ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು

[ಈ ಪುಸ್ತಕ ‘ಹೊಸ ಬರಹ’ ದಲ್ಲಿದೆ]


ಶಂಕರಭಟ್ಟರ ಎಲ್ಲಾ ಹೊತ್ತಗೆಗಳನ್ನು ಇಲ್ಲಿಂದ ಇಳಿಸಿಕೊಳ್ಳಬಹುದು.

 

ಇದೊಂದು ಹೊಸ ರೀತಿಯ ಪದಕೋಶ. ಸಾಮಾನ್ಯವಾಗಿ ಇಂಗ್ಲಿಶ್-ಕನ್ನಡ ಪದಕೋಶಗಳನ್ನು ಇಂಗ್ಲಿಶ್ ಬಾರದವರಿಗಾಗಿ ತಯಾರಿಸಿರುತ್ತಾರೆ; ಯಾವುದಾದರೊಂದು ಇಂಗ್ಲಿಶ್ ಪದದ ಅರ‍್ತ, ಉಚ್ಚಾರಣೆ ಇಲ್ಲವೇ ಬಳಕೆ ಹೇಗೆಂಬುದನ್ನು ತಿಳಿಯದವರಿಗೆ ತಿಳಿಸಿ ಹೇಳುವುದೇ ಅವುಗಳ ಗುರಿಯಾಗಿರುತ್ತದೆ. ಇದಕ್ಕಾಗಿ ಅಂತಹ ಪದಕೋಶಗಳಲ್ಲಿ ಇಂಗ್ಲಿಶ್ ಪದಗಳ ಕುರಿತಾಗಿ ಬೇರೆ ಬೇರೆ ರೀತಿಯ ವಿವರಗಳನ್ನು ಕೊಡಲಾಗುತ್ತದೆ.

ಆದರೆ ಈ ಪದಕೋಶದ ಗುರಿಯೇ ಬೇರೆ. ಇಂಗ್ಲಿಶ್ ನುಡಿಯನ್ನು ಸಾಕಶ್ಟು ತಿಳಿದಿದ್ದು, ಅದರಲ್ಲಿ ಬರುವ ಪದಗಳಿಗೆ ಸಮಾನವಾಗಿರುವ ಕನ್ನಡದವೇ ಆದ ಪದಗಳು ಯಾವುವಿವೆ ಎಂಬುದನ್ನು ಮತ್ತು ಅಂತಹ ಪದಗಳನ್ನು ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ತಿಳಿಯಬೇಕೆಂದಿರುವವರಿಗಾಗಿ ಈ ಪದಕೋಶವನ್ನು ತಯಾರಿಸಿದ್ದೇನೆ.

ಹಲವು ಮಂದಿ ಕನ್ನಡಿಗರಿಗೆ ಇವತ್ತು ಕನ್ನಡದ್ದೇ ಆದ ಪದ ಯಾವುದು ಮತ್ತು ಸಂಸ್ಕ್ರುತದಿಂದ ಎರವಲು ಪಡೆದ ಪದ ಯಾವುದು ಎಂಬುದು ತಿಳಿದಿರುವುದಿಲ್ಲ. ಬೇರೆ ಹಲವರಿಗೆ ಸಂಸ್ಕ್ರುತ ಪದಕೋಶಗಳಲ್ಲಿರುವ ಪದಗಳೆಲ್ಲವೂ ಕನ್ನಡದವೇ ಎಂಬ ಬ್ರಮೆಯಿರುವಂತಿದೆ. ಅವನ್ನು ಕನ್ನಡದ ಲಿಪಿಯಲ್ಲಿ ಬರೆದೊಡನೆ ಅವು ಕನ್ನಡದವಾಗಿಬಿಡುತ್ತವೆ ಎಂಬುದು ಅವರ ಅನಿಸಿಕೆಯಿರಬೇಕು.

ಕನ್ನಡಕ್ಕೆ ಹೊಸ ಪದಗಳು ಬೇಕಾದಾಗಲೆಲ್ಲ ಅವನ್ನು ಸಂಸ್ಕ್ರುತದ ಪದ ಮತ್ತು ಒಟ್ಟು(ಪ್ರತ್ಯಯ)ಗಳನ್ನು ಬಳಸಿ ಉಂಟುಮಾಡಿಕೊಳ್ಳುವ ಇನ್ನೊಂದು ಕೆಟ್ಟ ಚಾಳಿಯೂ ಕನ್ನಡದ ಬರಹಗಾರರಲ್ಲಿ ಮತ್ತು ಪಂಡಿತರಲ್ಲಿ ಹಲವಾರು ವರ‍್ಶಗಳಿಂದ ಬೆಳೆದುಬಂದಿದೆ. ಅವರ ಮಟ್ಟಿಗೆ ಕನ್ನಡ ಪದಗಳು ಮುಟ್ಟಬಾರದ (ಅಸ್ಪ್ರುಶ್ಯ) ಪದಗಳು. ನಿಜಕ್ಕೂ ಅವರು ಉಂಟುಮಾಡಿರುವ ಪದಗಳು ಕನ್ನಡದವೂ ಅಲ್ಲ, ಸಂಸ್ಕ್ರುತದವೂ ಅಲ್ಲ. ಅವನ್ನು ‘ತ್ರಿಶಂಕು’ ಪದಗಳೆಂದು ಕರೆಯಬಹುದು. ಇವತ್ತು ಕನ್ನಡ ಬರಹಗಳಲ್ಲಿ ಅಂತಹ ತ್ರಿಶಂಕು ಪದಗಳು ತುಂಬಿತುಳುಕುತ್ತಿವೆ.

ಕನ್ನಡದವೆಂದು ಹೇಳಿಕೊಳ್ಳುತ್ತಿರುವ ಪಾರಿಬಾಶಿಕ ಪದಕೋಶವೊಂದನ್ನು ಬಿಡಿಸಿ ನೋಡಿದೆವಾದರೆ ಈ ವಿಶಯ ಸ್ಪಶ್ಟವಾಗುತ್ತದೆ. ಅದರಲ್ಲಿ ನೂರಕ್ಕೆ ಎಂಬತ್ತರಶ್ಟು (ಇಲ್ಲವೇ ಅದಕ್ಕಿಂತಲೂ ಹೆಚ್ಚು) ತ್ರಿಶಂಕು ಪದಗಳಿರುವುದನ್ನು ಕಾಣಬಹುದು. ಅವುಗಳಿಂದಾಗಿ ಇವತ್ತು ಕನ್ನಡದಲ್ಲಿ ಬರೆದ ವಿಜ್ನಾನ ಬರಹಗಳನ್ನು ಅರ‍್ತಮಾಡಿಕೊಳ್ಳುವುದು ಹೆಚ್ಚಿನ ಕನ್ನಡಿಗರಿಗೂ ತುಂಬಾ ಕಶ್ಟವೆಂದೆನಿಸುತ್ತದೆ.

ಹೊಸ ಪದಗಳನ್ನುಂಟುಮಾಡಲು ಬೇಕಾಗುವ ಪದಗಳು ಮತ್ತು ಒಟ್ಟುಗಳು ಕನ್ನಡದಲ್ಲಿಲ್ಲ ಎಂಬ ಅನಿಸಿಕೆ ಹಲವು ಪಂಡಿತರಲ್ಲಿರುವುದು ಈ ರೀತಿ ಸಂಸ್ಕ್ರುತದ ಮೊರೆಹೊಕ್ಕು ತ್ರಿಶಂಕು ಪದಗಳನ್ನು ಉಂಟುಮಾಡುತ್ತಿರುವುದಕ್ಕೆ ಒಂದು ಕಾರಣ. ಸಂಸ್ಕ್ರುತ ಪದಗಳಿಗಿರುವ ಮರ‍್ಯಾದೆ ಕನ್ನಡ ಪದಗಳಿಗಿಲ್ಲ ಎನ್ನುವಂತಹ ಕನ್ನಡದ ಮೇಲಿರುವ ಕೀಳರಿಮೆ ಇನ್ನೊಂದು ಕಾರಣ.

ಇವೆರಡೂ ತಪ್ಪು ಅನಿಸಿಕೆಗಳು. ಆದರೆ ಇವುಗಳಿಂದಾಗಿ ಇವತ್ತು ಕನ್ನಡದ ಮೇಲೆ ಸಂಸ್ಕ್ರುತದ ಹೊರೆ ಹೆಚ್ಚುತ್ತಿದ್ದು, ಕನ್ನಡ ಬರಹಗಳು ಹೆಚ್ಚಿನ ಕನ್ನಡಿಗರಿಗೂ ಅರ‍್ತವಾಗದ ಕಗ್ಗಂಟುಗಳಾಗುತ್ತಿವೆ. ಹೆಚ್ಚು ಹೆಚ್ಚು ತ್ರಿಶಂಕು ಪದಗಳನ್ನು ಬಳಸಿರುವ ಬರಹಗಳು ತಮ್ಮ ಓದುಗರನ್ನು ಬರೇ ‘ಮಂತ್ರಮುಗ್ದ’ರನ್ನಾಗಿ ಮಾಡುತ್ತವಲ್ಲದೆ ಅವರಲ್ಲಿ ಹೊಸ ಅರಿವನ್ನೇನೂ ಹುಟ್ಟಿಸುವುದಿಲ್ಲ. ಅಂತಹ ಬರಹಗಳು ತಮ್ಮ ಮೂಲಗುರಿಯನ್ನು ತಲಪುವುದೇ ಇಲ್ಲ.

ಈ ರೀತಿ ಸಂಸ್ಕ್ರುತದ ಕಡೆಗೆ ಮೋರೆಮಾಡಿರುವ ಕನ್ನಡ ವಿದ್ವಾಂಸರು ಕನ್ನಡಕ್ಕೆ ದೊಡ್ಡ ಅನ್ಯಾಯವನ್ನು ಮಾಡುತ್ತಿದ್ದಾರೆ. ಅವರ ಮಟ್ಟಿಗೆ ಕನ್ನಡದ್ದೇ ಆದ ಪದಗಳು ಮುಟ್ಟಬಾರದ (ಅಸ್ಪೃಶ್ಯ) ಪದಗಳಾಗಿವೆ! ಒಂದು ಹೊಸ ಮನೆಗೆ, ಹೊಸ ಅಂಗಡಿಗೆ ಇಲ್ಲವೇ ಹೊಸ ಉತ್ಪಾದನೆಗೆ ಹೆಸರು ಕೊಡಬೇಕಾದಾಗ ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಬೀಳುವುದೇ ಇಲ್ಲ ಎಂಬುದನ್ನು ಗಮನಿಸಿದೆವಾದರೆ ನಿಜಕ್ಕೂ ಕನ್ನಡಕ್ಕೆ ಎಂತಹ ಹೀನಾಯ ಸ್ತಿತಿ ಬಂದೊದಗಿದೆಯೆಂಬುದನ್ನು ಊಹಿಸಬಹುದು.

ನಮಗೆ ಬೇಕಾಗಿಬರುವ ಎಂತಹ ಪದಗಳನ್ನು ಬೇಕಿದ್ದರೂ ಸಂಸ್ಕ್ರುತದ ಸಹಾಯವಿಲ್ಲದೆ ಕನ್ನಡದಲ್ಲೇನೇ ಉಂಟುಮಾಡಬಲ್ಲೆವು. ಅಂತಹ ಕಸುವು ಕನ್ನಡಕ್ಕಿದೆ. ಹಾಗೆ ಉಂಟುಮಾಡಲು ಬೇಕಾಗುವ ಸಲಕರಣೆಗಳೆಲ್ಲವೂ ಕನ್ನಡದಲ್ಲಿವೆ. ಇದನ್ನು ತೋರಿಸಿ ಕೊಡುವುದಕ್ಕಾಗಿಯೇ ನಾನು ಈ ಪದಕೋಶವನ್ನು ತಯಾರಿಸಲು ಹೊರಟಿದ್ದೇನೆ.

