ಕನ್ನಡವನ್ನು ಕನ್ನಡಿಗರಿಗೆ ತಲುಪಿಸಿದವರು


ಅನಕೃ ಎಂದರೆ ಕನ್ನಡ ಚಳವಳಿ ಎಂಬ ಕಾಲವೊಂದಿತ್ತು. ಅವರು ಮಾತಿಗೆ ನಿಂತರೆ ಎಂತಹವನಲ್ಲೂ ರೋಮಾಂಚನ. ಅನಕೃ ಬರೆಹಗಾರ, ಮಾತುಗಾರ ಅಷ್ಟೇ ಅಲ್ಲ, ಅವರೇ ಒಂದು ಕನ್ನಡ ಸಂಸ್ಥೆ. ಕನ್ನಡ ಪರ ಹೋರಾಟಕ್ಕೆ ಹೊಸ ಹುಟ್ಟು, ಹೊಸದೊಂದು ಹಾದಿಯನ್ನು ನೀಡಿದವರೇ ಅನಕೃ. ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಕನ್ನಡದ ಬೀಜ ಮಂತ್ರವನ್ನು ಕನ್ನಡಿಗರ ಎದೆಯಲ್ಲಿ ಬಿತ್ತಿದ ಕೀರ್ತಿ ಅನಕೃ ಅವರಿಗೆ ಸಲ್ಲುತ್ತದೆ. ಸಾಹಿತಿ, ಹೋರಾಟಗಾರ, ಸಮಾಜ ಚಿಂತಕ ಹೀಗೆ ಹತ್ತು ಹಲವು ದಿಕ್ಕುಗಳಲ್ಲಿ ಅನಕೃ ಅವರ ಬದುಕು ಸಾಗುತ್ತದೆ. ಮೂಢ ನಂಬಿಕೆ, ಅಂಧಾನುಕರಣೆ ತುಂಬಿದ್ದ ಸಮಾಜದಲ್ಲಿ ಹೊಸ ಬದುಕಿನ ಚಿಂತನೆ ಮೂಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ ಸಾಹಿತಿಗಳ ಸಾಲಿನಲ್ಲಿ ಅನಕೃ ಅವರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬರೆಹವನ್ನೇ ನಂಬಿ, ಅದನ್ನೇ ಬದುಕಾಗಿ ರೂಪಿಸಿಕೊಂಡ ಅಪರೂಪದ ಬರೆಹಗಾರ ಅನಕೃ. ಸಾಹಿತ್ಯವನ್ನೇ ನೆಚ್ಚಿಕೊಂಡು ಬದುಕು ನಡೆಸುವುದು ದುಸ್ಸಾಧ್ಯ ಎನ್ನುವಂತಹ ಕಾಲದಲ್ಲಿ ಅದನ್ನು ಸಾಧಿಸಿ ತೋರಿಸಿದ ಮಹಾನ್ ಬರೆಹಗಾರ ಅನಕೃ ಎಂದರೆ ತಪ್ಪಾಗುವುದಿಲ್ಲ. ಅನಕೃ ಅವರು ಬಾಳಿ, ಬದುಕಿದ ಕಾಲಕ್ಕೂ ಇವತ್ತಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಕಿಲುಬು ಕಾಸಿಗೂ ಪರದಾಡಬೇಕಾದಂತಹ ಸ್ಥಿತಿ ಅಂದು ಇತ್ತು. ಆಗಿನ ಸ್ಥಿತಿಯಲ್ಲಿ ಬರೆಹಗಾರನಿಗೆ ಸರಿಯಾದ ಸಂಭಾವನೆಯೂ ಸಿಗುತ್ತಿರಲಿಲ್ಲ. ಬರೆವಣಿಗೆ ಎನ್ನುವುದು ಸಾಹಿತ್ಯ ಸೇವೆ, ಸಾಮಾಜಿಕ ಕರ್ತವ್ಯ ಎಂದು ನಂಬಿಕೊಂಡಿದ್ದ ಕಾಲ. ಅಂತಹ ಕಾಲದಲ್ಲಿ ಅನಕೃ ಮನಮಿಡಿಯುವಂತಹ ಕಾದಂಬರಿಗಳನ್ನು ರಚಿಸಿ ಮನೆ ಮಾತಾದರು.

ಸಾಹಿತ್ಯ ಕೇವಲ ಪಂಡಿತ, ಪಾಮರರಿಗೆ ಮೀಸಲು ಎನ್ನುವಂತಹ ಭಾವನೆ ಇದ್ದ ಕಾಲದಲ್ಲಿ ಅನಕೃ ಜನ ಸಾಮಾನ್ಯರನ್ನು ತಟ್ಟುವಂತಹ ಕಾದಂಬರಿ, ಕಥೆ, ನಾಟಕಗಳನ್ನು ಬರೆದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದರು. ಅನಕೃ ತಮ್ಮ ಕಾದಂಬರಿಗಳ ರಚನೆಗೆ ಬಳಸಿಕೊಂಡಿದ್ದು ಸಾಮಾಜಿಕ ಸಮಸ್ಯೆಗಳನ್ನು. ಕೈಲಾಸಂ ಹೇಗೆ ಪೌರಾಣಿಕ ಪಾತ್ರಗಳನ್ನು ಕೈಬಿಟ್ಟು, ನಮ್ಮ, ನಿಮ್ಮ ನಡುವೆ ಬದುಕುತ್ತಿರುವ ಸಾತು, ಪಾತು, ಕಿಟ್ಟು, ಪುಟ್ಟು, ನಾಗತ್ತೆ ಮೊದಲಾದ ಪಾತ್ರಗಳ ಮೂಲಕ ಸಾಮಾಜಿಕ ನಾಟಕಗಳಿಗೆ ಒಂದು ಜನಸಾಮಾನ್ಯ ಚೌಕಟ್ಟನ್ನು ತಂದುಕೊಟ್ಟರೋ ಹಾಗೆಯೇ ಅನಕೃ ಅವರು ಕೂಡ ಸಾಮಾಜಿಕ ಸಮಸ್ಯೆಗಳನ್ನು ಹೃದಯಂಗಮವಾಗಿ ಚಿತ್ರಿಸುವ ಮೂಲಕ ಇದು ಬರಿಯ ಪಾತ್ರವಲ್ಲ, ನಿಮ್ಮ ಬದುಕಿಗೆ ಹಿಡಿದ ಕನ್ನಡಿ ಎನ್ನುವುದನ್ನು ಓದುಗರಲ್ಲಿ ಬಿತ್ತುವಲ್ಲಿ ಯಶಸ್ವಿಯಾದರು. ಆ ಕಾರಣಕ್ಕಾಗಿಯೇ ಅನಕೃ ಅವರ ಕಾದಂಬರಿಗಳು ಇಂದಿಗೂ ಪ್ರಸ್ತುತವಾಗುತ್ತವೆ. ಅನಕೃ ಬರೆದ ಕಾದಂಬರಿಗಳ ಸಂಖ್ಯೆ ೧೧೬. ಈ ಬೃಹತ್ ಪಟ್ಟಿಯಲ್ಲಿ ೧೪ ಪೌರಾಣಿಕ ಕಾದಂಬರಿಗಳೂ ಸೇರಿವೆ. ಈ ಪೌರಾಣಿಕ ಪಾತ್ರಗಳನ್ನು ಆಧರಿಸಿದ ಕಾದಂಬರಿಗಳನ್ನು ಹೊರತುಪಡಿಸಿ ಅವರು ಬರೆದ ನೂರಕ್ಕೂ ಹೆಚ್ಚು ಕಾದಂಬರಿಗಳು ಸಾಮಾಜಿಕ ವಸ್ತುಗಳನ್ನು ಹೊಂದಿದ್ದು ಎನ್ನುವುದು ಗಮನಾರ್ಹ ಸಂಗತಿ. ಸಾಮಾಜಿಕ ಸಮಸ್ಯೆಗಳಾದ ನಿರುದ್ಯೋಗ, ವೇಶ್ಯಾ ವೃತ್ತಿ, ಮಹಿಳೆಯರ ಶೋಷಣೆ ಇವೇ ಮೊದಲಾದ ವಸ್ತುಗಳನ್ನು ಆಧಾರವಾಗಿಟ್ಟುಕೊಂಡು ಅನಕೃ ಕಾದಂಬರಿಗಳನ್ನು ರಚಿಸಿದರು. ವೇಶ್ಯಾ ವೃತ್ತಿಯನ್ನು ಆಧರಿಸಿ ಅವರು ಆಗಿನ ಕಾಲಕ್ಕೆ ರಚಿಸಿದ ಕಾದಂಬರಿಗಳು ದೊಡ್ಡದೊಂದು ಕೋಲಾಹಲವನ್ನೇ ಎಬ್ಬಿಸಿದ್ದವು. ಏಕೆಂದರೆ, ವೇಶ್ಯಾ ವೃತ್ತಿಯನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳುವಂತಹ ಪರಿಸ್ಥಿತಿ ಅಂದಿನ ಕಾಲದಲ್ಲಿ ಇರಲಿಲ್ಲ.

ಆಧುನಿಕವಾಗಿ ನಾವು ಇಂದು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಕೂಡ ಆ ಮನೋಭಾವ ಇನ್ನೂ ಹಾಗೇ ಇದೆ ಎನ್ನುವುದು ಗಮನಿಸಬೇಕಾದ ವಿಷಯ. ಅನಕೃ ಅವರು ಅಂತಹದ್ದೊಂದು ವಸ್ತುವನ್ನು ಆಧರಿಸಿ ಕಾದಂಬರಿ ಬರೆದಾಗ ಅವರು ಅದಕ್ಕೆ ಪ್ರತಿಭಟನೆಗಳನ್ನು ಎದುರಿಸಬೇಕಾಗಿ ಬಂದಿತು. ಆದರೆ, ಆ ಪ್ರತಿಭಟನೆಗಳನ್ನು ಧೈರ್ಯವಾಗಿ ಎದುರಿಸಿ, ಟೀಕಾಕಾರರ ಬಾಯಿ ಮುಚ್ಚಿಸುವ ಎದೆಗಾರಿಕೆ ಅನಕೃ ಅವರಲ್ಲಿ ಇದ್ದುದರಿಂದಲೇ ಅವರು ಅದೆಲ್ಲವನ್ನೂ ಸಮರ್ಥವಾಗಿಯೇ ಎದುರಿಸಿದರು. ಇಲ್ಲಿ ನಾವು ಗಮನಿಸಬೇಕಾದ ಬಹುಮುಖ್ಯವಾದ ಒಂದು ಸಂಗತಿ ಇದೆ. ಅದೇನೆಂದರೆ, ಅನಕೃ ಯಾವುದೇ ವಿಷಯವನ್ನು ಆಧರಿಸಿ ಕಾದಂಬರಿ ಬರೆದರೂ ಓದುಗರು ಅದನ್ನು ಪ್ರೀತಿಯಿಂದಲೇ ಸ್ವಾಗತಿಸಿದರು. ತಮ್ಮ ‘ನಗ್ನ ಸತ್ಯ’ ಹಾಗೂ ‘ಶನಿ ಸಂತಾನ’ ಕಾದಂಬರಿಗಳ ಕುರಿತು ಪ್ರಗತಿಪರ ಚಿಂತಕರಿಂದ ವಿರೋಧಗಳು