"ಸಾಹಿತ್ಯ ಮತ್ತು ಕಾಮಪ್ರಚೋದನೆ"


ನನ್ನ ಕಾದಂಬರಿ ‘ನಗ್ನಸತ್ಯ’ (೧೯೫೧) ಪ್ರಕಟವಾದ ಕೂಡಲೆ ಕನ್ನಡದ ಹಲವು ಪತ್ರಿಕೆಗಳ ವಿಮರ್ಶೆಗೊಳಗಾಯಿತು. ಆ ವಿಮರ್ಶೆಗಳ ಮೊತ್ತವನ್ನು ಲಕ್ಷ್ಯದಲ್ಲಿಟ್ಟುಕೊಂಡು ನಾನು ‘ಶನಿ ಸಂತಾನ’ (ಸೆಪ್ಟೆಂಬರ್ ೧೯೫೧) ಕಾದಂಬರಿಯ ಮುನ್ನುಡಿಯಲ್ಲಿ “ ‘ನಗ್ನಸತ್ಯ’ ಕಾದಂಬರಿಗೆ ಪತ್ರಿಕೆಗಳಲ್ಲಿ ದೊರೆತಿರುವ ವಿಮರ್ಶನ ಪ್ರತಿಕ್ರಿಯೆ ನೋಡಿದರೆ ಜಗತ್ತು ವಿಚಾರದೃಷ್ಟಿಯಲ್ಲಿ ಪ್ರಗತಿಶೀಲವಾದರೂ ನಮ್ಮ ವಿಮರ್ಶಕರು ‘ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಬಿಗಿದುಕೊಳ್ಳುತ್ತಿರುವುದು’ ಕಂಡು ಬರುತ್ತದೆ. ‘ಪುಸ್ತಕ-ಪ್ರಪಂಚ’ - ‘ಪ್ರಜಾವಾಣಿ’ - ‘ಚಿತ್ರಗುಪ್ತ’ - ‘ಕರ್ಮವೀರ’ ಪತ್ರಿಕೆಗಳಲ್ಲಿ ಬಂದಿರುವ ವಿಮರ್ಶೆ - ಗ್ರಂಥದ ವಿಮರ್ಶೆಯಲ್ಲ; ಗ್ರಂಥಕರ್ತನ ವಿಮರ್ಶೆ - ನಮ್ಮ ವಿಚಾರದಾರಿದ್ರ್ಯದ ಕುರುಹಾಗಿದೆ. ಅನುಭವ, ಪಾಂಡಿತ್ಯವಿಲ್ಲದೆ ಸಯುಕ್ತ ವಾದಮಾಡುವ ಸಾಮರ್ಥ್ಯವಿಲ್ಲದೆ, ಸಾಹಿತ್ಯದ ಓನಾಮದ ಪರಿಚಯ ಕೂಡ ಇಲ್ಲದೆ ವಿಚಾರಶೀಲ, ಕ್ರಿಯಾನಿಷ್ಠ ಲೇಖಕರ ಕೃತಿಗಳನ್ನು ಮನಸ್ಸುಬಂದಂತೆ ತೆಗಳುವ ಪುಂಡತನ ಕೊನೆಗೊಂಡಲ್ಲದೆ ಕನ್ನಡ ಸಾಹಿತ್ಯ ಪ್ರಗತಿಪಥದಲ್ಲಿ ಸಾಗುವುದು ಸಾಧ್ಯವಿಲ್ಲ. ಕೈಯಲ್ಲಿ ಪತ್ರಿಕೆಯಿದೆಯೆಂದು, ಬರೆದುದು ಅಚ್ಚಾಗುತ್ತದೆಯೆಂದು ‘ಅಕ್ಷರ ವ್ಯಭಿಚಾರ’ ಮಾಡುವ ವಿಮರ್ಶಕರ ಅಸುರೀವೃತ್ತಿ ಅಡಗಬೇಕು”ಎಂದು ಬರೆದೆ. ‘ಶನಿಸಂತಾನ’ ಕಾದಂಬರಿ ಹಾಗೂ ಅದರ ಮುನ್ನುಡಿಯ ಮೇಲೆ ಆದ ಪ್ರತಿಕ್ರಿಯೆ ಮತ್ತಷ್ಟು ಉಗ್ರರೂಪ ತಾಳಿತು. ಶನಿಸಂತಾನ ಕಾದಂಬರಿಯನ್ನು ಅದರ ಲೇಖಕನನ್ನು ತೆಗಳುವುದು ಒಂದು ‘ಫ್ಯಾಷನ್’ ಆಯಿತು. ಎಂದೂ ವಿಮರ್ಶೆ ಮಾಡದಿದ್ದ ಪತ್ರಿಕೆಗಳೂ ವಿಮರ್ಶೆ ಮಾಡಿದವು; ವಿಮರ್ಶೆಗೆ ಪ್ರಕಾಶಕರಿಂದ ಗ್ರಂಥದ ಪ್ರತಿ ಬಾರದಿದ್ದರೂ ಕೆಲವು ಪತ್ರಿಕೆಗಳು ಗ್ರಂಥವನ್ನು ಕೊಂಡು ವಿಮರ್ಶೆ ಮಾಡಿದವು, ಗ್ರಂಥವನ್ನು ಅದರ ಲೇಖಕನನ್ನು ಮನಸ್ವೀ ನಿಂದಿಸಿದುದು ಸಾಲದೆಂದು ‘ಪ್ರಗತಿಶೀಲ ಸಾಹಿತ್ಯ ಚಳುವಳಿ’ಯನ್ನು ‘ಅಶ್ಲೀಲ ಸಾಹಿತ್ಯ ಚಳುವಳಿ’ಯೆಂದು ದೂಷಿಸಿದವು.

೧೯೨೪ನೆಯ ಇಸವಿಯಲ್ಲಿ ಈ ಲೇಖಕನ ಮೊದಲನೆಯ ಕೃತಿ ‘ಮದುವೆಯೋ ಮನೆಹಾಳೋ’ ನಾಟಕ ಪ್ರಕಟವಾಯಿತು. ಈ ಕೃತಿ ಜನತೆಯ ವಿಶ್ವಾಸವನ್ನು ಅಪಾರವಾಗಿ ಗಳಿಸಿಕೊಂಡರೂ ಸಾಹಿತ್ಯರಂಗದ ನಾಯಕರ ಗಮನಕ್ಕೆ ಬರಲಿಲ್ಲ. ಕೈಲಾಸಂ ಅವರ ಕೃತಿಗಳನ್ನೇ ಕಡೆಗಾಣಿಸುತ್ತಿದ್ದ ಸಾಹಿತ್ಯದೇವತೆಗಳ ಲಕ್ಷ್ಯ ಹೊಸ ಲೇಖಕನ ಪ್ರಥಮಕೃತಿಯ ಕಡೆಗೆ ಬೀಳಬೇಕೆಂದು ನಿರೀಕ್ಷಿಸುವುದು ತಪ್ಪಾಗಬಹುದು. ೧೯೨೪ ರಿಂದ ೧೯೩೫ ರವರೆಗೆ ನಾನು ಎಂಟು ಕೃತಿಗಳನ್ನು ಪ್ರಕಟಿಸಿದೆ. ೧೯೩೫ ರಲ್ಲಿ ನನ್ನ ‘ಸಂಧ್ಯಾರಾಗ’ದ ಪ್ರಥಮ ಆವೃತ್ತಿ ಪ್ರಕಟವಾಯಿತು. ೧೯೪೪ ರಲ್ಲಿ ಸಂಧ್ಯಾರಾಗ ಎಸ್.ಎಸ್.ಎಲ್.ಸಿ ತರಗತಿಗೆ ಪಠ್ಯಪುಸ್ತಕವಾಗಿ ಮನೆಮನೆಯಲ್ಲಿ ಮೆರೆದಾಡಿತು. ಎಂದೂ ಕನ್ನಡ ಪುಸ್ತಕಗಳನ್ನು ಕೈಯಿಂದಲೂ ಮುಟ್ಟದಿದ್ದವರು ‘ಸಂಧ್ಯಾರಾಗ’ ಓದಿದ್ದು ಮಾತ್ರವಲ್ಲದೆ ಕನ್ನಡದಲ್ಲಿಯೂ ಜೀವಾಳವಿದೆ ಎಂಬುದನ್ನರಿತು ಕನ್ನಡ ಪುಸ್ತಕಗಳನ್ನು ಓದಲು ಮೊದಲು ಮಾಡಿದರು. ೧೯೩೫ ರಿಂದ ೧೯೫೧ ರವರೆಗೆ ಸಂಧ್ಯಾರಾಗದ ಐದು ಆವೃತಿಗಳು ಪ್ರಕಟವಾಗಿವೆ. ೧೩,೦೦೦ ಪ್ರತಿಗಳು ಅಚ್ಚಾಗಿವೆ. ಸುಮಾರು ಎರಡು ಲಕ್ಷ ಜನ ಈ ಗ್ರಂಥವನ್ನು ಓದಿದ್ದಾರೆ. ಲಕ್ಷಾಂತರ ಜನರಿಂದ ಕನ್ನಡದಲ್ಲಿ ಓದಿಸಿಕೊಳ್ಳುವ ಭಾಗ್ಯಪಡೆದ ಗ್ರಂಥ ‘ಸಂಧ್ಯಾರಾಗ’ವೊಂದೇ ಎಂದರೆ ಅತಿಶಯೋಕ್ತಿಯಲ್ಲ. ಇಷ್ಟು ಜನ ಈ ಗ್ರಂಥವನ್ನು ಓದಿದರೂ ನಮ್ಮ ಸಾಹಿತ್ಯದೇವತೆಗಳಿಗೆ ಓದುವ ಆಸಕ್ತಿ ಹುಟ್ಟಲಿಲ್ಲ. ೧೯೩೮ ರಿಂದ ಈವರೆಗೆ ನಾನು ಹಲವು ಗ್ರಂಥಗಳನ್ನು ಬರೆದಿದ್ದೇನೆ. ಕಾದಂಬರಿ, ಸಣ್ಣಕಥೆ, ನಾಟಕ, ಪ್ರಬಂಧ, ಜೀವನಚರಿತ್ರೆ, ಸಾಹಿತ್ಯವಿಮರ್ಶೆ, ಕಲಾವಿಮರ್ಶೆ. ಸಂಶೋಧಕ ಗ್ರಂಥಗಳು, ಸಂಗ್ರಹಗಳು ಇತ್ಯಾದಿ. ಇವು ಯಾವುವೂ ನಮ್ಮ ಸಾಹಿತ್ಯದೇವತೆಗಳ ಲಕ್ಷ್ಯ ಸೆಳೆಯಲಿಲ್ಲ. ೧೯೪೪ ರಲ್ಲಿ ನಾನೂ ನನ್ನ ಗೆಳೆಯರೂ ಆರಂಭಿಸಿದ ‘ಪ್ರಗತಿಶೀಲ ಸಾಹಿತ್ಯ ಚಳುವಳಿ’ ಮಾತ್ರ ಇವರ ಲಕ್ಷ್ಯವನ್ನು ಸೆಳೆಯಿತು. ಅಲ್ಲಿಂದ ಇಂದಿನವರೆಗೆ ಒಂದೇ ಸಮನಾಗಿ ನಡೆದಿದೆ ಅಪಪ್ರಚಾರ - ಭರ್ತ್ಸನೆ.