ಬೇರೆ ನುಡಿಗಳಿಂದ ಪದಗಳನ್ನು ಎರವಲು ಪಡೆಯಬಾರದೆಂದೇನೂ ನಾನು ಹೇಳುತ್ತಿಲ್ಲ. ಇವತ್ತು ಸಾಕಶ್ಟು ಬಳಕೆಗೆ ಬಂದಿರುವ ಪೆನ್ನು, ಪುಸ್ತಕ, ಕೋರ‍್ಟು, ಕಚೇರಿ, ಮೇಜು, ಕುರ‍್ಚಿ, ಡಾಕ್ಟರ್, ಸರ‍್ಜನ್ ಮೊದಲಾದ ಪದಗಳನ್ನು ಬಿಟ್ಟುಕೊಟ್ಟು ಕನ್ನಡದವೇ ಆದ ಪದಗಳನ್ನು ಬಳಸಬೇಕೆಂದೂ ನಾನು ಹೇಳುತ್ತಿಲ್ಲ. ಆದರೆ ಯಾವ ರೀತಿಯ ಪದಕ್ಕೂ ಸಮಾನವಾದಂತಹ ಪದವನ್ನು ಕನ್ನಡದಲ್ಲೇನೇ ಉಂಟುಮಾಡಲು ಸಾದ್ಯ ಎಂಬುದನ್ನು ತೋರಿಸಿಕೊಡುವ ಅವಶ್ಯಕತೆಯಿದೆ ಎಂಬುದಕ್ಕಾಗಿ ಅಂತಹ ಹಲವು ಪದಗಳಿಗೂ ಕನ್ನಡದವೇ ಆದ ಪದಗಳನ್ನು ಇಲ್ಲಿ ಕೊಟ್ಟಿದ್ದೇನೆ.

ಈ ಪದಕೋಶ ಕನ್ನಡದ ಪದಕೋಶವಲ್ಲದೆ ಇಂಗ್ಲಿಶ್ ಪದಕೋಶವಲ್ಲ. ಹಾಗಾಗಿ, ಇಲ್ಲಿ ಇಂಗ್ಲಿಶ್ ಪದಗಳ ಅನಂತರ ಕೊಟ್ಟಿರುವ ವ್ಯಾಕರಣಾಂಶಗಳು (ನಾಮಪದ (ನಾ), ಕ್ರಿಯಾಪದ (ಕ್ರಿ), ಗುಣಪದ (ಗು), ಆಗುವಿಕೆ (ಆ) ಮತ್ತು ಮಾಡುವಿಕೆ (ಮಾ) ಎಂಬವು) ಅವುಗಳ ಅನಂತರ ಬರುವ ಕನ್ನಡ ಪದಗಳಿಗೆ ಸಂಬಂದಿಸಿವೆಯಲ್ಲದೆ ಇಂಗ್ಲಿಶ್ ಪದಗಳಿಗೆ ಸಂಬಂದಿಸಿಲ್ಲ.

ಇದಲ್ಲದೆ, ಪದಗಳ ಬಳಕೆಯನ್ನು ಸೂಚಿಸುವುದಕ್ಕಾಗಿ ಈ ಪದಕೋಶದಲ್ಲಿ ಕಂಸದೊಳಗೆ ಕೊಟ್ಟಿರುವ ಸಾದಿತ ಪದಗಳು, ಜೋಡುಪದಗಳು, ಪದಕಂತೆಗಳು ಮತ್ತು ವಾಕ್ಯಗಳು - ಇವೆಲ್ಲವೂ ಅವುಗಳ ಮೊದಲು ಬಂದಿರುವ ಕನ್ನಡ ಪದಗಳನ್ನು ಹೊಸಗನ್ನಡದಲ್ಲಿ ಹೇಗೆ ಬಳಸಬಹುದು ಎಂಬುದನ್ನು ತಿಳಿಸುತ್ತವಲ್ಲದೆ ಇಂಗ್ಲಿಶ್ ಪದಗಳ ಬಳಕೆಯನ್ನು ತಿಳಿಸುವುದಿಲ್ಲ.

ಈ ಪದಕೋಶಕ್ಕಾಗಿ ಆರಿಸಿರುವ ಇಂಗ್ಲಿಶ್ ಪದಗಳೂ ಇದೇ ಉದ್ದೇಶವನ್ನು ಅವಲಂಬಿಸಿವೆ. ಎಂತಹ ಇಂಗ್ಲಿಶ್ ಪದಗಳಿಗೆ ದೊರೆಯಾದ ಕನ್ನಡ ಪದಗಳು ಬರಹಗಾರರಿಗೆ ಬೇಕಾಗಬಹುದೋ ಅಂತಹ ಪದಗಳನ್ನು ಮಾತ್ರವೇ ಇಲ್ಲಿ ಆರಿಸಿಕೊಂಡಿದ್ದೇನೆ. ನೇರವಾಗಿ ವ್ಯಾಕರಣಕ್ಕೆ ಸಂಬಂದಿಸಿದಂತಹ and, but, when ಮೊದಲಾದುವನ್ನು ಇಲ್ಲಿ ಕೊಟ್ಟಿಲ್ಲ.

ಆದರೆ ಈ ಪದಕೋಶದ ಬಳಕೆದಾರರಿಗೆ ಬೇಕಾಗುವಂತಹ ಎಲ್ಲಾ ಪದಗಳಿಗೂ ಸಮನಾದ ಕನ್ನಡ ಪದಗಳನ್ನು ಇಲ್ಲಿ ಕಾಣಬಹುದೆಂದೇನೂ ನಾನು ಹೇಳುತ್ತಿಲ್ಲ. ಈ ಪದಕೋಶವನ್ನು ಬಳಸಹೊರಟ ನನಗೇನೇ ಈ ಕೊರತೆ ಕಣ್ಣಿಗೆ ಬಿದ್ದಿದೆ. ಆದರೆ ಇದು ಕನ್ನಡ ನುಡಿಯ ಕೊರತೆಯಲ್ಲ; ಈ ಪದಕೋಶವನ್ನು ತಯಾರಿಸಿರುವ ನನ್ನ ಕೊರತೆಯಶ್ಟೇ.

ಈ ಪದಕೋಶದಲ್ಲಿ ಬಳಸಿರುವ ಇಂಗ್ಲಿಶ್ ಪದಗಳ ಅರ‍್ತಗಳಿಗಾಗಿ ನಾನು ವೆಬ್‌ಸ್ಟರ‍್ಸ್ ನ್ಯೂ ವರ‍್ಲ್‌ಡ್ ಡಿಕ್ಶ್‌ನರಿಯನ್ನು ಬಳಸಿದ್ದೇನೆ. ಇದರಲ್ಲಿ ಬರುವ ಕನ್ನಡ ಪದಗಳಿಗಾಗಿ ಕಿಟ್ಟೆಲ್ ಅವರ ಕನ್ನಡ-ಇಂಗ್ಲಿಶ್ ನಿಗಂಟು, ಕನ್ನಡ ಸಾಹಿತ್ಯ ಪರಿಶತ್ತಿನ ಕನ್ನಡ ನಿಗಂಟು, ಜಿ.ವೆಂಕಟಸುಬ್ಬಯ್ಯ ಅವರ ಇಂಗ್ಲಿಶ್-ಕನ್ನಡ ನಿಗಂಟು, ಕೊಳಂಬೆ ಪುಟ್ಟಣ್ಣಗವ್ಡರ ಅಚ್ಚಗನ್ನಡ ನುಡಿಕೋಶ, ಬರೋ ಮತ್ತು ಎಮೆನೋ ಅವರ ಡ್ರವೀಡಿಯನ್ ಎಟಿಮೋಲಜಿಕಲ್ ಡಿಕ್‌ಶ್ನರಿ ಮೊದಲಾದ ಹಲವು ನಿಗಂಟುಗಳನ್ನು ಬಳಸಿದ್ದೇನೆ.

ಇದಲ್ಲದೆ ಈ ಯಾವ ಪದಕೋಶದಲ್ಲೂ ಕಾಣಸಿಗದಿರುವ ಹಲವು ಹೊಸ ಪದಗಳನ್ನೂ ನಾನು ಕನ್ನಡದ ಪದರಚನೆಯ ಒಲವನ್ನು ಬಳಸಿ ಉಂಟುಮಾಡಿಕೊಂಡಿದ್ದೇನೆ. ಈ ಪದಗಳ ಬಳಕೆಯನ್ನು ಸೂಚಿಸಬೇಕಾದಾಗ ಎಲ್ಲಾ ಕಡೆಗಳಲ್ಲೂ ಹೊಸಗನ್ನಡ ವಾಕ್ಯಗಳನ್ನೇ ಉಂಟುಮಾಡಿ ಕೊಟ್ಟಿದ್ದೇನೆ. ಹಳೆಗನ್ನಡದಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಕನ್ನಡ ಪದಗಳನ್ನೂ ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ಹಲವು ಕಡೆಗಳಲ್ಲಿ ಇಂತಹ ಎತ್ತುಗೆಗಳ ಮೂಲಕ ತೋರಿಸಿಕೊಟ್ಟಿದ್ದೇನೆ.

ಈ ಪದಕೋಶದಲ್ಲಿ ಸೇರದಿರುವ ಇನ್ನೂ ಎಶ್ಟೋ ಪದಗಳು ಕನ್ನಡದಲ್ಲಿವೆ. ಕನ್ನಡದ ಒಳನುಡಿಗಳಲ್ಲಿ ಒಂದು ದೊಡ್ಡ ಪದಬಂಡಾರವೇ ಇದೆ. ಅದನ್ನು ತೆರೆದು ಇಂತಹ ಪದಕೋಶದಲ್ಲಿ ತುಂಬಿಕೊಳ್ಳುವ ಕೆಲಸ ಇನ್ನೂ ನಡೆಯಬೇಕಿದೆ. ಇಲ್ಲಿ ನಾನು ‘ಕನ್ನಡದ್ದೇ ಪದಗಳು’ ಎಂದು ಕರೆದಿರುವ ಪದಗಳಲ್ಲಿ ಕೆಲವು ಬೇರೆ ನುಡಿಗಳಿಂದ ಎರವಲಾಗಿ ಬಂದವುಗಳೂ ಇವೆ. ಆದರೆ ಅವು ನೂರಕ್ಕೆ ಅಯ್ದರಿಂದ ಹೆಚ್ಚಿಲ್ಲವೆಂದು ನನ್ನ ನಂಬಿಕೆ.

ಆದರೆ ನಿಜಕ್ಕೂ ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳಲ್ಲಿ ಎರವಲು ಪದಗಳು ಯಾವುವು, ಕನ್ನಡದ್ದೇ ಆದ ಪದಗಳು ಯಾವುವು ಎಂಬುದನ್ನು ತೀರ‍್ಮಾನಿಸುವುದು ಅಶ್ಟು ಸುಲಬದ ಕೆಲವಲ್ಲ. ಯಾಕೆಂದರೆ ಸಾವಿರಾರು ವರ‍್ಶಗಳ ಹಿಂದೆ ಕನ್ನಡ ನುಡಿ ತನ್ನತನವನ್ನು ಪಡೆದ ಸಮಯದಿಂದಲೂ ಅದಕ್ಕೆ ಬೇರೆ ನುಡಿಗಳಿಂದ ಪದಗಳು ಎರವಲಾಗಿ ಬಂದು ಸೇರುತ್ತಲೇ ಇವೆ. ಹಾಗಾಗಿ, ಯಾವುದೊಂದು ಪದವನ್ನೂ ಅದು ಎರವಲಾಗಿ ಪಡೆದ ಪದವೇ ಅಲ್ಲ ಎಂಬುದಾಗಿ ಹೇಳಲು ಸಾದ್ಯವಾಗದು. ಇದು ಎಲ್ಲಾ ನುಡಿಗಳಿಗೂ ಅನ್ವಯಿಸುವಂತಹ ಸಂಗತಿಯಾಗಿದೆ. ಒಂದು ನುಡಿಗೆ ಇತ್ತೀಚೆಗೆ ಎರವಲಾಗಿ ಬಂದು ಸೇರಿರುವ ಪದಗಳನ್ನು ಮಾತ್ರವೇ ಅದರದೇ ಆದ ಪದಗಳಿಂದ ಬೇರ‍್ಪಡಿಸಲು ನಮಗೆ ಸಾದ್ಯವಾಗಬಲ್ಲುದು.

ಇಲ್ಲಿ ನಮ್ಮ ಗುರಿಯೂ ಅಂತಹದೇ. ಸಾಮಾನ್ಯ ಜನರಿಗೆ ತಿಳಿದಿಲ್ಲದ ಮತ್ತು ಕನ್ನಡದ ಪದಸ್ವರೂಪಕ್ಕೆ ಹೊಂದಿಕೆಯಾಗದ ಪದಗಳನ್ನು ಆದಶ್ಟು ಮಟ್ಟಿಗೆ ಕನ್ನಡ ಬರಹಗಳಿಂದ ಹೊರಗಿರಿಸಬೇಕೆಂಬುದಿಶ್ಟೇ ನಾವು ಮಾಡಬೇಕಾಗಿರುವ ಕೆಲಸವಲ್ಲದೆ ‘ಅಚ್ಚಗನ್ನಡ’ ಪದಗಳನ್ನು ಬಳಸಬೇಕೆಂಬುದಲ್ಲ. ಸಾಮಾನ್ಯ ಜನರಿಗೆ ತಿಳಿದಿಲ್ಲದ ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟೂ ನಮ್ಮ ಬರಹ ಅವರಿಂದ ದೂರ ಹೋಗುತ್ತದೆ ಮತ್ತು ಕನ್ನಡದ ಪದಸ್ವರೂಪಕ್ಕೆ ಹೊಂದಿಕೆಯಾಗದ ತತ್ಸಮ ಪದಗಳನ್ನು ಇಲ್ಲವೇ ‘ತ್ರಿಶಂಕು’ ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟೂ ಅಂತಹ ಬರಹ ಕನ್ನಡಿಗರ ಕಿವಿಗೆ ಕರ‍್ಕಶವಾಗುತ್ತಾ ಹೋಗುತ್ತದೆ.

ಇಂಗ್ಲಿಶ್ ಪದಗಳಿಗೆ ಸಮನಾದ ಕನ್ನಡ ಪದಗಳು ಯಾವುವಿವೆ ಎಂಬುದನ್ನು ಹುಡುಕುವವರಿಗೆ ಮತ್ತು ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದ್ದೇ ಆದ ಪದಗಳನ್ನು ಹೊಸದಾಗಿ ಉಂಟುಮಾಡಬೇಕೆಂದು ಬಯಸುವವರಿಗೆ ಈ ಪದಕೋಶ ಒತ್ತಾಸೆಯಾಗಲಿ ಮತ್ತು ಆ ಮೂಲಕ ಕನ್ನಡ ಬರಹಗಳಲ್ಲಿ ಕನ್ನಡದವೇ ಆದ ಪದಗಳ ಮೇಲೆ ವಿದ್ವಾಂಸರು ಹೊರಿಸಿರುವ ಅಸ್ಪ್ರುಶ್ಯತೆ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬುದು ನನ್ನ ಹಾರಯ್ಕೆ.

ನಾನು ನನ್ನ ಇತ್ತೀಚೆಗಿನ ಕನ್ನಡ ನುಡಿ ನಡೆದು ಬಂದ ದಾರಿ ಮತ್ತು ಮಾತಿನ ಒಳಗುಟ್ಟು ಎಂಬ ಎರಡು ಪುಸ್ತಕಗಳಲ್ಲಿ ಮಾಡಿದ ಹಾಗೆ ಈ ಪುಸ್ತಕದಲ್ಲೂ ಕನ್ನಡದ ‘ಹೊಸ ಬರಹ’ವನ್ನು ಬಳಸಿದ್ದೇನೆ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕಾಗಿಲ್ಲ; ಅವು ನಮ್ಮ ಉಚ್ಚಾರಣೆಯಲ್ಲಿ ಹೇಗಿವೆಯೋ ಹಾಗೆ ಬರೆದರೆ ಸಾಕು ಎಂಬ ತೀರ‍್ಮಾನದ ಮೇಲೆ ಈ ‘ಹೊಸ ಬರಹ’ ನಿಂತಿದೆ.

ಈ ಪದಕೋಶವನ್ನು ತಯಾರಿಸುವಲ್ಲಿ ನನಗೆ ಹಲವು ರೀತಿಯ ಸಲಹೆಗಳನ್ನಿತ್ತು ಉದ್ದಕ್ಕೂ ಒತ್ತಾಸೆಯಾಗಿ ನಿಂತ ಶ್ರೀ ಹೆಗ್ಗೆರೆ ರಾಜ್ ಅವರನ್ನು, ಇದನ್ನು ಅಂದವಾಗಿ ಅಚ್ಚುಮಾಡಿದ ಶ್ರೀ ರಾ. ಶ್ರೀ. ಮೋಹನ ಮೂರ‍್ತಿ ಅವರನ್ನು, ಅಚ್ಚುಮಾಡಿಸುವಲ್ಲಿ ಹಣದ ಬೆಂಬಲವಿತ್ತ ಬನವಾಸಿ ಬಳಗವನ್ನು, ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಶ್ರೀ ಜಿ. ಎನ್. ಅಶೋಕವರ‍್ದನ ಅವರನ್ನು ಮತ್ತು ಇದರ ಕಯ್ಬರಹವನ್ನು ಓದಿ ಹಲವು ಸಲಹೆಗಳನ್ನು ಕೊಟ್ಟ ಮತ್ತು ಬೇರೆಲ್ಲಾ ರೀತಿಯಲ್ಲೂ ನನ್ನ ಬೆನ್ನೆಲುಬಾಗಿ ನಿಂತ ನನ್ನ ಮಡದಿ ಶ್ರೀಮತಿ ಬಾರತಿ ಬಟ್ ಅವರನ್ನು ಇಲ್ಲಿ ನೆನಪಿಸಬಯಸುತ್ತೇನೆ.

ಈ ಪುಸ್ತಕವನ್ನು ಅಚ್ಚುಹಾಕಿಸಲು ಬನವಾಸಿ ಬಳಗ ಹಣದ ಬೆಂಬಲ ನೀಡಿದೆ. ಬನವಾಸಿ ಬಳಗವು ಕನ್ನಡ, ಕನ್ನಡಿಗ, ಕರ‍್ನಾಟಕಗಳ ಏಳಿಗೆಯನ್ನು ಗುರಿಯಾಗಿಟ್ಟುಕೊಂಡು ಪ್ರಪಂಚದಲ್ಲೆಲ್ಲ ಕನ್ನಡಿಗರು ಎಚ್ಚತ್ತುಕೊಳ್ಳುವಂತೆ ಮಾಡುತ್ತಿರುವ ಯುವ ಕನ್ನಡಿಗರ ಗುಂಪು. ನಾಡಿನ ಏಳಿಗೆಯಲ್ಲಿ ನುಡಿಯ ಪಾತ್ರ ಬಹಳ ಮುಕ್ಯವಾದುದು ಎಂದು ಕಂಡಿರುವ ಬಳಗಕ್ಕೆ ಡಾ. ಡಿ. ಎನ್. ಶಂಕರ ಬಟ್ಟರ ಸಂಶೋದನೆಯ ಪಲವು ಪ್ರತಿಯೊಬ್ಬ ಕನ್ನಡಿಗ ನಿಗೂ ಸಿಗಬೇಕು ಎಂಬ ಹಂಬಲವಿದೆ. ಬಟ್ಟರು ತಿಳಿಸಿಕೊಡುವ ವಯ್‌ಜ್ನಾನಿಕ ವಿಶಯ ಗಳಿಂದ ಕನ್ನಡಿಗರ ನಡುವಿನ ಮೇಲು-ಕೀಳೆಂಬ ಮನೋಬಾವಗಳು ಹೋಗುವುದಲ್ಲದೆ ನಮ್ಮ ನುಡಿಯ ನಿಜವಾದ ಸಾಮರ‍್ತ್ಯಗಳನ್ನು ಆದಶ್ಟು ಸಮರ‍್ಪಕವಾಗಿ ಬಳಸಿಕೊಂಡು ಮುಂದೆ ಕನ್ನಡದಲ್ಲಿ ಎಲ್ಲಾ ರೀತಿಯ ವಿಜ್ನಾನದ ಸಾಹಿತ್ಯವೂ ಮೂಡಿಬರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

-ಡಿ. ಎನ್. ಶಂಕರ ಬಟ್
ಹೆಗ್ಗೋಡು, ಸಾಗರ

 

ಪದಗಳನ್ನು ಉಂಟುಮಾಡುವಲ್ಲಿ ಕನ್ನಡದ ಒಲವುಗಳು

ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡಲು ಹೊರಡುವವರು ಆ ವಿಶಯದಲ್ಲಿ ಕನ್ನಡದ ಒಲವೇನು ಎಂಬುದನ್ನು ತಿಳಿದುಕೊಂಡಿರುವುದು ಒಳ್ಳೆಯದು. ಯಾಕೆಂದರೆ, ಕನ್ನಡದ್ದೇ ಆದ ಒಲವನ್ನು ಬಳಸಿ ಉಂಟುಮಾಡಿರುವ ಹೊಸಪದಗಳು ನಮ್ಮ ನುಡಿಯ ಸೊಗಡನ್ನು ಕೆಡಿಸುವುದಿಲ್ಲ. ಬಳಸುವವರಿಗೂ ಅವು ಹೆಚ್ಚು ತೊಂದರೆ ಕೊಡುವುದಿಲ್ಲ.

ಯಾವುದಾದರೊಂದು ಪದಕ್ಕೆ ಒಂದು ಒಟ್ಟನ್ನು ಸೇರಿಸಿ ಹೊಸಪದವನ್ನು ಉಂಟುಮಾಡುವುದು ಮತ್ತು ಎರಡು ಪದಗಳನ್ನು ಒಟ್ಟುಸೇರಿಸಿ ಹೊಸ ಜೋಡುಪದವನ್ನು ಉಂಟುಮಾಡುವುದು ಎಂಬುದಾಗಿ ಕನ್ನಡದಲ್ಲಿ ಎರಡು ಪದರಚನೆಯ ಬಗೆಗಳಿವೆ. ಇವುಗಳ ಬಳಕೆಯಲ್ಲಿ ಕನ್ನಡದ ಒಲವು ಎಂತಹದು ಎಂಬುದನ್ನು ಕೆಳಗೆ ಕೆಲವು ಎತ್ತುಗೆ(ಉದಾಹರಣೆ)ಗಳ ಮೂಲಕ ವಿವರಿಸಲಾಗಿದೆ.

ಒಟ್ಟುಗಳ ಬಳಕೆ

ಹಲವು ಬಗೆಯ ಒಟ್ಟುಗಳನ್ನು ಬಳಸಿ ಕನ್ನಡದಲ್ಲಿ ಹೊಸ ಹೊಸ ಹೆಸರು(ನಾಮಪದ)ಗಳನ್ನು ಇಲ್ಲವೇ ಪರಿಚೆಪದ(ಗುಣಪದ)ಗಳನ್ನು ಉಂಟುಮಾಡಬಹುದು. ಆದರೆ ಹೊಸ ಎಸಕಪದ(ಕ್ರಿಯಾಪದ)ಗಳನ್ನು ಉಂಟುಮಾಡುವುದಕ್ಕಾಗಿ ಕನ್ನಡದಲ್ಲಿ ಇಸು ಎಂಬ ಒಂದು ಒಟ್ಟಲ್ಲದೆ ಬೇರೆ ಬಳಕೆಗೆ ತರಬಲ್ಲ ಒಟ್ಟುಗಳಿಲ್ಲ.

