ಅನಕೃ ಅವರ ಸಮಗ್ರ ಕಥಾ ಸಂಕಲನ. ಕನ್ನಡ ವಿಮರ್ಶೆ ಮರು ಓದಿನ ಮೂಲಕ ಪುನರ್ ವಿವೇಚನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಅನಕೃ ಅವರ ಸಮಗ್ರ ಕತೆಗಳ ಸಂಕಲನ ಪ್ರಕಟವಾಗುತ್ತಿರುವುದು ಔಚಿತ್ಯಪೂರ್ಣ. ಅವರು ಈ ಕ್ಷೇತ್ರದಲ್ಲಿ ನಡೆಸಿರುವ ಪ್ರಯೋಗ ಗಮನಾರ್ಹ. ಕನ್ನಡ ಸಣ್ಣಕಥೆಯ ಇತಿಹಾಸವನ್ನು ಗುರ್ತಿಸುವಾಗ ನಿಸ್ಸಂದೇಹವಾಗಿ ಅನಕೃ ಅವರ ಕೊಡುಗೆಯನ್ನು ನಾವು ಗಮನಿಸಬೇಕಾಗುತ್ತದೆ. ಸಣ್ಣಕತೆಯ ಬೆಳವಣಿಗೆಯಲ್ಲಿ ಅನಕೃ - ಚಾರಿತ್ರಿಕವಾಗಿ ಮುಖ್ಯ ಹೆಸರು. ೧೯೩೦-೧೯೬೦ರ ಅವಧಿಯಲ್ಲಿ ಅನಕೃ ಎಂಟು ಕಥಾ ಸಂಕಲನಗಳು ಪ್ರಕಟವಾಗಿವೆ. ಮಿಂಚು(೧೯೩೦), ಕಿಡಿ(೧೯೩೨), ಕಾಮನಸೋಲು(೧೯೪೨), ಪಾಪಪುಣ್ಯ(೧೯೪೩), ಕಣ್ಣುಮುಚ್ಚಾಲೆ(೧೯೪೫), ಅಗ್ನಿಕನ್ಯೆ(೧೯೪೭), ಶಿಲ್ಪಿ(೧೯೫೦), ಸಮರಸುಂದರಿ(೧೯೬೦). ಸುಮಾರು ಮೂರು ದಶಕಗಳ ಕಾಲ ಈ ಪ್ರಕಾರದಲ್ಲಿ ಕೃಷಿ ನಡೆಸಿರುವ ಅನಕೃ ಒಟ್ಟು ೬೯ ಕಥೆಗಳನ್ನು ರಚಿಸಿದ್ದಾರೆ. ಅನಕೃ ಅವರ ಸಮಗ್ರ ಕಥಾ ಸಂಕಲನದಲ್ಲಿ ಈ ೬೯ ಕಥೆಗಳು ಲಭ್ಯವಿದೆ. ಬೆಂಗಳೂರಿನ ಸಾಗರ ಪ್ರಕಾಶನದವರು ಹೊರತಂದಿರುವ ೭೪೦ ಪುಟಗಳ ಈ ಬೃಹತ್ ಸಂಕಲನದ ಬೆಲೆ ರೂ ೩೫೦/- ಕನ್ನಡ ಜನಶಕ್ತಿ ಸಂಘಟನೆ ವತಿಯಿಂದ ತಾರೀಖು ೧೪ನೇ ಮೇ ೨೦೦೬ರಂದು, ನಯನ ಸಭಾಂಗಣ, ಕನ್ನಡ ಭವನ, ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅನಕೃ ೯೮ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಶ್ರೀ ಎ. ಜೆ. ಸದಾಶಿವ ಅವರು ಈ ಗ್ರಂಥವನ್ನು ಬಿಡುಗಡೆಗೊಳಿಸಿದರು. ಅನಕೃ ಪ್ರತಿಷ್ಠಾನದ ಖಜಾಂಚಿ ಶ್ರಿ ಕೆ. ಟಿ. ಚಂದ್ರಶೇಖರ್ ಈ ಕೃತಿಯ ಸಂಪಾದಕರು. ಖ್ಯಾತ ವಿಮರ್ಶಕ ಶ್ರೀ ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರ ಮುನ್ನುಡಿಯನ್ನು ಹೊಂದಿದೆ. ಸಂಪಾದಕರ ಮಾತು ಈ ರೀತಿಯ ಕೃತಿಯನ್ನು ಸಂಪಾದಿಸುವುದು ಬಲು ಸುಲಭ, ಆಯ್ಕೆಯ ಪ್ರಶ್ನೆ ಬಂದಾಗ ಕಷ್ಟ. ಸಮಗ್ರ ಕಥೆಗಳು ಎಂದ ಮೇಲೆ ಆಯ್ಕೆಯ ಮಾತೇ ಇಲ್ಲ. ಎಲ್ಲಾ ಕಥೆಗಳು ಲಭ್ಯ ಇದ್ದುದರಿಂದ ಅಚ್ಚಿನ ಮನೆಗೆ ಕಳುಹಿಸುವುದಷ್ಟೇ ನನ್ನ ಕೆಲಸ. ಅನಕೃ ಸಾಹಿತ್ಯದ ಬಗ್ಗೆ ನಾನೇನು ಹೇಳಲಿ? ಬೆಲ್ಲದ ಅಚ್ಚನ್ನು ಯಾವ ಕಡೆ ಕಡಿದರೂ ಸಿಹಿ. ಸಿಹಿ ಎಂದು ಹೇಳುವ ಮನಸ್ಸಿರಬೇಕಷ್ಟೆ. ಅನಕೃ ಅವರದೇ ಒಂದು ಮಾತು, “ಮಾನವನ ಮನಸ್ಸು ಕ್ರೈಸ್ತದರ್ಶನ ಸಾರುವಂತೆ ಪಾಪದ ಮೊತ್ತವೇ - ಪುಣ್ಯದ ಘಟ್ಟಿಯೇ ಎಂಬ ಸಮಸ್ಯೆ ಇನ್ನೂ ಬ್ರಹ್ಮಗಂಟಾಗಿದೆ. ಲೋಕದ ವಿವೇಚನಾ ರಹಿತ ನಿಕಷಕ್ಕೆ ಸಿಕ್ಕು ಪಾಪಿಗಳೆನಿಸಿಕೊಂಡ ವ್ಯಕ್ತಿಗಳ ಬಗ್ಗೆ ಈ ಲೇಖಕ ಅನುಕಂಪ ವ್ಯಕ್ತಪಡಿಸಿದಾಗ ಹಲವರು ಧರ್ಮರಕ್ಷಕರಂತೆ ಕತ್ತಿ ಝಳಪಿಸುತ್ತಾ ಹೊರಟರು... ದಯೆ ಇಲ್ಲದೆ ಧರ್ಮವೇ - ಅನುಕಂಪವಿಲ್ಲದೆ ಮತವೇ - ಹೃದಯಶುದ್ಧಿ ಇಲ್ಲದೆ ಸತ್ಯ, ಶಕ್ತಿ, ಸೌಂದರ್ಯ ದರ್ಶನವೇ ಎಂದು ಕೇಳುತ್ತಿದೆ. ಉತ್ತರಿಸುವ ಆಸೆಯಿದ್ದವರು - ಶಕ್ತಿ ಇದ್ದವರು ಉತ್ತರಿಸಬಹುದು.” ಅವರೇ ಇನ್ನೊಂದೆಡೆ “ಮಾನವನಿಗೆ ಮಾನವ್ಯದಲ್ಲಿ ಗೌರವ, ಮಾನವರಲ್ಲಿ ಅನುಕಂಪ ಮೂಡಿಸುವುದೇ ನನ್ನ ಸಾಹಿತ್ಯದ ಗುರಿ” ಎಂದಿದ್ದಾರೆ. ಇದನ್ನು ಮೀರುವ ಸಾಹಸ ನಾನು ಮಾಡಲಾರೆ. ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದುಕೊಡುವುದೇ ಅಲ್ಲದೆ ಸಂಪುಟ ಹೊರತರುವಲ್ಲಿ ಅನೇಕ ಉಪಯುಕ್ತ ಸಲಹೆ ಸೂಚನೆಗಳನ್ನಿತ್ತ ಡಾ || ನರಹಳ್ಳಿ ಬಾಲಸುಬ್ರಮಣ್ಯ ಅವರಿಗೆ ನಾನು ಆಬಾರಿ. ಈ ಕೃತಿ ಪ್ರಕಟಿಸಲು ಅನುಮತಿ ನೀಡಿದ ಅನಕೃ ಕುಟುಂಬ ವರ್ಗದವರಿಗೆ, ನನ್ನ ಈ ಕೆಲಸದಲ್ಲಿ ನೆರವಾದ ಗೆಳೆಯ ಶ್ರೀ ಎಚ್.ವಿ. ಕೃಷ್ಣಸ್ವಾಮಿ ಹಾಗೂ ಕರಡಚ್ಚು ತಿದ್ದುವಲ್ಲಿ ಸಹಕರಿಸಿದ ಶ್ರೀ ಹೊ.ರಾ. ಸತ್ಯನಾರಾಯಣರಾವ್, ಶ್ರೀ ಆರ್. ಜಯಣ್ಣ ಅವರುಗಳಿಗೆ ಮತ್ತು ಅಂದವಾಗಿ ಮುದ್ರಿಸಿ ಪ್ರಕಟಗೊಳಿಸುತ್ತಿರುವ ಸಾಗರ್ ಪ್ರಕಾಶನದ ಮಾಲೀಕರಿಗೆ ವಂದನೆಗಳು. ಕೆ.ಟಿ.ಚಂದ್ರಶೇಖರ್ |