ಅಚ್ಚ ಕನ್ನಡಿಗ


"ನೂರಾರು"ಎನ್ನುವುದು ಬಹು ಸಂದರ್ಭಗಳಲ್ಲಿ ಉತ್ಪ್ರೇಕ್ಷೆಯ ಮಾತು. ಒಬ್ಬ ಲೇಖಕನ ಕೃತಿಗಳ ಸಂಖ್ಯೆಯ ವಿಷಯದಲ್ಲಂತೂ ಅದು ಯಾವಾಗಲೂ ಉತ್ಪ್ರೇಕ್ಷೆಯೇ. ಆದರೆ ಅಲ್ಲೊಬ್ಬ ಇಲ್ಲೊಬ್ಬ ಲೇಖಕರು ನಿಜಕ್ಕೂ ನೂರಾರು ಗ್ರಂಥಗಳನ್ನು ರಚಿಸಿರುವ ನಿದರ್ಶನಗಳು ಇಲ್ಲದಿಲ್ಲ. ಕನ್ನಡ ಲೋಕದಲ್ಲಿ ಮನೆಮಾತಾಗಿರುವ ಅ.ನ.ಕೃಷ್ಣರಾಯರು ಇಂತ ವಿರಳ ಲೇಖಕರಲ್ಲಿ ಒಬ್ಬರು. ಕನ್ನಡ ಸಾಹಿತ್ಯದಲ್ಲಿ ಅವರಷ್ಟು ಸಂಖ್ಯೆಯ ಕೃತಿಗಳನ್ನು ರಚಿಸಿರುವ ಇನ್ನೊಬ್ಬ ಲೇಖಕರಿಲ್ಲ.

ಇದೀಗ ಅರವತ್ತು ತುಂಬಿದ ಅ.ನ.ಕೃ. ಅವರ ಕಾದಂಬರಿಗಳ ಸಂಖ್ಯೆಯೇ ನೂರ ಹತ್ತು ದಾಟಿದೆ. ಜೊತೆಗೆ ಹದಿನೈದು ನಾಟಕಗಳು; ಎಂಟು ಕಥಾ ಸಂಕಲನಗಳು; ಕಲೆ, ಸಾಹಿತ್ಯ, ವಿಮರ್ಶೆಗಳಿಗೆ ಸಂಬಂಧಿಸಿದ ಇಪ್ಪತ್ತು ಪುಸ್ತಕಗಳು; ಏಳೆಂಟು ಜೀವನ ಚರಿತ್ರೆಗಳು; ಹನ್ನೆರಡು ಸಂಪಾದಿತ ಕೃತಿಗಳು; ಮೂರು ಅನುವಾದಗಳು; ಪ್ರಬಂಧ, ಹರಟೆ, ಸಂಶೋಧನೆಗಳು......ಒಂದೇ? ಎರಡೇ? ಅ.ನ.ಕೃ. ನಮ್ಮ ಸಾಹಿತ್ಯ ಇತಿಹಾಸದಲ್ಲಿ ಒಂದು ದಾಖಲೆ ಸ್ಥಾಪಿಸಿದ ಧೀರರು.

ಅ.ನ.ಕೃ. ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯ ಮಹತ್ವವನ್ನು ಐತಿಹಾಸಿಕವಾಗಿಯೇ ವಿವೇಚಿಸಬೇಕು. ಆಗಲೇ ಅದರ ನಿಜವಾದ ಸ್ವರೂಪ ಗೊತ್ತಾಗುವುದು. ಅವರ ಸಾಧನೆ ಎಷ್ಟು ದೊಡ್ಡದೆಂದು ಸ್ಪಷ್ಟವಾಗುವುದು.

ನಟಸಾರ್ವಭೌಮರಾಗಿದ್ದ ವರದಾಚಾರ್ಯರ ಪ್ರೇರಣೆಯಿಂದ ಅ.ನ.ಕೃ. ತಮ್ಮ ಹದಿನಾರನೆಯ ವಯಸ್ಸಿನಲ್ಲಿ(೧೯೨೪)"ಮದುವೆಯೊ ಮನೆಹಾಳೋ?"ಎಂಬ ನಾಟಕ ಬರೆದು, ಸಾಹಿತ್ಯರಂಗವನ್ನು ಪ್ರವೇಶಿಸಿದರು. ಮುಂದೆ ಭಾಷಣ, ಬರವಣಿಗೆಗಳ ಗಂಗಾಸಲಿಲ, ದಿನಗಟ್ಟಲೇ ಭಾಷಣ, ಸಾವಿರ ಪುಟಗಳ ಕಾದಂಬರಿ, ಕವಿ-ಕಲಾವಿದರನ್ನು ಕುರಿತ ಲೇಖನಮಾಲೆ.... ಓತಪ್ರೋತ ಪ್ರವಾಹ. ನಿರರ್ಗಳ ಶೈಲಿ, ಮನೋಜ್ಞವಾದ ಸಂಭಾಷಣೆಗಳು ಓದುಗರನ್ನು ಮೋಹಿಸಿ ಬಿಟ್ಟವು.

ಇಂದೂ ಅ.ನ.ಕೃ. ಬರಿಯ ಸಂಭಾಷಣೆಯಲ್ಲಿಯೇ ಕಾದಂಬರಿಯನ್ನು ಬರೆಯುತ್ತಾರೆ. ಅವರ ಕಾದಂಬರಿ ಪ್ರಪಂಚ-ವಸ್ತುವಿನ ಆಯ್ಕೆ, ಸಮಸ್ಯೆಗಳ ವೈವಿಧ್ಯಗಳ ದೃಷ್ಟಿಯಿಂದ ವಿಸ್ತಾರವಾದುದು; ಆದರೆ ನಿರ್ವಹಣೆಯ ದೃಷ್ಟಿಯಿಂದ ತುಂಬ ಸೀಮಿತವಾದದುದು."ಅವರ ಪಾತ್ರಗಳಲ್ಲಿ ವೈವಿಧ್ಯತೆಯ ಬಲವಿಲ್ಲದಿರುವುದೇ ಒಂದು ದೋಷ. ಬೇರೆ ಬೇರೆ ಸಂದರ್ಭಗಳಿಗೆ, ಸಂಗತಿಗಳಿಗೆ, ಸಮಸ್ಯೆಗಳಿಗೆ ಬೇಕಾದ ಬೇರೆ ಬೇರೆ ಪಾತ್ರಗಳು ಅ.ನ.ಕೃ. ಅವರ ಕುಲುಮೆಯಲ್ಲಿ ಕರಗಿ ಹೋಗಿ ತಮ್ಮತನವನ್ನು ಕಳೆದುಕೊಂಡು ಸಾಧಾರಣೀಕೃತರಾಗಿ ಬಿಡುತ್ತಾರೆ."ಕಲೆ ಕೌಶಲ್ಯವಾಗಿ ಮಾರ್ಪಟ್ಟಿದ್ದೇ ಅ.ನ.ಕೃ. ಅವರ ದೌರ್ಬಲ್ಯ." ಆದರೆ ಈಗಲೂ ಎಂದಿನಂತೆ ನಮ್ಮ ಅತ್ಯಂತ ಜನಪ್ರಿಯ ಕಾದಂಬರಿಗಾರರಾಗಿ ಇರುವುದೇ ಅವರ ಹೆಚ್ಚುಗಾರಿಕೆ.