ಕನ್ನಡದ ಎಸಕಪದಗಳನ್ನು ಆಡುವಿಕೆ ಮತ್ತು ಮಾಡುವಿಕೆ ಎಂಬ ಎರಡು ಗುಂಪುಗಳಾಗಿ ಒಡೆಯಬಹುದು. ಇದನ್ನು ಈ ಪದಕೋಶದಲ್ಲಿ ಅವಶ್ಯವೆನಿಸಿದಲ್ಲಿ ತೋರಿಸಲಾಗಿದೆ. ಆಗುವಿಕೆಗಳಿಗೆ ಇಸು ಒಟ್ಟನ್ನು ಸೇರಿಸಿ ಅವನ್ನು ಮಾಡುವಿಕೆಗಳನ್ನಾಗಿ ಬದಲಾಯಿಸಬಹುದು.

ಆಗುವಿಕೆಮಾಡುವಿಕೆಆಗುವಿಕೆಮಾಡುವಿಕೆ
ಒಗ್ಗುಒಗ್ಗಿಸುಸಿಕ್ಕುಸಿಕ್ಕಿಸು
ಹೊಂದುಹೊಂದಿಸುಹುದುಗುಹುದುಗಿಸು
ಒಪ್ಪುಒಪ್ಪಿಸುಮಾಜುಮಾಜಿಸು
ಒಡಂಬಡುಒಡಂಬಡಿಸುನುಗ್ಗುನುಗ್ಗಿಸು
ಏರ‍್ಪಡುಏರ‍್ಪಡಿಸುಮೆಚ್ಚುಮೆಚ್ಚಿಸು
ಬೀಳುಬೀಳಿಸುತಿನ್ನುತಿನ್ನಿಸು

ಕೆಲವು ಕಡೆಗಳಲ್ಲಿ ಮಾತ್ರ ಇಸು ಒಟ್ಟನ್ನು ಸೇರಿಸಿದಾಗಲೂ ಎಸಕಪದ ಆಗುವಿಕೆಯಾಗಿಯೇ ಉಳಿಯುತ್ತದೆ (ಕಂಗೊಳು-ಕಂಗೊಳಿಸು, ಕಾಣು-ಕಾಣಿಸು, ಕೇಳು-ಕೇಳಿಸು). ಇದಲ್ಲದೆ ಹೆಸರುಗಳಿಗೆ ಇಸು ಒಟ್ಟನ್ನು ಸೇರಿಸಿ ತಯಾರಿಸಿದ ಎಸಕಪದಗಳು ಆಗುವಿಕೆಗಳಾಗಿಯೂ ಇರಬಹುದು, ಮಾಡುವಿಕೆಗಳಾಗಿಯೂ ಇರಬಹುದು.

ಆಗುವಿಕೆಗಳುಮಾಡುವಿಕೆಗಳು
ನಟಿಸುಪೂಜಿಸು
ನಶಿಸುಪ್ರೀತಿಸು
ವಾಸಿಸುದ್ವೇಶಿಸು
ಚಲಿಸುಚುಂಬಿಸು

ಆಳು ಇಲ್ಲವೇ ಗಂಡುಸು

(೧) ಒಂದು ಕೆಲಸವನ್ನು ನಡೆಸಿದವನು ಒಬ್ಬ ಆಳು ಎಂಬ ಹುರುಳನ್ನು (ಅರ‍್ತವನ್ನು) ಕೊಡಲು ಕನ್ನಡದಲ್ಲಿ ಗ ಇಲ್ಲವೇ ಇಗ ಒಟ್ಟನ್ನು ಬಳಸಲಾಗುತ್ತದೆ. ಈ ಒಟ್ಟಿನ ಎರಡು ರೂಪಗಳಲ್ಲಿ ಗ ಎಂಬುದು ಎಲ್ಲಿ ಬರುತ್ತದೆ ಮತ್ತು ಇಗ ಎಂಬುದು ಎಲ್ಲಿ ಬರುತ್ತದೆ ಎಂಬುದಕ್ಕೆ ಒಂದು ಕಟ್ಟಲೆಯಿರುವ ಹಾಗೆ ಕಾಣಿಸುವುದಿಲ್ಲ.

ಗ ಒಟ್ಟಿನ ಬಳಕೆಇಗ ಒಟ್ಟಿನ ಬಳಕೆ
ಕೇಳುಕೇಳುಗಪೂಣುಪೂಣಿಗ
ಸಾರುಸಾರುಗಬೀರುಬೀರಿಗ
ಓದುಓದುಗಹಮ್ಮುಹಮ್ಮಿಗ
ಕೊಳ್ಳುಕೊಳ್ಳುಗಅಟ್ಟುಅಟ್ಟಿಗ
ಕೆತ್ತುಕೆತ್ತುಗಕೊಬ್ಬುಕೊಬ್ಬಿಗ
ಸೆಣಸುಸೆಣಸುಗಅರಸುಅರಸಿಗ

ಈ ಒಟ್ಟನ್ನು ಹೆಸರುಗಳ ಅನಂತರವೂ ಬಳಸಲು ಸಾದ್ಯವಿದ್ದು, ‘ಅಂತಹ ಹೆಸರಿಗೆ ಸಂಬಂದಿಸಿದ ಆಳು’ ಎಂಬ ಹುರುಳನ್ನು ಅದು ಕೊಡುತ್ತದೆ. ಸಾಮಾನ್ಯವಾಗಿ ಇಕಾರ ಇಲ್ಲವೇ ಎಕಾರದಲ್ಲಿ ಕೊನೆಗೊಳ್ಳುವ ಹೆಸರಿಗೆ ಗ ಒಟ್ಟು ಸೇರುತ್ತದೆ ಮತ್ತು ಅಕಾರ ಇಲ್ಲವೇ ಉಕಾರದಲ್ಲಿ ಕೊನೆಗೊಳ್ಳುವ ಹೆಸರಿಗೆ ಇಗ ಒಟ್ಟು ಸೇರುತ್ತದೆ ಎಂಬ ಕಟ್ಟಲೆಯನ್ನು ಹೊಸ ಪದಗಳನ್ನು ಉಂಟುಮಾಡುವವರು ಬಳಸಿಕೊಳ್ಳಬಹುದು.

ಗ ಒಟ್ಟಿನ ಬಳಕೆಇಗ ಒಟ್ಟಿನ ಬಳಕೆ
ನುಡಿನುಡಿಗಸಾಲಸಾಲಿಗ
ದಾಳಿದಾಳಿಗಗಾಣ ಗಾಣಿಗ
ಒಂಟಿಒಂಟಿಗದಿಬ್ಬಣದಿಬ್ಬಣಿಗ
ತಕ್ಕಡಿತಕ್ಕಡಿಗಹರದ ಹರದಿಗ
ಸೂರೆಸೂರೆಗನಾಡುನಾಡಿಗ
ಕೊಲೆಕೊಲೆಗತಿಳಿವುತಿಳಿವಿಗ
ಕೊಂಡೆಕೊಂಡೆಗಒಕ್ಕಲುಒಕ್ಕಲಿಗ
ಕೊಳ್ಳೆಕೊಳ್ಳೆಗಹಣ್ಣುಹಣ್ಣಿಗ

ಕಲಸು-ಕಲಸುಗ, ಸುಲಿ-ಸುಲಿಗ, ಎತ್ತು-ಎತ್ತುಗ, ಹೀರು-ಹೀರುಗ, ತಟ್ಟೆತೊಳೆ-ತಟ್ಟೆತೊಳೆಗ ಎಂಬಂತಹ ಇತ್ತೀಚೆಗೆ ಉಂಟುಮಾಡಿರುವ ಕೆಲವು ಪದಗಳಲ್ಲಿ ಗ ಒಟ್ಟನ್ನು ಒಂದು ವಸ್ತುವನ್ನು ಸೂಚಿಸುವುದಕ್ಕಾಗಿಯೂ ಬಳಸಲಾಗಿದೆ. ಈ ವಸ್ತುಗಳು ಮೇಲಿನ ಕೆಲಸಗಳನ್ನು ತಮ್ಮ ಕಸುವಿನಿಂದಲೇ ನಡೆಸಬಲ್ಲುವಾದ ಕಾರಣ ಇಲ್ಲಿ ಅವುಗಳ ಮೇಲೆ ಆಳ್ತನವನ್ನು ಹೊರಿಸಲಾಗಿದೆಯೆಂದೂ ಹೇಳಬಹುದು.

ಈ ಒಟ್ಟನ್ನು ಬಳಸಿರುವ ಪದಕ್ಕೆ ‘ಗಂಡಸು’ ಎಂಬ ಹುರುಳೂ ಬರಬಲ್ಲುದಾಗಿದ್ದು, ‘ಹೆಂಗಸು’ ಎಂಬ ಹುರುಳನ್ನು ಕೊಡಬೇಕಿದ್ದಲ್ಲಿ ಅದಕ್ಕೆ ಇತ್ತಿ ಒಟ್ಟನ್ನು ಸೇರಿಸುವ ಬಗೆಯೂ ಕೆಲವು ಕಡೆಗಳಲ್ಲಿ ಕಾಣಿಸುತ್ತದೆ (ಹಾವಾಡಿಗಿತ್ತಿ, ಗಟ್ಟಿಗಿತ್ತಿ, ಕೊಲ್ಲಟಿಗಿತ್ತಿ, ಒಂಟಿಗಿತ್ತಿ, ಒಕ್ಕಲಿಗಿತ್ತಿ, ನಾಡಿಗಿತ್ತಿ).

(೨) ಹೆಸರುಗಳಿಗೆ ಗಾರ ಒಟ್ಟನ್ನು ಸೇರಿಸುವ ಮೂಲಕವೂ ಅವಕ್ಕೆ ಸಂಬಂದಿಸಿದ ಆಳನ್ನು ಸೂಚಿಸಬಹುದು. ಈ ಒಟ್ಟಿನ ಕೊನೆಯ ಇಕಾರವನ್ನು ಕಳೆದು ಅದಕ್ಕೆ ತಿ ಒಟ್ಟನ್ನು ಸೇರಿಸಿರುವ ಗಾರ‍್ತಿ ಎಂಬುದರ ಮೂಲಕ ಅಂತಹ ಆಳು ಒಬ್ಬ ಹೆಂಗಸು ಎಂಬುದನ್ನು ಸೂಚಿಸಬಹುದು (ಬಳೆಗಾರ‍್ತಿ, ಕೊನಬುಗಾರ‍್ತಿ, ಬಿಂಕಗಾರ‍್ತಿ, ಹಾಡುಗಾರ‍್ತಿ, ಬರಹಗಾರ‍್ತಿ).

ಬಿಂಕಕೊಳ್ಳೆಗಅಚ್ಚುಅಚ್ಚುಗಾರ
ಓದುಓದುಗಾರಮಚ್ಚುಮಚ್ಚುಗಾರ
ತೀರ‍್ಪುತೀರ‍್ಪುಗಾರಓಜೆಓಜೆಗಾರ
ದೊಂಬಿದೊಂಬಿಗಾರಕೊಳ್ಳೆಕೊಳ್ಳೆಗಾರ
ಓಟಓಟಗಾರಹೊಣೆಹೊಣೆಗಾರ
ಕೆರಕೆರಗಾರಬೆದೆಬೆದೆಗಾರ
ಕಂಪುಕಂಪುಗಾರಹೂಟಹೂಟಗಾರ
ಕಾವಲುಕಾವಲುಗಾರಬರಹಬರಹಗಾರ
ಹಾಡುಹಾಡುಗಾರಮಾತುಮಾತುಗಾರ
ಮಾಟಮಾಟಗಾರತುಬ್ಬುತುಬ್ಬುಗಾರ

ಆದರೆ ಗ ಇಲ್ಲವೇ ಇಗ ಒಟ್ಟಿನ ಹಾಗೆ ಗಾರ ಒಟ್ಟನ್ನು ಎಸಕ(ಕ್ರಿಯಾ)ಪದಗಳಿಗೆ ಸೇರಿಸಲು ಸಾದ್ಯವಾಗದು. ಕೆಲವು ಪದಗಳಲ್ಲಿ ಈ ಒಟ್ಟು ಕಾರ ರೂಪದಲ್ಲೂ ಕಾಣಿಸುತ್ತದೆ (ಕೂಲಿಕಾರ, ಕೇಣಕಾರ, ಕೋವಿಕಾರ, ಓಲೆಕಾರ, ಅರ‍್ತಿಕಾರ).

