ಕರ್ನಾಟಕದ ಸಂಗೀತ ಸಂಗೀತ ಮತ್ತು ಕನ್ನಡ ಪ್ರಜ್ಞೆ ಕರ್ನಾಟಕ ಸಂಗೀತವನ್ನು ಕನ್ನಡಿಗರು ಕನ್ನಡದಲ್ಲೇ ಹಾಡಬೇಕೆಬುಂದು ೧೯೬೦ರ ದಶಕದಲ್ಲಿ ಕನ್ನಡಕ್ಕೆ ಬಂದ ಒಂದು ಕಾತರತೆಯಾಗಿತ್ತು. ಏಕೀಕೃತ ಮೈಸೂರು ರಾಜ್ಯ ಸ್ಥಾಪನೆಯಾದಾಗ ತಮಿಳುನಾಡಿನ, ಅದರಲ್ಲೂ ಮದ್ರಾಸಿನ ಮೇಲಿನ ಸಾಂಸ್ಕೃತಿಕ ಅವಲಬಂನೆಯನ್ನು ಕಳೆದುಕೊಂಡು ಮೈಸೂರು ರಾಜ್ಯಕ್ಕೆ ಹಾಗೂ ಕನ್ನಡಕ್ಕೆ ಕನ್ನಡದ್ದೇ ಆದ ಒಂದು ಸಂಸ್ಕೃತಿಯನ್ನು ಕ್ರೋಢೀಕರಿಸಿಕೊಳ್ಳುವಂಥ ಪ್ರಕ್ರಿಯೆಯ ಭಾಗ ಇದಾಗಿತ್ತು. ಕನ್ನಡದ ಪ್ರಖ್ಯಾತ ಲೇಖಕರಾದ ಅನಕೃ ಮತ್ತಿತರರು ಈ ಸಮಯದಲ್ಲಿ ಕನ್ನಡ ಚಳವಳಿಯನ್ನು ಹುಟ್ಟುಹಾಕಿದಾಗ ಕರ್ನಾಟಕ ಸಂಗೀತ ಕ್ಷೇತವೂ ಅದರ ಕಾಳಜಿಗಳಲ್ಲೊಂದಾಗಿ ಮೂಡಿಬಂತು. ಸಾಕಷ್ಟು ಸಂಖ್ಯೆಯಲ್ಲಿಕನ್ನಡ ಕಲಾವಿದರನ್ನು ಕರ್ನಾಟಕ ಸಂಗೀತದಲ್ಲಿ ಪ್ರೋತ್ಸಾಹಿಸುತ್ತಿಲ್ಲ ಹಾಗೂ ಸಂಗೀತ ಕಛೇರಿಗಳಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಕನ್ನಡ ಕೃತಿಗಳನ್ನು ಹಾಗೂ ಹಾಡುಗಳನ್ನು ಹಾಡುತ್ತಿಲ್ಲವೆಬುಂದು ಕನ್ನಡ ಚಳುವಳಿಗಾರರ ವಾದವಾಗಿತ್ತು. ೧೯೬೧ರಲ್ಲಿ ರಾಮನವಮಿ ಉತ್ಸವದ ಪ್ರಯುಕ್ತ ಎಂ.ಎಸ್. ಸುಬುಲಕ್ಷ್ಮ್ಮಿ ಅವರ ಕಛೇರಿ ಚಾಮರಾಜಪೇಟೆಯ ರಾಮಸೇವಾಮಂಡಳಿಯಲ್ಲಿ ಏರ್ಪಾಡಾಗಿತ್ತು. ಕನ್ನಡ ಚಳುವಳಿಗಾರರು ಅ.ನ.ಕೃ ಅವರ ನೇತೃತ್ವದಲ್ಲಿಎಂ.ಎಸ್.ಸುಬ್ಬುಲಕ್ಷ್ಮ್ಮಿ ಯವರು ತಮಿಳರೆಂಬ ನೆಲೆಯಲ್ಲಿ ಇದನ್ನು ವಿರೋಸಿ ಬೆಂಗಳೂರಿನ ಬೀದಿಗಳಲ್ಲಿಮೆರವಣಿಗೆ ಬಂದರು. ಮೆರವಣಿಗೆಯಲ್ಲಿದ್ದ ಕೆಲವರು ಕಾರ್ಯಕ್ರಮ ನಡೆಯುವ ಪೆಂಡಾಲಿಗೆ ಬೆಂಕಿಹಚ್ಚಲು ಕೂಡಾ ಪ್ರಯತ್ನಿಸಿದರು. ಪೊಲೀಸರು ಹರಸಾಹಸ ನಡೆಸಿ ಕಡೆಗೆ ಲಾಠೀಚಾರ್ಜ್ ನಡೆಸುವ ಮೂಲಕ ಗುಂಪನ್ನುನಿಯಂತ್ರಿಸಬೇಕಾಯಿತು. ಬೆಂಗಳೂರಿನಲ್ಲಿ ರಾಮೋತ್ಸವದ ವೇಳೆ ತಮಿಳುನಾಡಿನಿಂದ ಕರೆಸುವ ಸಂಗೀತ ಕಲಾವಿದರ ಸಂಖ್ಯೆಯೇ ಹೆಚ್ಚಾಗಿರುತ್ತಿತ್ತು. ಈ ಗ್ಗೆ ಅ.