‘ಶನಿ ಸಂತಾನ’ವನ್ನು ಖಂಡಿಸಿ ಕರ್ನಾಟಕದ ಕೆಲವು ಭಾಗಗಳಿಂದ ಲೇಖಕನಿಗೆ ಪತ್ರಗಳು ಬಂದವು. ಅವುಗಳಲ್ಲಿ ಕೆಲವು ವಿಮರ್ಶಕರ ಪ್ರಚೋದನೆಯ ಫಲಗಳು; ಕೆಲವು ಓದುಗರಲ್ಲಿ ಸಹಜವಾಗಿ ಮೂಡಿದ ಸಂದೇಹಗಳು. ಈ ಲೇಖಕನ ಕೃತಿಗಳ ಬಗ್ಗೆ ಅಭಿಮಾನ, ಗೌರವ ತಳೆದಿರುವ ಕೆಲವು ಓದುಗರು ‘ನಗ್ನಸತ್ಯ’ - ‘ಶನಿಸಂತಾನ’ ದಂಥ ಕೃತಿಗಳನ್ನು ಸಂಧ್ಯಾರಾಗ, ಮಂಗಳಸೂತ್ರ, ಕಣ್ಣೀರು, ತಾಯಿಯ ಕರುಳು ಬರೆದ ಕೈ ಬರೆಯಬಾರದಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಎರಡು ಕಾದಂಬರಿಗಳನ್ನು ದುರಭಿಮಾನದಿಂದ, ಮತ್ಸರದಿಂದ, ಸ್ವಭಾವಜನ್ಯ ಅಲ್ಪತನದಿಂದ ತೆಗಳಿರುವ ವಿಮರ್ಶಕರಿಗೂ, ಪತ್ರ ಲೇಖಕರಿಗೂ ನಾನು ಉತ್ತರ ಕೊಡಬೇಕಾದ ಅಗತ್ಯವಿಲ್ಲ. ಆದರೆ ಈ ಲೇಖಕನ ಕೃತಿಗಳನ್ನು ವಿಚಾರದ ತಕ್ಕಡಿಯಲ್ಲಿ ತೂಗಿನೋಡಿ, ಒಳ್ಳಿತು ಕೆಟ್ಟತನ್ನು ನಿಷ್ಪಕ್ಷಪಾತ ಬುದ್ಧಿಯಿಂದ ನಿರ್ಣಯಿಸಲಿಚ್ಚಿಸುತ್ತಿರುವ ಓದುಗರಿಗಾಗಿ ನಾನು ಈ ಗ್ರಂಥ ಬರೆಯುತ್ತಿದ್ದೇನೆ. ಕನ್ನಡ ಸಾಹಿತ್ಯದ ಮೇಲೆ ಅಚ್ಚೊತ್ತಿರುವ ಸಂಪ್ರದಾಯಪ್ರಿಯತೆ, ಸಂಕುಚಿತ ಮನೋಭಾವ, ನಿಷೇಧ ಪ್ರವೃತ್ತಿಗಳ ಹಿನ್ನೆಲೆಯನ್ನು ಚರ್ಚಿಸಿ, ಸಾಹಿತ್ಯದ ರಾಜಮಾರ್ಗ ಅಬಾಧಿತವಾಗುವಂತೆ ಮಾಡಬೇಕಾದುದು ನನ್ನ ಕರ್ತವ್ಯವೆಂಬ ಪರಿಜ್ಞಾನವೂ ಈ ಗ್ರಂಥ ರಚನೆಗೆ ಪ್ರೇರಕವಾಯಿತು.

‘ಸಾಹಿತ್ಯ, ಕಾಮಪ್ರಚೋದನೆ’ಯೇ ಈ ಗ್ರಂಥದ ವಸ್ತುವಾದರೂ ಅದಕ್ಕೆ ಸಂಬಂಧಪಟ್ಟ ಇತರ ವಿಷಯಗಳನ್ನೂ ಚರ್ಚಿಸಿದ್ದೇನೆ. ನನ್ನ ಗ್ರಂಥ ವ್ಯಾಪ್ತಿ ಎಷ್ಟು ವಿಸ್ತಾರವಾದುದೆಂದು ಓದುಗರಿಗೆ ತಿಳಿದಿರಬಹುದು. ಇದರಲ್ಲಿ ನಾನೆತ್ತಿಕೊಂಡಿರುವ ಕೆಲವು ವಿಷಯಗಳ ಮೇಲೆ ಪ್ರತ್ಯೇಕ ಗ್ರಂಥಗಳನ್ನೇ ಬರೆಯಬೇಕು - ದೃಷ್ಟಾಂತಕ್ಕೆ ಜಗತ್ತಿನಲ್ಲಿ ಸ್ತ್ರೀಯ ವಿಕಾಸ, ಧರ್ಮ ಮತ್ತು ಶೀಲ ಪ್ರಶ್ನೆ, ಸಮಾಜದ ಉತ್ಕ್ರಾಂತಿ, ವೇಶ್ಯಾಸಮಸ್ಯೆ ಮತ್ತು ಅದಕ್ಕೆ ಸಂಬಂಧಪಟ್ಟ ಇತರ ಸಮಸ್ಯೆಗಳು ಇತ್ಯಾದಿ. ಈಗಾಗಲೇ ಸಾಕಷ್ಟು ದೊಡ್ಡದಾಗಿ ಬೆಳೆದಿರುವ ಗ್ರಂಥ ಮತ್ತಷ್ಟು ದೊಡ್ಡದಾಗುವುದಲ್ಲಾ ಎಂದು ನಾನು ಕೆಲವು ವಿಷಯಗಳನ್ನು ಮೊಟಕುಮಾಡಬೇಕಾಯಿತು; ಕೆಲವು ವಿಷಯಗಳನ್ನು ಬಿಟ್ಟುಬಿಡಬೇಕು. ನಾನು ಮಾಡದೆ ಉಳಿಸಿರುವ ಕೆಲಸವನ್ನು ಸೋದರ ಪ್ರಗತಿಶೀಲ ಲೇಖಕರು ಮಾಡುತ್ತಾರೆಂಬ ನಂಬಿಕೆ ನನಗಿದೆ.

ಯಾವುದು ಕಲೆ?

ಕನ್ನಡ ಸಾಹಿತ್ಯದಲ್ಲಿಂದು ಸ್ಪಷ್ಟವಾಗಿ ಎರಡು ಮತಗಳು ಕಂಡು ಬರುತ್ತಿವೆ. ಒಂದು ಶುದ್ಧಕಲೆಯ ಔಪಾಸಕರ ಗುಂಪು. ಕಲೆಗಾಗಿ ಕಲೆಯೆಂದು ಭಾವಿಸುವ ಇವರು ಕಲೆಗೂ, ದೈನಂದಿನ ಸಮಸ್ಯೆಗಳಿಗೂ (ಮಾನವ ಜೀವಿತಕ್ಕೂ) ಏನೂ ಸಂಬಂಧವಿಲ್ಲವೆಂದು ಭಾವಿಸುತ್ತಾರೆ. ಅಧ್ಯಾತ್ಮವಾದ, ಅವ್ಯಕ್ತವಾದ, ಆದರ್ಶವಾದಗಳೇ ಕಲೆಯ ಉಸಿರು ಎಂದು ಈ ಜನ ತಿಳಿಯುತ್ತಾರೆ. ಎರಡು, ಜನತಾಕಲೆಯ ಔಪಾಸಕರ ಗುಂಪು. ಮಾನವತೆಗಾಗಿ ಕಲೆಯೆಂದು ಭಾವಿಸುವವರು ಇವರು. ಮಾನವ ಜೀವಿತದ ಉತ್ಕರ್ಷಕ್ಕೆ ವಿಘಾತವಾಗುವ ಗೌಣ - ಪ್ರಧಾನ ಸಮಸ್ಯೆಗಳನ್ನು ಪೃಥಃಕ್ಕರಿಸಿ, ಲೋಕಜೀವಿಯ ಬಾಳನ್ನು ಹಸನುಮಾಡಬೇಕೆಂದು ಇವರು ಬಯಸುತ್ತಾರೆ.

ವಸ್ತು, ನಿರೂಪಣೆ, ದೃಷ್ಟಿಗಳೆಲ್ಲದರಲ್ಲಿಯೂ ಈ ಎರಡು ಸಂಪ್ರದಾಯವಾದಿಗಳಲ್ಲಿ ಭಿನ್ನಾಭಿಪ್ರಾಯವಿದೆ. ಲೋಕ ಗೋಳಿನ ಸಂತೆ. ಗೋಳು ಮರೆಸಲು ಕಲೆ ನೆರವಾಗಬೇಕು. ಸುಂದರವಾದುದನ್ನು, ಸ್ನಿಗ್ದವಾದುದನ್ನು, ಸುಭಗವಾದುದನ್ನು ಮನಸ್ಸಿಗೆ ಪ್ರಿಯವಾದ ರೀತಿಯಲ್ಲಿ ಹೇಳಬೇಕು ಎಂದು ಕಲಾವಾದಿಗಳು ಅಭಿಪ್ರಾಯಪಡುತ್ತಾರೆ. ಲೋಕ ಗೋಳಿನ ಸಂತೆಯಲ್ಲ. ಮಾನವನ ದೌಷ್ಟ್ಯ, ದುರಾಶೆ, ಶೋಷಣಪ್ರವೃತ್ತಿ ಲೋಕವನ್ನು ಗೋಳಿನ ಸಂತೆಯನ್ನಾಗಿ ಮಾಡಿದೆ. ಲೋಕದ ಪ್ರಕೃತ ಪರಿಸ್ಥಿತಿಯನ್ನು ರೂಪಿಸಿರುವ ಪ್ರಮೇಯಗಳನ್ನು ಅನುಲಕ್ಷಿಸದೆ ತಾತ್ಕಾಲಿಕ ಉಪಶಮನ ಮಾಡಿದರೆ ಮೂಲಸಮಸ್ಯೆ ಪರಿಹಾರವಾಗುವುದಿಲ್ಲ. ತಲೆನೋವು ಬಂದಾಗ ‘ಆಸ್ಟ್ರೋ’ ತೆಗೆದುಕೊಂಡರೆ ತಾತ್ಕಾಲಿಕ ಉಪಶಮನವಾಗಬಹುದು! ಎಲ್ಲಿಯವರೆಗೆ? ಆಸ್ಟ್ರೋ ಪ್ರಭಾವ ದೇಹದ ಮೇಲೆ ಇರುವವರೆಗೆ. ಅದು ತೀರಿದಕೂಡಲೆ ತಲೆನೋವು ಮತ್ತೆ ಸಂಭವಿಸುತ್ತದೆ. ತಲೆನೋವು ಹುಟ್ಟಿರುವ ಮೂಲಕಾರಣ ಕಣ್ಣಿನ ಬೇನೆಯೆ, ಅಜೀರ್ಣವೇ, ಯಕೃತ್ತಿನ ದೋಷವೇ ಎಂದು ನಿಧಾನಮಾಡಿ ಚಿಕಿತ್ಸೆ ಕೈಗೊಂಡಲ್ಲಿ ತಲೆನೋವನ್ನು ಶಾಶ್ವತವಾಗಿ ಪರಿಹರಿಸಬಹುದು. ಇದು ಮಾನವವಾದಿಗಳ ಅಭಿಪ್ರಾಯ. ಮಾನವವಾದವನ್ನೇ ನಾವು ‘ಪ್ರಗತಿಶೀಲತೆ’ಯೆಂದು ಕರೆಯುತ್ತಾ ಬಂದಿರುವುದು. ಸಾಹಿತ್ಯ ಜೀವನ- ದರ್ಶನ ಮಾಡಿಸುವುದರ ಜತೆಗೆ ಉನ್ನತ ಜೀವನದ ನಿರ್ಮಾಣಕ್ಕೆ ನೆರವಾಗಬೇಕು. ಸಾಹಿತಿಯ ಧ್ಯೇಯ ಲೋಕ ವಿಲಾಸವಲ್ಲ - ಲೋಕವಿಕಾಸ; ಅವನ ಗುರಿ ತಾತ್ಕಾಲಿಕ ಸಂತೋಷವನ್ನುಂಟು ಮಾಡುವುದಲ್ಲ, ಶಾಶ್ವತಾನಂದವನ್ನುಂಟುಮಾಡುವುದು.

ಪ್ರಗತಿಶೀಲ ಸಾಹಿತ್ಯ ಚಳುವಳಿ:

ಬೆಂಗಳೂರಿನಲ್ಲಿ ೧೯೪೪ ರಲ್ಲಿ ಪ್ರಗತಿಶೀಲ ಲೇಖಕರ ಸಂಘ ಸ್ಥಾಪನೆಯಾಗುವವರೆಗೆ ಮಾನವವಾದದ ಸ್ಥಾನ ಸಾಹಿತ್ಯದಲ್ಲಿ ಗೌಣವಾಗಿತ್ತು. ‘ನ-ಣ’ ವಾದ, ‘ಕನ್ನಡ - ಸಂಸ್ಕೃತ’ ವಾದ, ಧಾರವಾಡ ಕನ್ನಡ ಕೇಂದ್ರವೋ ಬೆಂಗಳೂರು ಕನ್ನಡ ಕೇಂದ್ರವೋ, ಮಾರ್ಲೆ ದೊಡ್ಡ ಸಾಹಿತಿಯೋ, ಮ್ಯಾಥ್ಯೂ ಆರ್ನಾಲ್ಡ್ ದೊಡ್ಡ ಸಾಹಿತಿಯೋ ಎಂಬ ನಿರರ್ಥಕ ವಾದಗಳಲ್ಲಿ ಮಗ್ನರಾಗಿದ್ದ ಕಲಾವಾದಿಗಳಿಗೆ ಪ್ರಗತಿಶೀಲರ ಧ್ಯೇಯ, ಧೋರಣೆ ದೊಡ್ಡ ಗಂಡಾಂತರವಾಯಿತು. ಇಂಗ್ಲೆಂಡಿನ ಸ್ವಾಮ್ಯ ತಪ್ಪಿಹೋದರೆ ಭಾರತ ಸ್ವಯೂಧ ಕಲಹದಲ್ಲಿ ನಾಶವಾಗುತ್ತದೆ ಎಂದು ಭಾವಿಸುತ್ತಿದ್ದ ಕಲಾವಾದಿಗಳಿಗೆ ಮಾನವವಾದಿಗಳ ಸ್ವಾತಂತ್ರ್ಯಘೋಷಣೆ ಕರ್ಕಶವಾಗಿ ಕಂಡುಬಂದಿತು. ತಮ್ಮ ನಾಡಿನ ಸ್ವಾತಂತ್ರ್ಯದಷ್ಟೇ ಗಣ್ಯವಾದುದು ಲೋಕದ ಎಲ್ಲಾ ದಲಿತ ರಾಷ್ಟ್ರಗಳ ಸ್ವಾತಂತ್ರ್ಯವೆಂಬ ಪ್ರಗತಿಶೀಲರ ವಾದ ಕಲಾವಾದಿಗಳಿಗೆ ಅಪ್ರಿಯವಾಯಿತು.