ಈ ಶತಮಾನದ ನಾಲ್ಕನೆ ದಶಕವನ್ನು ಅ.ನ.ಕೃ. ದಶಕವೆಂದು ಕರೆದರೆ ತಪ್ಪಾಗಲಾರದು. ಪ್ರಗತಿಶೀಲ ಸಾಹಿತ್ಯದ ಅಧ್ವರ್ಯರಾಗಿ ಅವರು ನಮ್ಮ ಸಾಹಿತ್ಯಕ್ಕೆ ಹೊಸದನಿಯನ್ನು ಕೊಡಿಸಿದರು. ಸಿದ್ಧವೆನಿಸಿದ ಅನೇಕ ವಿಚಾರಗಳನ್ನು ನಮ್ಮ ಸಾಹಿತ್ಯದಲ್ಲಿ ಸಂಸ್ಥಾಪಿಸಿದವರು ಅ.ನ.ಕೃ. ಫಲವಾಗಿ ಅವರೇ ಮಡಿವಂತರ ಪಾಲಿಗೆ ನಿಷಿದ್ಧರಾದರು. ಸೋಜಿಗವೆಂದರೆ ಯಾವ ವಿಚಾರಗಳಿಗಾಗಿ ಅ.ನ.ಕೃ. ಟೀಕೆಗೊಂಡರೋ ಅವೇ ಇಂದು ಪ್ರಧಾನವಾಗಿವೆ. ಶಾಸ್ತೀಯವೆಂದು ಪರಿಗಣಿಸಲ್ಪಟ್ಟಿವೆ. ಹೊಸ ಪೀಳಿಗೆಯ ಲೇಖಕರ ಬಳಗವೊಂದನ್ನು ಈ ಹೊತ್ತಿನಲ್ಲಿ ಕಟ್ಟಿದ್ದು ಅ.ನ.ಕೃ. ಅವರ ದೊಡ್ಡ ಸಾಧನೆ. ಇಂದಿನ ಎಷ್ಟೋ ಹೆಸರಾಂತ ಲೇಖಕರು ಅ.ನ.ಕೃ. ಶೋಧನೆಯ ಫಲ.

ಕನ್ನಡ ಲೇಖಕರು, ಕಲಾವಿದರ ಸ್ಥಾನ-ಮಾನದ ಬಗೆಗೆ ಅವರು ಮೊದಲಿನಿಂದಲೂ ಹೊಡೆದಾಡಿದರು. ಕನ್ನಡದಲ್ಲಿ ಕಲಾ ವಿಮರ್ಶೆಯನ್ನು ಆರಂಭಿಸಿದರು. ಎಲೆ ಮರೆಯ ಅನೇಕ ಕಲಾವಿದರನ್ನು ಬೆಳಕಿಗೆ ತಂದರು. ಅವರನ್ನು ಕುರಿತು ಬರೆದರು. ಆ ಮೂಲಕ ಕನ್ನಡ ಕಲಾ ಸಂಪತ್ತು ಎಷ್ಟು ಶ್ರೀಮಂತವಾದುದೆಂಬುದನ್ನು ತೋರಿಸಿಕೊಟ್ಟರು. ಇರುವ ಸಂಪತ್ತನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲಾಗದ ಕನ್ನಡ ಜನರನ್ನು ಛೀಮಾರಿ ಹಾಕಿದರು. ನಿದ್ದೆ ಹೋಗುವ ಜನರನ್ನು ಎಚ್ಚರಿಸುವುದೇ ಅ.ನ.ಕೃ. ಅವರಿಗೆ ದೊಡ್ಡ ಕೆಲಸವಾಯಿತು.