ವ್ಯಕ್ತವಾದಾಗ ಅನಕೃ ಅದಕ್ಕೆ ಸಮರ್ಥನೀಯ ಉತ್ತರವನ್ನು ನೀಡಿ, ಆ ಕಾದಂಬರಿಗಳ ರಚನೆಯ ಕಾರಣಗಳನ್ನು ನೀಡುತ್ತಾರೆ. ಎಲ್ಲಿ ಬರೆಹಗಾರ ಕಟು ಸತ್ಯವಾದ ವಿಚಾರಗಳನ್ನು ನೇರವಾಗಿ ಮುಂದಿಡುತ್ತಾನೆ ಅಲ್ಲಿ ಅವನು ಯಶಸ್ಸನ್ನು ಕಾಣುತ್ತಾನೆ. ಅನಕೃ ಅವರು ಕಾದಂಬರಿಕಾರರಾಗಿ ಗೆದ್ದಿದ್ದು ಇಲ್ಲಿ. ಅವರು ಯಾವುದೇ ವಿಚಾರವನ್ನು ಕಾದಂಬರಿಯ ಮೂಲಕ ಹೇಳಿದರೂ ಅದನ್ನು ನೈಜವಾಗಿ ನಿರೂಪಿಸುತ್ತಿದ್ದರು. ಅವರ ಸರಳವಾದ ಹಾಗೂ ಓದುಗರನ್ನು ಹಿಡಿದಿಡುವಂತಹ ಆಕರ್ಷಕ ನಿರೂಪಣೆ, ಎಂತಹ ಕಠೋರ ವಿಚಾರವನ್ನೂ ಬಹು ಪರಿಣಾಮಕಾರಿಯಾಗಿ ಪ್ರಸ್ತಾಪಿಸುವ ರೀತಿ ಕನ್ನಡದ ಮತ್ತೊಬ್ಬ ಬರೆಹಗಾರನಲ್ಲಿ ಕಾಣುವುದು ಅಸಾಧ್ಯ. ಅಷ್ಟು ಮನೋಜ್ಞವಾಗಿ ವಿಚಾರಗಳನ್ನು ಅವರು ಮಂಡಿಸುತ್ತಾರೆ.

ಅನಕೃ ಅವರಲ್ಲಿ ಬಾಲ್ಯದಿಂದಲೂ ಒಳಗೊಬ್ಬ ಬರೆಹಗಾರನ ತುಡಿತವಿತ್ತು. ಸುಪ್ರಸಿದಟಛಿ ನಟ ವರದಾಚಾರ್ಯರು ಒಡ್ಡಿದ ಸವಾಲಿಗೆ ಪ್ರತಿಯಾಗಿ ಒಂದೇ ರಾತ್ರಿಯಲ್ಲಿ ಅವರು ‘ಮದುವೆಯೋ ಮನೆ ಹಾಳೋ’ ಎಂಬ ಸಾಮಾಜಿಕ ನಾಟಕವನ್ನು ಬರೆದುಕೊಡುತ್ತಾರೆ. ಇಲ್ಲಿಂದ ಅವರ ಲೇಖನಿಯ ಪ್ರವಾಹ ಆರಂಭವಾಗುತ್ತದೆ. ಬರವಣಿಗೆಯೇ ಅವರ ಬದುಕಾಗುತ್ತದೆ. ಸಾಮಾಜಿಕ ಸಮಸ್ಯೆಗಳು ಅವರ ಕಣ್ಣಿಗೆ ಕಟ್ಟುತ್ತವೆ. ಸಮಾಜದಲ್ಲಿ ಜನ ಅನುಭವಿಸುತ್ತಿರುವ ನೋವು, ಸಂಕಟ, ದಬ್ಬಾಳಿಕೆ, ಶೋಷಣೆ ಹೀಗೆ ಎಲ್ಲ ವಿಚಾರಗಳೂ ಅವರ ಲೇಖನಿಯಿಂದ ಹರಿಯುತ್ತವೆ.