ರಬಕವಿಯಲ್ಲಿ ೧೯೪೪ ರಲ್ಲಿ ನಡೆದ ಸಾಹಿತ್ಯಸಮ್ಮೇಳನದ ಅಂಗವಾಗಿ ಸೇರಿದ ‘ಪ್ರಗತಿಶೀಲ ಸಾಹಿತ್ಯಗೋಷ್ಠಿ’ಯಲ್ಲಿ ಕಲಾವಾದಿಗಳು ಪ್ರಗತಿಶೀಲರ ಮೇಲೆ ತಮ್ಮ ಧಾಳಿ ಆರಂಭಿಸಿದರು. ಇದಕ್ಕೆ ಕೆಲವು ದಿನಗಳ ಮುಂಚೆ ಧಾರವಾಡದಲ್ಲಿ ಇಂಥಹದೇ ಒಂದು ಗೋಷ್ಠಿ ಸೇರಿ ಪ್ರಗತಿಶೀಲರನ್ನು ಬಗ್ಗುಬಡಿಯಲು ಹವಣಿಸಿತು. ಎರಡು ಕಡೆಗಳಲ್ಲಿಯೂ ಕಲಾವಾದಿಗಳಿಗೆ ನಿರೀಕ್ಷಿಸಿದ ಜಯ ದೊರೆಯಲಿಲ್ಲ. ರಬಕವಿ ಸಾಹಿತ್ಯ ಸಮ್ಮೇಳನಾಧ್ಯಕ್ಷರೇ ಪ್ರಗತಿಶೀಲರ ಧ್ಯೇಯಧೋರಣೆಗಳನ್ನು ಮೆಚ್ಚಿಕೊಂಡು ಸ್ವಾಗತಿಸಿದರು. ತರುವಾಯ ಬೆಂಗಳೂರಿನ ಸಾಹಿತ್ಯ ಪರಿಷನ್ಮಂದಿರದಲ್ಲಿ ಒಂದು ಚರ್ಚಾಕೂಟವೂ ವ್ಯವಸ್ಥಿತವಾಯಿತು. ಸಾಮಾನ್ಯ ಜನತೆ ಪ್ರಗತಿಶೀಲರಿಗೆ ಅಭೂತಪೂರ್ವ ಬೆಂಬಲ ನೀಡಿತು. ಊರೂರುಗಳಿಗೆ ಹಳ್ಳಿಹಳ್ಳಿಗಳಿಗೆ ಪ್ರಗತಿಶೀಲರು ಹೋಗಿ ತಮ್ಮ ಪ್ರಣಾಳಿಕೆ ಸಾರಿಬಂದರು. ತಾವೂ ಪ್ರಗತಿಶೀಲರೆಂದು ಹೇಳಿಕೊಳ್ಳುತ್ತಿದ್ದ ಕೆಲವರು ಪ್ರತಿಗಾಮಿಗಳ ಜತೆ ಸಂಧಾನ ನಡೆಸಿ ಪ್ರಗತಿಶೀಲರ ವಿರುದ್ಧ ಚಳುವಳಿ ಕೈಗೊಂಡರು. ಸಂಪ್ರದಾಯಪ್ರಿಯರು ಪ್ರಗತಿಶೀಲರ ಧ್ಯೇಯವಾದವನ್ನು ಅಪಾರ್ಥ ಮಾಡಿ ಕೊಳಚೆಗೆಳೆಯಬೇಕಾದ ಕಾರಣವಿರಲಿಲ್ಲ. ಪ್ರಗತಿಶೀಲರ ಮೇಲೆ ‘ಅಶ್ಲೀಲ ಸಾಹಿತಿಗಳು, ಅನೀತಿಪರರು, ಪ್ರತಿಫಲಾಪೇಕ್ಷಿಗಳು’ ಮೊದಲಾದ ಕೀಳು ಆಪಾದನೆಗಳನ್ನು ಮಾಡಬೇಕಾದ ಅವಶ್ಯಕವಿರಲಿಲ್ಲ. ಎರಡು ಪಕ್ಷಗಳೂ ಗಂಭೀರವಾಗಿ ತಮ್ಮ ವಾದಗಳನ್ನು ಜನತೆಯ ಮುಂದಿಟ್ಟು ಅವರ ನಿರ್ಣಯವನ್ನು ಒಪ್ಪಿಕೊಳ್ಳಬಹುದಾಗಿತ್ತು. ಪ್ರಗತಿಶೀಲರು ಜನತೆಯ ಮುಂದೆ ನಿಂತು ತಮ್ಮ ಧ್ಯೇಯವಾದಕ್ಕೆ ಬೆಂಬಲ ದೊರಕಿಸಿಕೊಳ್ಳುತ್ತಿದ್ದಾಗ ಕಲಾವಾದಿಗಳು ಪಿಸುಮಾತಿನ ಅಪಪ್ರಚಾರ (Whispering Campaign) ಕೈಗೊಂಡು ಕ್ಲಾಸುರೂಮುಗಳಲ್ಲಿ ಪ್ರಗತಿಶೀಲರನ್ನು ನಿಂದಿಸಿ ತೃಪ್ತಿಪಟ್ಟುಕೊಂಡರು.

ವಾತಾವರಣ ಇಷ್ಟು ಕಲುಷಿತವಾದಾಗ ಜನತೆಯ ಮನಸ್ಸಿನಲ್ಲಿ ವಿನಾಕಾರಣ ಸಂದೇಹ ಸಂದಿಗ್ಧಗಳು ಹುಟ್ಟಿಕೊಂಡಾಗ ಕೆಲಕಾಲ ಪ್ರಗತಿಶೀಲ ಚಳುವಳಿಗೆ ವಿರಾಮ ಕೊಡಬೇಕಾಗಿದ್ದುದು ಅನಿವಾರ್ಯವಾಯಿತು. ಪ್ರಗತಿಶೀಲ ಲೇಖಕರ ಆರ್ಥಿಕ ಪರಿಸ್ಥಿತಿಯೂ ಕಾರಣವನ್ನೊದಗಿಸಿತು. ಯಾಕೆಂದರೆ ಕಲಾವಾದಿಗಳಂತೆ ಪ್ರಗತಿಶೀಲರು ಸರ್ಕಾರಿ ನೌಕರರಾಗಿ, ಹೈಸ್ಕೂಲು, ಕಾಲೇಜು ಉಪಾಧ್ಯಾಯರಾಗಿರಲಿಲ್ಲ.

ತಾತ್ಕಾಲಿಕ ವಿರಾಮ ಪ್ರತಿಗಾಮಿಗಳಿಗೆ ಪರಮಸಂತೋಷವನ್ನುಂಟು ಮಾಡಿರಬೇಕು. ಪ್ರಗತಿಶೀಲರು ಹೇಳಹೆಸರಿಲ್ಲವಾದರು ಎಂದವರು ವಿಜಯೋತ್ಸಾಹ ತೋರಿದರು. ಆದರೆ ಈ ವೇಳೆಗೆ ಪ್ರಗತಿಶೀಲರ ಧ್ಯೇಯವಾದ ಜನತೆಯ ಮನಸ್ಸಿನಲ್ಲಿ ಬೇರೂರಿದ್ದನ್ನು ಮಾತ್ರ ಕಲಾವಾದಿಗಳು ಗಮನಿಸಲಿಲ್ಲ. ಪ್ರಗತಿಶೀಲ ಲೇಖಕರ ಸಂಘ ಹೋಗಬಹುದು - ಪ್ರಗತಿಶೀಲ ಲೇಖಕರೂ ಹೋಗಬಹುದು ಆದರೆ ಜನತೆಯಷ್ಟೇ ಅನಂತ ಅಮರ ಅವರ ಧ್ಯೇಯವಾದ.

ಪ್ರಗತಿಶೀಲ ಲೇಖಕರ ಸಂಘ ಪ್ರಕಟನೆಯ ಕೆಲಸ ನಿಲ್ಲಿಸಿತು. ಸಂಘದ ಪ್ರಕಟನೆಗಳಿಂದ ಲೇಖಕರು ಪ್ರತಿಫಲವನ್ನೆಂದಿಗೂ ನಿರೀಕ್ಷಿಸಲಿಲ್ಲ. ಪ್ರಕಾಶನದ ಹೊರೆ ಹೊತ್ತಿದ್ದ ಧಾರವಾಡದ ಕರ್ನಾಟಕ ಸಾಹಿತ್ಯ ಮಂದಿರದ ಒಡೆಯರಾದ ಶ್ರೀ ಟಿ.ಡಿ. ಶಿವಲಿಂಗಯ್ಯನವರು ನಿಸ್ಸ್ವಾರ್ಥ ಬುದ್ಧಿಯಿಂದಲೇ ಸಂಘದ ಪ್ರಕಟನೆಗಳ ಹೊರೆ ಹೊತ್ತಿದ್ದರು. ಸಾಕಷ್ಟು ಬಂಡವಾಳ ಹಾಕಿ ಪ್ರಗತಿಶೀಲ ಸಂಘದ ಪ್ರಕಟನೆಗಳನ್ನು ಅವರು ಹೊರಡಿಸಿದುದಲ್ಲದೆ ಪ್ರಕಟನೆಗಳಿಗೆ ಗೌರವಧನವನ್ನೂ ಸಲ್ಲಿಸುತ್ತಿದ್ದರು. ಈ ಹಣವೇ ಸಂಘದ ಚಟುವಟಿಕೆಗಳ ಬೆನ್ನೆಲುಬಾಗಿತ್ತು. ಪ್ರಗತಿಶೀಲ ಸಂಘ ಯಾರಿಂದಲೂ ಚಂದಾ ವಸೂಲು ಮಾಡಲಿಲ್ಲ. ಯಾರನ್ನೂ ದಾನ ಧರ್ಮ ಬೇಡಲಿಲ್ಲ. ಲೇಖಕರು ದುಡಿದು ತಮ್ಮ ಕೃತಿಗಳಿಗೆ ದೊರೆಯುತ್ತಿದ್ದ ವರಮಾನವನ್ನು ಸಂಘಕ್ಕೆ ಕೊಡುತ್ತಿದ್ದರು. ಸಂಘದ ನೆಪದಲ್ಲಿ ಪ್ರಗತಿಶೀಲರು ತಮ್ಮ ಪ್ರಕಟನೆಗೆ ದಾರಿಮಾಡಿಕೊಂಡು, ಹಣ ಸಂಪಾದಿಸುತ್ತಿದ್ದರೆಂದು ಕೆಲವು ಮಹನೀಯರು ಆಪಾದಿಸಿದರು (ಅವರೇ ಈಗ ‘ಪುರೋಗಾಮಿ’ಗಳೆಂದು ಕರೆದುಕೊಳ್ಳುತ್ತಿರುವವರು) ಆದರೆ ಸಂಘದ ಸದಸ್ಯರಂತೆ ಇವರು ತ್ಯಾಗಕ್ಕೆ ಸಿದ್ಧರಾಗಿರಲಿಲ್ಲ.