ಕನ್ನಡದ ಯಾವ ಸಮಸ್ಯೆಯನ್ನೂ ಅ.ನ.ಕೃ ತಮಗೆ ಸಂಬಂಧಿಸಿದ್ದಲ್ಲ ಎಂದು ದೂರ ಇಡಲಿಲ್ಲ. ಪ್ರಾಂತ ನಿರ್ಮಾಣ, ಕನ್ನಡ ಮಾಧ್ಯಮ, ಹಿಂದೀ ಚಳುವಳಿ, ಬಳ್ಳಾರಿ ಸಮಸ್ಯೆ, ರಾಜಾಜಿಯಂಥ ಧುರೀಣರೂ ಕನ್ನಡಿಗರಿಗೆ ಎಸಗುವ ಅಪಮಾನ, ಕನ್ನಡ ಕಲಾವಿದರ ದುಃಸ್ಥಿತಿ- ಪ್ರತಿಯೊಂದನ್ನೂ ಅವರು ನಿಷ್ಠೆಯಿಂದ ಎತ್ತಿಕೊಂಡರು; ಹೋರಾಡಿದರು; ನಿಷ್ಠುರ ಕಟ್ಟಿಕೊಂಡರು. ಅವರು ತಮ್ಮನ್ನು"ಹಲವು ಕಾಳಗಗಳ ಕಲಿ"ಎಂದು ಕರೆದುಕೊಂಡಿರುವುದು ಅಕ್ಷರಶಃ ನಿಜ. ಕನ್ನಡದ ಜಯ ಅಪಜಯಗಳನ್ನು, ಮಾನಾಪಮಾನಗಳನ್ನು ತಮ್ಮದೇ ಎಂದು ಭಾವಿಸಿದವರು ಅವರು. ಕನ್ನಡದ ಕಾರಣದೊಂದಿಗೆ ಈಬಗೆಯ ತಾದಾತ್ಮ್ಯ ಹೊಂದಿದ ಲೇಖಕರು ಮೂವರೋ, ನಾಲ್ವರೋ; ಐದನೆಯವರನ್ನು ಎಣಿಸಲು ಕಷ್ಟಪಡಬೇಕು.

ರಾಜಕೀಯವಾಗಿಯಾದರೂ ಕನ್ನಡ ನಾಡಿನ ಏಕೀಕರಣವಾಗದಿದ್ದಾಗ ಅ.ನ.ಕೃ. ನಾಡಿನ ಮೂಲೆ ಮೂಲೆಗಳಲ್ಲಿ ಸಂಚರಿಸಿದರು. ಜನರ ಸ್ವಾಭಿಮಾನವನ್ನು ಕೆರಳಿಸಿದರು. ಯಾವ ಅಧಿಕಾರವೂ ಇಲ್ಲದ ಅ.ನ.ಕೃ ಮಾಡಿದ ಈ ಡಂಗುರದ ಕೆಲಸ, ಅಧಿಕಾರದಲ್ಲಿದ್ದ ಬಿ.ಎಂ,ಶ್ರೀ ಅವರ ಕೆಲಸಕ್ಕಿಂತ ಯಾವ ದೃಷ್ಟಿಯಿಂದಲೂ ಕಡಿಮೆಯಾದುದಲ್ಲ. ಆದರೆ ಅದನ್ನು ನಾವು ಗುರುತಿಸದಿರುವುದು ಮಾತ್ರ ದುರ್ದೈವದ ಸಂಗತಿಯಾಗಿದೆ.

ರಾಷ್ಟ್ರಕ್ಕೆ ಎದುರಾಗಿರುವ ಹಿಂದೀ ಅಪಾಯವನ್ನು ಕಾಲು ಶತಮಾನಕ್ಕೆ ಮೊದಲೇ ಗುರುತಿಸಿದ ಪ್ರವಾದಿ ಅ.ನ.ಕೃ. ಹಿಂದೀ ಸಾಮ್ರಾಜ್ಯವನ್ನು ಕಟ್ಟುವ ಆತುರದಲ್ಲಿ ಅನೇಕ ನಾಯಕರು ಇಂದು ಭಾಷಾ ಪ್ರಾಂತಗಳನ್ನೇ ಅಳಿಸಿ ಬಿಡಬೇಕೆಂದು ತೊದಲುತ್ತಿದ್ದಾರೆ. ಸಮೃದ್ಧ ಪ್ರಾಂತಗಳಿಂದಲೇ ಹೇಗೆ ರಾಷ್ಟ್ರೀಯತೆ ಬಲಿಯಬಲ್ಲದೆಂಬುದನ್ನು ಅ.ನ.ಕೃ. ಕಾಲು ಶತಮಾನದ ಹಿಂದೆಯೇ ವಿವರಿಸಿದರು:

"ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತೃವೆಂಬುದನ್ನು ಮರೆಯಬಾರದು. ಆ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲುಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ. ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ."