(೩) ನಡತೆಯ ಮೂಲಕ ಆಳನ್ನು ಸೂಚಿಸಬೇಕಿದ್ದಲ್ಲಿ ಆಳಿ ಒಟ್ಟನ್ನು ಬಳಸಲು ಸಾದ್ಯವಿದೆ: ಮಾತು-ಮಾತಾಳಿ, ತಿನ್ನು-ತಿನ್ನಾಳಿ, ಓದು-ಓದಾಳಿ, ಕಾದು-ಕಾದಾಳಿ, ಕೇಡು-ಕೇಡಾಳಿ, ಮಾರು-ಮಾರಾಳಿ, ಏರು-ಏರಾಳಿ, ಸಿಗ್ಗು-ಸಿಗ್ಗಾಳಿ. ಹೆಚ್ಚು ಮಾತನಾಡುವವನು, ಹೆಚ್ಚು ತಿನ್ನುವವನು, ಹೆಚ್ಚು ಓದುವವನು ಎಂಬಂತಹ ಹುರುಳು ಇವಕ್ಕಿದೆ.

(೪) ಈ ರೀತಿ ಹೊಸ ಪದಗಳನ್ನು ಉಂಟುಮಾಡುವ ಬದಲು ಇವೇ ಹುರುಳುಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಹಲವು ಪದರೂಪಗಳೂ ಬಳಕೆಯಲ್ಲಿವೆ. ಬರುವವನು-ಬರುವವಳು, ಬಂದವನು-ಬಂದವಳು, ಬಾರದವನು-ಬಾರದವಳು ಎಂಬಂತಹ ಈ ರೂಪಗಳು ಗಂಡುಸು-ಹೆಂಗುಸು ವ್ಯತ್ಯಾಸವನ್ನು ಮಾತ್ರವಲ್ಲದೆ ಕೆಲಸ ನಡೆದ ಸಮಯದಲ್ಲಿ ಕಾಣಿಸುವ ವ್ಯತ್ಯಾಸವನ್ನು (ಮಾತಿನ ಸಮಯಕ್ಕಿಂತ ಹಿಂದಿನದು-ಮುಂದಿನದು ಎಂಬುದನ್ನು) ಮತ್ತು ಕೆಲಸ ನಡೆದಿದೆ-ನಡೆದಿಲ್ಲ ಎಂಬ ವ್ಯತ್ಯಾಸವನ್ನೂ ಸೂಚಿಸಬಲ್ಲುವು.

ಕೆಲಸ ಮತ್ತು ಕೆಲಸಕ್ಕೆ ಸಂಬಂದಿಸಿದ ವಸ್ತು, ವಿಶಯ

(೧) ಕನ್ನಡದಲ್ಲಿ ಕೆ/ಇಕೆ ಒಟ್ಟಿಗೂ ಗೆ/ಇಗೆ ಒಟ್ಟಿಗೂ ನಡುವೆ ಹುರುಳಿನಲ್ಲಿ ವ್ಯತ್ಯಾಸವಿರುವ ಹಾಗೆ ಕಾಣಿಸುತ್ತದೆ. ಕೆ/ಇಕೆ ಎಂಬುದು ಸಾಮಾನ್ಯವಾಗಿ ಒಂದು ಎಸಕ(ಕ್ರಿಯಾ)ಪದವು ಸೂಚಿಸುವ ಕೆಲಸವನ್ನು ಹೆಸರಿಸುತ್ತದೆ ಮತ್ತು ಗೆ/ಇಗೆ ಎಂಬುದು ಅಂತಹ ಕೆಲಸದಿಂದ ದೊರೆತ ವಸ್ತು, ಕೆಲಸದ ಪರಿಣಾಮ, ಇಲ್ಲವೇ ಕೆಲಸಕ್ಕೆ ಬಳಸಿದ ಉಪಕರಣ, ಮೊದಲಾದ ಕೆಲಸಕ್ಕೆ ಸಂಬಂದಿಸಿದವುಗಳನ್ನು ಹೆಸರಿಸುತ್ತದೆ. ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು.

ಗೆ/ಇಗೆ ಒಟ್ಟಿನ ಬಳಕೆಕೆ/ಇಕೆ ಒಟ್ಟಿನ ಬಳಕೆ
ಆಟಆಟಿಗೆಏರುಏರಿಕೆ
ಹಾಸುಹಾಸಿಗೆತೋರುತೋರಿಕೆ
ಕೊಡುಕೊಡುಗೆಆರುಆರಿಕೆ
ಇಡುಇಡುಗೆತೂಗುತೂಗಿಕೆ
ಉಡುಉಡುಗೆಎನಿಸುಎನಿಸಿಕೆ
ತೆರುತೆರಿಗೆಬೆದರುಬೆದರಿಕೆ
ನೆಡುನೆಡಿಗೆತಿದ್ದುತಿದ್ದಿಕೆ
ಬಡಿಬಡಿಗೆನಂಬುನಂಬಿಕೆ
ಪಸುಪಸುಗೆಆಯುಆಯ್ಕೆ
ಹೊಲಿಹೊಲಿಗೆಅಗಲುಅಗಲಿಕೆ
ನೆಯ್ನೆಯ್ಗೆಕೋರುಕೋರಿಕೆ

ಮೇಲಿನ ವ್ಯತ್ಯಾಸವೂ ಒಂದು ಒಲವಲ್ಲದೆ ಕಟ್ಟಲೆ(ನಿಯಮ)ವಲ್ಲ. ಹಾಗಾಗಿ ಅದಕ್ಕೂ ಕೆಲವು ಹೊರಪಡಿಕೆಗಳಿವೆ. ಎತ್ತುಗೆಗಾಗಿ, ಗಳಿಸು-ಗಳಿಕೆ, ಮೊಳೆ-ಮೊಳಕೆ, ಹೊದೆ-ಹೊದಿಕೆ, ಉಳಿ-ಉಳಿಕೆ, ಕಾಣು-ಕಾಣಿಕೆ, ನೀಡು-ನೀಡಿಕೆ, ಆನು-ಆನಿಕೆ ಮೊದಲಾದ ಕೆಲವು ಬಳಕೆಗಳಲ್ಲಿ ಇಕೆ ಒಟ್ಟಿಗೆ ಕೆಲಸವನ್ನು ಹೆಸರಿಸುವ ಹುರುಳಿಗಿಂತಲೂ ಅದರ ಪರಿಣಾಮ ಇಲ್ಲವೇ ಉಪಕರಣವನ್ನು ಸೂಚಿಸುವ ಹುರುಳಿದೆ.

ಅಲ್ಲಗಳೆದ ಕೆಲಸವೊಂದನ್ನು ಹೆಸರಿಸುವುದಕ್ಕಾಗಿ ಎಸಕ ಪದಗಳ ಅಲ್ಲಗಳೆಯುವ ಸಂಬಂದರೂಪಗಳಿಗೆ ಇಕೆ ಒಟ್ಟನ್ನು ಸೇರಿಸುವಂತಹ ಕೆಲವು ಬಳಕೆಗಳಿವೆ (ನಿಲ್ಲದ-ನಿಲ್ಲದಿಕೆ, ಒಗ್ಗದ-ಒಗ್ಗದಿಕೆ, ಅಲ್ಲದ-ಅಲ್ಲದಿಕೆ, ಇಲ್ಲದ-ಇಲ್ಲದಿಕೆ, ಮೆಚ್ಚದ-ಮೆಚ್ಚದಿಕೆ, ಒಪ್ಪದ-ಒಪ್ಪದಿಕೆ). ಉಳಿದ ಎರಡು ಸಂಬಂದ ರೂಪಗಳಲ್ಲಿ ಮುಂದಿನ ಸಮಯವನ್ನು ಸೂಚಿಸುವ ಮಾಡುವ, ಇರುವ, ನಿಲ್ಲುವ ಮೊದಲಾದ ರೂಪಗಳೆಲ್ಲವೂ ಕೆಲಸವನ್ನು ಹೆಸರಿಸುವುದಕ್ಕಾಗಿ ಇಕೆ ಒಟ್ಟಿನೊಂದಿಗೆ ಬರಬಲ್ಲವು (ಮಾಡುವಿಕೆ, ಇರುವಿಕೆ, ನಿಲ್ಲುವಿಕೆ. ಆದರೆ ಹಿಂದಿನ ಸಮಯವನ್ನು ಸೂಚಿಸುವ ಮಾಡಿದ, ಇದ್ದ, ನಿಂತ ಮೊದಲಾದವು ಆ ರೀತಿ ಇಕೆ ಒಟ್ಟಿನೊಂದಿಗೆ ಬರಲಾರವು.

(೨) ಇಕಾರ, ಎಕಾರ ಇಲ್ಲವೇ ಯಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳಿಗೆ ತ ಒಟ್ಟನ್ನು ಸೇರಿಸುವ ಮೂಲಕವೂ ಅವು ಸೂಚಿಸುವ ಕೆಲಸವನ್ನು ಹೆಸರಿಸುವಂತಹ ಪದಗಳನ್ನು ಪಡೆಯಬಹುದು.

ಇಕಾರದ ಪದಗಳುಎಕಾರದ ಪದಗಳು
ತುಳಿತುಳಿತಮೊರೆಮೊರೆತ
ದುಡಿದುಡಿತಅಲೆಅಲೆತ
ಕುಣಿಕುಣಿತಎಸೆಎಸೆತ
ಇರಿಇರಿತಹೊಡೆಹೊಡೆತ
ಹಿಂಜರಿಹಿಂಜರಿತನೆಗೆನೆಗೆತ

ಗೆಯ್-ಗೆಯ್ತ, ಕೊಯ್-ಕೊಯ್ತ, ಮೇಯು-ಮೇತ ಎಂಬವುಗಳಲ್ಲಿ ಈ ಒಟ್ಟು ಯಕಾರದ ಅನಂತರ ಬಂದಿದೆ.

ತಪ್ಪು-ತಪ್ಪಿತ, ಮಿಗು-ಮಿಗಿತ, ಮೀರು-ಮೀರಿತ ಎಂಬವುಗಳು ಮೇಲಿನ ಒಲವಿಗೆ ಹೊರಪಡಿಕೆಗಳಾಗಿದ್ದು ಇಲ್ಲಿ ಉಕಾರದ ಅನಂತರವೂ ತ ಒಟ್ಟು ಬಂದಿದ್ದು ಉಕಾರ ಇಕಾರವಾಗಿದೆ.

(೩) ಕೆಲಸದ ಪರಿಣಾಮವನ್ನು ಹೆಸರಿಸುವುದಕ್ಕಾಗಿ ಬಳಕೆಯಾಗಬಲ್ಲ ಇನ್ನೊಂದು ಒಟ್ಟೆಂದರೆ ವು ಎಂಬುದು. ಕೆಲವು ಕಡೆಗಳಲ್ಲಿ ಇದಕ್ಕೆ ಪು ಇಲ್ಲವೇ ಹು ಎಂಬ ರೂಪವೂ ಇದೆ. ಈ ಒಟ್ಟು ಸೇರಿದಾಗ ಎಸಕಪದಗಳ ಕೊನೆಯ ಎಕಾರ ಮಾತ್ರವಲ್ಲದೆ ಉಕಾರವೂ ಅಕಾರವಾಗಿ ಬದಲಾಗುತ್ತದೆ ಮತ್ತು ಯಕಾರ ಬಿದ್ದುಹೋಗುತ್ತದೆ.