ನ.ಕೃ ಅವರು ಅಸಹನೆಯಿಂದ ‘ಇದು ರಾಮೋತ್ಸವ ಅಲ್ಲ, ತಮಿಳೋತ್ಸವ’ ಅಂದಿದ್ದರು. ಸುಮಾರು ಐವತ್ತರಷ್ಟಿದ್ದ ಕನ್ನಡ ಸಂಘಗಳು ರಾಮಸೇವಾ ಮಂಡಳಿಯ ವಿರುದ್ಧ ಪ್ರದರ್ಶನ ನಡೆಸಿದ್ದವು. ಕನ್ನಡ ಚಳುವಳಿ, ಹಾಗೂ ಸಂಗೀತ ಕ್ಷೇತ್ರದಲ್ಲಿ ಕನ್ನಡ ರಾಷ್ಟ್ರೀಯತೆ ಬೆಂಗಳೂರಿನಲ್ಲಿ ಹೊಸತಾಗಿ ಕಂಡು ಬಂದರೂ ಕರ್ನಾಟಕ ಸಂಗೀತ ಮತ್ತು ಕನ್ನಡವನ್ನು ಸಮೀಕರಿಸಿ ಮಾತನಾಡುವ ಸಂದರ್ಭ ಅದಕ್ಕೆ ಸುಮಾರು ಅರ್ಧ ಶತಮಾನದಷ್ಟು ಹಿಂದೆಯೇ ಬಂದಿತ್ತು. ಅದಕ್ಕೂ ಹಿಂದಕ್ಕೆ ಹೋದರೆ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (೧೭೮೦-೧೮೬೫) ಸುಮಾರಷ್ಟು ಜಾವಳಿಗಳು ಕನ್ನಡದಲ್ಲಿ ರಚಿತವಾಗಿದ್ದವು. ಆದರೆ ಅವುಗಳನ್ನು ರಚಿಸುವುದಕ್ಕೆ ಯಾವುದೇ ರಾಷ್ಟ್ರೀಯ ಪ್ರವೃತ್ತಿ ಕಾರಣವಾಗಿರಲಿಲ್ಲ. ತೆಲುಗು ಇತ್ಯಾದಿ ಭಾಷೆಗಳಲ್ಲಿ ರಚಿತವಾದಂತೆ ಕನ್ನಡದಲ್ಲೂ ರಚಿತವಾಗುತ್ತಿತ್ತು ಅಷ್ಟೆ.ಮುಮ್ಮಡಿಯವರ ನಂತರ ಅಕಾರಕ್ಕೆ ಬಂದ ಚಾಮರಾಜ ಒಡೆಯರ್ (೧೮೬೩-೯೪) ಅವರು ಪಾರ್ಸಿ ನಾಟಕವೊಂದನ್ನು ಅರಮನೆಯ ಆವರಣದಲ್ಲಿ ಆಡಿಸಿ ಅದರಿಂದ ಬಹಳಷ್ಟು ಸುರಿತರಾಗಿದ್ದರು. ಇದರ ಪರಿಣಾಮವಾಗಿ ಅವರು ಕಾಳಿದಾಸ ಹಾಗೂ ಶೇಕ್‌ಸ್ಪಿಯರ್‌ನ ಕೆಲವು ನಾಟಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿ ಅದನ್ನು ಆಡಿಸಲು ಪ್ರಾರಂಭಿಸಿದರು. ಆಗಿನ ಕಾಲದ ನಾಟಕಗಳಲ್ಲಿ ಹಾಡುಗಳು ಗಣನೀಯ ಪ್ರಮಾಣದಲ್ಲಿರುತ್ತಿದ್ದವು. ಆದ್ದರಿಂದಾಗಿ ಈ ನಾಟಕಗಳಿಗೋಸ್ಕರ ಬಹಳಷ್ಟು ಕನ್ನಡ ಹಾಡುಗಳನ್ನೂ ಬರೆಸಬೇಕಾಯಿತು. ರತ್ನಾವಳೀ ಥಿಯೇಟ್ರಿಕಲ್ ಕಂಪೆನಿಯ ಮಾಲಕರಾಗಿದ್ದ ವರದಾಚಾರ್ ಅವರು ಉತ್ತಮ ಹಾಡುಗಾರರೂ ಆಗಿದ್ದರು. ಆದರೆ ಕರ್ನಾಟಕ ಸಂಗೀತ ಕಚೇರಿಗಳಲ್ಲಿ ಕನ್ನಡ ಕೃತಿಗಳು ಅಥವಾ ಹಾಡುಗಳು ಕೇಳಿಬರುತ್ತಿರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರು (ಆಡಳಿತ ಕಾಲ ೧೯೦೧-೧೯೪೦) ಪಟ್ಟಕ್ಕೆ ಬಂದ ಕೂಡಲೇ ಕನ್ನಡದಲ್ಲಿ ಕೃತಿಗಳು ಬರಬೇಕೆಂದು ಆಶಯ ತೋರಿದರು. ಈ ಆಶಯವನ್ನು ೧೯೨೬ರಲ್ಲಿ ಅವರು ಆಜ್ಞಾರೂಪಕ್ಕೆ ತಂದರು (ಮಹಾರಾಜರ ಕಛೇರಿಯಿಂದ ವೀಣಾ ಶಿವರಾಮಯ್ಯನವರಿಗೆ ಬಂದ ಒಂದು ಆಜ್ಞಾಪತ್ರವನ್ನು ಅವರ ಮಗ ನಾರಾಯಣಮೂರ್ತಿ ಅವರು ಇನ್ನೂ ಉಳಿಸಿಕೊಂಡಿದ್ದಾರೆ. ಇದರಲ್ಲಿ ಶಿವರಾಮಯ್ಯನವರು ಯಾವ ರಾಗದಲ್ಲಿ ಕೃತಿಯನ್ನು ರಚಿಸಬೇಕೆಂದೂ ಮತ್ತು ಅದನ್ನು ಸಂಸ್ಥಾನಕ್ಕೆ ಯಾವಾಗ ಒಪ್ಪಿಸಬೇಕೆಂದೂ ನಿಗದಿಪಡಿಸಲಾಗಿದೆ). ಹಿರಿಯ ಸಂಗೀತಗಾರರಾದ ಬಿಡಾರಂ ಕೃಷ್ಣಪ್ಪನವರು, ವೀಣೆ ಶೇಷಣ್ಣನವರು, ಚಿಕ್ಕರಾಮರಾಯರು, ವೆಂಕಟಗಿರಿಯಪ್ಪ, ಟಿ.ಚೌಡಯ್ಯ, ವೀಣೆ ಶಿವರಾಮಯ್ಯ ಇತ್ಯಾದಿ ಸಂಗೀತಗಾರರು ಈ ಆಜ್ಞೆಗೆ ಒಪ್ಪಿಕೊಂಡಿದ್ದರು. ಬಿಡಾರಂ ಕೃಷ್ಣಪ್ಪನವರು ಹಲವು ದಾಸರ ಕೀರ್ತನೆಗಳನ್ನೂ ಸಂಗೀತ ಕಛೇರಿಯಲ್ಲಿ ಹಾಡಲು ಪ್ರಾರಂಭಿಸಿದರು. ಕೃಷ್ಣಪ್ಪನವರು ಹಾಗೂ ಅವರ ತರುವಾಯ ಅವರ ಹಲವು ಶಿಷ್ಯಂದಿರು ಕೂಡಾ ದಾಸ ಸಾಹಿತ್ಯವನ್ನೇ ವಸ್ತುವನ್ನಾಗಿ ಮಾಡಿಕೊಂಡು ಕಛೇರಿ ನಡೆಸಿದ್ದಿದೆ. ಮಹಾರಾಜರ ಆಜ್ಞೆಯ ಪ್ರಕಾರ ಕನ್ನಡದಲ್ಲಿ ಕೃತಿ ರಚನೆ ಮಾಡುವುದು ಕೆಲವು ಸಂಗೀತಗಾರರಿಗೆ ಕಷ್ಟಕರವಾಗಿತ್ತು. ಅಂತಹ ಸಂದರ್ಭದಲ್ಲಿ ಕನ್ನಡದ ಕೆಲವು ಕವಿಗಳು ಹಾಡನ್ನು ಬರೆದು ಅದಕ್ಕೆ ಸಂಗೀತ ಸಂಯೋಜನೆಯನ್ನು ಸಂಗೀತಗಾರರು ಮಾಡುತ್ತಿದ್ದರು. ಹೀಗೆ ಕನ್ನಡದಲ್ಲಿ ಕೃತಿ ಬರೆದವರಲ್ಲಿ ನಂಜನಗೂಡು ಶ್ರೀಕಂಠ ಶಾಸ್ತ್ರಿ, ಅಯ್ಯಾಶಾಸ್ತ್ರಿ, ಅನವಟ್ಟಿ ರಾಮರಾವ್, ವೆಂಕಟರಾಮಯ್ಯ, ದೇವೋತ್ತಮ ಜೋಯಿಸ್, ಸೀತಾರಾಮ ಶಾಸ್ತ್ರಿ, ಮತ್ತು ಆರ್.