ಹೆಸರಾಯಿತು ಕರ್ನಾಟಕ, ಉಸಿರಾಗಲಿಲ್ಲ ಕನ್ನಡ


-೪೫ನೆಯ ವರ್ಷದ ಹೊಸ್ತಿಲಿಗೆ ಕನ್ನಡ ಚಳವಳಿ

-‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಸಾಕಾರವಾಗಲೇ ಇಲ್ಲ

-ಪಬ್, ಬಾರ್, ಶಾಪಿಂಗ್ ಮಾಲ್ ಸಂಸ್ಕೃತಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಕನ್ನಡ

-೫ ವರ್ಷದ ಹಿಂದೆ ಕನ್ನಡದ ಕಿಚ್ಚು ಹಚ್ಚಿದಂತೆ ಮತ್ತೊಮ್ಮೆ ಕನ್ನಡಿಗರು ಮೈಕೊಡವಿ ಏಳಬೇಕಿದೆ.

ಬೆಂಗಳೂರು: ‘ಕಾಸ್ಮೋಪಾಲಿಟನ್’ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿರುವ ಬೆಂಗಳೂರಿನಲ್ಲಿ ಕನ್ನಡದ ಉಳಿವು- ಬೆಳವಣಿಗೆಗಾಗಿ ಚಳವಳಿಯ ಕಿಡಿ ಸಿಡಿದು ಕೆಲವೇ ತಿಂಗಳಲ್ಲಿ ೪೫ ವರ್ಷ ತುಂಬಲಿದೆ. ಆದರೆ, ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಮಾತು ಇಂದಿಗೂ ಸಾಕಾರಗೊಂಡಿಲ್ಲ. ಪಬ್, ಬಾರ್, ಶಾಪಿಂಗ್ ಮಾಲ್ ಸಂಸ್ಕೃತಿಯ ಪ್ರವಾಹದಲ್ಲಿ ಬೆಂಗಳೂರಿನ ಕನ್ನಡ ಸಂಸ್ಕೃತಿ ಕೊಚ್ಚಿ ಹೋಗುತ್ತಿರುವ ಸಂದರ್ಭದಲ್ಲೇ ಕನ್ನಡ ಚಳವಳಿಯ ಕಿಡಿ ಹೊತ್ತಿಸಿದ ಚೇತನ ಅ.ನ.ಕೃ. ಅವರ ಜನ್ಮ ಶತಮಾನೋತ್ಸವ ಕಾಲಿಡುತ್ತಿದೆ. ಇನ್ನು ೨೪ ತಿಂಗಳು ಬಾಕಿ. ಕನ್ನಡ ಸ್ವಾಭಿಮಾನದ ಪಂಜು ಹೊತ್ತಿಸಿದ ಅ.ನ.ಕೃ. ಜನ್ಮ ಶತಮಾನೋತ್ಸವ ಮತ್ತು ಕನ್ನಡ ಚಳವಳಿಯ ನೆನಪನ್ನು ಅಪೂರ್ವ ರೀತಿಯಲ್ಲಿ ಆಚರಿಸಲು ಅವರ ಕೆಲ ಅಭಿಮಾನಿಗಳು ಈಗಲೇ ಸಿದ್ಧತೆ ನಡೆಸಿದ್ದಾರೆ.