ಇಕಾರದ ಅನಂತರಎಕಾರದ ಅನಂತರ
ತಿಳಿತಿಳಿವುಕಡೆಕಡವು
ಉಲಿಉಲಿವುತೆರೆತೆರವು
ಹರಿಹರಿವುಎರೆಎರವು
ಉಳಿಉಳಿವುಸೆಳೆಸೆಳವು
ಬಿಗಿಬಿಗುಹುಹೊಳೆಹೊಳಹು
ಉಲಿಉಲುಹುಮರೆಮರಹು
ಉಕಾರದ ಅನಂತರಯಕಾರದ ಅನಂತರ
ತೆರುತೆರವುಬಾಯುಬಾವು
ಇಡುಇಡುವುನೋಯುನೋವು
ಬಿಡುಬಿಡುವುಕೀಯುಕೀವು
ಗೆಲ್ಲುಗೆಲುವುಸಾಯುಸಾವು

ಹೊಳೆ-ಹೊಳಪು, ಪಡೆ-ಪಡಪು, ನೆನೆ-ನೆನಪು, ಕಲೆ-ಕಲಪು, ತೀರು-ತೀರ‍್ಪು, ಮಾರು-ಮಾರ‍್ಪು ಮೊದಲಾದವುಗಳಲ್ಲಿ ಈ ಒಟ್ಟು ಪು ರೂಪದಲ್ಲಿ ಬಂದಿದೆ.

(೪) ಕೆಲಸದ ಪರಿಣಾಮವನ್ನು ಸೂಚಿಸಲು ಹ (ತೊರೆ-ತೊರೆಹ, ನಡೆ-ನಡೆಹ, ಕೂಡು-ಕೂಡುಹ, ಎನ್ನು-ಎನ್ನುಹ, ಅರಿ-ಅರಿಹ, ನುಡಿ-ನುಡಿಹ) ಮತ್ತು ಮೆ (ತಾಳು-ತಾಳ್ಮೆ, ಸೋಲು-ಸೋಲ್ಮೆ, ದುಡಿ-ದುಡಿಮೆ, ಗೆಯ್-ಗೆಯ್ಮೆ, ಕಾಣು-ಕಾಣ್ಮೆ) ಎಂಬ ಬೇರೆಯೂ ಎರಡು ಒಟ್ಟುಗಳು ಸಾಕಶ್ಟು ಪದಗಳಲ್ಲಿ ಕಾಣಿಸುತ್ತಿದ್ದು ಅವನ್ನೂ ಹೊಸ ಪದಗಳ ರಚನೆಯಲ್ಲಿ ಬಳಕೆಗೆ ತರಬಹುದು.

(೫) ಈ ರೀತಿ ಹೆಚ್ಚುಕಡಿಮೆ ಒಂದೇ ಅರ‍್ತವನ್ನು ಕೊಡುವ ಮೂರು-ನಾಲ್ಕು ಒಟ್ಟುಗಳಿರುವಲ್ಲಿ ಒಂದೊಂದನ್ನೂ ಸ್ವಲ್ಪಮಟ್ಟಿಗೆ ಬೇರಾಗಿರುವ ಹುರುಳುಗಳನ್ನು ಸೂಚಿಸುವುದಕ್ಕಾಗಿ ಬಳಸಿಕೊಳ್ಳಬಹುದು. ಎತ್ತುಗೆಗಾಗಿ, ಅರಿ ‘ತಿಳಿ’ ಪದದಿಂದ ಪಡೆದಿರುವ ಅರಿಕೆ, ಅರಿತ, ಅರಿಮೆ, ಅರಿವು, ಅರಿಹ ಎಂಬ ಪದಗಳನ್ನು ಗಮನಿಸಬಹುದು. ಅರ‍್ತಕೋಶಗಳಲ್ಲಿ ಇವೆಲ್ಲವೂ knowledge ಎಂಬ ಹೆಚ್ಚುಕಡಿಮೆ ಒಂದೇ ಹುರುಳಿನಲ್ಲಿ ಬಳಕೆಯಾಗಿವೆ.

ಇವುಗಳಲ್ಲಿ ಅರಿಕೆ ಎಂಬುದಕ್ಕೆ representation ‘ಅರಿಕೆಮಾಡು’ ಎಂಬ ಹುರುಳೂ ಇದೆ ಮತ್ತು ಅರಿತ ಎಂಬುದಕ್ಕೆ perception ಎಂಬ ಹುರುಳೂ ಇದೆ (ಅರಿವು ಎಂಬುದಕ್ಕೂ ಈ ಅರ‍್ತವಿದೆ). ಈ ಹೆಚ್ಚಿನ ಹುರುಳುಗಳಲ್ಲೇನೇ ಅವನ್ನು ವಿಶಿಶ್ಟ ಬರಹಗಳಲ್ಲಿ ಬಳಕೆಗೆ ತಂದರೆ ಅಂತಹ ಬರಹಕ್ಕೆ ಸ್ಪಶ್ಟತೆ ಬರಬಲ್ಲುದು. ಅರಿಮೆ ಎಂಬುದನ್ನು ನಾನು ಇಲ್ಲಿ science ಎಂಬ ಹುರುಳಿನಲ್ಲಿ ಬಳಸಿದ್ದೇನೆ.

(೬) ಈ ರೀತಿ ಹೊಸ ಪದಗಳನ್ನು ಉಂಟುಮಾಡುವ ಬದಲು ಮಾಡುವುದು-ಮಾಡಿದುದು-ಮಾಡದುದು ಮತ್ತು ಮಾಡುವಿಕೆ ಎಂಬಂತಹ ಕೆಲಸಗಳನ್ನು ಹೆಸರಿಸುವ ಪದರೂಪಗಳನ್ನೂ ಕನ್ನಡದಲ್ಲಿ ಬಳಸಬಹುದು.

ಎದುರು ಹುರುಳು

ಇಂಗ್ಲಿಶ್ ಇಲ್ಲವೇ ಸಂಸ್ಕ್ರುತದಲ್ಲಿರುವ ಹಾಗೆ ಕನ್ನಡದಲ್ಲಿ ಹೆಸರುಪದಗಳಿಗೆ ಮುನ್ನೊಟ್ಟನ್ನು ಸೇರಿಸುವುದರ ಮೂಲಕ (ಸತ್ಯ-ಅಸತ್ಯ, ತೃಪ್ತಿ-ಅತೃಪ್ತಿ, ಸಾಧ್ಯ-ಅಸಾಧ್ಯ, ಹಿಂಸೆ-ಅಹಿಂಸೆ, ಜ್ಞಾನ-ಅಜ್ಞಾನ) ಅವುಗಳ ಎದುರು ಹುರುಳಿರುವ ಪದಗಳನ್ನು ಪಡೆಯಲು ಸಾದ್ಯವಾಗುವುದಿಲ್ಲ. ಆದರೆ ಅಂತಹ ಹುರುಳನ್ನು ಪಡೆಯಲು ಕನ್ನಡದಲ್ಲಿ ಬೇರೆ ಬಗೆಗಳಿವೆ.

(೧) ಎಸಕಪದಗಳ ಅಲ್ಲಗಳೆಯುವ ರೂಪವನ್ನು ಬಳಸಿ ಪದಗಳನ್ನು ರಚಿಸುವುದು ಇಂತಹ ಬಗೆಗಳಲ್ಲೊಂದು. ಸೊಲ್ಲಮೆ ‘ಅನುಕ್ತಿ’, ಅರಿಯಮೆ ‘ಅಜ್ಞಾನ’, ಅರಮೆ ‘ಅಜೀರ‍್ಣ’ ಎಂಬಂತಹ ಕೆಲವನ್ನು ಪದಕೋಶಗಳಲ್ಲಿ ಕಾಣಬಹುದು. ಇಂತಹ ಬೇರೆಯೂ ಪದಗಳನ್ನು ರಚಿಸಿಕೊಳ್ಳಲು ಸಾದ್ಯವಿದೆ.

ಎಸಕಪದಹೆಸರುಪದಎದುರುಪದ
ತಾಳುತಾಳ್ಮೆತಾಳಮೆ
ಕೂರುಕೂರ‍್ಮೆಕೂರಮೆ
ಸೋಲುಸೋಲ್ಮೆಸೋಲಮೆ
ದುಡಿದುಡಿಮೆದುಡಿಯಮೆ
ಒಲಿಒಲಿಮೆಒಲಿಯಮೆ
ಕಾಣುಕಾಣ್ಮೆಕಾಣಮೆ

(೨) ಮಾರ್-ಮರು ‘ಎದುರು’ ಪದವನ್ನು ಬಳಸಿರುವ ಜೋಡುಪದಗಳಿಂದಲೂ ಈ ಹುರುಳನ್ನು ಸೂಚಿಸಬಹುದು ಎಂಬುದನ್ನು ಮುಂದೆ ಪುಟ ೧೬ರಲ್ಲಿ ನೋಡಲಿರುವೆವು.

(೩) ಕಂಡುದು-ಕಾಣದುದು, ತಿಂದುದು-ತಿನ್ನದುದು ಎಂಬಂತಹ ಪದರೂಪ ಗಳೂ ಇಂತಹವೇ ಹುರುಳುಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಬಳಕೆಯಲ್ಲಿವೆ.

ಪರಿಚೆಗಳನ್ನು ಹೆಸರಿಸುವುದು

(೧) ಪರಿಚೆ(ಗುಣ)ಪದಗಳು ಸೂಚಿಸುವ ಪರಿಚೆಯನ್ನು ಹೆಸರಿಸುವುದಕ್ಕಾಗಿ (ಎಂದರೆ ಅಂತಹ ಹೆಸರನ್ನು ಉಂಟುಮಾಡುವುದಕ್ಕಾಗಿ) ಕನ್ನಡದಲ್ಲಿ ಆ ಪದಕ್ಕೆ ತನ ಒಟ್ಟನ್ನು ಸೇರಿಸಬಹುದು (ಹೊಸ-ಹೊಸತನ, ಬಡ-ಬಡತನ, ಮೊಂಡು-ಮೊಂಡುತನ, ಉರುಟು-ಉರುಟುತನ, ಚುರುಕು-ಚುರುಕುತನ, ಕೀಳು-ಕೀಳ್ತನ).

(೨) ಇದಲ್ಲದೆ ಹೆಸರುಗಳು ಸೂಚಿಸುವ ಹಲವು ಪರಿಚೆಗಳಲ್ಲಿ ಮುಕ್ಯವಾದ ಒಂದು ಪರಿಚೆಯನ್ನು ಹೆಸರಿಸುವುದಕ್ಕಾಗಿಯೂ ಈ ಒಟ್ಟನ್ನು ಹೆಸರುಗಳಿಗೆ ಸೇರಿಸಬಹುದು (ತಾಯಿ-ತಾಯ್ತನ, ಬಾಳು-ಬಾಳ್ತನ, ಮನೆ-ಮನೆತನ, ನಂಟ-ನಂಟತನ, ಆಳು-ಆಳ್ತನ, ಒಂಟಿ-ಒಂಟಿತನ, ಕಳ್ಳ-ಕಳ್ಳತನ).