ನಮ್ಮ ನಾಯಕರಿಗೆ ಈಗಲೂ ಈ ಮಾತಿನ ಅರ್ಥ ಆಗದಿರುವುದು ಶೋಚನೀಯ. ಕನ್ನಡ, ಕರ್ನಾಟಕಗಳ ಬಲವೇ ಭಾರತದ ಬಲವೆಂಬುದನ್ನು ಅವರು ಅರಿತುಕೊಳ್ಳಬೇಕು. ಅ.ನ.ಕೃ. ಮೊದಲಿನಿಂದಲೂ ಆ ಸತ್ಯದ ಪ್ರತಿಪಾದಕರು. ಅವರ ಕನ್ನಡ ಪ್ರೇಮ ಯಾವತ್ತೂ ರಾಷ್ಟ್ರೀಯ ಭಾರತದ ಕಲ್ಪನೆಗೆ ಎರವಾಗಿಲ್ಲ.

ಲೇಖಕರಾಗಿ, ಲೇಖಕರನ್ನು ಸೃಷ್ಟಿಸಿದವರಾಗಿ ನವಜಾಗೃತಿಯ ಪ್ರೇರಕರಾಗಿ, ಅ.ನ.ಕೃ ಕನ್ನಡಕ್ಕೆ ಕೊಟ್ಟಿರುವುದು ಅಪಾರ,"ನನ್ನಂಥಹವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ"ಎನ್ನುವುದು ಅವರದೇ ಒಂದು ಮಾತು. ಆ ಆದರ್ಶದ ಬೆಳಕಿನಲ್ಲಿ ಅವರು ಅರವತ್ತು ವಸಂತಗಳನ್ನು ಕಳೆದಿದ್ದಾರೆ, ಕನ್ನಡ ಜನದ ಜೀವನದಲ್ಲಿ ಸಂತೊಷದ, ಉತ್ಸಾಹದ ಹೊನಲು ಹರಿಸಿದ್ದಾರೆ. ಒಂದು ಸಭೆಯಲ್ಲಿ ಅವರನ್ನು ಪರಿಚಯ ಮಾಡಿಕೊಡುತ್ತಾ ಮಾಸ್ತಿಯವರು ಒಮ್ಮೆ ಹೀಗೆ ಹೇಳಿದರಂತೆ;"ನಾನು ತಮಿಳು ಕನ್ನಡಿಗ; ಮಿರ್ಜಾ ಇಸ್ಮಾಯಿಲ್ಲರು ಮುಸ್ಲಿಂ ಕನ್ನಡಿಗರು; ಆದರೆ ಅ.ನ. ಕೃಷ್ಣರಾಯರು ಅಚ್ಚ ಕನ್ನಡಿಗರು."

ಕನ್ನಡಿಗರಲ್ಲಿ ಕನ್ನಡಿಗರಾದ ಮಾಸ್ತಿಯವರಿಂದ ಬಂದ ಈ ಪ್ರಶಂಸೆಯ ಮಾತು ಅ.ನ.ಕೃ. ಅವರ ಕನ್ನಡತನಕ್ಕೆ ಹಿಡಿದ ಕನ್ನಡಿ. ಕನ್ನಡ ಸಾಂಸ್ಕೃತಿಕ ಜೀವನವನ್ನು ವಿಸ್ತಾರಗೊಳಿಸಿರುವ ಅ.ನ.ಕೃ. ಅವರ ಪ್ರತಿಭೆ, ದುಡಿಮೆ, ಸಾಧನೆ, ಸಿದ್ಧಿ ಇವುಗಳಿಗೆ ನ್ಯಾಯವಾಗಿ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದು ಈಗ ಕನ್ನಡಿಗರ ಪಾಲಿನ ಹೊಣೆಯಾಗಿದೆ.

-ಹಾ.ಮಾ.ನಾಯಕ
"ರಸಚೇತನ"ಡಿಸೆಂಬರ್ ೧೯೭೦.