ಕೆ.ಕೃಷ್ಣಾಶಾಸ್ತ್ರಿ ಪ್ರಮುಖರು. ಇದರಲ್ಲಿ ಅನವಟ್ಟಿ ರಾಮರಾಯರಂತೂ ತ್ಯಾಗರಾಜರ ಕೆಲವು ಕೃತಿಗಳನ್ನೂ ಕನ್ನಡಕ್ಕೆ ಅನುವಾದಿಸಿದರು. ಕನ್ನಡದಲ್ಲಿ ಕೃತಿಗಳನ್ನು ರಚಿಸಲು ಒಪ್ಪದಿದ್ದ ಒಬ್ಬನೇ ಒಬ್ಬ ಸಂಗೀತಗಾರನೆಂದರೆ ಮೈಸೂರು ವಾಸುದೇವಾಚಾರ್ಯರೆಂದು ಕಾಣುತ್ತದೆ. ಕೃತಿಗಳನ್ನು ಇವರು ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ರಚಿಸುತ್ತಿದ್ದರು. ಆಚಾರ್ಯರ ಹಲವು ಕೃತಿಗಳನ್ನು ಅರಮನೆಯವರು ಪ್ರಕಟಿಸಿದರೂ ಕೂಡಾ ಮಹಾರಾಜ ಮತ್ತು ಅವರ ನಡುವಿನ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ಕನ್ನಡದ ಪ್ರಸಿದ್ಧ ಲೇಖಕರಾದ ಎ.ಎನ್.ಮೂರ್ತಿರಾವ್ ಅವರು ಒಂದೆಡೆ ಈ ಬಗ್ಗೆ ಉಲ್ಲೇಖಿಸುತ್ತಾರೆ. ಅವರ ಪ್ರಕಾರ ವಾಸುದೇವಾಚಾರ್ಯರನ್ನು ತಿಳಿದವರು ಮಹಾರಾಜರು ವಾಸುದೇವಾಚಾರ್ಯರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲವೆಂದೂ, ಮತ್ತು ಅದಕ್ಕೆ ವಾಸುದೇವಾಚಾರ್ಯರು ಮಹಾರಾಜರ ಇಚ್ಛೆಯಂತೆ ನಡೆದುಕೊಳ್ಳದಿರುವುದೇ ಕಾರಣವೆಂದೂ ಆಡಿಕೊಳ್ಳುತ್ತಿದ್ದರು. ಆದರೆ ವಾಸುದೇವಾಚಾರ್ಯರ ಪ್ರಕಾರ ಅವರು ಕನ್ನಡದಲ್ಲಿ ಕೃತಿರಚನೆ ಮಾಡತೊಡಗಿದಂತೆ ಅವರಿಗೆ ಹೊಳೆಯುವ ವಿಷಯಗಳು ತಂತಾನೇ ಕಡಿಮೆಯಾಗುತ್ತಿದ್ದವು. ಆಚಾರ್ಯರ ಮೊಮ್ಮಗನಾದ ಕೃಷ್ಣಮೂರ್ತಿಯವರು ‘ಸಂಗೀತ ಸರಿತಾ’ ಎಂಬ ಪುಸ್ತಕದಲ್ಲಿ ತನ್ನ ತಾತನ ದೃಷ್ಟಿಕೋನದ ಬಗ್ಗೆ ಉಲ್ಲೇಖಿಸುತ್ತಾರೆ. ತೆಲುಗು, ತಮಿಳುಗಳಲ್ಲಿ ಭಾಷೆಯನ್ನು ಕೃತಿಗಳಲ್ಲಿ ಉಪಯೋಗಿಸುವ ರೀತಿಯೊಂದು ಆಗಲೇ ಸಿದ್ಧಗೊಂಡಿತ್ತು. ಮತ್ತು ಆಚಾರ್ಯರ ದೃಷ್ಟಿಯಲ್ಲಿ ಆ ರೀತಿಯಿಂದ ಆ ಭಾಷೆಗಳಲ್ಲಿ ಸೃಜನಶೀಲ ಕೃತಿಗಳ ರಚನೆ ಇನ್ನೂ ಸಾಧ್ಯವಿತ್ತು. ಹಾಗಿರುವಾಗ ಸಿದ್ಧಶೈಲಿಯೊಂದು ತಯಾರಾಗದಿರುವ ಭಾಷೆಯಲ್ಲಿ ಅವರು ಕೃತಿ ರಚನೆ ಮಾಡಲು ತನ್ನನ್ನು ತಾನು ಸಮರ್ಥನೆಂದು ತಿಳಿದಿರಲಿಲ್ಲ. ೧೯೦೮ರಲ್ಲಿ ಮೈಸೂರಿನ ಅರಮನೆ ಸಂಗೀತಗಾರರ ವೇತನ ಶ್ರೇಣಿಯನ್ನೊಮ್ಮೆ ಪರಾಂಬರಿಸಿದರೆ ಸಂಗೀತ ಕಲಾವಿದರ ನಡುವೆ, ಅದರಲ್ಲೂ ವಾಸುದೇವಾಚಾರ್ಯ ಮತ್ತು ಇತರ ಸಂಗೀತಗಾರರ ನಡುವೆ ಅರಮನೆ ನಡೆಸಿದ ತಾರತಮ್ಯ ಗಮನಕ್ಕೆ ರುತ್ತದೆ. ಈ ಮಾಹಿತಿ ನಮಗೆ ಸಿಗುವುದು ಡಾ| ಜೆ.ವಿ.ಗಾಯತ್ರಿ ಅವರು ಸಂಪಾದಿಸಿದ ‘ಸೆಲೆಕ್ಷನ್ಸ್ ಫ್ರಂ ದಿ ರೆಕಾರ್ಡ್ಸ್ ಆಫ್ ದಿ ಮೈಸೂರ್ ಪ್ಯಾಲೇಸ್: ಮ್ಯುಸಿಶಿಯನ್ಸ್, ಆಕ್ಟರ್ಸ್, ಆಂಡ್ ಆರ್ಟಿಸ್ಟ್ಸ್ (ಭಾಗ ಒಂದು)’ ಎಂಬ ಪುಸ್ತಕದಿಂದ. ಆ ವರ್ಷದ ವೇತನಶ್ರೇಣಿಯ ಪ್ರಕಾರ ವೀಣೆ ಶೇಷಣ್ಣನವರು ತನ್ನ ಇಪ್ಪತ್ತೈದು ವರ್ಷಗಳ ಸೇವೆಯ ನಂತರ ಪ್ರತೀ ತಿಂಗಳು ಐವತ್ತು ರೂಪಾಯಿಗಳ ಸಂಬಳ ಪಡೆಯುತ್ತಿದ್ದರು. ಇವರ ಸಂಬಂ ವೀಣೆ ಸುಬಣ್ಣನವರು ಹತ್ತೊಂಬತ್ತು ವರ್ಷಗಳ ಸೇವೆಯ ನಂತರ ನಲವತ್ತೈದು ರೂಪಾಯಿಗಳ ಸಂಬಳ ಪಡೆಯುತ್ತಿದ್ದರು. ಅದುಲ್ಲಾ ಖಾನ್ ಎಂಬ ಹಿಂದುಸ್ತಾನಿ ಗಾಯಕ ಹನ್ನೊಂದು ವರ್ಷಗಳ ಸೇವೆಯಿಂದ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಪಡೆಯುತ್ತಿದ್ದರು. ಬಿಡಾರಂ ಕೃಷ್ಣಪ್ಪನವರು ೨೨ ವರ್ಷಗಳ ಸೇವೆಯಿದ್ದರೂ ತಿಂಗಳಿಗೆ ಇಪ್ಪತ್ತುರೂಪಾಯಿ ಮಾತ್ರ ಪಡೆಯುತ್ತಿದ್ದರು. ಆದರೆ ವಾಸುದೇವಾಚಾರ್ಯರ ಕಥೆ ಮಾತ್ರ ಬೇರೆಯೇ ಆಗಿತ್ತು. ಅವರಿಗೆ ೩೬ ವರ್ಷಗಳ ದೀರ್ಘ ಸೇವೆಯಿದ್ದರೂ ಸಂಬಳ ಮಾತ್ರ ಬರೇ ಹತ್ತು ರೂಪಾಯಿಗಳಾಗಿದ್ದಿತು. ಇಷ್ಟೇ ಅಲ್ಲದೇ, ಗಾಯತ್ರಿಯವರು ಕಲಾವಿದರ ಕೆಲವು ಸಾಲದ ದಾಖಲೆಗಳನ್ನೂ ಪ್ರಸ್ತುತ ಪಡಿಸುತ್ತಾರೆ.