(೩) ಪರಿಚೆಪದಗಳಿಗೆ ಪು ಒಟ್ಟನ್ನು ಸೇರಿಸುವುದರ ಮೂಲಕವೂ ಅವು ಸೂಚಿಸುವ ಪರಿಚೆಯನ್ನು ಹೆಸರಿಸಬಹುದು (ನೇರ-ನೇರ‍್ಪು, ಕೂರ್- ಕೂರ‍್ಪು, ನುಣ್-ನುಣ್ಪು, ತೆಳು-ತೆಳುಪು, ಬಿಣ್-ಬಿಣ್ಪು, ಬಿಳಿ-ಬಿಳುಪು, ನೀಳ-ನೀಳ್ಪು, ಇನಿ-ಇಂಪು, ಮುದಿ-ಮುಪ್ಪು, ಕಡು-ಕಡುಪು, ತಣ್-ತಣ್ಪು, ಕರ್-ಕಪ್ಪು).

ಹೊಸ ಪರಿಚೆಪದಗಳು

ಎಸಕಪದಗಳಿಗೆ ಅಲು ಇಲ್ಲವೇ ಕಲು ಒಟ್ಟನ್ನು ಸೇರಿಸಿ ಅವು ಸೂಚಿಸುವಂತಹ ಕೆಲಸಕ್ಕೆ ಸಂಬಂದಿಸಿದ ಪರಿಚೆಗಳನ್ನು ಸೂಚಿಸಬಲ್ಲ ಪರಿಚೆಪದಗಳನ್ನು ಉಂಟುಮಾಡಬಹುದು.

ಅಲು ಒಟ್ಟಿನ ಬಳಕೆಕಲು ಒಟ್ಟಿನ ಬಳಕೆ
ಹಳಸುಹಳಸಲುಇಳಿಇಳುಕಲು
ಮಾಸುಮಾಸಲುಹರಿಹರುಕಲು
ಇಂಗುಇಂಗಲುಸವೆಸವಕಲು

ಇದಲ್ಲದೆ ಕನ್ನಡದಲ್ಲಿ ಹೆಸರುಪದಗಳಿಗೆ ಮತ್ತು ಎಸಕಪದಗಳಿಗೆ ಅ ಒಟ್ಟನ್ನು ಸೇರಿಸಿ ತಯಾರಿಸಿರುವಂತಹ ಪದರೂಪಗಳಿಂದಲೂ ಪರಿಚೆಗಳನ್ನು ಸೂಚಿಸಬಹುದು. ಹೆಸರುಪದಗಳಿಗೆ ಇಂತಹ ಒಂದೊಂದು ಪದರೂಪ ಮಾತ್ರ ಇದೆ (ಮರ-ಮರದ, ಹಣ್ಣು-ಹಣ್ಣಿನ, ಕೊನೆ-ಕೊನೆಯ, ಕಿಡಿ-ಕಿಡಿಯ); ಆದರೆ ಎಸಕಪದಗಳಿಗೆ ಮೂರು-ಮೂರು ರೂಪಗಳಿವೆ (ಮಾಡು-ಮಾಡಿದ, ಮಾಡುವ, ಮಾಡದ; ತಿನ್ನು-ತಿಂದ, ತಿನ್ನುವ, ತಿನ್ನದ; ಕೇಳು-ಕೇಳಿದ, ಕೇಳುವ, ಕೇಳದ).

ಜೋಡುಪದಗಳು

ಕನ್ನಡದಲ್ಲಿ ಹೆಸರುಪದ, ಪರಿಚೆಪದ ಇಲ್ಲವೇ ಎಸಕಪದಗಳಿಗೆ ಹೆಸರುಪದಗಳನ್ನು ಸೇರಿಸಿ ಜೋಡುಪದಗಳನ್ನು ತಯಾರಿಸಿಕೊಳ್ಳಲಾಗುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ.

ಹೆಸರುಪದ+ಹೆಸರುಪದಎಸಕಪದ+ಹೆಸರುಪದಪರಿಚೆಪದ+ಹೆಸರುಪದ
ಮನೆಗೆಲಸಸುರಿಮಳೆಹೆಬ್ಬೆರಳು
ಕಣ್ಣುಸನ್ನೆಜಾರುಬಂಡಿಮುಂಗಡ
ಕಯ್ಕೊಡಲಿಚುಚ್ಚುಮದ್ದುಒಳಕೋಣೆ
ನೂಲೇಣಿಬೀಸುಗಲ್ಲುಹೊರಬಾಗಿಲು
ಮರಗಾಲುಸಿಡಿಮದ್ದುಕಡೆಗಣ್ಣು
ಜೇನುಹುಳಊರುಗೋಲುಚಿಕ್ಕಮ್ಮ
ತಪ್ಪುಕಾಣಿಕೆಬಿಡುಮುಡಿನಡುಹಗಲು
ತಲೆಗೂದಲುಹುಟ್ಟುಹಬ್ಬಕಡುಬಿಸಿಲು
ಕಣ್ಣೀರುಬಿಚ್ಚುಗತ್ತಿಹಿಂಗಾಲು

ಈ ಬಗೆಯನ್ನು ಬಳಸಿ ನಮಗೆ ಬೇಕಾಗುವ ಹಲವಾರು ಹೊಸಪದಗಳನ್ನು ತಯಾರಿಸಿ ಕೊಳ್ಳಬಹುದು. ಈ ಮೂರು ಬಗೆಗಳು ಕನ್ನಡಕ್ಕೆ ದೊಡ್ಡದೊಂದು ಕಸುವನ್ನು ತಂದುಕೊಟ್ಟಿವೆ.

ಕನ್ನಡ ಪದಕೋಶಗಳನ್ನು ರಚಿಸಿರುವ ವಿದ್ವಾಂಸರು ಈ ರೀತಿ ಎಸಕಪದಗಳನ್ನೂ ಜೋಡುಪದಗಳ ಮೊದಲನೆಯ ಅಂಗವಾಗಿ ಕನ್ನಡದಲ್ಲಿ ಬಳಸಬಹುದು ಎಂಬುದನ್ನು ಸರಿಯಾಗಿ ಗಮನಿಸದೆ ಒಂದು ದೊಡ್ಡ ತಪ್ಪನ್ನು ಮಾಡಿದ್ದಾರೆ. ನೂರಾರು ಪದಗಳು ಒಂದೇ ರೂಪದಲ್ಲಿ ಎಸಕಪದಗಳಾಗಿ ಮತ್ತು ಹೆಸರುಪದಗಳಾಗಿ ಬಳಕೆಯಾಗುತ್ತವೆಯೆಂದು ಈ ಪದಕೋಶಗಳಲ್ಲಿ ತಪ್ಪಾಗಿ ಸೂಚಿಸಲಾಗಿದೆ.

ಎತ್ತುಗೆಗಾಗಿ ಕಿಟ್ಟೆಲ್ ಅವರ ಪದಕೋಶದಲ್ಲಿ ಬರುವ ಕೆಲವು ಪದಗಳನ್ನು ಗಮನಿಸಬಹುದು. ಕಟ್ಟು ಪದ ಕನ್ನಡದಲ್ಲಿ ಎಸಕಪದವಾಗಿ ಮಾತ್ರವಲ್ಲದೆ ಹೆಸರುಪದ ವಾಗಿಯೂ ಬಳಕೆಯಾಗಬಲ್ಲುದೆಂದು ಅವರು ಹೇಳಿರುವುದು ಸರಿ. ಯಾಕೆಂದರೆ ಕಟ್ಟನ್ನು, ಕಟ್ಟುಗಳನ್ನು ಎಂಬಂತಹ ಬಳಕೆಗಳನ್ನು ಇದಕ್ಕೆ ಆದಾರವಾಗಿ ಕೊಡಬಹುದು.

ಆದರೆ ಕುಡಿ ಪದವನ್ನು ಇಲ್ಲವೇ ಕುಣ ಪದವನ್ನು ಹೆಸರುಪದವಾಗಿಯೂ ಬಳಸ ಬಹುದು (ಅವಕ್ಕೆ drinking ಮತ್ತು dancing ಎಂಬ ಹುರುಳುಗಳಿವೆ) ಎಂಬುದಾಗಿ ಅವರು ಹೇಳಿರುವುದು ಸರಿಯಲ್ಲ. ಯಾಕೆಂದರೆ ಇದಕ್ಕೆ ಅವರು ಆದಾರವಾಗಿ ಕೊಟ್ಟಿರುವ ಕುಡಿನೀರ್, ಕುಡಿವಾಲ್ ಮತ್ತು ಕುಣಿನಡಿಕೆ ಎಂಬ ಬಳಕೆಗಳಲ್ಲಿ ಅವು ಜೋಡುಪದಗಳ ಅಂಗಗಳಾಗಿ ಬಂದಿದ್ದು, ಅಲ್ಲಿ ಅವು ಎಸಕಪದಗಳಾಗಿಯೇ ಬಳಕೆಯಾಗಿವೆಯೆಂದು ಹೇಳಬಲ್ಲೆವು. ಹಾಗಾಗಿ ಅಂತಹ ಪದಗಳಲ್ಲಿ ಅವು ಹೆಸರುಪದಗಳಾಗಿ ಬಳಕೆಯಾಗಿವೆಯೆಂದು ಹೇಳಬೇಕಾಗಿಲ್ಲ.

ಇದಲ್ಲದೆ *ಕುಡಿಯನ್ನು, *ಕುಡಿಗೆ ಎಂಬಂತಹ ಬಳಕೆಗಳು ‘ಕುಡಿತವನ್ನು’, ‘ಕುಡಿತಕ್ಕೆ’ ಎಂಬಂತಹ ಹುರುಳಿನಲ್ಲಿ ಇಲ್ಲವೇ *ಕುಣಿಗಳು, *ಕುಣಿಗಳಿಗೆ ಎಂಬಂತಹ ಬಳಕೆಗಳು ‘ಕುಣಿತಗಳು’, ‘ಕುಣಿತಗಳಿಗೆ’ ಎಂಬಂತಹ ಹುರುಳಿನಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಕುಡಿ ಇಲ್ಲವೆ ಕುಣಿ ಪದಕ್ಕೆ ಹೆಸರುಪದವಾಗಿ (ನಾಮಪದವಾಗಿ) ಕನ್ನಡದಲ್ಲಿ ಬಳಕೆಯಿದೆ ಎಂದು ಹೇಳಿರುವುದು ತಪ್ಪು ಎಂಬ ನಿರ‍್ದಾರಕ್ಕೆ ಬರಬೇಕಾಗುತ್ತದೆ.

ಕಿಟ್ಟೆಲ್ ಅವರನ್ನು ಹಿಂಬಾಲಿಸಿ ಕನ್ನಡದ ಬೇರೆ ಅರ‍್ತಕೋಶಗಳಲ್ಲೂ (ಎತ್ತುಗೆಗಾಗಿ ಕಾರಂತರ ಸಿರಿಗನ್ನಡ ಅರ‍್ತಕೋಶ ನೋಡಿ) ಇದೇ ತಪ್ಪನ್ನು ಮುಂದುವರಿಸಲಾಗಿದೆ. ಸಂಸ್ಕ್ರುತದಲ್ಲಿ ಹೆಸರುಪದಗಳನ್ನು ಮಾತ್ರವೇ ಜೋಡುಪದಗಳ ಮೊದಲನೆಯ ಅಂಗವಾಗಿ ಬಳಸಲು ಸಾದ್ಯ ಎಂಬ ವಿಶಯ (ಮತ್ತು ಕುಡಿನೀರ್ ಎಂಬಂತಹ ಜೋಡುಪದಗಳನ್ನು ಇಂಗ್ಲಿಶ್‌ಗೆ ನುಡಿಮಾರುವಾಗ (ಅನುವಾದಿಸುವಾಗ) drinking ಪದ ಬಳಕೆಯಾಗುತ್ತದೆ ಯೆಂಬ ವಿಶಯ) ಕಿಟ್ಟೆಲರನ್ನು ಈ ತಪ್ಪುದಾರಿಗೆ ಎಳೆದಿರಬೇಕು.