ಒಬ್ಬ ಬರೆಹಗಾರ ಹೀಗೆ ಲಕ್ಷಾಂತರ ಜನರನ್ನು ಏಕಕಾಲಕ್ಕೆ ತಲುಪುವ ಮೂಲಕ ಅವರಲ್ಲಿ ಸಾಮಾಜಿಕ ಚಿಂತನೆ, ಜೀವನ ಮೌಲ್ಯ ಮೊದಲಾದ ವಿಚಾರಗಳನ್ನು ತುಂಬುವುದು ಸಾಮಾನ್ಯದ ವಿಚಾರವಲ್ಲ. ಅನಕೃ, ತರಾಸು ಅಂತಹವರು ಇದಕ್ಕಾಗಿ ತಮ್ಮ ರಕ್ತವನ್ನೇ ಬಸಿದರು. ಮನೆಯ ನಾಲ್ಕು ಗೋಡೆಗಳ ಮಧ್ಯೆ ದೇವರ ಹಾಡುಗಳನ್ನು ಹಾಡಿಕೊಂಡು ಅಡುಗೆ ಕೆಲಸ ಮಾಡಿಕೊಂಡು ಜೀವನ ಸವೆಸುತ್ತಿದ್ದ ಸಾವಿರಾರು ಹೆಣ್ಣು ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದ ಕೀರ್ತಿ ಅನಕೃ ಅವರಿಗೆ ಸಲ್ಲುತ್ತದೆ. ಕೇವಲ ಹೆಣ್ಣು ಮಕ್ಕಳು ಅಷ್ಟೇ ಅಲ್ಲ, ಜನಸಾಮಾನ್ಯರೂ ಅನಕೃ ಅವರ ಕಾದಂಬರಿಗಳಿಗೆ ಮುಗಿಬೀಳುತ್ತಿದ್ದರು. ಹೀಗೆ, ಓದುಗರನ್ನು ದುಂಬಿಯಂತೆ ಆಕರ್ಷಿಸುವ ಚುಂಬಕ ಶಕ್ತಿ ಅನಕೃ ಅವರ ಬರವಣಿಗೆಗಳಲ್ಲಿ ಇದ್ದವು. ಕಾದಂಬರಿ, ಕಥೆ, ನಾಟಕಗಳ ಮೂಲಕ ಜನರಲ್ಲಿ ಅರಿವಿನ ಬೆಳಕನ್ನು ಬಿತ್ತಿ ಅವರನ್ನು ಸಮಾಜಮುಖಿ ಓದುಗರನ್ನಾಗಿ ರೂಪಿಸುವ ಗುರುತರವಾದ ಜವಾಬ್ದಾರಿಯಲ್ಲಿ ಅನಕೃ ಯಶಸ್ವಿಯಾದರು. ಅದಕ್ಕಾಗಿ ಅವರು ಬಳಸಿಕೊಂಡಿದ್ದು ಬರವಣಿಗೆಯ ಮಾರ್ಗ ಎನ್ನುವುದನ್ನು ಗಮನಿಸಬೇಕು.

