ಅ.ನ.ಕೃ ಅವರ ಕಾದಂಬರಿ ಸಂಧ್ಯಾರಾಗ ಕುರಿತು


ಆದರದ ಕನ್ನಡಿಗರಲ್ಲಿ ಅ.ನ.ಕೃಷ್ಣರಾಯರದು ಅಪೂರ್ವ ವ್ಯಕ್ತಿತ್ವ, ಅಪೂರ್ವ ಪಾತ್ರ. ಅವರ ರೂಪ ಆಕರ್ಷಕ. ಖಾಸಗೀ ಸಂಭಾಷಣೆಯಲ್ಲಿ, ಮಾತಿನಲ್ಲಿ ಲವಲವಿಕೆ, ಚುರುಕು, ಸ್ನೇಹಮಯ ಹಾಸ್ಯ. ವೇದಿಕೆ ಭಾಷಣದಲ್ಲಿ ಮಾತಿನ ಮೋಡಿಯ ಅನುಭವವಾಗುತ್ತಿತ್ತು. ಗಂಭೀರ ಚಿಂತನೆ, ಸ್ವಂತಿಕೆ, ಶುದ್ಧ ಅಭಿರುಚಿಯ ಹಾಸ್ಯ ಇವುಗಳ ತ್ರಿವೇಣಿ ಸಂಗಮ ಅವರ ಭಾಷಣ. ಕನ್ನಡದ ಸೊಗಸು, ಕನ್ನಡದ ಶಕ್ತಿ, ಕನ್ನಡದ ತೇಜಸ್ಸು, ಅವರ ಭಾಷಣದಲ್ಲಿ ಮೆರೆಯುತ್ತಿದ್ದವು. ಕನ್ನಡ ನಾಡು ನುಡಿಗಳ ಅಭಿಮಾನ ನಾಡಿಯಲ್ಲಿ ಮಿಡಿಯುತ್ತಿತ್ತು; ಮಾತಿನಲ್ಲಿ ಮಿಂಚುತ್ತಿತ್ತು. ಕನ್ನಡಪರ ಹೋರಾಟಕ್ಕೆ ವಿಶಿಷ್ಟ ಘನತೆಯನ್ನು ತಂದುಕೊಟ್ಟ ಅಪೂರ್ವ ಸೇನಾನಿ ಅನಕೃ.

ಕನ್ನಡ ಕಾದಂಬರಿ ಜಗತ್ತಿನಲ್ಲಿ ಅವರದು ವಿಶಿಷ್ಟ ಪಾತ್ರ. ಸಾವಿರಾರು ಜನರನ್ನು ಕನ್ನಡ ಕಾದಂಬರಿಗೆ ಸೆಳೆದದ್ದು ಅವರ ಲೇಖನಿ. ಕಾದಂಬರಿಯನ್ನು ಸಾಮಾಜಿಕ ಕ್ರಾಂತಿಯ ಪ್ರಬಲ ಸಾಧನವನ್ನಾಗಿ ಮಾಡಲು ಕೃಷ್ಣರಾಯರು ಪ್ರಯತ್ನಿಸಿದರು. ಅವರ ಪ್ರಾರಂಭದ ಕಾದಂಬರಿಗಳಲ್ಲಿ ಒಂದು ೧೯೩೫ರಲ್ಲಿ ಪ್ರಕಟವಾದ ‘ಸಂಧ್ಯಾರಾಗ’. ಕಾದಂಬರಿಕಾರ ಅ.ನ.ಕೃ ಅವರನ್ನು ಸ್ಮರಿಸಿದಾಗ, ನೆನಪಿಟ್ಟು ಕೊಳ್ಳಬೇಕಾದ ಒಂದು ಅಂಶ ಎಂದರೆ ನಮ್ಮ ಕಾದಂಬರಿಯ ಚರಿತ್ರೆಯ ಪ್ರಾರಂಭದಲ್ಲಿ ಮೂಡಿಬಂದ ಪ್ರತಿಭೆ ಅವರದು, ಎನ್ನುವುದು. ಅವರ ‘ಜೀವನಯಾತ್ರೆ’ ೧೯೩೪ರಲ್ಲಿ ಪ್ರಕಟವಾಯಿತು. ಆಗ ಕನ್ನಡದಲ್ಲಿಯೇ ಪ್ರಾರಂಭದ ಪ್ರಯತ್ನಗಳನ್ನು ಬಿಟ್ಟರೆ, ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ’, ಕೆರೂರು ವಾಸುದೇವಾಚಾರ್ಯರ ‘ಇಂದಿರಾ’, ಗಳಗನಾಥರ ‘ಮಾಧವಕರುಣಾವಿಲಾಸ’, ಎಂ.