ಸಂಘ ಪ್ರಕಟನೆಯನ್ನು ನಿಲ್ಲಿಸಿದರೂ ಸಂಘದ ಸದಸ್ಯರ ಪ್ರಕಟನೆಗಳು ನಿಲ್ಲಲಿಲ್ಲ. ಸಾಹಿತ್ಯದ ಸತತ ಪ್ರವಾಹವೇ ಅವರಿಂದ ಆರಂಭವಾಯಿತು. ಕಥೆ, ಕಾದಂಬರಿ, ವಿಮರ್ಶೆ, ಹಾಸ್ಯ ಬರಹಗಳು ಪುಂಖಾನುಪುಂಖವಾಗಿ ಪ್ರಕಟವಾದವು. ಸದಸ್ಯರು ವಿದ್ಯಾರ್ಥಿ ಚಟುವಟಿಕೆಗಳು, ಕೂಲಿಗಾರ ಸಂಘಗಳು, ಶಾಂತಿ ಚಳುವಳಿ, ಇಂಡೋ-ಸೋವಿಯಟ್, ಇಂಡೋ-ಚೀನಾ ಸೊಸೈಟಿಗಳ ಕಾರ್ಯಕ್ರಮಗಳಲ್ಲಿ ಪ್ರಧಾನ ಪಾತ್ರ ವಹಿಸತೊಡಗಿದರು; ಕನ್ನಡ ಮಾಧ್ಯಮ ಚಳುವಳಿ; ಕರ್ನಾಟಕ ಏಕೀಕರಣ ಚಳುವಳಿಗಳ ಪ್ರಸಾರಕರಾಗಿ ಕೆಲಸ ಮಾಡಿದರು. ಅವರ ಚಟುವಟಿಕೆಗಳು ಕಲಾವಾದಿಗಳಲ್ಲಿ, ಸಂಪ್ರದಾಯವಾದಿಗಳಲ್ಲಿ ಈರ್ಷೆಯ ಕಿಚ್ಚುರಿಸಿತು. ಸಾರ್ವತ್ರಿಕವಾಗಿ ಜನತೆಯ ಮನಸ್ಸಿನಲ್ಲಿ ಪ್ರಗತಿಶೀಲರ ಕೃತಿಗಳ ಬಗ್ಗೆ ಮೂಡುತ್ತಿದ್ದ ಅಭಿಮಾನವನ್ನು ಕೊನೆಗಾಣಿಸುವುದು ಹೇಗೆ ಎನ್ನುವುದೇ ಪ್ರತಿಗಾಮಿಗಳಿಗೆ ದೊಡ್ಡ ಸಮಸ್ಯೆಯಾಯಿತು. ಆಗವರು ಪ್ರಗತಿಶೀಲರ ಕೃತಿಗಳೆಲ್ಲಾ ಅಶ್ಲೀಲ ಬರವಣಿಗೆಗಳು ಎಂಬ ಹುಯ್ಯಲೆಬ್ಬಿಸಿದರು. ಲೈಂಗಿಕ ಸಮಸ್ಯೆಗಳನ್ನು ಚರ್ಚಿಸದ ಕೃತಿಗಳ ಮೇಲೂ ಈ ಆಪಾದನೆ ಹೊರೆಸಲ್ಪಟ್ಟಿತೆಂದು ಹೇಳಿದಲ್ಲಿ ಓದುಗರಿಗೆ ಆಶ್ಚರ್ಯವಾಗಬಹುದು. ‘ಮನೆಗೆ ಬಂದ ಮಹಾಲಕ್ಷ್ಮಿ’ - ‘ಬೇಡದ ಮಗು’ - ‘ಸರ್ವಮಂಗಳಾ’ - ‘ಇದಿರೇಟು’ - ‘ಜ್ವಾಲಾ ಮುಖಿಯ ಮೇಲೆ’ - ‘ದಾಸಕೂಟ’ ಇವುಗಳ ಬಗ್ಗೆ ಹೊಗೆಯಾಡುತ್ತಿದ್ದ ಅಶ್ಲೀಲ ಆಪಾದನೆ ‘ನಗ್ನಸತ್ಯ’ - ‘ಶನಿಸಂತಾನ’ ಪ್ರಕಟವಾದಾಗ ಬೃಹದ್ರೂಪ ತಾಳಿತು. ಪ್ರತಿಪಕ್ಷದವರ ವಾದವೈಖರಿ, ತಿಳುವಳಿಕೆಯ ಮಟ್ಟ, ಸಮಾಜಾಭಿಮಾನ, ಸಾಹಿತ್ಯನಿಷ್ಠೆಗಳೆಲ್ಲವನ್ನೂ ಈ ಗ್ರಂಥದಲ್ಲಿ ವಿಶದವಾಗಿ ಚರ್ಚಿಸಿದ್ದೇನೆ.

ಸಾಹಿತ್ಯದಲ್ಲಿ ಏನಿರಬೇಕು? ಏನಿರಬಾರದು?

ಇಂದು ನಾವು ಸೂರ್ಯನನ್ನು ಗಡಿಯಾರವನ್ನಾಗಿ ಉಪಯೋಗಿಸುತ್ತಿಲ್ಲ; ಪೆಟ್ಟಿಗೆ ಗಾಡಿಯೇ (ಡಮಣಿ) ಪ್ರಯಾಣದ ಆದ್ಯಂತವೆಂದು ಭಾವಿಸುತ್ತಿಲ್ಲ. ಇಂದಿನ ನಮ್ಮ ಆವಶ್ಯಕತೆಗಳಿಗೆ ಫಾವರ್‌ಲೂಬಾ ಕಂಪನಿಯ ಗಡಿಯಾರ, ಏರೋಪ್ಲೇನುಗಳೇ ಬೇಕಾಗಿವೆ. ಆಟಂ ಬಾಂಬಿನ ಸಂಶೋಧನೆ, ಧನಪ್ರಮತ್ತ ಅಮೇರಿಕಾದ ರಾಜಕೀಯ ನೋಟ ಇಡಿಯ ವಿಶ್ವದ ಮುಖವನ್ನೇ ಬದಲಾಯಿಸುತ್ತಿದೆ. ರೇಷನ್ ಪದ್ಧತಿಯೊಂದೇ ನಮ್ಮ ಸಾಮಾಜಿಕ ಜೀವನ, ಆರ್ಷೇಯ ಸಂಪ್ರದಾಯಗಳನ್ನು ಅಲುಗಾಡಿಸಿಬಿಟ್ಟಿತು. ಇನ್ನೂ ನಮ್ಮ ಸಾಹಿತ್ಯ ಪ್ರಾಚೀನ ಸಾಹಿತ್ಯದ ಅನುಕರಣವಾಗಬೇಕೆಂದು ಬಯಸುವುದೂ ನಮ್ಮ ಜೀವನ ಮಧ್ಯಕಾಲದ ಜೀವನದ ಪ್ರತೀಕವಾಗಬೇಕೆಂದು ಹಾರೈಸುವುದೂ ನಿರರ್ಥಕ. ವಾಯುವೇಗದಲ್ಲಿ ಮುನ್ನಡೆಯುತ್ತಿರುವ ಜೀವನಕ್ಕೆ ಸರಿದೊರೆಯಾಗಿ ನಿಲ್ಲಬೇಕಾದುದು ಸಾಹಿತಿಯ ಕರ್ತವ್ಯ. ಪ್ರಗತಿ ಗಡಿಯಾರದ ಮುಳ್ಳನ್ನು ಯಾರೂ ಹಿಂದಕ್ಕೆ ತಳ್ಳಲು ಸಾಧ್ಯವಿಲ್ಲ.

ಪ್ರಾಚೀನದ ಅನುಕರಣದಿಂದ ನಮ್ಮ ಸಾಹಿತ್ಯ ಕ್ರಿಯಾಶೀಲವಾಗುವುದಿಲ್ಲವೆಂದು ಪ್ರಗತಿಶೀಲರು ಪ್ರತಿಪಾದಿಸಿದಂತೆ ರಷ್ಯಾ, ಇಂಗ್ಲೆಂಡ್, ಅಮೇರಿಕಾ ದೇಶಗಳ ಸಾಹಿತ್ಯಾನುಕರಣದಿಂದ ನಮ್ಮ ಸಾಹಿತ್ಯ ಹಾಗೂ ಜೀವನ ಬೆಳೆಯುವುದಿಲ್ಲವೆಂದೂ ಒತ್ತಿ ಹೇಳಿದರು. ನಮ್ಮ ಸಾಹಿತ್ಯ ನಮ್ಮ ಸಂಸ್ಕೃತಿಯ, ಜೀವನದ, ಆಶೋತ್ತರಗಳ, ಕಷ್ಟಸುಖಗಳ, ಸೋಲು ಗೆಲುವುಗಳ ಪ್ರತೀಕವಾಗಬೇಕು. ಅನುಭವವೇದ್ಯವಾದ ಕ್ರಿಯಾಶಕ್ತಿ ಅಂಥ ಸಾಹಿತ್ಯವನ್ನು ನಿರ್ಮಿಸಬಲ್ಲುದಲ್ಲದೆ ಪರಸಾಹಿತ್ಯಗಳ ಅನುಕರಣವಲ್ಲವೆಂಬುದನ್ನು ಪ್ರಗತಿಶೀಲರು ಸ್ಥಾಪಿಸಿದರು.

ನಮ್ಮ ಸಾಮಾಜಿಕ, ರಾಷ್ಟ್ರೀಯ, ಆರ್ಥಿಕ, ಧಾರ್ಮಿಕ ಸಮಸ್ಯೆಗಳನ್ನು ನಾನು ಅನೇಕ ವರ್ಷಗಳಿಂದ ವಿಚಾರಮಾಡುತ್ತಿದ್ದೇನೆ. ವಸ್ತುಸ್ಥಿತಿಯನ್ನು ಸರಿಯಾಗಿ ಅರಿಯಬೇಕೆಂಬ ಶ್ರದ್ಧೆಗಾಗಲಿ, ಸಾಧನೆಗಾಗಲಿ ಏನೂ ಕೊರತೆಯಿಲ್ಲ. ಅನೇಕ ಜನರ ಜೊತೆಯಲ್ಲಿ ಈ ಸಮಸ್ಯೆಗಳನ್ನು ಚರ್ಚಿಸಿದ್ದೇನೆ; ನೂರಾರು ಗ್ರಂಥಗಳನ್ನು ಓದಿ ನೋಡಿದ್ದೇನೆ. ಈ ಸಿದ್ಧತೆಯನ್ನು ನನ್ನ ವಿವೇಚನೆಯ ಮೂಸೆಯಲ್ಲಿ ಹಾಕಿ ನೋಡಿದ್ದೇನೆ. ಅದರ ಫಲವೇ ‘ಸಾಹಿತ್ಯ ಮತ್ತು ಕಾಮಪ್ರಚೋದನೆ’.

ಕನ್ನಡ ಸಾಹಿತ್ಯಕ್ಕೇ ಕಾದಂಬರಿ ಹೊಸದು. ಇಂದು ಕನ್ನಡದಲ್ಲಿ ಕಾವ್ಯರಚನೆ ಮಾಡಬೇಕೆನ್ನುವವರಿಗೆ ಪ್ರಾಚೀನ, ಅರ್ವಾಚೀನ ಕವಿಗಳ ಉತ್ತಮೋತ್ತಮ ಕೃತಿಗಳ ಆದರ್ಶವಿದೆ. ಗದ್ಯಶೈಲಿಗೇ ನಮಗೆ ಪರಂಪರೆಯ ಬಲವಿಲ್ಲ. ಆಧುನಿಕ ವಿಚಾರವಾಹಿನಿಯೊಂದಿಗೆ ಕಾದಂಬರಿಯ ಕಟ್ಟಡವನ್ನು - ಅಸ್ತಿ ಭಾರದಿಂದ ಆರಂಭಿಸಿ - ನಾವು ಕಟ್ಟಬೇಕಾಗಿದೆ.

“ಕನ್ನಡದಲ್ಲಿ ಕಾವ್ಯಸಂಪತ್ತಿರುವಂತೆ ಕಾದಂಬರಿಯ ಸಂಪತ್ತಿಲ್ಲ. ೧೯೧೫ರ ಹಿಂದೆ ಕನ್ನಡದಲ್ಲಿ ಕಾದಂಬರಿ ಸಾಹಿತ್ಯವಿರಲಿಲ್ಲ. ೧೯೪೫ ರಿಂದ ಈವರೆಗೆ ಕನ್ನಡದಲ್ಲಿ ಕಾದಂಬರಿ ಹೆಚ್ಚಾಗಿ ಬೆಳೆದಿದೆ. ಇಂಗ್ಲೆಂಡ್, ಫ್ರಾನ್ಸ್, ರಷ್ಯಾದೇಶಗಳ ಸಾಹಿತ್ಯ ಕಾದಂಬರಿಯ ವಿಷಯದಲ್ಲಿ ಪಡೆದಿರುವ ಪರಂಪರೆಯ ಬೆಂಬಲ ನಮಗಿಲ್ಲ. ಇಂಗ್ಲಿಷರಿಗೆ ಹಾರ್ಡಿ, ಸ್ಕಾಟ್, ಡಿಕನ್ಸ್; ಫ್ರೆಂಚರಿಗೆ ವಾಲ್ಟೇರ್, ಬಾಲಜಾಕ್, ಸ್ಟೆಂಡ್ಹಾಲ್, ಜೋಲಾ, ವಿಕ್ಟರ್ ಹ್ಯೂಗೊ, ಫ್ಲಾಬೊ; ರಷ್ಯಾದವರಿಗೆ ಟರ್ಗಿನಿವ್, ಟಾಲ್‌ಸ್ಟಾಯ್, ಡಾಸ್ಕೊವಸ್ಕಿ, ಕುಪ್ರಿನ್, ಗಾರ್ಕಿ ಮೊದಲಾದವರ ಅಮರ ಕೃತಿಗಳ ಮೇಲ್ಪಂಕ್ತಿಯಿದೆ. ಇಂಗ್ಲೆಂಡ್, ರಷ್ಯಾ, ಫ್ರಾನ್ಸ್‌ಗಳಲ್ಲಿ ಈ ಮಹನೀಯರು ಸಾಕಷ್ಟು ಉಳುಮೆ ಕೆಲಸ (spade work) ಮಾಡಿದ್ದಾರೆ; ಇಂದಿನ ಕಾದಂಬರಿಕಾರ ಬಿತ್ತನೆಗೆ ಹೊರಡಬಹುದು. ನಮಗೆ ಆ ಸೌಕರ್ಯ ಇಲ್ಲ. ನಾವೇ ಉಳುವವರು, ನಾವೇ ಬಿತ್ತುವವರು. ಹೊಸದಾದ ಸ್ವತಂತ್ರ ಮಾರ್ಗಗಳನ್ನು ನಾವು ಅವಿಷ್ಕಾರ ಮಾಡುತ್ತಿದ್ದೇವೆ. ಕಾದಂಬರಿಗೆ ಅವಶ್ಯಕವಾಗುವ ಶೈಲಿಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಮನೋವ್ಯಾಪಾರದ ಬಗೆಬಗೆಯ ಭಾವಗಳನ್ನು ವ್ಯಕ್ತಮಾಡಲು ಅವಶ್ಯಕವಾದ ಶಬ್ಧಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಆದರೆ, ಈ ಪ್ರಯೋಗಕಾಲದಲ್ಲಿಯೇ ಕನ್ನಡ ಕೆಲವು ಚಿರಸ್ಥಾಯಿಯಾದ ಕೃತಿಗಳನ್ನು ಕೊಟ್ಟಿರುವುದು ಕನ್ನಡದ ಹಿರಿಮೆಯನ್ನು ಎತ್ತಿ ಸಾರುತ್ತದೆ. ಈ ಸಮಯದಲ್ಲಿ ಕನ್ನಡ ಕೃತಿಗಳನ್ನಳೆಯುವವರಲ್ಲಿ ಜ್ಞಾನ ಸಂಪತ್ತು, ಸಾಂತಃಕರಣ, ಸಹೃದಯತೆ, ವಿಮರ್ಶನ ನೈಪುಣ್ಯ ಇರಬೇಕು. ಕನ್ನಡ ಕೃತಿಗಳನ್ನು ವಿಮರ್ಶೆ ಮಾಡುವವರಲ್ಲಿ ಜವಾಬ್ದಾರಿಯಿರಬೇಕು. ಒಬ್ಬ ಕ್ರಿಯಾಶೀಲ ಲೇಖಕನ ಅವಿಶ್ರಾಂತ ಪರಿಶ್ರಮದ ಫಲವನ್ನು ನಾಲ್ಕು ಸಣ್ಣ ಮಾತುಗಳಿಂದ ತೆಗಳುವುದು ಸುಲಭ - ಅದಕ್ಕೆ ಯಾವ ಉತ್ತರವಾದಿತನವೂ ಬೇಕಿಲ್ಲ. ಲೇಖಕನ ಕೃತಿ ಸರ್ವಾಂಗಸುಂದರವಾಗಿ ಸರ್ವ ಲಕ್ಷಣಯುತವಾಗಿಲ್ಲದೆ ಇರಬಹುದು. ಆದರೆ ಅವನ ಪರಿಶ್ರಮ, ಸಾಧನೆ, ಸಿದ್ಧಿಯನ್ನು ಅಲ್ಲಗಳೆಯುವುದು ಕಾರ್ಪಣ್ಯದ ಲಕ್ಷಣ”

