ಕನ್ನಡದ ಹೋರಾಟ


ಅನಕೃ ಕನ್ನಡಕ್ಕಾಗಿ ಹೋರಾಡಿದರು. ಗಡಿನಾಡಿನಲ್ಲಿ ಕನ್ನಡ ಪ್ರಚಾರ ಮಾಡಿದರು. ಮುಂಬಯಿ, ಮದ್ರಾಸುಗಳಲ್ಲಿ ಕನ್ನಡದ ಹಿರಿಮೆಯನ್ನು ಪರಭಾಷೆಯವರಿಗೆ ತಿಳಿಸಿಕೊಟ್ಟರು. ಬಸವ ಜಯಂತಿಯಲ್ಲಿ ಪ್ರಮುಖ ಭಾಷಣಕಾರರಾಗಿ ಹೋದರು. ಪುಣೆಯಲ್ಲಿ ಕ್ರಿಶ್ಚಿಯನ್ ಸಭೆಯಲ್ಲಿ ಭಾಷಣ ಮಾಡಿದರು. ರಜಾಕಾರ ಮುಖಂಡನೊಡನೆ ಇಸ್ಲಾಂ ಮತ ಚರ್ಚಿಸಿದರು. ಹೀಗೆ ಅವರ ಜೀವನ ಬಹುಮುಖವಾಗಿದೆ, ಸ್ಫೂರ್ತಿಪ್ರದವಾಗಿದೆ.

೧೯೬೨ ರ ಪ್ರಾರಂಭದಲ್ಲಿಯೇ ಕನ್ನಡ ಚಳುವಳಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ತಾರೀಖು ೪-೨-೧೯೬೨ ರಂದು ಬೆಂಗಳೂರಿನ ಕನ್ನಡಿಗರು ಸಂಘಟಿತರಾಗಿ ನಗರ ಕನ್ನಡಿಗರ ಸಮ್ಮೇಳನವನ್ನು ಸೇರಿಸಿ ತಮ್ಮ ಹಕ್ಕು-ಭಾಧ್ಯತೆಗಳನ್ನು ಸ್ಥಾಪಿಸಿ, ಅದರ ವ್ಯಾಪ್ತಿಯನ್ನು ಕರ್ನಾಟಕಕ್ಕೆ ವಿಸ್ತರಿಸಬೇಕೆಂದು ಕರ್ನಾಟಕ"ಸಂಯುಕ್ತರಂಗ"ವನ್ನು ತಾರೀಖು ೧೩-೫-೧೯೬೨ ರಲ್ಲಿ ಸ್ಥಾಪಿಸಿದರು. ಇದರ ಕಾರ್ಯಕ್ರಮಗಳಲ್ಲಿ ಈ ಕೆಳಗಿನವು ಮುಖ್ಯವಾಗಿದ್ದವು.