ಎಸ್. ಪುಟ್ಟಣ್ಣರ ‘ಮಾಡಿದ್ದುಣ್ಣೊ ಮಹರಾಯ’, ಇನ್ನೆರಡು ಕಾದಂಬರಿಗಳು, ಶಿವರಾಮಕಾರಂತರ ‘ದೇವದೂತರು’, ‘ಚೋಮನದುಡಿ’, ಬೆಟೆಗೆರೆ ಕೃಷ್ಣ ಶರ್ಮರ ‘ಸುದರ್ಶನ’, ಹೀಗೆ ಎಂಟೊಂಬತ್ತು ಕಾದಂಬರಿಗಳು ಮಾತ್ರಾ ಪ್ರಕಟವಾಗಿದ್ದವು. ಇದನ್ನು ಗಮನಿಸಿದಾಗ, ಅ.ನ.ಕೃ ಅವರ ‘ಜೀವನಯಾತ್ರೆ’, ‘ಉದಯರಾಗ’ ಮತ್ತು ‘ಸಂಧ್ಯಾರಾಗ’ಗಳ ಸಾಧನೆ ಸ್ಪಷ್ಟವಾಗುತ್ತದೆ. ಶಿವರಾಮಕಾರಂತರು, ಕೃಷ್ಣರಾಯರು ಕನ್ನಡ ಕಾದಂಬರಿಗೆ ರೂಪ ಕೊಟ್ಟರು. ವಾಸ್ತವತಾ ಪರಂಪರೆಯನ್ನು ನಿರ್ಮಾಣ ಮಾಡಿದರು. ಕನ್ನಡ ಕಾದಂಬರಿಯು, ಮನರಂಜನೆಯ ಮಾಧ್ಯಮವಷ್ಟೇ ಆಗದೇ, ಮನುಷ್ಯ ಸ್ವಭಾವವನ್ನು ಸಮಾಜವನ್ನು ಅರ್ಥಮಾಡಿಕೊಳ್ಳುವ, ಸಾಧನವಾಗುವಂತೆ ಮಾಡಿದರು.

ಸಂಧ್ಯಾರಾಗದಲ್ಲಿ ವೀಣೆ ಶೇಷಣ್ಣನವರು ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ನಿಜವಾಗಿ ಇದ್ದ ವ್ಯಕ್ತಿಗಳ ಪ್ರಸ್ತಾಪವೂ ಇದೆ. ಆದ್ದರಿಂದ ಈ ಕಾದಂಬರಿಯ ಕ್ರಿಯೆ ಸುಮಾರು ೧೯೧೫-೧೯೨೦ ಎಂದು ಭಾವಿಸಬಹುದು. ಕ್ರಿಯೆಯು ಒಂದು ಹಳ್ಳಿಯಲ್ಲಿ ಪ್ರಾರಂಭವಾಗಿ, ಬೆಂಗಳೂರಿಗೆ ಸಾಗುತ್ತದೆ. ಒಂದು ಮಧ್ಯಮ ತರಗತಿಯ ಕುಟುಂಬದ ಕಥೆ ಇದು. ಇನ್ನೂ ನಿಖರವಾಗಿ ಹೇಳಬೇಕೆಂದರೆ, ಎರಡು ಕಥೆಗಳು, ಸೊಗಸಾಗಿ ಹೆಣೆದುಕೊಂಡು ಈ ಕಾದಂಬರಿಯ ಕ್ರಿಯೆಯನ್ನು ಸೃಷ್ಟಿ ಮಾಡಿವೆ. ಒಂದು ಮಧ್ಯಮ ವರ್ಗದ ಕುಟುಂಬದ ಕಥೆ; ಮತ್ತೊಂದು ಸೂಕ್ಷ್ಮ ಸ್ವಭಾವದ ಭಾವಜೀವಿಯಾದ, ಸಂಗೀತಗಾರನ ಕಥೆ. ಇವೆರಡೂ ಕೂಡಿಕೊಳ್ಳುವುದು, ಈ ಸಂಗೀತಗಾರನು ಆ ಮಧ್ಯಮವರ್ಗದ ಕುಟುಂಬದ ಮಕ್ಕಳಿಲ್ಲಿ ಒಬ್ಬ ಎನ್ನುವ ಕಾರಣದಿಂದ. ಮಧ್ಯಮ ವರ್ಗದ ಕುಟುಂಬದ ಎರಡು ಪೀಳಿಗೆಗಳ ಏಳು-ಬೀಳುಗಳು ಒಂದು ಕಥೆ. ಅತ್ಯಂತ ಸೂಕ್ಷ್ಮ ಸ್ವಭಾವದ, ಕೋಮಲ ಮನಸ್ಸಿನ, ಅಸಾಧಾರಣ ಪ್ರತಿಭೆಯ ಸಂಗೀತಗಾರನು, ಇಹಲೋಕದ ಕಷ್ಟ, ಯಾತನೆ, ಇವುಗಳ ನಡುವೆ ಅರಳುವ ಪ್ರಕ್ರಿಯೆ ಇನ್ನೊಂದು ಕಥೆ.