೧೯೨೫-೨೬ರಲ್ಲಿ ವಾಸುದೇವಾಚಾರ್ಯರಿಗೆ ಒಂದು ಸಾವಿರ ರೂಪಾಯಿಗಳ ಸಾಲ ಬೇಕಾದಾಗ ಹಲವು ಸಲ ಅರ್ಜಿ ಸಲ್ಲಿಸಿದರೂ ಸಾಲ ಮಂಜೂರಾಗಲಿಲ್ಲ. ಕೊನೆಗೆ ಆಚಾರ್ಯರು ಅರ್ಜಿಯಲ್ಲಿ ಸಾಲಗಾರರು ವಾರಂಟಿನೊಂದಿಗೆ ಬಂದು ನನ್ನ ಮರ್ಯಾದೆ ಹರಾಜಾಗುವ ಸಾಧ್ಯತೆಯಿದೆ ಹಾಗೂ ಅವರ ಸಾಲ ತೀರಿಸಲು ಈ ಸಾಲದ ಅಗತ್ಯವಿದೆ ಎಂದು ಬಿನ್ನವಿಸಿದರು. ಆಗ ಅರಮನೆಯ ಹುಕುಮೊಂದು ಸಾಲಗಾರರು ಯಾರೆಂದು ನೋಡಿ ಅತೀ ತುರ್ತಾದ ಸಂದರ್ಭದಲ್ಲಿ ಹೆಚ್ಚೆಂದರೆ ರೂ. ಒಂದು ಸಾವಿರದಷ್ಟನ್ನು ತೀರಿಸಬಹುದೆಂದು ಆಜ್ಞೆ ಹೊರಡಿಸಿತು. ಇದನ್ನು ಅಡ್ವಾನ್ಸ್ಎಂದು ಪರಿಗಣಿಸಿ ಮುಂದಿನ ಸಂಬಳದಲ್ಲಿ ಅದನ್ನು ಚುಕ್ತಾಗೊಳಿಸಬೇಕು ಎಂದು ಕೂಡಾ ಆ ದಾಖಲೆಯಲ್ಲಿ ವಿವರಿಸಲಾಗಿದೆ (ಪು. ೮೧). ಇದು ಇತರ ಕಲಾವಿದರನ್ನು ನಡೆಸಿಕೊಂಡ ರೀತಿಗೆ ತದ್ವಿರುದ್ಧವಾಗಿದೆ. ಉದಾಹರಣೆ,ಗೆವೀಣೆ ಶೇಷಣ್ಣನವರಿಗೆ ೧೯೦೬ರಲ್ಲೇ ರೂ. ಮೂರು ಸಾವಿರ ರೂಪಾಯಿಗಳಷ್ಟು ಉದಾರ ಸಾಲ ನೀಡಲಾಗಿತ್ತು. ಅದೇ ವರ್ಷ ಬಿಡಾರಂ ಕೃಷ್ಣಪ್ಪನವರಿಗೆ ಒಂದು ಸಾವಿರ ರೂಪಾಯಿಗಳ ಸಾಲ ನೀಡಲಾಗಿತ್ತು. ವೀಣೆ ಸುಬಣ್ಣನವರು ಆಗರ್ಭ ಶ್ರೀಮಂತರಾಗಿದ್ದಾಗ್ಯೂ ಅವರಿಗಿದ್ದ ಎಲ್ಲಾ ಸಾಲಗಳನ್ನೂ ಮನ್ನಾ ಮಾಡಲಾಗಿತ್ತು.ವಾಸುದೇವಾಚಾರ್ಯರಿಗೆ ಸಿಗಬೇಕಾಗಿದ್ದ ಗೌರವಗಳು ಮುತ್ತಯ್ಯ ಭಾಗವತರಿಗೆ ಸಿಕ್ಕಿತೆಂದು ಕೆಲವರು ಭಾವಿಸುತ್ತಾರೆ. ಇವರು ತಮಿಳುನಾಡಿನ ಹರಿಕೇಶನಲ್ಲೂರ್ ಎಂಬ ಊರಿನವರಾಗಿದ್ದು ಹರಿಕಥಾ ಕಾಲಕ್ಷೇಪದಲ್ಲಿ ತುಂಬಾ ಹೆಸರುಗಳಿಸಿದ್ದರು. ಇವರು ತಂಜಾವೂರಿನ ಸರಸ್ವತಿ ಮಹಲ್ ಲೈಬ್ರೆರಿಯಲ್ಲಿ ಸ್ವಲ್ಪ ಮಟ್ಟಿಗಿನ ಸಂಶೋಧನೆ ಕೂಡಾ ನಡೆಸಿ ಇತರ ಸಂಗೀತಗಾರರಿಗಿಂತ ಕೊಂಚ ಭಿನ್ನವಾಗಿದ್ದರು. ೧೯೨೭ರ ದಸರಾ ಸಂದರ್ಭದಲ್ಲಿ ಇವರು ಮೈಸೂರಿಗೆ ಬಂದಿದ್ದರು. ಮತ್ತು ಅದೇ ವರ್ಷ ಅವರು ರೂ. ೧೦೦ ರ ಸಂಳದ ಮೇಲೆ ಅರಮನೆ ಸಂಗೀತಗಾರರಾಗಿ ನೇಮಿಸಲ್ಪಟ್ಟರು.೧೯೨೮ರಲ್ಲಿ ಅವರಿಗೆ ‘ಗಾಯಕ ಶಿಖಾಮಣಿ’ ಎಂಬ ಬಿರುದನ್ನೂ ಕೊಡಲಾಯಿತು. ಇದೇ ಸಮಯದಲ್ಲಿ ಅವರು ಮಹಾರಾಜರ ಕುಲದೇವತೆಯಾದ ಚಾಮುಂಡಿ ದೇವಿಯ ಬಗ್ಗೆ ದೇವೋತ್ತಮ ಜೋಯಿಸ್ ಅವರಿಂದ ಒಂದೊಂದೇ ಕನ್ನಡ ಕೃತಿಗಳನ್ನು ರಚಿಸಿ ಅದನ್ನು ಸ್ವರಕ್ಕೆ ಅಳವಡಿಸಿ ಮಹಾರಾಜರಿಗೆ ಅರ್ಪಿಸುತ್ತಿದ್ದರು. ಹೀಗೆ ಅವರು ಒಟ್ಟಾಗಿ ೧೦೮ ಕೃತಿಗಳನ್ನು ರಚಿಸಿದರು. ಇದರಿಂದ ಖುಶಿಪಟ್ಟ ಮಹಾರಾಜರು ರತ್ನಖಚಿತವಾದ ದೇವಿಯ ಮೆಡಲ್ ಒಂದನ್ನು ಭಾಗವತರಿಗೆ ಬಹುಮಾನವಾಗಿ ಕೊಟ್ಟರು. ಅವರು ಅರಮನೆಯ ವಿದ್ವಾಂಸರಾಗಿರುವಾಗಲೇ ಅವರನ್ನುಮದ್ರಾಸಿನ ಸಂಗೀತ ಅಕಾಡೆಮಿಯ ಸಂಗೀತ ಶಿಕ್ಷಕರ ಕಾಲೇಜಿನ ಪ್ರಿನ್ಸಿಪಾಲರಾಗಿ ಕಳಿಸಿಕೊಡಲಾಯಿತು. ತಮಿಳುನಾಡಿನ ಸಂಗೀತ ಕಲಾವಿದನೊಬ್ಬ ಕನ್ನಡದಲ್ಲಿ ಕೃತಿ ರಚನೆ ಮಾಡಿದ್ದುದು ಮಹಾರಾಜರ ಸಂತೃಪ್ತಿಗೆ ಕಾರಣವಾಗಿದ್ದಿತು. ಕನ್ನಡದವನೇ ಆದ ಸಂಗೀತಗಾರನೊಬ್ಬ (ವಾಸುದೇವಾಚಾರ್ಯ) ಕನ್ನಡದಲ್ಲಿ ಕೃತಿ ರಚನೆ ಮಾಡದಿದ್ದುದು ಮಹಾರಾಜರಿಗೆ ದಾರ್ಷ್ಟ್ಯವಾಗಿ ಕಂಡಿರಬೇಕು. ಆದರೆ ತನ್ನ ಮುಪ್ಪಿನಲ್ಲಿ ವಾಸುದೇವಾಚಾರ್ಯರು ಲೇಸಾದ ಜೀವನವನ್ನೇ ಕಂಡರು. ಜಯಚಾಮರಾಜ ಒಡೆಯರು ಪಟ್ಟಕ್ಕೆ ಬಂದ ಮೇಲೆ ಆಚಾರ್ಯರು ಆವರೆಗೆ ಸಿಗದೇ ಇದ್ದ ಗೌರವವನ್ನು ಪಡೆದರು. ಆಚಾರ್ಯರು ಒಡೆಯರಿಗೆ ಸಂಗೀತ ಗುರುಗಳಾಗಿದ್ದುದೂ ಇದಕ್ಕೆ ಇನ್ನೊಂದು ಕಾರಣ. ಅರಮನೆಯ ಆಶ್ರಯ ನಿಲ್ಲುವ ಕಾಲಕ್ಕೆ (ಅಂದರೆ ೧೯೫೦ರ ಆಸುಪಾಸಿನಲ್ಲಿ) ಆಚಾರ್ಯರು ಅತೀ ಹೆಚ್ಚು ಸಂಭಾವನೆ ಪಡೆಯುವ ಅರಮನೆಯ ಸಂಗೀತ ಕಲಾವಿದರಾಗಿದ್ದರು. ೧೯೫೧ರಲ್ಲಿ ಅವರ ಸಂಳ ಪ್ರತೀ ತಿಂಗಳು ರೂ. ೩೫೦ಕ್ಕೆ ಮುಟ್ಟಿತ್ತು (ಇತರ ಕಲಾವಿದರಾದ ವೀಣೆ ವೆಂಕಟಗಿರಿಯಪ್ಪನವರಿಗೆ ರೂ. ೨೫೦, ರಾಮಾನುಜಯ್ಯಂಗಾರ್ಯರಿಗೆ ರೂ. ೧೫೦, ಮತ್ತು ಪಿಟೀಲು ಚೌಡಯ್ಯನವರಿಗೆ ರೂ.೧೦೦ ಸಂಬಳ ಸಿಗುತ್ತಿದ್ದವು). ಕನ್ನಡ ರಾಷ್ಟ್ರೀಯತೆ ಕಂಡುಬಂದುದು ೧೯೬೦ರ ದಶಕದಲ್ಲಾದರೂ ಇಪ್ಪತ್ತನೇ ಶತಮಾನದ ಆದಿಭಾಗದಲ್ಲೇ ಒಂದು ಬಗೆಯ ಕನ್ನಡ ಪ್ರಜ್ಞೆಯನ್ನು ಕಾಣಬಹುದಾಗಿತ್ತು. ಈ ಪ್ರಜ್ಞೆ ಚಾಮರಾಜ ಒಡೆಯರ ಕನ್ನಡ ನಾಟಕಗಳನ್ನಾಡಿ ಸುವ ಆಸಕ್ತಿಯಲ್ಲೂ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ ಕನ್ನಡ ಕೃತಿಗಳನ್ನು ಕಲಾವಿದರಿಂದ ಸಂಯೋಜಿಸುವಂಥ ಆಸಕ್ತಿಯಲ್ಲೂ ವ್ಯಕ್ತವಾಗುತ್ತದೆ. ಇದರಲ್ಲಿ ಮೈಸೂರಿನ ವಿಶಿಷ್ಟತೆಯನ್ನು ಸಾರಿಕೊಳ್ಳುವ ಒಂದು ತುಡಿತವೂ ಇತ್ತು. ಈ ಸಂದರ್ಭದಲ್ಲಿ ರಚಿಸಿದ ಹೆಚ್ಚಿನ ಕನ್ನಡ ಕೃತಿಗಳು ಈಗ ತೆರೆಮರೆಗೆ ಸರಿದಿವೆ. ಮುತ್ತಯ್ಯ ಭಾಗವತರು ಮೋಹನಕಲ್ಯಾಣಿಯಲ್ಲಿ ರಚಿಸಿದ ‘ಭುವನೇಶ್ವರಿ’ ಹಾಗೂ ನವರಸಗನ್ನಡದ ‘ದುರ್ಗಾದೇವಿ’ಯಂಥಾ ಕೆಲವೇ ಕೆಲವು ಕೃತಿಗಳು ಸಂಗೀತ ಕಛೇರಿಗಳಲ್ಲಿ ಬಳಕೆಯಲ್ಲಿವೆ. ೧೯೬೦, ೭೦, ಹಾಗೂ ೮೦ರ ದಶಕದಲ್ಲಿ ಕನ್ನಡ ರಾಷ್ಟ್ರೀಯತೆಯು ಕರ್ನಾಟಕ ಸಂಗೀತದೊಳಗೆ ಹೊಕ್ಕರೂ ಈ ಹಳೇ ಕೃತಿಗಳನ್ನು ಮತ್ತೆ ಮರುಚಲಾವಣೆಗೆ ತರುವ ಬದಲಿಗೆ ಲಘುಸಂಗೀತ ಎನ್ನುವ ಒಂದು ಶೈಲಿಯನ್ನೇ ಘನೀಕರಿಸುವಲ್ಲಿ ಹೆಚ್ಚು ಸಫಲವಾಯಿತು. -ಶಶಿಕಾಂತ ಕೆ. (ಲೇಖಕರು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಉಪನ್ಯಾಸಕರು.) |