೧)ಈ ರಾಜ್ಯಕ್ಕೆ ಕರ್ನಾಟಕವೆಂದು ಘೋಷಿಸಬೇಕು.
೨)ರಾಜ್ಯದ ಭಾಷೆ ಕನ್ನಡವೆಂದು ಘೋಷಿಸಬೇಕು; ಶಿಕ್ಷಣದ ಮಾಧ್ಯಮ, ಆಡಳಿತ ಮತ್ತು ನ್ಯಾಯಾಲಯದ ಭಾಷೆ ಕನ್ನಡವಾಗಿರಬೇಕು.
೩)ರಾಜ್ಯದಲ್ಲಿ ಸ್ಥಾಪಿತವಾಗಿರುವ ಕೇಂದ್ರ ಸರಕಾರದ ಕಾರಖಾನೆಗಳಲ್ಲಿ ಕನ್ನಡಿಗರಿಗೇ ಪ್ರಾಶಸ್ತ್ಯವಿರಬೇಕು.
೪)ಕರ್ನಾಟಕದ ನಾಲ್ಕು ಮುಖ್ಯ ಕೇಂದ್ರಗಳಲ್ಲಿ ಸ್ಟುಡಿಯೋ ನಿರ್ಮಾಣವಾಗಬೇಕು.
೫)ಈ ನಾಡಿನಲ್ಲಿನ ನಾಮಫಲಕಗಳು ಕನ್ನಡದಲ್ಲಿರಬೇಕು.
೬)ಕನ್ನಡ ನಾಡಿನ ಎಲ್ಲ ಸಿನೇಮಾ ಮಂದಿರಗಳಲ್ಲಿಯೂ ಕಡ್ಡಾಯವಾಗಿ ವರ್ಷಕ್ಕೆ ಮೂರು ತಿಂಗಳು ಕನ್ನಡ ಚಿತ್ರ ಪ್ರದರ್ಶನವಾಗಲೇಬೇಕು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಮಾರೀಕಣಿವೆಯ ಯೋಜನೆಯಲ್ಲಿ ಕೆಲಸ ಮಾಡಲು ಬಂದ ತಮಿಳರು ಬಲಿಷ್ಠರಾಗಿ ರಾಜಬೀದಿಯಲ್ಲಿ ೫೦ ಅಡಿ ಎತ್ತರದ ಕಂಬದ ಮೇಲೆ ಡಿ.ಎಂ.ಕೆ ಧ್ವಜ ಹಾರಿಸತೊಡಗಿದರು. ಕನ್ನಡಿಗರಿಗೆ ತೀರ ಅಪಮಾನಕರವಾದ ಈ ಪರಿಸ್ಥಿತಿ ಸುಧಾರಿಸಲು ಮ. ರಾಮಮೂರ್ತಿ, ಭಾರತೀಚಂದ್ರ ಸ್ವಾಮಿಗಳು, ನಾಡಿಗೇರ ಕೃಷ್ಣರಾವ್ ಅವರ ನೇತೃತ್ವದಲ್ಲಿ ಹಿರಿಯೂರಿಗೆ ಕನ್ನಡದಳ ಧಾವಿಸಿ ಡಿ.ಎಂ.ಕೆ. ಧ್ವಜ ಕೆಳಗಿಳಿಸಿ ಬಂದರು. ಡಿ.ಎಂ.ಕೆ ಪಕ್ಷದವರು ಗಲುಭೆ ಮಾಡಿದರೂ ಪೋಲೀಸರ ದಕ್ಷತೆಯಿಂದ ಸಭೆ ವಿಕೋಪಕ್ಕೆ ಹೋಗಲಿಲ್ಲ.


ಪ್ರಗತಿಶೀಲ ಸಾಹಿತ್ಯ ಚಳುವಳಿ

ಪ್ರಗತಿಶೀಲ ಚಳುವಳಿಗೆ ನಿಶ್ಚಿತ, ಶಾಶ್ವತ ರೂಪ ಕೊಡಲು - ಜನತೆಯ ಚಳುವಳಿಯನ್ನಾಗಿ ಮಾಡಲು ಅ.ನ.ಕೃ., ದ.ಕೃ. ಭಾರದ್ವಾಜ, ನಾಡಿಗೇರ, ತ.ರಾ.ಸು., ಅರ್ಚಿಕ ವೆಂಕಟೇಶ ಎಲ್ಲರೂ ಸೇರಿ ೧೯೪೪ ರಲ್ಲಿ ಪ್ರಗತಿಶೀಲ ಲೇಖಕರ ಸಂಘವನ್ನು ಸ್ಥಾಪಿಸಿದರು.