೬೦ ವರ್ಷಗಳ ಹಿಂದೆ, ಪ್ರಕಟವಾದಾಗ, ‘ಸಂಧ್ಯಾರಾಗ’ವು ಅಸಾಧಾರಣ ಜನಪ್ರಿಯತೆಯನ್ನು ಗಳಿಸಿತು. ಕಾಲ ಸಾಗಿದಂತೆ, ಅಭಿರುಚಿಗಳು, ಸಾಹಿತ್ಯಿಕ ನಿರೀಕ್ಷಣೆಗಳು ಬದಲಾಗುತ್ತವೆ; ಸಾಹಿತ್ಯದ ಮಾನದಂಡಗಳೂ ಬದಲಾಗುತ್ತವೆ. ಇಂದಿನ ಓದುಗರಿಗೆ, ಕೆಲವು ಮಿತಿಗಳು ಗೋಚರವಾಗಬಹುದು. ಪಾತ್ರಗಳು ಅತಿ ಸರಳ ಎನಿಸಬಹುದು; ಹಲವೆಡೆಗಳಲ್ಲಿ ನಿರೂಪಣೆಗಳಲ್ಲಿ ಅತಿ ಭಾವುಕತೆ ಕಾಣಬಹುದು; ಸಂಗೀತಗಾರನಾಗಿ, ಲಕ್ಷ್ಮಣ ಪರೀಕ್ಷೆಗಳನ್ನು ಎದುರಿಸುವುದಿಲ್ಲ ಎನಿಸಬಹುದು. ಆದರೆ ಇಂದಿಗೂ, ‘ಸಂಧ್ಯಾರಾಗ’ವು ಓದುವಾಗ ಮನಸ್ಸನ್ನು ಸೆರೆಹಿಡಿದು, ಓದಿ ಮುಗಿಸಿದ ಮೇಲೆ, ಮನಸ್ಸಿನಲ್ಲಿ ಆಳವಾಗಿ ನಿಲ್ಲುತ್ತದೆ. ಇದಕ್ಕೆ ಹಲವು ಕಾರಣಗಳುಂಟು.

ಅ.ನ.ಕೃ ಹುಟ್ಟು ಕಥೆಗಾರರು. ಪಾತ್ರಗಳ ಮಾತು-ನಡೆಗಳಿಂದ, ಅವರನ್ನು ನಮ್ಮ ನಿಜ ಜೀವನ ವ್ಯಕ್ತಿಗಳಂತೆ ವಾಸ್ತವ ಗೊಳಿಸಿ, "ಮುಂದೇನಾಯಿತು? ..... ಮುಂದೇನಾಯಿತು?" ಎನ್ನುವ ಕುತೂಹಲವನ್ನು ಬೆಳಸಿಕೊಂಡು ಹೋಗಬಲ್ಲರು. ಅಲ್ಲಲ್ಲಿ, ವೃತ್ತಾಂತವು ನಿಂತು ರಾಗ-ಭಾವಗಳು, ಪುಟಿಪುಟಿಯುವ ನಾಟಕೀಯ (ಡ್ರ್ಯಾಮಟಿಕ್) ದೃಶ್ಯಗಳು, ನಮ್ಮ ಕಣ್ಣಮುಂದೆ ನಡೆಯುತ್ತವೆ. ಕಥೆಯ ದರ್ಶನಗಳು ಇಲ್ಲಿ ಸ್ಪಷ್ಟವಾಗುತ್ತದೆ; ಮೌಲ್ಯಗಳ ಅಗ್ನಿ ಪರೀಕ್ಷೆಯಾಗುತ್ತದೆ. ರಾಮಚಂದ್ರ ಹೆಂಡತಿಯನ್ನು ಒದ್ದಾಗ, ಅವನ ಮತ್ತು ವೆಂಕಟೇಶನ ನಡುವಣ ಮಾತು, ಸೋತ ರಾಮಚಂದ್ರ ವೆಂಕಟೇಶನನ್ನು ಕಾಣುವುದು--- ಇಂಥಹ ದೃಶ್ಯಗಳಲ್ಲಿ, ಇನ್ನು ಕೆಲವು ದೃಶ್ಯಗಳಲ್ಲಿ, ಉಳಿದ ಜಗತ್ತೆಲ್ಲಾ ಮಾಯವಾಗಿ, ಮೇಲೆ ಆಕಾಶ, ಕೆಳಗೆ ಭೂಮಿ ನಡುವೆ ಎರಡು ಹೃದಯಗಳು ಒಂದಕ್ಕೊಂದು ತೆರೆದುಕೊಳ್ಳುತ್ತವೆ. ಕಾಲ-ದೇಶಗಳನ್ನು ಮೀರಿ, ಪ್ರೀತಿ, ಅಂತಃಕರಣ, ಔದಾರ್ಯ ಬೆಳಗುತ್ತವೆ. ಇಂಥಹ ದೃಶ್ಯಗಳು, ಮನಸ್ಸಿನಲ್ಲಿ ನಿಂತು, ಪ್ರೀತಿ, ಅಂತಃಕರಣ, ಔದಾರ್ಯಗಳ ಸಂಗಮ, ಕೃತಿಗೆ ಶೃತಿಯಾಗಿಬಿಡುತ್ತದೆ. ಮೀನಾಕ್ಷಮ್ಮ ಸಾವಿತ್ರಮ್ಮನ ಕಿವಿಗೆ, ತನ್ನ ವಜ್ರದ ಓಲೆಗಳನ್ನು ಇಡುವುದು, ಇಂಥಹ ಒಂದು ದೃಶ್ಯ.

ಈ ಕಾದಂಬರಿಯ ಬಂಧ ವಿಶಿಷ್ಟವಾದದ್ದು. ಸನ್ನಿವೇಶಕ್ಕೆ ಪಾತ್ರದ ಪ್ರತಿಕ್ರಿಯೆ, ಪಾತ್ರಕ್ಕೆ ಸನ್ನಿವೇಶದ ಪ್ರತಿಕ್ರಿಯೆ. ಹೀಗೆ, ಪಾತ್ರ-ಸನ್ನಿವೇಶಗಳ ಪರಸ್ಪರ ಪ್ರತಿಕ್ರಿಯೆಯಿಂದ ಕ್ರಿಯೆ ಮುಂದುವರೆಯುತ್ತದೆ. ಇದರೊಂದಿಗೆ, ಇದಕ್ಕಿಂತಾ ಮುಖ್ಯವಾಗಿ, ಇನ್ನೊಂದು ಮಾತನ್ನು ಹೇಳಬೇಕು. ಮಧ್ಯಮ ವರ್ಗದ ಕುಟುಂಬದ ಕಥೆಯು, ಉದ್ದಕ್ಕೂ ಧ್ವನಿಸುವ ಮೌಲ್ಯವೆಂದರೆ, ಅಂತಃಕರಣ, ಪ್ರೀತಿ. ಅದು ಕಣ್ಣಮುಂದೆ ನಿಲ್ಲಿಸುವ ನೋಟವೆಂದರೆ, ಪ್ರೀತಿ, ಅಂತಃಕರಣ ಇವುಗಳ ಸೃಜನಶೀಲತೆ. ಪ್ರೀತಿ ಮತ್ತು ಅಂತಃಕರಣಗಳು, ಸಂಸಾರವನ್ನು ಉಳಿಸುತ್ತವೆ; ಕಟ್ಟುತ್ತವೆ; ಬೆಳೆಸುತ್ತವೆ. ಅಹಂಭಾವ, ದ್ವೇಷಗಳು ಒಡೆಯುತ್ತವೆ; ನಾಶಮಾಡುತ್ತವೆ. ಪ್ರೀತಿಯು ಸೃಜನಶೀಲ (ಕ್ರಿಯೇಟಿವ್). ರಾಯರು, ಮೀನಾಕ್ಷಮ್ಮ, ಸಾವಿತ್ರಮ್ಮ, ಶಾಮಣ್ಣ, ಇವರೆಲ್ಲಾ ಈ ಅರ್ಥದಲ್ಲಿ ಕ್ರಿಯೇಟಿವ್-ಸೃಜನಶೀಲರು. ಬದುಕಿನ ಸಂತೋಷವನ್ನು ಹೆಚ್ಚುಮಾಡುವವರು. ಕಾದಂಬರಿಯ ಕ್ರಿಯೆಯ ಎರಡನೇ ಎಳೆ - ಮತ್ತೊಂದು ಅರ್ಥದಲ್ಲಿ ಕ್ರಿಯೇಟಿವ್ ಆದ ಸೃಜನಶೀಲನಾದ ಸಂಗೀತಗಾರನದು. ಈ ಪ್ರತಿಭೆಯನ್ನು ಕಾದಂಬರಿಯಲ್ಲಿ ಬೆಳೆಸುವುದು ಪ್ರೀತಿ, ಅಂತಃಕರಣ. ಮುಖ್ಯವಾಗಿ, ತೀರಿಕೊಂಡ ನಂತರವೂ ಲಕ್ಷ್ಮಣನ ಹೃದಯದಲ್ಲಿ ನಿಂತು, ಅವನನ್ನು ಎಚ್ಚರಿಸಿ, ಬೆಳೆಸುವ ಜಯಲಕ್ಷ್ಮಿ-ಜಯ. ಕಾದಂಬರಿಯ ಕೊನೆಯಲ್ಲಿ ಲಕ್ಷ್ಮಣನು, ಎಂದೂ ಹಾಡದ, ಪೂರ್ವೀರಾಗವನ್ನು ಎತ್ತಿಕೊಂಡಾಗ, ಜಯ ಅದನ್ನು ಬೆಳೆಸುತ್ತಾ ಹೋಗುತ್ತಾಳೆ ಎನ್ನುವ ಸೂಚನೆ ಇದೆ. ಲಕ್ಷ್ಮಣನ ಪ್ರತಿಭೆಯು, ಸಂಗೀತದ ಗೌರೀಶಂಕರವನ್ನು ಮುಟ್ಟಿದ ಕ್ಷಣದಲ್ಲಿ, ಅವನ ತುಟಿಯಿಂದ "ಜಯ" ಎನ್ನುವ ಮಾತು ಚಿಮ್ಮುತ್ತದೆ. ಪ್ರೇಮ, ಪ್ರತಿಭೆ, ಕೈಕೈಹಿಡಿದು ‘ಸಂಧ್ಯಾರಾಗ’ದಿಂದ ‘ಉದಯರಾಗ’ದತ್ತ ಸಾಗುತ್ತವೆ.

ಅನಕೃ ಅವರ ಆರಂಭದ ಕಾದಂಬರಿಗಳಲ್ಲಿ ಒಂದಾದ ಸಂಧ್ಯಾರಾಗದಲ್ಲಿ ಕಂಡು, ಅವರ ಎಲ್ಲಾ ಕಾದಂಬರಿಗಳಿಗೂ ಸಾಮಾನ್ಯವಾದ ಒಂದು ಅಂಶವನ್ನು ಇಲ್ಲಿ ಗಮನಿಸಬಹುದು. ಪ್ರಗತಿಶೀಲ ಪಂಥದ ನೇತಾರರಾಗಿ ಅವರು ವಾಸ್ತವಿಕತೆಯ ಪ್ರತಿಪಾದಕರಾದರು. ಆದರೂ ಅವರಲ್ಲಿ ಒಂದು ‘ರೊಮ್ಯಾಂಟಿಕ್’ ಎಳೆ ಇದ್ದೇ ಇದ್ದಿತು. ವಾಸ್ತವತೆಯನ್ನು ಮೀರಿದ, ಓಛಿತಿmeತಿ ಥಿಟಛಿu qಟಿಞe, ಸಾಮಾನ್ಯ ಆಕಾರವನ್ನು ಮೀರಿದ ವ್ಯಕ್ತಿತ್ವದಲ್ಲಿ, ಸಾಧನೆಯಲ್ಲಿ ಅವರಿಗಾಸಕ್ತಿ ಇತ್ತು. ವಾಸ್ತವತೆಯ ನೆಲದ ಮೇಲೆ ನಡೆಯುವ ಕ್ರಿಯೆ, ಇದ್ದಕ್ಕಿದ್ದಂತೆ ರೆಕ್ಕೆ ಪಡೆದುಕೊಂಡು, ಮೇಲೆ ಹಾರುತ್ತದೆ. ಕಾದಂಬರಿಯ ಪ್ರಾರಂಭದಲ್ಲಿಯೇ, ಸಾಮಾನ್ಯದ ನಡುವೆ, ದಾನಶೂರ ಕರ್ಣನ ಚೇತನ ಮಿನುಗುತ್ತದೆ. ಕಥೆ ಮುಂದುವರಿದಂತೆ, ತಟ್ಟನೆ ಕಾಣಿಸಿಕೊಂಡು ಮರೆಯಾಗುವ ಹೊಸಬ, ಇಂಥಹ ಅಸಾಧಾರಣತೆಯ ಒಂದು ನೆನಪು. ಲಕ್ಷ್ಮಣನೇ ವಾಸ್ತವತೆಯ ನೆಲೆಯಿಂದ ಅಸಾಧಾರಣತೆಯ ಕಡೆಗೆ ಸಾಗುತ್ತಾನೆ. ಮಣ್ಣಿನ ದೇಹದಲ್ಲಿ ದಿವ್ಯ ಸಾಧ್ಯತೆ ಅಡಗಿದೆ ಎಂದು ಮನುಷ್ಯನ ಮನಸ್ಸು ನಂಬುತ್ತದೆ; ಅದನ್ನು ಕಾಣಲು ಬಯಸುತ್ತದೆ. ಅಂಥಹ ದರ್ಶನ ಅ.ನ.ಕೃ ಕಾದಂಬರಿಯಲ್ಲಿ ಲಭ್ಯವಾಗುತ್ತದೆ.

ಸಂಧ್ಯಾರಾಗದ ಮತ್ತೊಂದು ಆಕರ್ಷಣೆಯನ್ನು ಇಲ್ಲಿ ಗಮನಿಸಬಹುದು. ಪ್ರತಿ ಸಮಾಜವೂ ಬದುಕಿನ ಬೇರೆ ಬೇರೆ ಬಿಂದುಗಳಲ್ಲಿ, ನಿಂತ ಜನರ ಆದರ್ಶಮಾದರಿಗಳನ್ನು ಬೆಳೆಸಿಕೊಂಡು ಬಂದಿರುತ್ತದೆ. ಆದರ್ಶ ತಂದೆ-ಆದರ್ಶಮಗ, ಆದರ್ಶ ಗಂಡ-ಆದರ್ಶ ಹೆಂಡತಿ, ಆದರ್ಶ ಒಡೆಯ-ಆದರ್ಶ ಸೇವಕ ಹೀಗೆ, ಸಮುದಾಯದ ಕೆಲವು ಕಲ್ಪನೆಗಳನ್ನು ಮೂಡಿಸಿಕೊಂಡಿರುತ್ತದೆ. ಮಹಾಕಾವ್ಯಗಳಲ್ಲಿ ಈ ಕಲ್ಪನೆಗಳು, ಪರ್ವತಾಕಾರದಲ್ಲಿ ರೂಪತಾಳುತ್ತವೆ. ಅ.ನ.ಕೃ ಅವರ ‘ಸಂಧ್ಯಾರಾಗ’ ಜನಮನದ ಅಸ್ಪಷ್ಟ ಕಲ್ಪನೆಗಳನ್ನು ಜನಸಾಮಾನ್ಯರ ಮಟ್ಟದಲ್ಲಿ ಸಾಕ್ಷಾತ್ಕಾರ ಮಾಡುತ್ತದೆ. ಶ್ರೀನಿವಾಸರಾಯರು, ಮೀನಾಕ್ಷಮ್ಮ, ಸಾವಿತ್ರಮ್ಮ, ಶಾಮಣ್ಣ, ಜಯ ಎಲ್ಲಾ, ಇಂಥಹ ಆದರ್ಶ ಗಂಡ, ಆದರ್ಶ ಒಡೆಯ, ಆದರ್ಶ ಪತ್ನಿ, ಆದರ್ಶ ಬಂಟರ ಸಾಕಾರ. ನಮ್ಮ ಮನಸ್ಸಿನಲ್ಲಿದ್ದ ಕಲ್ಪನೆಗಳು, ರಕ್ತ ಮಾಂಸದ ಶರೀರವನ್ನು ಪಡೆದು, ಮಾತನಾಡುತ್ತಾ, ಕ್ರಿಯೆಯಲ್ಲಿ ನಮ್ಮ ಮುಂದೆ ತೊಡಗುತ್ತ ನಿಂತಾಗ, the pleasure of recognision, ಗುರುತು ಹಿಡಿಯುವ ಸಂತೋಷ ಅನುಭವವಾಗುತ್ತದೆ.