ಕನ್ನಡದಲ್ಲಿ ಹೆಸರುಪದಗಳನ್ನು ಮಾತ್ರವಲ್ಲದೆ ಎಸಕಪದ ಮತ್ತು ಪರಿಚೆಪದಗಳನ್ನೂ ಜೋಡುಪದಗಳ ಮೊದಲನೆಯ ಅಂಗವಾಗಿ ಬಳಸಬಹುದು ಎಂಬ ಕಟ್ಟಲೆಯನ್ನು ಬಳಸಿ ಹಲವಾರು ಹೊಸ ಪದಗಳನ್ನು ಕನ್ನಡದಲ್ಲಿ ಉಂಟುಮಾಡಬಹುದು. ಈ ಪದಕೋಶದಲ್ಲಿ ಕಾಣಿಸಿಕೊಳ್ಳುವ ಅಂತಹ ಕೆಲವು ಪದಗಳನ್ನು ಕೆಳಗೆ ಕೊಟ್ಟಿದ್ದೇನೆ.

ಹೆಸರು+ಹೆಸರುಎಸಕ+ಹೆಸರುಪರಿಚೆ+ಹೆಸರು
ಆಳುಗುಂಡಿಮುಚ್ಚುಲಿಪೆರ‍್ಬರಹ
ತಲೆನಳಿಕೆಬೀಳ್ಚುಕ್ಕಿಚಳಿಬಿಸುಪು
ಆಳಳವುಓಡುತಿಟ್ಟಅಣ್ಣೆಬರಹ
ಮೀನುಹೆಣ್ಣುಉಳಿಹಣಮಾರ‍್ಪುರುಳು
ಎಣ್ಣೆಬೆಣ್ಣೆತಿರುಗುಹರದಮೇಲಚ್ಚು
ಅಳವೆಡೆಬರೆಕೋಲುಕಿರುಕಟ್ಟು
ಉಸಿರುಗಾಳಿತಳ್ಳುಬಂಡಿಕಿರುಕಳವು

ಕನ್ನಡದ ಹಲವು ಪರಿಚೆಪದಗಳನ್ನು ಇಂತಹ ಜೋಡುಪದಗಳಲ್ಲಿ ಬಳಸಿ ತುಂಬಾ ಅಡಕವಾಗಿರುವ ಹೊಸಪದಗಳನ್ನು ತಯಾರಿಸಿಕೊಳ್ಳಲು ಸಾದ್ಯವಿದೆ. ಇವುಗಳ ಬಳಕೆಯಲ್ಲಿ ಕನ್ನಡದಲ್ಲಿರುವ ಕೆಲವು ಒಲವುಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಕೆಳಗೆ ಕೊಟ್ಟಿರುವಂತಹ ಕೆಲವು ಪರಿಚೆಪದಗಳಿಗೆ ಕನ್ನಡದಲ್ಲಿ ಎರಡೆರಡು ರೂಪಗಳಿವೆ. ಇವುಗಳಲ್ಲಿ ಒಂದು ಅವುಗಳ ಅನಂತರ ಸ್ವರ ಬಂದಾಗ ಕಾಣಿಸಿಕೊಳ್ಳುತ್ತದೆ ಮತ್ತು ಇನ್ನೊಂದು ವ್ಯಂಜನ ಬಂದಾಗ ಕಾಣಿಸಿಕೊಳ್ಳುತ್ತದೆ.

ಸ್ವರ ಬಂದಾಗವ್ಯಂಜನ ಬಂದಾಗ
(೧) ಮಾರ್-ಮರು ‘ಆಮೇಲಿನ, ಎದುರಿನ, ಬದಲಿಗೆ ಬಂದ’
ಮಾರೆಣಿಕೆಮರುಬಳಕೆ
ಮಾರೊಡವೆಮರುಮಾತು
ಮಾರಡಿಮರುವಾಳು
ಮಾರಾನೆಮರುಮಯ್
ಮಾರೋಲೆಮರುಸಲಿಕೆ
(೨) ಕೀಳ್-ಕಿಳ್ ‘ಕೆಳಗಿನ’
ಕೀಳೆಲೆಕಿಳ್ಗವಲು
ಕೀಳಾಳುಕಿಳ್ಗೆರೆ
ಕೀಳೆಸಳುಕಿಳ್ಗಣ್ಣು
(೩) ಪೇರ್-ಪೆರ್ ‘ದೊಡ್ಡ’
ಪೇರಡವಿಪೆರ‍್ಗಡಲು
ಪೇರರಿಕೆಪೆರ‍್ಗರುಳು
ಪೇರುಸಿರುಪೆರ‍್ಗತ್ತಲೆ
ಪೇರಡಿಪೆರ‍್ಬಿದಿರು
ಪೇರೆತ್ತುಪೆರ‍್ಗೊನೆ
ಪೇರಾನೆಪೆರ‍್ಕಿಚ್ಚು
(೪) ಕಾರ್-ಕರ್ ‘ಕಪ್ಪು’
ಕಾರೆಳ್ಳುಕರ‍್ಪೊಗೆ
ಕಾರಡವಿಕರ‍್ವಿಸಿಲು
(೫) ಓರ್-ಒರ್ ‘ಒಂದು’
ಓರಡಿಒರ‍್ನುಡಿ
ಓರೊರ‍್ಮೆಒರ‍್ವೆಸರು
(೬) ಈರ್-ಇರ್ ‘ಎರಡು’
ಈರಡಿಇರ‍್ತಲೆ
ಈರಯ್ದುಇರ‍್ಕಿವಿ
(೭) ಮೂರ್-ಮು ‘ಮೂರು’
ಮೂರಡಿಮುಕ್ಕಣ್ಣು
ಮೂರಾಳುಮುನ್ನೂರು
(೮) ಕೇಸು-ಕಿಸು ‘ಕೆಂಪು’
ಕೇಸಕ್ಕೆಕಿಸುಗಣ್ಣು
ಕೇಸೊಡಲುಕಿಸುವೊನ್ನು
ಕೇಸುರಿಕಿಸುಗಲ್ಲು
(೯) ಕಿತ್-ಕಿರು ‘ಚಿಕ್ಕ’
ಕಿತ್ತುಸಿರುಕಿರುನಾಲಿಗೆ
ಕಿತ್ತೋಟಕಿರುಕೂಟ
ಕಿತ್ತೆಸಳುಕಿರುಗತ್ತಿ
ಕಿತ್ತೂಟಕಿರುದಿರೆ
ಕಿತ್ತುಲಿಕಿರುನಾಯಿ
ಕಿತ್ತೋಲೆಕಿರುಗುಡ್ಡ
(೧೦) ನಟ್-ನಡು ‘ನಡುವಿನ’
ನಟ್ಟಡವಿನಡುಹಗಲು
ನಟ್ಟಿರುಳುನಡುಗಂಬ
(೧೧) ನಿಟ್-ನಿಡು ‘ನೇರವಾದ, ಉದ್ದವಾದ’
ನಿಟ್ಟುಸಿರುನಿಡುದೋಳು
ನಿಟ್ಟೆಸಳುನಿಡುಗೊರಳು
ನಿಟ್ಟಯ್ದೆನಿಡುದೆರೆ
ನಿಟ್ಟೋಟನಿಡುಗೋಲು
ನಿಟ್ಟೆಲುವುನಿಡುಗೊಂಬು
(೧೨) ಕಟ್-ಕಡು ‘ಜೋರಾದ, ಬಿರುಸಾದ’
ಕಟ್ಟುಬ್ಬಸಕಡುಗೆಂಪು
ಕಟ್ಟರಸುಕಡುಗತ್ತಲೆ
ಕಟ್ಟುಲುಹುಕಡುಗಾಳಿ
ಕಟ್ಟೆಸಕಕಡುಬಿಸಿಲು
ಕಟ್ಟರಿಕೆಕಡುಗಂಪು
ಕಟ್ಟಿರುವೆಕಡುಬಡವ

ಈ ಪರಿಚೆಪದಗಳನ್ನು ಬಳಸಿ ಅಡಕವಾಗಿರುವ ಹಲವಾರು ಹೊಸ ಪದಗಳನ್ನೂ ಉಂಟುಮಾಡಿಕೊಳ್ಳಬಹುದು. ಮೇಲಿನ ಒಲವಿಗೆ ಕನ್ನಡದಲ್ಲಿ ಮಾರ‍್ಪಾಡು, ಮರು‌ಎಣಿಕೆ, ಮಾರ‍್ನುಡಿ, ಮರು‌ಅಚ್ಚು ಮೊದಲಾದ ಕೆಲವು ಅಪವಾದಗಳೂ ಇವೆ. ಕನ್ನಡದ ಒಲವನ್ನು ತಿಳಿಯದೆ ಇವನ್ನು ಉಂಟುಮಾಡಲಾಗಿದ್ದು ಆಮೇಲೆ ಅವು ಬಳಕೆಗೆ ಬಂದಿರುವುದೇ ಇದಕ್ಕೆ ಕಾರಣವಿರಬಹುದು.

ಇದಲ್ಲದೆ ತಣ್, ನಲ್, ಬೆಳ್, ಬೆನ್, ಹಿಂ, ಮುಂ, ಕೆಂ, ಕಿಸು, ನುಣ್ ಮೊದಲಾದ ಬೇರೆಯೂ ಹಲವು ಪರಿಚೆಪದಗಳು ಕನ್ನಡದಲ್ಲಿವೆ. ಇವು ಮೇಲೆ ವಿವರಿಸಿದಂತಹ ರೂಪಗಳನ್ನು ತೋರಿಸದಿದ್ದರೂ ಕನ್ನಡದ ಬೇರೆ ಕೆಲವು ಸೇರಿಕೆಯ ಒಲವುಗಳಿಗೆ ಒಳಗಾಗುತ್ತವೆ.

ಉದಾಹರಣೆಗಾಗಿ ವ್ಯಂಜನಗಳ ಮೊದಲು ಬರುವ ರಕಾರ ಹೆಚ್ಚು ಕಡಿಮೆ ಆ ವ್ಯಂಜನದ ರೂಪವನ್ನೇ ಪಡೆಯುತ್ತದೆಯೆಂಬ ಒಂದು ಒಲವಿನಿಂದಾಗಿ ಪೆರ್, ಹೆರ್ ‘ದೊಡ್ಡ’, ಕಿರ್ ‘ಚಿಕ್ಕ’, ಕರ್ ‘ಕಪ್ಪು’, ಒರ್ ‘ಒಂದು’, ಇರ್ ‘ಎರಡು’ ಮತ್ತು ಮೂರ್, ಮುರ್ ‘ಮೂರು’ ಪದಗಳಿಗೆ ಹಲವು ಹೆಚ್ಚಿನ ರೂಪಗಳು ಕಾಣಿಸಿಕೊಳ್ಳುತ್ತವೆ (ಪೆರ್ - ಹೆಗ್ಗಣ, ಹೆದ್ದಾರಿ, ಹೆಬ್ಬಾವು, ಹೆಜ್ಜೇನು, ಹೆಮ್ಮರ, ಹೆನ್ನರ; ಒರ್ - ಒಕ್ಕಣ್ಣ, ಒಗ್ಗಟ್ಟು, ಒಚ್ಚರ, ಒತ್ತಂಡ, ಒಪ್ಪೊತ್ತು, ಒಬ್ಬೊಬ್ಬ, ಒಮ್ಮೊಮ್ಮೆ).

ಇಂತಹ ಕನ್ನಡದ ಒಲವುಗಳನ್ನೆಲ್ಲ ಚನ್ನಾಗಿ ತಿಳಿದುಕೊಂಡು ಅವಕ್ಕೆ ಹೊಂದಿಕೆ ಯಾಗುವ ಹಾಗೆ ಹೊಸ ಪದಗಳನ್ನು ಉಂಟುಮಾಡಿಕೊಂಡಲ್ಲಿ ಅವು ತುಂಬಾ ಚನ್ನಾಗಿ ಕನ್ನಡದ ವಾಕ್ಯಗಳಲ್ಲಿ ಸೇರಿಕೊಳ್ಳುತ್ತವೆ.