಿದೆ. ಉದಾಹರಣೆಗೆ ಅನುಸ್ವಾರ ವಿಸರ್ಗದ ಪದಗಳನ್ನು ಇಲ್ಲಿ ಮೊದಲಿಗೆ ಕೊಟ್ಟರೆ ಕೆಲವು ಕನ್ನಡ ನಿಘಂಟುಗಳಲ್ಲಿ ಸ್ವರಪದಗಳ ಅಕಾರದ ಕೊನೆಯಲ್ಲಿ ಕೊಡಲಾಗಿದೆ. ಅನುನಾಸಿಕವರ್ಣಗಳನ್ನೊಳಗೊಂಡ ಪದರೂಪಗಳು ಕೆಲವು ನಿಘಂಟುಗಳಲ್ಲಿದ್ದರೆ (ನಿಬನ್ಧ) ಕಂನಡ ಇತ್ಯಾದಿ) ಸೊನ್ನೆಬಳಕೆ ಅನೇಕ ನಿಘಂಟುಗಳಲ್ಲಿವೆ. ಈ ಬಗ್ಗೆ ಹೆಚ್ಚಿನ ವಿಚಾರಪ್ರಸ್ತಾಪ ಇಲ್ಲಿ ಅನಗತ್ಯ. ಒಟ್ಟಿನಲ್ಲಿ ಪರಿಷತ್ತಿನ ನಿಘಂಟಿನ ಕ್ರಮ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದಷ್ಟೇ ಹೇಳಬಹುದು. ಮತ್ತು ಶಾಸ್ತ್ರೀಯವಾಗಿದೆ. ಈ ನಿಘಂಟಿನಲ್ಲಿ ಬಳಸಿದ ಶಬ್ದಗಳಿಗೆ ಬೇರೆ ಪ್ರದೇಶಗಳಲ್ಲಿ ಬೇರೆ ಶಬ್ದಗಳಿದ್ದರೆ ಅವುಗಳನ್ನು ಸಮಾನಪದಗಳು ಎಂದು ಕೊಟ್ಟಿದೆ. ಉಚ್ಚಾರಣಾ ವ್ಯತ್ಯಾಸದಿಂದ ಪದಗಳನ್ನು ಭಿನ್ನರೂಪಗಳು ಎಂದು ಸೂಚಿಸಿದೆ. ಪದಗಳಲ್ಲಿ ಎಷ್ಟೋ ಪದಗಳಿಗೆ ಬೇರೆಬೇರೆ ಅರ್ಥಗಳು, ಆಚರಣೆಗಳು ಇದ್ದರೂ ಇಲ್ಲಿ ಈ ಪ್ರದೇಶದಲ್ಲಿರುವ ಆಚರಣೆ, ಅರ್ಥಗಳನ್ನು ಮಾತ್ರ ಕೊಟ್ಟಿದೆ. ಓದುಗರ ಅನುಕೂಲಕ್ಕಾಗಿ ಪ್ರಾರಂಭದಲ್ಲಿ ಅಕಾರಾದಿಪದಪಟ್ಟಿ ಮತ್ತು ಪದಸಂಖ್ಯೆ ಕೊಟ್ಟಿದೆ. ಪದದ ಉಲ್ಲೇಖಕ್ಕೆ ಮತ್ತು ಪದ ಗುರುತಿಸಲು ಈ ಸಂಖ್ಯೆ ನೆರವಾಗುತ್ತದೆ. ಅನುಬಂಧದಲ್ಲಿ ವಿಷಯಾನುಸಾರ ವರ್ಗೀಕರಿಸಿದ ಪದಪಟ್ಟಿಯೊಂದನ್ನು ವಿಷಯಾಭ್ಯಾಸಿಗಳಿಗಾಗಿ ನೀಡಿದೆ. ಅನೇಕ ವಸ್ತುಗಳು ದಿನಬಳಕೆಯಲ್ಲಿ ಈಗ ಕಣ್ಮರೆಯಾಗಿವೆ: ರಾಗಿಕಲ್ಲು, ಗಾಣ, ನೀರೆತ್ತುವ ಏತ, ಒತ್ತುಸೇವಿಗೆಯಂತ್ರ ಇತ್ಯಾದಿ. ಇಂತಹವನ್ನು ಅರ್ಥಮಾಡಿಕೊಳ್ಳಲು ನೂರಾರು ಚಿತ್ರಗಳನ್ನು ಸೇರಿಸಿ ಈ ನಿಘಂಟನ್ನು ಸಚಿತ್ರಗೊಳಿಸಲಾಗಿದೆ. ಪ್ರತಿಪದಕ್ಕೂ ಉದಾಹರಣೆವಾಕ್ಯಗಳನ್ನು ಕೊಡುವುದರ ಮೂಲಕ ಅರ್ಥವನ್ನು ಅಧಿಕೃತಗೊಳಿಸಲಾಗಿದೆ. ಅನೇಕ ಆಚರಣೆಗಳ ವಿವರಣೆಗಳಲ್ಲಿ ಅನೇಕರಿಗೆ ಭೇದ ಕಾಣಬಹುದು. ಭಿನ್ನ ಆಚರಣೆ ಕಾಣಬಹುದು. ಉದಾಹರಣೆಗೆ ಮದುವೆಯ ಶಾಸ್ತ್ರದ ಆಚರಣೆಗಳು ಬುಕ್ಕಾಂಬುಧಿಯಲ್ಲಿಯೇ ಬೇರೆಬೇರೆ ಮತಸ್ಥರಲ್ಲಿ, ಕುಲದವರಲ್ಲಿ ಬೇರೆಬೇರೆ ರೀತಿ ಇದೆ. ಇಲ್ಲಿ ವಿಶೇಷವಾಗಿ ಮಧ್ಯಮವರ್ಗದ ಬ್ರಾಹ್ಮಣರಲ್ಲಿ ಕಂಡುಬರುವ ಆಚರಣೆಗಳನ್ನು ಅನುಭವದ ಹಿನ್ನೆಲೆಯಲ್ಲಿ ವಿವರಿಸಲಾಗಿದೆ. ಸ್ಥಳೀಯ ಆಚರಣೆಗಳ ಕೋಶ ಇದಾಗಿದೆ. ಇತರ ಪ್ರದೇಶಗಳ ಆಚಾರವಿಚಾರಗಳ ಅಧ್ಯಯನಮಾಡುವ ಸಾಮಾಜಿಕಶಾಸ್ತ್ರದ ಅಧ್ಯಯನಕಾರರಿಗೆ ಈ ವಿವರಗಳು ಉಪಯುಕ್ತವಾಗಿವೆ.

ಪ್ರೊ. ಜಿ. ಅಶ್ವತ್ಥನಾರಾಯಣ (ಸಹಸಂಪಾದಕ)
ವಿಳಾಸ: ನಂ. 95, 34 ಬಿ ಕ್ರಾಸ್, 16ನೇ ಮೈನ್, 4 ಟಿ ಬ್ಲಾಕ್, ಜಯನಗರ, ಬೆಂಗಳೂರು 560041
ಸೆಪ್ಟೆಂಬರ್ 17, 2014