೬೦- ೭೦ರ ದಶಕದಲ್ಲಿ ಅ.ನ.ಕೃ. ಎಂದರೆ ಕನ್ನಡಿಗರ ಮೈ ಪುಳಕಗೊಳ್ಳುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಕನ್ನಡಿಗರ ನರನಾಡಿಗಳಲ್ಲಿ ಚೈತನ್ಯ ತುಂಬುತ್ತಿದ್ದ ಅ.ನ.ಕೃ. ಭಾಷಣಗಳು ಮತ್ತು ಕನ್ನಡಪರ ಹೋರಾಟಗಳು. ಅನಕೃ ಸ್ವತಃ ಬೌದ್ಧಿಕರು. ಕನ್ನಡ, ಇಂಗ್ಲಿಷ್, ಸಂಸ್ಕೃತವನ್ನು ಅರಗಿಸಿಕೊಂಡಿದ್ದರು. ೧೧೨ ಕಾದಂಬರಿ ಬರೆದಿದ್ದರು. ನಾಟಕ, ಕಾವ್ಯದಲ್ಲೂ ಕೃಷಿ ಮಾಡಿದ್ದರು. ಇಂತಹ ಹಿನ್ನೆಲೆಯ ಅನಕೃ ಅವರು ಕನ್ನಡಪರ ಹೋರಾಟಕ್ಕೆ ಇಳಿಯಲು ಕಾರಣವಾಗಿದ್ದು ಕೋಟೆ ಹೈಸ್ಕೂಲ್‌ನಲ್ಲಿ ನಡೆಯುತ್ತಿದ್ದ ರಾಮನವಮಿ ಸಂಗೀತೋತ್ಸವ. ಅಲ್ಲಿ ಕನ್ನಡ ಕಲಾವಿದರರಿಗೆ ಮತ್ತು ನೆರೆಯ ರಾಜ್ಯಗಳ ಕಲಾವಿದರ ನಡುವೆ ತೋರಿಸುತ್ತಿದ್ದ ತಾರತಮ್ಯವೇ ಬೆಂಗಳೂರಿನಲ್ಲಿ ಕನ್ನಡಪರ ಚಳವಳಿಯ ಕಿಡಿ ಹೊತ್ತಿಕೊಳ್ಳಲು ನಾಂದಿಯಾಯಿತು. ಆಗ ರಾಮಸೇವಾ ಸಮಿತಿಯ ಅಧ್ಯಕ್ಷರಾಗಿದ್ದವರು ಬೇರೆ ಯಾರೂ ಅಲ್ಲ, ಅನಕೃ ಅವರ ಅಣ್ಣ ಅ.ನ. ರಾಮರಾಯರು. ಭಾಷೆಗಾಗಿ ಸಹೋದರನ ವಿರುದ್ಧವೇ ಸೆಟೆದು ನಿಂತಿದ್ದು, ಆ ಮೂಲಕ ನಾಡಿನಲ್ಲಿ ಹೋರಾಟಕ್ಕೆ ಕಿಡಿ ಹಚ್ಚಿದ್ದು ಇತಿಹಾಸ.

‘ಇಟ್ಟ ಹೆಜ್ಜೆ ಪಟ್ಟ ಶ್ರಮ’ ಕೃತಿಯಲ್ಲಿ ಕನ್ನಡ ಚಳವಳಿಯ ಮೊದಲ ಹೋರಾಟವನ್ನು ಈ ರೀತಿ ದಾಖಲಿಸಲಾಗಿದೆ- ‘೨೭-೪-೧೯೬೨’ ಕನ್ನಡ ಚಳವಳಿಯ ಇತಿಹಾಸದಲ್ಲಿ ಸುವರ್ಣಾ ಕ್ಷರಗಳಲ್ಲಿ ಬರೆಯಬೇಕಾದ ದಿನ. ರಾಮಸೇವಾ ಮಂಡಳಿಯಲ್ಲಿ ಸಂಗೀತ ಸಾಮ್ರಾಜ್ಞಿ ಗಾನವಿಶಾರದೆ ಎಂ.ಎಸ್.ಸುಬ್ಬಲಕ್ಷ್ಮಿ ಸಂಗೀತ ನಡೆಯುತ್ತಿದ್ದರೆ, ನಗರದ ಚಿಕ್ಕಲಾಲ್‌ಬಾಗ್‌ನಿಂದ ಹಲವಾರು ಕನ್ನಡ ಸಂಘಗಳ ಪ್ರತಿನಿಧಿಗಳು, ಕನ್ನಡ ಪ್ರೇಮಿಗಳು ನೂರಾರು ಸಂಖ್ಯೆಯಲ್ಲಿ ಹತ್ತಾರು ಭಿತ್ತಿ ಪತ್ರಗಳೊಂದಿಗೆ, ಕನ್ನಡಪರ ಘೋಷಣೆಗಳನ್ನು ಕೂಗುತ್ತಾ ಶಾಂತಿಯುತವಾಗಿ, ಶಿಸ್ತಿನಿಂದ ಮೆರವಣಿಗೆಯಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಸಾಗಿ ಬಂದರು.

ಇದರಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. ಮೆರವಣಿಗೆ ಸಿಟಿ ಇನ್ಸ್‌ಟಿಟ್ಯೂಟ್ ಬಳಿ ಬಂದಾಗ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಪೊಲೀಸರು ಕೆಲವು ಕಾರ್ಯ ಕರ್ತರನ್ನು ಥಳಿಸಿದರು. ಕೆಲವರ ಬಂಧನವೂ ಆಯಿತು. ಆದ್ಯ ರಾಮಾಚಾರ್, ಮೈ.ಸ.ಶೇಷಗಿರಿರಾವ್, ಯು.ಸಿ.ರಾಮದಾಸ್ ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಕನ್ನಡ ಚಳವಳಿ ಇತಿಹಾಸದಲ್ಲಿ ಮೊಟ್ಟ ಮೊದಲ ಅಹಿತಕರ ಘಟನೆ ಇದಾಗಿ ದಾಖಲಾಯಿತು. ಈ ಪ್ರಕರಣ ಬಿ.ಬಿ.ಸಿ.ಯಲ್ಲೂ ವರದಿಯಾಗಿತ್ತು. ಯಥಾ ಪ್ರಕಾರ ತಮಿಳು ಪತ್ರಿಕೆಗಳು ಘಟನೆಯನ್ನು ತಿರುಚಿ ಬರೆದಿದ್ದವು.