ಸಂಧ್ಯಾರಾಗದ ವಿಷಯ ಹೇಳಬಹುದಾದ ಇನ್ನೂ ಹಲವು ಮಾತುಗಳಿವೆ. ಉದಾಹರಣೆಗೆ, ಕಾದಂಬರಿ ಚಿತ್ರಿಸುವ ಸಮಾಜದ ಸ್ಥಿತ್ಯಂತರ. ಅವಿಭಕ್ತ ಕುಟುಂಬಗಳ ಮೇಲೆ, ಹಳ್ಳಿಯ ಬದುಕಿನ ಮೇಲೆ, ಆಧುನಿಕ ಬದುಕಿನ ಮತ್ತು ನಗರ ಜೀವನದ ಪ್ರಭಾವ. ಆದರೆ ನನ್ನ ಪ್ರಸ್ತಾವನೆಯನ್ನು ಬೆಳೆಸದೆ, ಇಷ್ಟನ್ನು ಮಾತ್ರಾ ಹೇಳಿ ಓದುಗರಿಗೆ ಕಾದಂಬರಿಯ ಮೋಡಿಯ ಅನುಭವಕ್ಕೆ ದಾರಿ ಮಾಡುತ್ತೇನೆ. ಬದುಕಿನಲ್ಲಿ ಬಹು ಮುಖ್ಯವಾದ ಜೀವನಪರವಾದ ಅಂತಃಕರಣದ ಮಾಧುರ್‍ಯ ಸಿರಿವಂತಿಕೆಗಳ ದರ್ಶನವಾಗುತ್ತದೆ, ಈ ಕಾದಂಬರಿಯಲ್ಲಿ. ಜೊತೆಗೆ ಬಹು ಸೂಕ್ಷ್ಮ ಸಂವೇದನೆಯ ಸಂಗೀತ ಪ್ರತಿಭೆಯ ಐಹಿಕ ಯಾತನೆಯನ್ನು ಇಲ್ಲಿ ಕಾಣುತ್ತೇವೆ. ನಿತ್ಯ ಜೀವನದ ಘರ್ಷಣೆಗಳೂ, ಕಿರಿಕಿರಿಗಳು, ರಾಜಿಗಳನ್ನು ಮೀರಿದ ಜಗತ್ತಿಗೆ ಕೊಂಡೊಯ್ಯುತ್ತಾನೆ-ನಮ್ಮೊಳಗೆ ಇರುವ ಆದರ್ಶ ಪ್ರಿಯತೆ, ಔದಾರ್ಯ, ಸೃಜನಶೀಲತೆ ಇವುಗಳ ಸಾಕಾರ ಮೂರ್ತಿ, ‘ಸಂಧ್ಯಾರಾಗ’ದಲ್ಲಿ ಹೊಳೆದು, ಉರಿದಾಗ ಚಿಮ್ಮಿದ ಲಕ್ಷ್ಮಣ.

-ಪ್ರೊ|| ಎಲ್.ಎಸ್. ಶೇಷಗಿರಿರಾವ್