ತಮ್ಮದೇ ಆದ ಒಂದು ಕೃತಕ ಸಾಮ್ರಾಜ್ಯವನ್ನು ಸ್ಥಾಪಿಸಿ, ಹತ್ತು ಜನ ವಂದಿಮಾಗಧರನ್ನು ಕೂಡಿಸಿಕೊಂಡು ಸಾಮಾನ್ಯ ಜನತೆಯ ಅಜ್ಞಾನಾಂಧಕಾರವನ್ನೇ ತಮ್ಮ ಬಂಡವಾಳ ಮಾಡಿಕೊಂಡು ಮಠದ ಹೆಗ್ಗಣಗಳಂತೆ ಬೆಳೆದ ಸಾಹಿತಿಗಳನ್ನು ಮಾನ್ಯ ಮಾಡುವ ಕಾಲ ಹೋಯಿತು. ಸಾಹಿತಿಯ ಧ್ಯೇಯ ಆತ್ಮೋಲ್ಲಾಸನಾಪರತೆಯಲ್ಲ, ಸ್ವಪ್ರತಿಷ್ಠಾಪ್ರಸಾರವೂ ಅಲ್ಲ. ಅವನು ದೇಶಗಳನ್ನು ಕಟ್ಟುವ ಶಿಲ್ಪಿಗಳಲ್ಲಿ ಒಬ್ಬ. ಅವನ ಮಹಾಯುಧ ಲೇಖನಿ. ದೈವದತ್ತವಾದ ಈ ವರವನ್ನು ಅವನು ತನ್ನ ಲಾಲಸೆಗಾಗಿ ಉಪಯೋಗಿಸಿಕೊಳ್ಳಬೇಕೇ ಅಥವಾ ಮಾನವ ಕಲ್ಯಾಣಕ್ಕೆ ಮೀಸಲು ಮಾಡಬೇಕೆ ? ಎಂಬುದು ಪ್ರಗತಿಶೀಲರ ಮುಂದಿದ್ದ ಸಮಸ್ಯೆಯಾಗಿತ್ತು. ಪ್ರಗತಿಶೀಲ ಸಾಹಿತ್ಯದ ಪ್ರಕಟಣೆಗಾಗಿ ಧಾರವಾಡದ ಕರ್ನಾಟಕ ಸಾಹಿತ್ಯ ಮಂದಿರದ ಟಿ.ಡಿ.ಶಿವಲಿಂಗಯ್ಯ ತುಂಬ ಸಹಾಯ ಮಾಡಿದರು.

ಪ್ರಗತಿಶೀಲ ಲೇಖಕರ ಚಳುವಳಿಯ ಬಗ್ಗೆ ಜನರ ಲಕ್ಷ್ಯ ಆಕರ್ಷಣೆಯಗುತ್ತಾ ಹೋದಂತೆ ವಿರೋಧವೂ ಹೆಚ್ಚಿತು. ಆ ಸಂದರ್ಭದಲ್ಲಿ ಶ್ರೀ ನಿಟ್ಟೂರ ಶ್ರೀನಿವಾಸರಾಯರು ಪ್ರಗತಿಶೀಲರ ಮತ್ತು ಸಂಪ್ರದಾಯವಾದಿಗಳ ವಾಕ್ಯಾರ್ಥವನ್ನು ಏರ್‍ಪಡಿಸಲು ಏರ್ಪಾಟು ಮಾಡಿದರು. ಶ್ರೀ ಡಿ.ವಿ.ಜಿ ಅಂದಿನ ಅಧ್ಯಕ್ಷರು. ಪ್ರಗತಿಶೀಲರ ಪರವಾಗಿ ಶ್ರೀ ಅ.ನ.ಕೃ, ಶ್ರೀ ದ.ಕೃ. ಭಾರದ್ವಾಜ, ಶ್ರೀ ತೀ.ತಾ. ಶರ್ಮ, ಶ್ರೀ ತ.ರಾ.ಸು ಅವರೂ, ಅದನ್ನು ಖಂಡಿಸಿ ಶ್ರೀ ವಿ.ಸೀ, ಶ್ರೀ ಮಾಸ್ತಿ, ಸ್ರೀ ಸಿ.ಕೆ.ವೆಂಕಟರಾಮಯ್ಯ ಅವರೂ ಮಾತನಾಡಿದರು. ವಾದವಿವಾದ ಮೇಲ್ಮಟ್ಟದಲ್ಲಿ ನಡೆದಿತ್ತು. ಕೊನೆಗೆ ಅಧ್ಯಕ್ಷರು ಪ್ರಗತಿಶೀಲ ಸಾಹಿತ್ಯವನ್ನು ಎತ್ತಿ ಹಿಡಿದು, "ಸಾಹಿತ್ಯವು ಅರಮನೆ ಗುರುಮನೆಗಳಲ್ಲೇ ಅಡಕವಾಗದೆ ಜನಸಾಮಾನ್ಯರ ಮನೆಗೂ ಹೋಗಬೇಕೆಂದು" ಹೇಳಿದರು. ಹೀಗೆ ಅ.ನ.ಕೃ ಪ್ರಗತಿಶೀಲ ಸಾಹಿತ್ಯದ ಮುನ್ನಡೆಗಾಗಿ ಪ್ರೇರಕಶಕ್ತಿಯಾಗಿ ದುಡಿದರು.