ಓದುಗರಲ್ಲಿ ಕನ್ನಡದ ಬಗ್ಗೆ ಅಭಿರುಚಿ ಹೆಚ್ಚಿಸುವಂತೆ ಮಾಡುವುದರ ಜತೆಗೆ, ಅವರನ್ನು ಚಳವಳಿಯತ್ತ ಕೊಂಡೊಯ್ಯುವಂತಹ ನಾಯಕತ್ವ ಗುಣವನ್ನು ಅವರು ಹೊಂದಿದ್ದರಿಂದಲೇ ಕನ್ನಡ ಪರ ಚಳವಳಿಗೆ ಒಂದು ಹೊಸ ದಿಕ್ಕು, ದೆಸೆಗಳನ್ನು ನೀಡುವುದಕ್ಕೆ ಅವರಿಗೆ ಸಾಧ್ಯವಾಯಿತು. ಮೊದಲೇ ಹೇಳಿದಂತೆ ಅವರೊಬ್ಬ ಅಪ್ರತಿಮ ವಾಗ್ಮಿ. ಅವರು ಮಾತಿಗೆ ನಿಂತರೆ ಅವರ ಹಿಂದೆ ಜನರ ಗುಂಪೇ ನೆರೆಯುತ್ತಿತ್ತು. ಬರೆವಣಿಗೆಯಷ್ಟೇ ಸ್ಫುಟವಾದ ಮಾತು, ಎಷ್ಟು ಹೇಳಬೇಕೋ ಅಷ್ಟನ್ನು ಹಿತಮಿತವಾಗಿ ಹೇಳಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಶಕ್ತಿ ಅವರಿಗೆ ಇತ್ತು. ಅದನ್ನು ಅವರು ಸಾಧಿಸಿದರು. ಆ ಕಾಲಕ್ಕೆ ಅನಕೃ ಅವರು ಕನ್ನಡ ಹೋರಾಟಗಾರರ ಗುಂಪನ್ನು ಕಟ್ಟಿಕೊಂಡು ನಡೆಸಿದ ಕನ್ನಡ ಪರ ಚಳವಳಿ ಸಾಮಾನ್ಯ ಸಂಗತಿಯಲ್ಲ. ಆದರೆ, ಅನಕೃ ಅಂದು ಆರಂಭಿಸಿದ ಆ ಚಳವಳಿ ಮುಂದೆ ಬೇರೆ ಬೇರೆ ಕಾರಣಗಳಿಗಾಗಿ ಮೂಲ ಉದ್ದೇಶವನ್ನೇ ಮರೆಯಿತು ಎನ್ನುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಏಕೆಂದರೆ, ಕನ್ನಡ ಪರ ಹೋರಾಟ ಎನ್ನುವುದು ಇಂದು ಕನ್ನಡ ಭಾಷೆಗಷ್ಟೇ ಸೀಮಿತವಾಗಿಬಿಟ್ಟಿದೆ. ಕರ್ನಾಟಕದ ಬಗ್ಗೆ ಅನಕೃ ಅವರಲ್ಲಿ ಇದ್ದ ಸಮಗ್ರ ಹೋರಾಟದ ಕೇಂದ್ರ ಬಿಂದು ಇಂದು ಬೇರೆಯದೇ ಆದ ಸ್ವರೂಪವನ್ನು ಹೊಂದಿದೆ. ಆದರೆ, ಈ ಹೋರಾಟವೂ ಒಂದು ವ್ಯವಸ್ಥಿತವಾಗಿ ನಡೆಯಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಕನ್ನಡ ಹೋರಾಟ ಕೇವಲ ನವೆಂಬರ್ ಕನ್ನಡವಾಗದೆ ಅದಕ್ಕೊಂದು ಅರ್ಥಪೂರ್ಣ ಚೌಕಟ್ಟು ಸಿಗಬೇಕಿದೆ.

ಅನಕೃ ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಕನ್ನಡದ ಕೆಲಸವನ್ನು ಅತ್ಯಂತ ಮುತುವರ್ಜಿಯಿಂದ ಮಾಡಬೇಕಾದ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗನ ಮೇಲೂ ಇದೆ. ಈ ವಿಚಾರದಲ್ಲಿ ಅವರಂತಹ ಸಾಹಿತಿ, ಹೋರಾಟಗಾರ ಮತ್ತೆ ಸಿಗುವುದು ಕನಸಿನ ಮಾತು ಎಂದು ಧಾರಾಳವಾಗಿ ಹೇಳಬಹುದು.

-ಎಸ್. ವಿ. ಶ್ರೀನಾಥ್
ಸಾಪ್ತಾಹಿಕ ಸಂಪದ, ಉದಯವಾಣಿ, ಮೇ ೧೪ ೨೦೦೬