ಅತ್ತ ತಮಿಳುನಾಡಿನಲ್ಲಿ ತಮಿಳರು ಕನ್ನಡಿಗರು ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಕನ್ನಡಿಗರನ್ನು ತಮಿಳುನಾಡಿನಿಂದ ಓಡಿಸಲಾಗುವುದು ಎಂಬ ಬೆದರಿಕೆ ಹಾಕಿದ್ದರು. ಅನಕೃ ಹೋರಾಟ ಮುಖ್ಯವಾಗಿ ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸಿತ್ತಲ್ಲದೆ, ಕನ್ನಡ ಚಲನಚಿತ್ರಗಳ ಉಳಿವಿಗೆ ಕಾರಣವಾಯ್ತು ಎಂದು ಯಗಟಿ ಶಿವಸ್ವಾಮಿ ನೆನಪಿಸಿಕೊಳ್ಳುತ್ತಾರೆ. ೧೯೭೧ರಲ್ಲಿ ಅನಕೃ ಇಹಲೋಕ ತ್ಯಜಿಸಿದಾಗ ಇಡೀ ಬೆಂಗಳೂರೇ ಕಂಬನಿ ಮಿಡಿದಿತ್ತು. ಇತ್ತೀಚೆಗೆ ರಾಜಕುಮಾರ್ ನಿಧನರಾದಾಗ ಯಾವ ಪರಿಯಲ್ಲಿ ಜನ ಸೇರಿದ್ದರೋ ಅದೇ ರೀತಿ ಅನಕೃ ಅವರ ವಿಶ್ವೇಶ್ವರಪುರದ ಮನೆಗೆ ಜನ ಪ್ರವಾಹವೇ ಹರಿದು ಬಂದಿತ್ತು ಎನ್ನುತ್ತಾರೆ ಅವರು.

ಅನಕೃ ಜನ್ಮ ಶತಮಾನೋತ್ಸವ ಮತ್ತು ಬೆಂಗಳೂರಿನಲ್ಲಿ ಕನ್ನಡ ಚಳವಳಿಗೆ ೪೫ ತುಂಬುತ್ತಿರುವ ಹಿನ್ನೆಲೆಯಲ್ಲಿ ನಗರದ ‘ಕನ್ನಡ ಜನಶಕ್ತಿ’ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ‘ಮುಖ್ಯವಾಗಿ ಅನಕೃ ಬಗ್ಗೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸಲು ವಿಚಾರಗೋಷ್ಠಿ, ಚರ್ಚೆ ಹಮ್ಮಿಕೊಳ್ಳಲಿದ್ದೇವೆ. ಅವರ ಜತೆ ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಂಡು ಈಗ ಸಂಕಷ್ಟದಲ್ಲಿರುವ ಹಿರಿಯರಿಗೆ ಔಷಧೋಪಚಾರ ಮತ್ತು ಹಣಕಾಸಿನ ನೆರವು ನೀಡುತ್ತೇವೆ’ ಎಂದು ಕನ್ನಡ ಜನಶಕ್ತಿಯ ಸಿ.ಕೆ.ರಾಮೇಗೌಡ ತಿಳಿಸಿದ್ದಾರೆ. ಇದಕ್ಕೆ ಮುನ್ನುಡಿಯಾಗಿ ಮೇ ೧೪ರ ಭಾನುವಾರ ಅನಕೃ ಹುಟ್ಟುಹಬ್ಬದ ಮೂಲಕ ನಿರಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಂದು ‘ಸಾಹಿತ್ಯದಲ್ಲಿ ಪ್ರಗತಿಶೀಲತೆ- ಅನಕೃ ದೃಷ್ಟಿ’ ಹಾಗೂ ‘ಕನ್ನಡ ಕುರಿತ ಅನಕೃ ಹೋರಾಟಗಳು- ಇಂದಿನ ಪ್ರಸ್ತುತತೆ’ ಉಪನ್ಯಾಸ ನಡೆಯಲಿದೆ.

-ಎಸ್. ರವಿಪ್ರಕಾಶ್,
ಮೇ ೧೧, ೨೦೦೬, ಕನ್ನಡಪ್ರಭ