ನಿರ್ಭೀತ ಕನ್ನಡಿಗ

ಮಹಾರಾಷ್ಟ್ರ ಸಾಹಿತ್ಯ ಸಂಘಕ್ಕೆ ಮಾಮಾ ವರೇರಕರ ಅಧ್ಯಕ್ಷರು, ಅನಂತ ಕಾಣೇಕರ ಕಾರ್ಯದರ್ಶಿ. ವರೇರಕರ ಮತ್ತು ಅ.ನ.ಕೃ ಸ್ನೇಹಿತರಾದುದರಿಂದ ಅ.ನ.ಕೃ ಬಾಯಿಂದ ಕನ್ನಡ ಭಾಷೆಯ ಹಿರಿಮೆಯನ್ನು ತಮ್ಮ ಜನಕ್ಕೆ ಹೇಳಿಸಬೇಕೆಂದು ಮಾಮಾ ಉತ್ಸುಕರಾಗಿದ್ದರು. ಭಾಷಣಕ್ಕೆ ಹೋಗುವ ಮುನ್ನ ಕೆಲ ಕನ್ನಡ ಪ್ರಮುಖರು ಅ.ನ.ಕೃ ಅವರಿಗೆ "ನಿಮ್ಮನ್ನು ಅವಮಾನ ಮಾಡಲೆಂದೇ ಕರೆದಿರುತ್ತಾರೆ" ಎಂದು ಎಚ್ಚರಿಸಿದರು. ಎಚ್ಚರಿಸಿದವರು ಹಾಗೆಯೇ ಕೂಡ್ರಲಿಲ್ಲ; ತಮ್ಮ ಸ್ವಯಂಸೇವಕರನ್ನು ಕೂಡಿಸಿ ಸಭಾಸ್ಥಾನದ ಸುತ್ತ ಮುತ್ತ ತುಂಬಿಕೊಂಡರು.

ಅ.ನ.ಕೃ. ಭಾಷಣ ಪ್ರಾರಂಭವಾಯಿತು. ಅರ್ಧ ತಾಸಿನವರೆಗೂ "ಕನ್ನಡ ಸಾಹಿತ್ಯ ಭಾರತೀಯ ಸಾಹಿತ್ಯದ ಒಂದು ಅಂಗ" ಎಂದು ಪ್ರಾರಂಭಿಸಿ, ಕನ್ನಡ ಸಾಹಿತ್ಯದ ಮೇಲೆ ಪ್ರಾಚೀನ ಸಂಸ್ಕೃತ ಕವಿಗಳು ಬೀರಿದ ಪ್ರಭಾವವನ್ನು ವರ್ಣಿಸಿದರು. ಆಗ ಜನ ಸಮಾಧಾನದಿಂದ ಕೇಳುತ್ತಿದ್ದರು.

