ನಮ್ಮ ಮಾತು


ಕನ್ನಡ ಸೇನಾನಿ ಅ.ನ. ಕೃಷ್ಣರಾಯರನ್ನು ಅನೇಕರು ಮರೆತಿದ್ದರೆ ಆಶ್ಚರ್ಯವಿಲ್ಲ. ಆದರೆ ಅನಕೃ ಅವರನ್ನು ಅನನ್ಯ ಧ್ಯಾನಿಸುತ್ತಲೇ ಇರುವವರೆಂದರೆ ನಮ್ಮ ಕೆ.ಟಿ.ಚಂದ್ರಶೇಖರ್ ಅವರು. ಅವರ ಬಳಿ ಇಲ್ಲದ ಅನಕೃ ಸಾಹಿತ್ಯವೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಅನಕೃ ಬರಹ ಮಾತ್ರವಲ್ಲ, ಅವರಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳೂ ಅವರ ಬಳಿ ಲಭ್ಯವಿದೆ ಎಂಬುದನ್ನು ತಿಳಿದರೆ ಅನಕೃ ಅವರಿಗೆ ಸಾವೇ ಇಲ್ಲವೆಂದು ಘಂಟಾಘೋಷವಾಗಿ ಹೇಳಬಹುದು. ಕೆ.ಟಿ. ಚಂದ್ರಶೇಖರ್‌ರವರ ಅವಿರತ ಶ್ರಮದ ಫಲವೇ ಅನಕೃ ಪ್ರತಿಷ್ಠಾನದಿಂದ ಅನಕೃ ಪ್ರಶಸ್ತಿ ಪ್ರಕಟಣೆ. ಅನಕೃ ರವರು ನಿಧನರಾದ ಎರಡು ದಶಕಗಳಿಗೂ ನಂತರ ಹುಟ್ಟಿಕೊಂಡ ಅನಕೃ ಪ್ರತಿಷ್ಠಾನದ ಸಾಧನೆಯ ಬಗ್ಗೆ ನಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಇತ್ತೀಚೆಗೆ ಅನಕೃ ರವರ ೨೫ನೇ ಪುಣ್ಯತಿಥಿಯನ್ನು ರಜತೋತ್ಸವವನ್ನಾಗಿ ಆಚರಿಸುವ ಸಂದರ್ಭದಲ್ಲಿ ಪ್ರಕಟಿಸಿದ ಅನಕೃ ಪ್ರಶಸ್ತಿ ಸ್ವಾಗತಾರ್ಹವೆನ್ನಬಹುದು. ಒಂದು ಲಕ್ಷ ರೂಪಾಯಿಗಳನ್ನು ಇಡುಗಂಟಾಗಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ೧೦,೦೦೦ ರೂಪಾಯಿಗಳನ್ನು ವರ್ಷದಲ್ಲಿ ಪ್ರಕಟವಾಗುವ ಅತ್ಯುತ್ತಮ ಕಾದಂಬರಿಗೆ ಪ್ರಶಸ್ತಿಯನ್ನಾಗಿ ಪ್ರತಿಷ್ಠಾನ ತಿಳಿಸಿದೆ. ಕಾದಂಬರಿ ಆಯ್ಕೆಗಾಗಿ ಪಟ್ಟು ಹಿಡಿದು ಕೆಲಸ ಮಾಡಬಲ್ಲ ಹಿರಿಯ ಸಾಹಿತಿ ಶ್ರೀ ಸೂರ್ಯನಾರಾಯಣ ಚಡಗರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ೧೯೯೫ ರಲ್ಲಿ ಪ್ರಕಟವಾದ ನಿಮ್ಮ ಕಾದಂಬರಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಿದ್ದಾರೆ. ನಮ್ಮ ಲೇಖಕರು ಮಾಡಬೇಕಾದುದಿಷ್ಟೆ. ೧೯೯೫ ರಲ್ಲಿ ಪ್ರಕಟವಾದ ನಿಮ್ಮ ಕಾದಂಬರಿಗಳನ್ನು ಸಮಿತಿಯ ಪರಿಶೀಲನೆಗೆ ಕಳಿಸುವುದು. ಪ್ರಶಸ್ತಿ ಗೆಲ್ಲುವುದಕ್ಕಾಗಿ ಎಂದಲ್ಲ. ಕನ್ನಡಕ್ಕಾಗಿ ಜೀವನೆವನ್ನೇ ಮುಡಿಪಾಗಿಟ್ಟ ಹಿರಿಯ ಚೇತನ ಅನಕೃ ರವರ ಸವಿನೆನಪಿಗಾಗಿ, ಕನ್ನಡಕ್ಕಾಗಿ ಕೆಲಸ ಮಾಡಲು ಅದನ್ನು ಉತ್ಸಾಹದಿಂದ ಹೊರಟಿರುವವರನ್ನು ಬೆಂಬಲಿಸಲಿಕ್ಕಾಗಿ. ಇವರ ನಡೆ ಇನ್ನೂ ಅನೇಕರಿಗೆ ಆದರ್ಶವಾಗಲಿ ಎಂದು ಹಾರೈಸುವ.

-ಸಂಪಾದಕ
ಮಲ್ಲಿಗೆ, ಸೆಪ್ಟೆಂಬರ್ ೧೯೯೬