ಕನ್ನಡ ಚೇತನ ಅ.ನ.ಕೃ. ಸ್ಮರಣೆ ಅನಕೃ ಎಂದೇ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಅರಕಲಗೂಡು ನರಸಿಂಗರಾಯ ಕೃಷ್ಣರಾವ್ ಅವರು ಈಗ ನೆನಪಾಗಿ ಉಳಿದಿರುವ ಸಾಹಿತ್ಯರತ್ನರು. ಅನಕೃ ನಿಧನರಾಗಿ ಈ ಜುಲೈಗೆ ೨೩ ವರ್ಷಗಳು(೧೯೭೧). ಕನ್ನಡ ಪ್ರಚಾರಕ್ಕಾಗಿ ಇಡೀ ಕರ್ನಾಟಕದಲ್ಲಿ (ಆಗ ಮೈಸೂರು ರಾಜ್ಯ) "ಕನ್ನಡ ಸಾಹಿತ್ಯದ ಕಹಳೆ ಕಡಲಾಚೆ ಹೋಗಬೇಕು, ಪ್ರಯತ್ನದಿಂದಲ್ಲ ಪ್ರತಿಭೆಯಿಂದ" ಎಂದು ಸಾರಿ ಹೇಳುತ್ತಿದ್ದ ಅನಕೃ ಅವರನ್ನು ಸ್ಮರಣೆ ಮಾಡಿಕೊಳ್ಳಬೇಕಾದ್ದು ನಾಡು ನುಡಿಯ ಬಗ್ಗೆ ಆಸಕ್ತಿಯಿರುವ ಕನ್ನಡಿಗರೆಲ್ಲರ ಕರ್ತವ್ಯ ಕೂಡ. ೧೯೬೨ರಲ್ಲಿ ಆರಂಭಿಸಿದ (ಹಿಂದಿ ವಿರೋಧಿ ಹಿನ್ನಲೆ) ಕನ್ನಡ ಚಳುವಳಿಯ ಮುಂಚೂಣಿಯಲ್ಲಿದ್ದ ಅನಕೃ ಕತೆ, ಕಾದಂಬರಿ ಬರೆದು ಆದರ್ಶ ನಾಯಕರನ್ನು ಸೃಷ್ಟಿಸಿ ನಾಲ್ಕು ಗೋಡೆ ಕೋಣೆಯೊಳಗೆ ಸುಮ್ಮನೆ ಕೂರಲಿಲ್ಲ- ಬೀದಿಗಳಲ್ಲಿ ಭಾಷಣ ಮಾಡಿ ಜನ ಜಾಗೃತಿ ಶುರು ಮಾಡಿದರು. ಆತ್ಮಾಭಿಮಾನ, ಆತ್ಮಸ್ಥೈರ್ಯವನ್ನು ಕನ್ನಡಿಗರಲ್ಲಿ ತುಂಬುವ ಮೂಲಕ ತಾವೊಬ್ಬ ಜನಸಾಮಾನ್ಯನ ಬರಹಗಾರ-ಸಾಹಿತಿ ಅನ್ನಿಸಿಕೊಂಡರು. "ಬೆಳೆವ ಸಸಿ ಮೊಳಕೆಯಲ್ಲಿ" ಎಂಬಂತೆ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ, ಕಲೆ, ಸಂಗೀತಗಳಲ್ಲಿ ವಿಶೇಷ ಆಸಕ್ತಿ ಪಡೆದಿದ್ದ ಅನಕೃ ಅವರಿಗೆ ನಾಟಕ ಶಿರೋಮಣಿ ವರದಾಚಾರ್ಯರ ಸಂಪರ್ಕವಿತ್ತು. ಓಬೀರಾಯನ ಕಾಲದ ನಾಟಕಗಳ ವಸ್ತುವನ್ನೇ ರಂಗದ ಮೇಲೆ ತರುತ್ತಿದ್ದ ವರದಾಚಾರ್ಯರನ್ನು ಲೇವಡಿ ಮಾಡಿ, ತಮ್ಮ ೧೬ ನೇ ವಯಸ್ಸಿನಲ್ಲೇ ನಾಟಕವೊಂದನ್ನು ಬರೆದು ವರದಾಚಾರ್ಯರ ಕೈಗಿತ್ತರು. ಸಮಾಜದ ಸುತ್ತಮುತ್ತಲ ವಸ್ತುವನ್ನು ರಂಗದ ಮೇಲೆ ತನ್ನಿ ಎಂದು ಪ್ರಶ್ನಿಸಿ ಧೈರ್ಯದ ಎದೆಗಾರಿಕೆ ತೋರಿದ್ದರು ಅನಕೃ. ಓದಿನಲ್ಲಿ ಅಷ್ಟಾಗಿ ಆಸಕ್ತಿ ಹೊಂದಿರದ ಅನಕೃ ಲೇಖಕರಾಗಿ ಉಳಿವ ಆಕಾಂಕ್ಷೆಯಿಂದ ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲೇ "ಕಥಾ ಮಂಜರಿ" ಎಂಬ ಸಣ್ಣ ಕತೆಗಳ ಮಾಸ ಪತ್ರಿಕೆ ಆರಂಭಿಸಿದರು. ಅದನ್ನು ಹೆಚ್ಚು ಕಾಲ ನಡೆಸಲಾಗಲಿಲ್ಲ. "ಬಾಂಬೆ ಕ್ರಾನಿಕಲ್" ಎಂಬ ಆಂಗ್ಲ ಪತ್ರಿಕೆಗೆ ಕಾಲಿಟ್ಟ ಅನಕೃ ಬಾಂಬೆಯಲ್ಲಿ ಸ್ವಲ್ಪ ಕಾಲವಿದ್ದು ಬೆಂಗಳೂರಿಗೆ ಬಂದು ಸಾಹಿತ್ಯ, ಕಲೆ, ಸಂಸ್ಕೃತಿಗೆ ಮೀಸಲಾದ ’ವಿಶ್ವವಾಣಿ” ಎಂಬ ಮಾಸಿಕ ಆರಂಭಿಸಿದರಾದರೂ, ಕಾದಂಬರಿಗಳಲ್ಲಿ ಮನಸ್ಸನ್ನು ನಿಯೋಜಿಸಿಕೊಂಡಿದ್ದರಿಂದಾಗಿ ಹೆಚ್ಚು ಕಾಲ ಇಲ್ಲೂ ತಳವೂರಲಾಗಲಿಲ್ಲ. ಮುಂದೆ ಬಿ.ಎಂ.ಶ್ರೀ ಅವರ ಜೊತೆ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅನಕೃ ”ಕನ್ನಡ ನುಡಿ”ಯ ಪ್ರಥಮ ಸಂಪಾದಕರೂ ಆದರು. ಕೆಲವೇ ದಿನಗಳಲ್ಲಿ ಭಿನಾಭಿಪ್ರಾಯಗಳಿಂದಾಗಿ ಪರಿಷತ್ತಿನ ಪತ್ರಿಕೆಯಿಂದಲೂ ಹೊರಬಂದರು. ಸಾಹಿತ್ಯ ಸಮಕಾಲೀನ ಜೀವನದ ಲೋಪದೋಷ, ಧ್ಯೇಯ ಧೋರಣೆಗಳ ಪ್ರತಿಬಿಂಬವಾಗಬೇಕು ಎಂದು ನಂಬಿದ್ದ ಅನಕೃ ಕರ್ನಾಟಕದಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿ ಬೀಜಾಂಕುರವಾಗಲು ಕಾರಣಕರ್ತರಲ್ಲಿ ಪ್ರಮುಖರು. ಯೂರೋಪಿನಲ್ಲಿ ಫ್ಯಾಸಿಸ್ಟ್ ಶಕ್ತಿಗಳ ದಬ್ಬಾಳಿಕೆಯ ವಿರುದ್ಧ ದಿಕ್ಕೆಟ್ಟ ಸಂದರ್ಭ ಲಂಡನ್‌ನಲ್ಲಿ ಸೇರಿದ ವಾಸ್ತವ ಪ್ರಜ್ಞೆಯ ಬರಹಗಾರರ ಒಕ್ಕೊರಳಿನಿಂದಾದ ಬೀಜಾಂಕುರವೇ ಪ್ರಗತಿಶೀಲ ಚಳುವಳಿಯ ಹುಟ್ಟು, ಭಾರತದ ಬ್ರಿಟಿಷರ ವಸಾಹತುಶಾಹಿ ಧೋರಣೆ ಜೊತೆಗೆ ಶ್ರಮಜೀವಿಗಳ ಕಾರ್ಮಿಕರ ಹೋರಾಟದ ಪ್ರಜ್ಞೆ ಹಾಗೂ ಸ್ವಾವಲಂಬನೆಯ ಹಿನ್ನಲೆಯಲ್ಲಿನ ಹುಟ್ಟು ಎಂಬುದು ಗಮನಾರ್ಹ. "ಸಾಹಿತ್ಯ ಮತ್ತು ಕಲಾರಂಗ ನಿತ್ಯ ಜೀವನದ ಅಂಗವಾಗಬೇಕು, ಕಲೆಗಾಗಿ ಕಲೆ, ಕಲೆ ದೈವಿಕವಾದದ್ದು, ಅದು ಮನಸ್ಸಿಗೆ ನೆಮ್ಮದಿ ತರುವ ಸಾಧನ -ಎಂಬ ಕಲ್ಪನೆಗಳನ್ನು ನಾವು ಒಪ್ಪುವುದಿಲ್ಲ; ಕೃತಿಯಲ್ಲಿ ವ್ಯಕ್ತವಾಗುವ ಅಭಿಮತಕ್ಕೆ ಅಧಿಕ ಪ್ರಾಧಾನ್ಯ, ರಾಜ ಮಹಾರಾಜರ ಮೇಲಿನ ಮಹಾಕಾವ್ಯಕ್ಕಿಂತ ದುಡಿವ ಬಡವನ ವಿಚಾರದ ಲಾವಣಿ ನಮ್ಮ ದೃಷ್ಟಿಯಲ್ಲಿ ಶ್ರೇಷ್ಠವಾದದ್ದು" ಎಂಬ ಪ್ರಗತಿಶೀಲದ ಧೋರಣೆಗೆ ಅನಕೃ ಬದ್ಧರಾಗಿ ಕೆಲ ಕಾಲ ಕೆಲಸ ಮಾಡಿದರು. ಇವರ ಜೊತೆಗೆ ಶ್ರೀರಂಗ, ಕುಮಾರ ವೆಂಕಣ್ಣ, ಬಸವರಾಜ ಕಟ್ಟೀಮನಿ, ತರಾಸು, ನಿರಂಜನ, ಚದುರಂಗ ಮುಂತಾದವರು ಸೇರಿಕೊಂಡರು. ಕರ್ನಾಟಕದಲ್ಲಿ ಒಗ್ಗೂಡಿದ ಈ ಎಲ್ಲಾ ಪ್ರಗತಿಶೀಲರು "ಪ್ರಗತಿಶೀಲದ ತತ್ತ್ವ ಪ್ರಣಾಳಿಕೆ" ಯನ್ನು ಒಪ್ಪಿ ಬರೆದರೆಂಬುದು ಸತ್ಯವಲ್ಲವಾದರೂ, ಇವರೆಲ್ಲಾ ಮಾನವೀಯ ಅನುಕಂಪದ ಬರಹಗಳ ಕಡೆ ಮುಖ ಮಾಡಿದ್ದರೆಂಬುದು ವಾಸ್ತವ ಸಂಗತಿ. ಸಮಾಜಮುಖೀ ಚಿಂತನೆ ಅಂದರೇನೇ ಸಮಾಜದ ಅನಿಷ್ಟಗಳ ದೌರ್ಜನ್ಯಗಳ ತೊಡೆದು ಹಾಕುವಿಕೆಯಿಂದ ಬದಲಾವಣೆ ಬಯಸುವುದೇ ಆಗಿದೆ. ಇದನ್ನು ಬರಹದ ನ್ಯಾಯದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಿಕೊಂಡ ಕೆಲವರು ಪ್ರಗತಿಶೀಲದ ಉದ್ದೇಶವನ್ನು ಮರೆತರೆಂಬ ಟೀಕೆಗೂ ಗುರಿ ಆದರು. ಮಾನವೀಯ ಭಾವನೆಗಳನ್ನು ತುಂಬಿ, ಅಶ್ಲೀಲತೆ, ಕಾಮ ಪ್ರಚೋದನೆ, ಕೊಲೆ ಸುಲಿಗೆಯ ಸಾಹಿತ್ಯವನ್ನು ವಿರೋಧಿಸುತ್ತದೆಂಬ ಪ್ರಗತಿಶೀಲದ ಆಶಯವನ್ನು ಅನಕೃರಂಥ ಬರಹಗಾರರು ಧಿಕ್ಕರಿಸಿದರೆಂಬ ಟೀಕೆಗೆ ಗುರಿಯಾದಾಗ, ಅನಕೃ ತಾವು ಬರೆದಿದ್ದನ್ನು ಬಲವಾಗಿ ಸಮರ್ಥಿಸಿಕೊಂಡರು. ಕರ್ನಾಟಕದ ಪ್ರಗತಿಶೀಲದ ಚುಕ್ಕಾಣಿ ಹಿಡಿದ ಅನಕೃ ಇಂಥಾ ಟೀಕೆಗಳನ್ನು ಪ್ರಗತಿಶೀಲ ಚಿಂತಕರಿಂದಲೇ ಪಡೆದರಾದರೂ ಅವರ ಪ್ರಥಮ ಕಾದಂಬರಿ "ಜೀವನ ಯಾತ್ರೆ" ಪ್ರಗತಿಶೀಲ ಚಳುವಳಿಯ ಹುಟ್ಟಿಗೆ ಮುನ್ನವೇ ಪ್ರಕಟವಾಗಿತ್ತು. ಪ್ರತಿಭಟನೆಯ ಅಂಶವನ್ನು ಆಗಲೇ ತಮ್ಮ ಕಾದಂಬರಿಯಲ್ಲಿ ದಾಖಲಿಸಿದ್ದ ಅನಕೃ ಹಸಿವಿನಂಥ ಹೆಬ್ಬಾವಿನೆದುರು ವ್ಯಭಿಚಾರ, ರೋಗ, ದಾಸ್ಯಗಳು ತಾಂಡವಾಡುವುದನ್ನು ಸೂಚ್ಯವಾಗಿ ಹೇಳಿದ್ದರು. ಅನಕೃ ವೈವಿಧ್ಯಮಯವಾದ ಸಾಹಿತ್ಯ ಕೃಷಿಗೆ ತೊಡಗಿದ್ದರಿಂದಲೋ ಏನೋ ಪ್ರಗತಿಶೀಲ ತತ್ತ್ವಕ್ಕೆ ಬದ್ಧರಾಗಿ ಹೆಚ್ಚು ಕೃತಿ ರಚಿಸಲಾಗಲಿಲ್ಲ. ಪ್ರತಿಭಟನೆ ಬಹು ಮುಖ್ಯ ಆಶಯ ಆದರೂ ಸಾಮಾಜಿಕ ಸಮಸ್ಯೆಯೆಂದು ವೇಶ್ಯಾ ವಿಚಾರಗಳನ್ನು ಲೈಂಗಿಕಾಸಕ್ತ ವಿಚಾರಗಳನ್ನು ಮುಕ್ತವಾಗಿ ಹೇಳಬಹುದೆಂದು ಹೊರಟು, ಪ್ರಗತಿಶೀಲರಲ್ಲಿ ಭಿನ್ನ ಅಭಿಪ್ರಾಯವನ್ನು ಒಡಕು ದನಿಯನ್ನು ಮೂಡಲು ಕಾರಣರಾದರು. ಒಂದಕ್ಕೊಂದು ಫೂರಕ ಸಂಬಂಧ ಇರುವ ವೇಶ್ಯಾಜೀವನವನ್ನೊಳಗೊಂಡ ನಗ್ನಸತ್ಯ, ಶನಿಸಂತಾನ, ಸಂಜೆಗತ್ತಲು ಎಂಬ ಕೃತಿಗಳಿಂದ ಭಾರೀ ಪ್ರತಿಭಟನೆ ಎದುರಿಸಿ ಪ್ರಗತಿಶೀಲದ ಮೂಲೋದ್ದೇಶವೇ ಮರೆಯಾಯಿತೆಂಬ ಟೀಕೆ ಹೊರಬೇಕಾಯಿತು. ಇದಕ್ಕೆ ಸಮರ್ಥನೀಯವಾಗಿ "ಸಾಹಿತ್ಯ ಹಾಗೂ ಕಾಮ ಪ್ರಚೋದನೆ" ಎಂಬ ಗ್ರಂಥ ಬರೆದು ತಮ್ಮ ನಿಲುವು ಎತ್ತಿ ಹಿಡಿದರು. "ಭಾರತೀಯ ಕಲಾ ದರ್ಶನ", "ಭಾರತೀಯ ಸಂಸ್ಕೃತಿ ದರ್ಶನ" ಕೃತಿಗಳು ಅನಕೃ ಕನ್ನಡ ವೈಚಾರಿಕ ಸಾಹಿತ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಳು. "ಬರಹಗಾರನ ಬದುಕು", "ನನ್ನನ್ನು ನಾನೇ ಕಂಡೆ" ಆತ್ಮಕತೆಗಳು. ಅನಕೃ ಅದ್ಭುತ ಕ್ರಿಯಾಶೀಲರು ಅನ್ನುವುದಕ್ಕೆ ಅವರು ಆಸಕ್ತಿ ತಳೆದಿದ್ದ ಸಾಹಿತ್ಯ ವಿವಿಧ ಪ್ರಕಾರಗಳೇ ಸಾಕ್ಷಿ. ಕನ್ನಡ-ಆಂಗ್ಲ ಭಾಷೆಗಳೆರಡರಲ್ಲೂ ಪ್ರಬುದ್ಧತೆ ಪಡೆದಿದ್ದರಿಂದಲೇ ಅವರು ಮ್ಯಾಕ್ಸಿಂಗಾರ್ಕಿ, ಉಮರನ ರುಬಾಯಿಯಾತ್, ಕಬೀರ್, ಅಲ್ಲಮ ಪ್ರಭು, ಬಸವಣ್ಣ, ವೀರಶೈವ ಸಾಹಿತ್ಯ-ಸಂಸ್ಕೃತಿ, ಸ್ವಾಮಿ ವಿವೇಕಾನಂದ, ರಾಜಾ ರವಿವರ್ಮ ಮುಂತಾದವರ ವಿಚಾರಗಳಲ್ಲಿ ಪ್ರಬುದ್ಧ ಬರಹಗಳನ್ನು ನೀಡಲು ಸಾಧ್ಯವಾಗಿದೆ. ಆಳವಾದ ಓದು, ಪರಿಜ್ಞಾನಗಳು ಅವರ ಬರವಣಿಗೆಯ ಕ್ರಿಯಾಶೀಲತೆಗೆ ಸಾಕ್ಷಿ ಆಗಿದ್ದವು. ೧೯೬೦ ರಲ್ಲಿ ಮಣಿಪಾಲದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ೧೯೭೦ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಅನಕೃ ಆಯ್ಕೆ ಆಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸಹಾ ಅವರಿಗೆ ಲಭಿಸಿತು. ನೀಟಾಗಿ ನಡು ಬೈತಲೆ ತೆಗೆವ ಕೂದಲು, ಪೈಜಾಮ, ಜುಬ್ಬ, ಮೇಲುಕೋಟುಗಳ, ವಿಶಿಷ್ಟ ಕನ್ನಡ ಹೋರಾಟಗಾರ, ಸಾಹಿತಿ ಅನಕೃ ಇನ್ನೂರಕ್ಕೂ ಮಿಕ್ಕಿ ಕೃತಿ ರಚಿಸಿ ಕನ್ನಡ ಸಾಹಿತ್ಯಲೋಕಕ್ಕೆ ಅದರಲ್ಲೂ ಗದ್ಯಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಮಹತ್ತರವಾದದ್ದು. ಕೊನೆಯ ಮಾತು: ಕನ್ನಡ ಚಳುವಳಿಗಾರರು, ನಾಡು ನುಡಿಯ ಬಗ್ಗೆ ವೇದಿಕೆಗಳಲ್ಲಿ ಗಂಟಲು ಅರಚುವಂತೆ ಕೂಗುವವರು ಅನಕೃ ಅವರ ಆದರ್ಶವನ್ನು, ಕನ್ನಡ ನಿಷ್ಠೆಯನ್ನು ಅರಿಯುವ ಜೊತೆಗೆ ಅವರ ಮರುಮುದ್ರಣಗೊಳ್ಳುತ್ತಿರುವ ಕೃತಿಗಳನ್ನು ಕೊಂಡು ಓದಿ ಕನ್ನಡ ಅಭಿಮಾನವನ್ನು ವ್ಯಕ್ತಪಡಿಸಲು ಇದು ಸಕಾಲವಾಗಿದೆ. ಯಾರಿಗೇ ಆಗಲಿ ಓದು, ಚರ್ಚೆ, ವಿಚಾರ ಮಂಥನ ಇಲ್ಲದಿದ್ದರೆ ಅವರು "ಬೊಗಳೆ"ಗಳಾಗುವ ಅಪಾಯವಿದೆ. ಇದನ್ನು ಬೀದಿಗಿಳಿದ ಎಲ್ಲಾ ಹೋರಾಟಗಾರರು ಅರಿಯಬೇಕಾಗಿದೆ. ಆರ್.ಜಿ. ಹಳ್ಳಿ ನಾಗರಾಜ್ |