ಅವರು ಮುಂದುವರಿದು, ಹನ್ನೆರಡನೆಯ ಶತಮಾನದ ಕನ್ನಡ ಸಾಹಿತ್ಯರಚನೆಯ ಬಗ್ಗೆ ಭಾಷಣ ಮಾಡುತ್ತಾ ಶರಣ ಸಾಹಿತ್ಯ, ದಾಸ ಸಾಹಿತ್ಯಗಳು ತುಕಾರಾಮ, ನಾಮದೇವ, ಜ್ಞಾನದೇವರ ಮೇಲೆ ಪ್ರಭಾವ ಬೀರಿವೆಯೆಂಬುದನ್ನು ವಿವರಿಸಿದಾಗ ಸಭೆಯ ಒಂದು ಬದಿಯಲ್ಲಿ ಗುಸುಗುಸು ಪ್ರಾರಂಭವಾಯಿತು. ಮರಾಠಿಯ “ಸಂಗೀತ ಸುಭದ್ರ ನಾಟಕ” ಕನ್ನಡ ನಾಟಕವೊಂದರ ಅನುವಾದ ಎಂದಾಗ ಮರಾಠಿಗರು ರೊಚ್ಚಿಗೆದ್ದರು. ಅವರ ಗತಿ ಏನಾಗುತ್ತಿತ್ತೋ ಏನೋ? ಮುಂಬಯಿಯ ೮೦೦ ಜನ ಮೊಗವೀರರು ಲಾಠಿ ಹಿಡಿದು ಬಂದು ಪಾರುಮಾಡಿದರು.


ಗಡಿನಾಡಿನಲ್ಲಿ ಅ.ನ.ಕೃ

೧೯೪೫ ರ ಮಾತು, ರಬಕವಿಯ ಸಾಬೋಜಿ ಗುಣ ಅಂಗಡಿ ಬಾಪುರೆ ಅವರ ಆಮಂತ್ರಣದ ಮೇರೆಗೆ ಅ.ನ.ಕೃ. ರಬಕವಿಗೆ ಹೋದರು. ಚಿಕ್ಕೋಡಿ ರಾಮಪ್ಪಣ್ಣ ಮೊದಲುಗೊಂಡು ಒಂದು ಬಸ್ ತುಂಬ ಕನ್ನಡದ ಕಾರ್ಯಕರ್ತರು ಅಲ್ಲಿಂದ ಜಮಖಂಡಿಗೆ ಹೊರಟರು. ಅವರ ಬೆಂಗಾವಲಿಗೋ ಎಂಬಂತೆ ಬೈಸಿಕಲ್ ಮೇಲೆ ಒಂದು ನೂರಾಐವತ್ತು ಸ್ವಯಂಸೇವಕರು.

ಆ ಕಾಲಕ್ಕೆ ಕನ್ನಡ-ಮರಾಠಿ ವಾದ ಜಮಖಂಡಿಯಲ್ಲಿ ಅತ್ಯುಗ್ರವಾಗಿತ್ತು. ಸಾಬಡೆ ವಕೀಲರು ರಾಷ್ಟ್ರೀಯತೆಯ ಹೆಸರಿನಿಂದ ಕನ್ನಡ ತುಳಿಯಲು ಯತ್ನಿಸುತ್ತಿದ್ದರು. ಬಿ.ಡಿ ಜತ್ತಿ ವಕೀಲರಾಗಿ ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದರು.

ಜಮಖಂಡಿಯಲ್ಲಿ ಮಾರ್ಕೆಟ್‌ಮಾಳದಲ್ಲಿ ಸಭೆ ಸೇರಿತು. ವಿರೋಧಿಗಳು ಸಜ್ಜಾಗಿ ಬಂದಿದ್ದರು. ಗೂಂಡಾಗಿರಿ ಆಗುವ ಸಂಭವ ಇಲ್ಲದೇ ಇರಲಿಲ್ಲ. ಅ.ನ.ಕೃ ಭಾಷಣವನ್ನು ಪ್ರಾರಂಭಿಸಿ"ಐದು ನಿಮಿಷ ನನ್ನ ಮಾತು ಕೇಳಿ; ಆ ಮೇಲೆ ನೀವು ಮನ ಬಂದಂತೆ ಮಾಡಬಹುದು"ಎಂದು ಹೇಳಿ ಕನ್ನಡ ನಾಡು, ಅದರ ಗಡಿಗಳ ಸಮಸ್ಯೆಯನ್ನು ವಿಮರ್ಶಿಸಿ ಉತ್ತರ ಕರ್ನಾಟಕದ ಸಂಸ್ಥಾನಗಳು ಯಾರಿಗೆ ಸೇರಬೇಕೆಂಬುದನ್ನು ಚರ್ಚಿಸಿದರು. ಸುಮಾರು ೩ ಗಂಟೆಗಳ ಕಾಲ ನಡೆದ ಭಾಷಣಕ್ಕೆ ಯರೂ ವಿರೋಧ ಮಾಡಲಿಲ್ಲ.

ಮುಧೋಳದಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು. ಅದಕ್ಕೆ ಅ.ನ.ಕೃ. ಅಧ್ಯಕ್ಷ. ಮೃತ್ಯುಂಜಯ ಸ್ವಾಮಿಗಳು ಸ್ವಾಗತಾಧ್ಯಕ್ಷರು. ಧ್ವಜವಂದನೆಯಾದ ನಂತರ ಊರಿನಲ್ಲಿ ಅಧ್ಯಕ್ಷ, ಸ್ವಾಗತಾಧ್ಯಕ್ಷರ ಮೆರವಣಿಗೆ ಹೊರಟಿತು. ಊರಿನಲ್ಲಿ ನಾಲ್ಕು ಬೀದಿಗಳೂ ಸೇರುವ ಚೌಕಕ್ಕೆ ಮೆರವಣಿಗೆ ನಿಂತಾಗ, ಜಮಖಂಡಿಯ ವಿರೋಧಿಗಳ ನಾಯಕ ಮಸೂರಕರ ವಕೀಲರು ಮೆರವಣಿಗೆಯನ್ನು ಹಿಂತೆಗೆದುಕೊಂಡು ಹೋಗಬೇಕೆಂದೂ ಕನ್ನಡ ಧ್ವಜ ಕೆಳಗೆ ಇಳಿಸಬೇಕೆಂದೂ ಬರೆದ ಒಂದು ಪತ್ರವನ್ನು ಸ್ವಾಗತಾಧ್ಯಕ್ಷರಿಗೆ ಕೊಟ್ಟಿದ್ದರು. ಸ್ವಾಮಿಗಳು ಆ ಪತ್ರ ಓದುತ್ತಿದ್ದಂತೆಯೇ, ರಥಕ್ಕೆ ಹೂಡಿದ್ದ ದೊಡ್ಡ ಬಸವ ವಕೀಲರನ್ನು ಝಾಡಿಸಿ ಒದೆದುದರಿಂದ ಅವರು ಬಹಳ ದೂರದಲ್ಲಿ ಬಿದ್ದರು. ಮುಂದೆ ಸಭೆಯು ಯಥಾಸಂಗವಾಗಿ ನಡೆಯಿತು. ಮುಧೋಳ, ಜಮಖಂಡಿ, ಆದವಾನಿಗಳಲ್ಲಿ ಇದ್ದ ಮರಾಠಿ, ತೆಲುಗು ಜನ ಕನ್ನಡದ ಮುಖಕ್ಕೆ ಪ್ರಾಂತೀಯತೆಯ ಮಸಿ ಬಳೆದು ರಾಷ್ಟ್ರೀಯತೆಯ ನೆಪದಲ್ಲಿ ಮರಾಠಿ, ತೆಲುಗು ಭಾಷೆಗಳನ್ನು ಮುಂದಕ್ಕೆ ಒತ್ತುತ್ತಿದ್ದರು. ಅ.ನ.ಕೃ. ಆ ಎಲ್ಲ ಭಾಗಗಳಲ್ಲಿಯೂ ಸಂಚರಿಸಿ ಬಂದರು.

-ಮ.ಗ. ಶೆಟ್ಟಿ
ರಸಚೇತನ