ಆಧುನಿಕ ಕನ್ನಡ ಸಾಹಿತ್ಯ ಜನ್ಮತಾಳಿ ಮೂವತ್ತೇಳು ವರ್ಷಗಳಾದರೂ ಅದು ಸಾಕಷ್ಟು ಪ್ರಭಾವಶಾಲಿಯಾಗದಿರುವುದಕ್ಕೆ, ಜನಸಾಮಾನ್ಯದ ಬಳಿ ಸುಳಿಯದಿರುವುದಕ್ಕೆ ಸಾಹಿತ್ಯಭಕ್ತರ, ಔಪಾಸಕರ ಅ-ಪ್ರಾಗತಿಕ ಮನೋಭಾವವೇ ಮೂಲಕಾರಣ. ನಾಡವರಂತೆ ಸಾಹಿತಿಗಳೂ ಹಿಂದಣ ಇತಿಹಾಸ, ಧರ್ಮ, ಸಾಹಿತ್ಯ, ಜೀವನದ ಕನಸು ಕಾಣುತ್ತಿರುವವರೇ ವಿನಾ ಇಂದಿನ ಜೀವನವನ್ನು ಕಟ್ಟಿ -ಬೆಳಸಿ - ಬೆಳಗಿಸುವ ಕಡೆಗೆ ಲಕ್ಷ್ಯವಿಡುತ್ತಿಲ್ಲ. ಪ್ರಾಚೀನ ಪರಂಪರೆ ಭಾರತೀಯರನ್ನು ಪ್ರಾರಬ್ಧದಂತೆ ಕಾಡುತ್ತಿದೆ. ನಮ್ಮ ನಾಡು - ಸಾಹಿತ್ಯ - ನಾಡವರು ಬದುಕಬೇಕಾದರೆ, ಮುಂದುವರಿಯಬೇಕಾದರೆ ನಾವು ಹಿಂದು ಹಿಂದು ನೋಡುವ ಮನೋಭಾವ ತೊರೆಯಬೇಕು. ಪರಂಪರಾಗತ ಸಂಸ್ಕೃತಿಯನ್ನು ಸಂಪೂರ್ಣವಾಗಿ ತೊರೆಯಬೇಕೆಂದು ನನ್ನ ವಾದವಲ್ಲ. ಆ ಸಂಸ್ಕೃತಿಯಿಂದ ನಾವು ಪಡೆಯುವ ಸ್ಪೂರ್ತಿ ಚೇತೋಹಾರಿಯಾಗಿ ಜೀವಂತವಾಗಿರಬೇಕು. ಸತ್ತ ಸಾಮ್ರಾಜ್ಯಗಳ, ಮಠ, ಮತಗಳ, ಕೀರ್ತಿ ಸ್ತುತಿಯಲ್ಲಿ ಕಾಲಹರಣ ಮಾಡುವುದು ನಮ್ಮ ಅವನತಿಯ ಸಂಕೇತವೇ ವಿನಾ ಅಭ್ಯುದಯದ ಅಡಿಗಲ್ಲಲ್ಲ.

-ಅ.ನ.ಕೃಷ್ಣರಾಯ
೨೨-೫-೧೯೫೨

[ಅನಕೃ ತಮ್ಮ ‘ಸಾಹಿತ್ಯ ಮತ್ತು ಕಾಮಪ್ರಚೋದನೆ’ ಗ್ರಂಥದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಈ ಪಠ್ಯವನ್ನು ಇದೇ ಪುಸ್ತಕದ ಮುನ್ನುಡಿ ಮತ್ತಿತರ ಭಾಗಗಳಿಂದ ಆಯ್ದುಕೊಳ್ಳಲಾಗಿದೆ.]

ಅನಕೃ ಹೇಳಿದ್ದು:

“ಇದು ಬೇಕು - ಅದು ಬೇಡ ಎನ್ನುವುದಾಗಲೀ, ಇದು ಶ್ಲೀಲ - ಅದು ಅಶ್ಲೀಲವೆನ್ನುವುದಾಗಲಿ ಇಂದಿನ ಸಾಹಿತಿಯ, ಸಾಹಿತ್ಯ ಪ್ರೇಮಿಯ ಕೆಲಸವಲ್ಲ. ಕನ್ನಡದ ಬೆಳೆಯನ್ನು - ಅದು ಏನೇ ಆಗಿರಲಿ - ಹೆಚ್ಚಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಜಳ್ಳನ್ನು ತೂರಿ ಕಾಳನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಮುಂದಿನ ಪೀಳಿಗೆಯವರ ಕೆಲಸ. ಜರಡಿಯಾಡುವ ಕೆಲಸವನ್ನು ಕಾಲವೇ ನಿರ್ವಹಿಸುವಾಗ ನಾವು ತೊಂದರೆಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ.”

“ಈ ವಿಮರ್ಶಕರ ವಿಮರ್ಶೆಗಳ ಪ್ರಸ್ಥಾನವಾದರೂ ಯಾವುದು? ಗ್ರಂಥದ ವಿಮರ್ಶೆಯೇ - ಗ್ರಂಥದ ವಸ್ತುವಿನ ವಿಮರ್ಶೆಯೇ - ಗ್ರಂಥದ ಭಾವತರಂಗಗಳ ವಿಮರ್ಶೆಯೇ? ಒಂದೂ ಅಲ್ಲ. ಗ್ರಂಥಕರ್ತನ ವಿಮರ್ಶೆ. ಗ್ರಂಥಕರ್ತನ ಕುಲಕೋಟಿ, ಶೀಲ, ನೀತಿಗಳ ವಿಮರ್ಶೆ. ಎರಡು ಮೂರು ದಶಕಗಳಿಂದ ಸಾಹಿತ್ಯಸೇವೆಯನ್ನೇ ಒಂದು ತಪಸ್ಸೆಂದು ಭಾವಿಸಿಕೊಂಡು ಅದಕ್ಕಾಗಿ ಸರ್ವಸ್ವವನ್ನರ್ಪಿಸಿ, ಗ್ರಂಥ ರಚಿಸುವ ಸಾಹಿತಿಯನ್ನು ಒಬ್ಬ ಅನಾಮಧೇಯ ನಿರಾಪದವಾಗಿ, ನಿಸ್ಸಂಕೋಚದಿಂದ, ನಿಶ್ಚಿಂತೆಯಿಂದ ಮನಸ್ವೀ ತೆಗಳಿಬಿಡಬಹುದು”

“ಲೋಕದಲ್ಲಿ ಬುದ್ದಿವಾದ, ನ್ಯಾಯಾನ್ಯಾಯ ವಿಮರ್ಶೆ, ಪಾಪಪುಣ್ಯಗಳ ಕಲ್ಪನೆ ಬೆಳೆದಿರುವಷ್ಟು ‘ಹೃದಯವಾದ’ ಬೆಳೆದಿದೆಯೇ? ಎಲ್ಲರ ತಪ್ಪುಗಳನ್ನು ಖಂಡಿಸಲು ಧಾವಿಸುವ ಮಾನವ ಮನಸ್ಸು ತನ್ನ ತಪ್ಪನ್ನೇ ತೂಗಿನೋಡಲು ಸಿದ್ಧವಾಗಿದೆಯೇ? ನಮ್ಮನ್ನು ನಾವು ಅರ್ಥ ಮಾಡಿಕೊಳ್ಳೋಣ; ಬುದ್ದಿಗಿಂತ ಮಿಗಿಲಾದ ಹೃದಯವನ್ನು ಬೆಳೆಸಿಕೊಳ್ಳೋಣ. ವಿಶ್ವವನ್ನು ಉಳಿಸಿ ಅಂತಃಕರಣ - ನಿಷ್ಕಲ್ಮಷಪ್ರೇಮ - ನಿರುದ್ದಿಶ್ಯ ಸಾನುಭೂತಿ - ಇದೇ ನಮಗೆ ವಿಶ್ವದರ್ಶನ ಮಾಡಿಸಬಲ್ಲ ಮಹಾಗುರು.”

“ಜೀವನ ಕೇವಲ ಕಪ್ಪು-ಬಿಳುಪುಗಳ ಎರಡು ಗೋಳವಲ್ಲ. ಪಾಪವಿದ್ದೆಡೆ ಪುಣ್ಯ; ಪುಣ್ಯವಿದ್ದೆಡೆ ಪಾಪವಿದ್ದೇ ಇರುತ್ತದೆ. ಮರಣದಂಡನೆ ಕಾಯುತ್ತಾ ಕುಳಿತಿರುವ ಖೈದಿಯ ಮುಖ, ಜೈಲರನ ಮಗುವನ್ನು ನೋಡಿ ಅರಳುತ್ತದೆ; ಪರಮವಂಚಕಿಯಾದ ಹೆಣ್ಣು ಯಾವುದೋ ಅನಾಥ ಶಿಶುವನ್ನು ಸಾಕಿಕೊಂಡು ಅದಕ್ಕೆ ದೇಹತೇಯುತ್ತಾಳೆ; ಲೋಕಕಂಟಕನಾದ ಹಿಟ್ಲರ್ ಗಾಯನ ನೃತ್ಯ ಪ್ರಿಯನಾಗಿದ್ದನಂತೆ; ಕಾಮಾಂಧನಾದ ರಾವಣ ಸೀತಾದೇವಿಯ ಒಲವನ್ನು ಬಯಸಿದನೇ ವಿನಾ ಅವಳ ಮೇಲೆ ಬಲತ್ಕಾರ ಮಾಡಲಿಲ್ಲ. ಪ್ರತಿಯೊಂದು ಜೀವದೊಳಗೆ ಸುಪ್ತವಾಗಿರುವ ಈ ಈಶ್ವರೀ ಚೈತನ್ಯವನ್ನು ಅರ್ಥ ಮಾಡಿಕೊಳ್ಳಬೇಕೆಂದು, ಅದಕ್ಕೆ ತಲೆಬಾಗಬೇಕೆಂದು ಈ ಲೇಖಕ ಪ್ರಯತ್ನಿಸುತ್ತಿದ್ದಾನೆ.”

“ರೈತರು, ಕೂಲಿಗಾರರು, ಬಡವರು ಇವರ ಬಗ್ಗೆ ಬರೆದ ಕೃತಿಗಳೆಲ್ಲ ಪ್ರಗತಿಶೀಲ ಕೃತಿಗಳಾಗುವುದಿಲ್ಲ. ಪ್ರಗತಿಶೀಲ ಸಾಹಿತಿಗೆ ದೀನರ, ದಲಿತರ, ಪತಿತರ ಗೋಳು ಮುಖ್ಯವಲ್ಲ. ಅದರ ನಿವಾರಣೆ ಮುಖ್ಯ. ಅವರ ಗೋಳು ಹೇಗೆ ಹುಟ್ಟಿತೆಂದು ಅವನು ಅರಸುತ್ತಾನೆ. ಅವರ ಅಳಲಿನ ಮೂಲ ಕಾರಣವನ್ನು ನಿವಾರಿಸಲು, ಅವರ ಹಿತಕ್ಕೆ ಅಡ್ಡಿಬರುವ ಕಂಟಕಗಳನ್ನು ತೊಡೆದುಹಾಕಲು ಅವನು ಬಯಸುತ್ತಾನೆ.”

“ಪ್ರಗತಿಶೀಲ ಸಾಹಿತಿ ವ್ಯಕ್ತಿವಾದಿಯಲ್ಲ, ಸಮಷ್ಟಿವಾದಿ. ವ್ಯಕ್ತಿಯ ಹಿತಕ್ಕಿಂತ ಸಮಷ್ಟಿಯ ಹಿತ ಅವನಿಗೆ ಮುಖ್ಯ, ವ್ಯಕ್ತಿ ತಾನು ಸಮಷ್ಟಿಯಿಂದ ಪ್ರತ್ಯೇಕವಾದ ಒಂದು ವಿಶಿಷ್ಟವಸ್ತು ಎಂದು ಭಾವಿಸುವುದರ ಬದಲು, ತಾನು ಸಮಷ್ಟಿಯ ಒಂದು ವಿಶಿಷ್ಟಾಂಗ ಎಂದು ಭಾವಿಸಬೇಕೆನ್ನುವುದೇ ಪ್ರಗತಿಶೀಲ ಸಾಹಿತಿಗಳ ವಾದ.”

“ಪ್ರಗತಿಶೀಲ ಸಾಹಿತಿ ಇದ್ದುದನ್ನು ಇದ್ದಂತೆ ಹೇಳಬೇಕೆಂದು ಬಯಸುತ್ತಾನೆ. ಕಂಡದ್ದನ್ನು ಕಂಡಂತೆ ವರ್ಣಿಸಲು ಬಯಸುತ್ತಾನೆ. ಸೂರ್ಯಕಿರಣ ದುರ್ಬಲ ದೃಷ್ಟಿಯುಳ್ಳವರಿಗೆ ಹಿಂಸೆ ಕೊಡಬಹುದು. ಇದಕ್ಕೆ ಸೂರ್ಯನನ್ನು ಆಕ್ಷೇಪಿಸುವುದೊಳ್ಳೆಯದೋ - ತಮ್ಮ ದೃಷ್ಟಿಯನ್ನು ಬಲಪಡಿಸಿಕೊಳ್ಳುವುದು ಒಳ್ಳೆಯದೋ?”

“ಸತ್ಯ ಎಷ್ಟೇ ತೀಕ್ಷ್ಣವಾಗಿದ್ದರೂ, ಅಪ್ರಿಯವಾಗಿದ್ದರೂ ಗೌರವಾರ್ಹವಾದುದು ಎನ್ನುವ ತಿಳುವಳಿಕೆ ನಮ್ಮಲ್ಲಿ ಹೆಚ್ಚಬೇಕು. ಸತ್ಯ ಸೂರ್ಯನನ್ನು ಸುವರ್ಣ ಸಂಪುಟದಲ್ಲಿ ಸೆರೆ ಹಾಕಬಾರದು. ಶೋಷಣೆ ಯಾವ ರೂಪದಲ್ಲಿ, ಯಾವ ಪ್ರಮಾಣದಲ್ಲಿ, ಎಲ್ಲಿದ್ದರೂ ಅದನ್ನು ಎದುರಿಸಬೇಕಾದ್ದು ಸಾಹಿತಿಯ ಆದ್ಯ ಕರ್ತವ್ಯ.”

“(ಓದುಗರೊಬ್ಬರ ಪತ್ರಕ್ಕೆ ಪ್ರತಿಕ್ರಿಯಿಸುತ್ತಾ...) ನಗ್ನಸತ್ಯ - ಶನಿಸಂತಾನ ಇವುಗಳನ್ನು ನಾನು ಕೇವಲ ‘ಹಣದಾಸೆ’ಗಾಗಿ ಬರೆದಿರುವೆನೆಂದು ತಾವು ಅಪ್ಪಣೆ ಕೊಡಿಸಿರುವಿರಿ. ಸುಮಾರು ಮೂವತ್ತು ವರ್ಷಕಾಲ ಸಾಹಿತ್ಯ ಸೇವೆಯನ್ನು ಒಂದು ವ್ರತವನ್ನಾಗಿ ಭಾವಿಸಿಕೊಂಡು ಕನ್ನಡದಲ್ಲಿ ದುಡಿದಿರುವವರು ಎಷ್ಟು ಮಂದಿಯಿದ್ದಾರೆ ಹೇಳಬಲ್ಲಿರಾ? ಹತ್ತಾರು ಆದರ್ಶ ಗ್ರಂಥಗಳು, ನಾಟಕಗಳು, ಕಾದಂಬರಿಗಳು, ಕತೆಗಳು, ಧಾರ್ಮಿಕ ಗ್ರಂಥಗಳನ್ನು ಬರೆದಿರುವ ಒಬ್ಬ ಸಾಹಿತಿಗೆ ನೀವು ಅಡ್ಡಪಲ್ಲಕ್ಕಿ ಉತ್ಸವ ಮಾಡಿಸದಿದ್ದರೆ ಚಿಂತೆಯಿಲ್ಲ. ಅವನ ಕೃತಿಗಳನ್ನು - ಸೇವೆಯನ್ನು ಅಲ್ಲಗೆಳೆಯುವ ಅಲ್ಪತನವನ್ನಾದರೂ ತೋರದಿರಬಹುದಷ್ಟೆ! ಹಣದಾಸೆ ನನ್ನ ಜೀವನ ಗುರಿಯಾಗಿದ್ದರೆ ನಾನು ಸಾಹಿತ್ಯವನ್ನೇಕೆ ನೆಚ್ಚಿಕೂಡುತ್ತಿದ್ದೆ. ಸಾಹಿತ್ಯಮುಖದಲ್ಲಿ ನಾನು ತೋರಿರುವ ಪ್ರತಿಭೆಯನ್ನು ಹಣಸಂಗ್ರಹದ ಕಡೆಗೆ ತಿರುಗಿಸಿದ್ದರೆ ಇಂದು ಶ್ರೀಮಂತಿಕೆಯ ಭೋಗಮಂಟಪದಲ್ಲಿ ನಾನಿರಲು ಸಾಧ್ಯವಾಗುತ್ತಿರಲಿಲ್ಲವೆ? ಸಾಹಿತ್ಯಸೇವೆಗಾಗಿ, ಕನ್ನಡನಾಡಿನ ಉತ್ಕರ್ಷಕ್ಕಾಗಿ ಕೈಯಲ್ಲಿದ್ದ (ತಂದೆ ಗಳಿಸಿಟ್ಟಿದ್ದ) ನಾಲ್ಕು ಹಣವನ್ನು ನೀಗಿಕೊಂಡು, ದಿನಕ್ಕೆ ೧೨-೧೬ ಗಂಟೆ ದುಡಿಯುವ ಒಬ್ಬ ಶ್ರಮಜೀವಿ ಲೇಖಕನ ಮೇಲೆ ಹಣದಾಸೆಯ ಆಪಾದನೆಯನ್ನು ಎಷ್ಟು ಸುಲಭವಾಗಿ ಮಾಡುತ್ತಿರುವಿರಿ? ನಮ್ಮ ಪ್ರಕಟನ ಪ್ರಪಂಚದ ವಿಷಯ ನಿಮಗಿನ್ನೂ ಗೊತ್ತಿಲ್ಲ. ಕರ್ನಾಟಕ ಇಂಗ್ಲೆಂಡ್, ಅಮೆರಿಕಾ, ರಷ್ಯಾ ಅಲ್ಲ. ನಾನು ಶನಿಸಂತಾನ, ನಗ್ನಸತ್ಯ ಮತ್ತು ಇತರ ಕಾದಂಬರಿಗಳನ್ನು ಬರೆದು ಸಂಪಾದಿಸಿರುವಷ್ಟು ಹಣಕ್ಕಿಂತ ಹೆಚ್ಚಿನ ಹಣವನ್ನು ರೈಲ್ವೇ ಸ್ಟೇಷನ್ನಿನ ಒಬ್ಬ ಕೂಲಿ ಸಂಪಾದಿಸುತ್ತಾನೆ.”