ಜಿ. ವೆಂಕಟೇಶ್ ಅವರ ದಾಸ ಸಾಹಿತ್ಯ ಕೋಶ

 

ಪೀಠಿಕೆ

ಈ ಕೋಶದ ಸಂಗ್ರಾಹಕನಾಗಿ ನಾನು ಇದರ ಹಿನ್ನೆಲೆಯಾಗಿ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರುವುದು ನನ್ನ ಕರ್ತವ್ಯವೆಂದು ಭಾವಿಸಿ, ಈ ಪೀಠಿಕೆಯನ್ನು ಬರೆದಿದ್ದೇನೆ.

ವೈಯಕ್ತಿಕವಾಗಿ ಹೇಳಬೇಕೆಂದರೆ, ಪ್ರಾರಂಭದಿಂದಲೂ ಇಂಗ್ಲೀಷ್ ಮೀಡಿಯಂನಲ್ಲಿ ಓದಿ, ವ್ಯಾಪಾರ ಹಾಗು ವ್ಯವಹಾರದಲ್ಲೂ ಇಂಗ್ಲೀಷ್ ಉಪಯೋಗಿಸುತ್ತಿದ್ದ ನನಗೂ, ಕನ್ನಡ ಬಾಷೆ-ಸಾಹಿತ್ಯಗಳಿಗೂ ಬಹುದೂರವಾಗಿತ್ತು.

ಆದರೆ, ಸಂಗೀತದಲ್ಲಿ ಆಸಕ್ತಿ ಇದ್ದ ನಾನು, ಕ್ರಮಬದ್ಧವಾಗಿ ಸಂಗೀತ ಕಲಿಯುವ ಆಸೆಯಿಂದ ಗುರುಗಳನ್ನು ಆಶ್ರಯಿಸಿದೆ. ದಿವಂಗತ ವಿದ್ವಾನ್ ಟಿ. ಚೌಡಯ್ಯನವರ ಶಿಷ್ಯರಾದ ವಿದ್ವಾನ್ ಎನ್.ಎಲ್.ಚೆಲುವರಾಜ್ ಅವರೇ ನನ್ನ ಪ್ರಥಮ ಗುರುಗಳು. ಅವರು ನನಗೆ ಹಾಡುಗಾರಿಕೆಯನ್ನು ಪ್ರಾರಂಭಿಕ ಪಾಠಗಳಿಂದ ಶಾಸ್ತ್ರೀಯವಾಗಿ ಕಲಿಸಿದರು. ನಂತರ ಆಕಾಶವಾಣಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದ ದಿವಂಗತ ವಿದ್ವಾನ್ ಹೆಚ್.ಕೆ.ನಾರಾಯಣ ಅವರಿಂದ ದೇವರನಾಮಗಳು ಹಾಗೂ ಲಘು ಸಂಗೀತವನ್ನು ಕಲಿತೆ. ಇವರುಗಳಿಗೆ ನನ್ನ ನಮಸ್ಕಾರಪೂರ್ವಕವಾದ ಕೃತಜ್ಞತೆಗಳು.

ಸಂಗೀತದಲ್ಲೂ ನನ್ನ ಪ್ರಧಾನ ಆಸಕ್ತಿ ದೇವರನಾಮಗಳು. ಅದನ್ನು ಕಲಿಯುತ್ತಾ ಹೋದಂತೆ ಹರಿದಾಸ ಸಾಹಿತ್ಯಕ್ಕೆ ಪ್ರವೇಶ ದೊರೆತು ಹರಿದಾಸರ ಬಗ್ಗೆ, ಅವರ ದೇವರ ನಾಮಗಳ ರಚನೆಯ ಹಿನ್ನೆಲೆ, ಅಂತರಾರ್ಥ ಮುಂತಾದ ಹೆಚ್ಚಿನ ವಿಷಯಗಳಲ್ಲಿ ಆಸಕ್ತಿ ಉಂಟಾಯಿತು.

ಶ್ರುತಿ, ಸ್ಮೃತಿ, ಪುರಾಣೇತಿಹಾಸಗಳಲ್ಲಿ ಸಂಪೂರ್ಣ ನಂಬಿಕೆಇಟ್ಟು ‘ಸಾಲಮಾಡಲಿಬ್ಯಾಡ, ಸಾಲದೆನ್ನಲಿಬ್ಯಾಡ, ನಾಳಿಗೆ ಹ್ಯಾಂಗೆಂಬೊ ಚಿಂತೆಬ್ಯಾಡಯೆಂದೊಪ್ಪಿಕೊಂಡು, ಹರಿದಿನ ವ್ರತಾಚರಣೆಗಳನ್ನು ಬಿಡುವುದಿಲ್ಲಎಂಬ ಪ್ರತಿಜ್ಞೆಮಾಡಿ, ‘ಹರಿನಿಂದಕರ ಕಣ್ಣೆತ್ತಿ ನೋಡಬ್ಯಾಡಎಂದು ಉಪದೇಶಿಸಿ, ಹರಿನಾಮಸ್ಮರಣೆಯಿಂದ ಪ್ರಾಪ್ತವಾದ ಪವಿತ್ರಾನ್ನವನ್ನೇ ಉಣಬೇಕು ಎಂದು ನಂಬಿ ಹರಿಸೇವೆಗಾಗಿ ತಮ್ಮ ಜೀವನವನ್ನು ಮೀಸಲಾಗಿರಿಸಿದ ಹರಿದಾಸರ ಜೀವನ ಶೈಲಿ ನನ್ನನ್ನು ಆಕರ್ಷಿಸಿತು.

ಹರಿದಾಸ ಸಾಹಿತ್ಯದಲ್ಲಿ ಅಧ್ಯಯನ ಮಾಡಲು ಮತ್ತು ಮಾಡ ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಹರಿದಾಸ ಸಾಹಿತ್ಯ ಸಂಶೋಧನ ಮಂದಿರವನ್ನು ಸ್ತಾಪಿಸಿ, ಅದರ ಆಶ್ರಯದಲ್ಲಿ ಗ್ರಂಥ ಭಂಡಾರವೊಂದನ್ನು ಬೆಳೆಸಲಾಯಿತು. ಇದೇ ಗ್ರಂಥ ಭಂಡಾರದ ಸಹಾಯದಿಂದ ಸಿದ್ಧವಾಗಿರುವುದು ಈ ಗ್ರಂಥ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೫೦ ಸಂಪುಟಗಳಲ್ಲಿ ಪ್ರಕಟವಾಗಿರುವ ಸಮಗ್ರ ದಾಸ ಸಾಹಿತ್ಯವೇ ನನಗೆ ಪ್ರೇರಣೆ ಮತ್ತು ಮಾದರಿ.

ಅಧ್ಯಯನ ಮುಂದುವರಿದಂತೆ, ಸ್ಟ್ಯಾಟಿಸ್ಟಿಕ್ಸ್ ವಿದ್ಯಾರ್ಥಿಯಾಗಿದ್ದ ನನಗೆ ಸಹಜವಾಗಿಯೇ ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಶಬ್ದ ಕೋಶವೊಂದರ ಅಗತ್ಯವಿದೆ ಎನ್ನಿಸಿ ಕಾರ್ಯ ಪ್ರಾರಂಭಿಸಿದಾಗ, ನನ್ನ ಸೌಭಾಗ್ಯದಿಂದ ದಾಸ ಸಾಹಿತ್ಯಕ್ಕೆ ಅಪಾರ ಸೇವೆಯನ್ನು ಸಲ್ಲಿಸಿರುವ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಸಂಶೋಧಕರಾಗಿ ನಿವೃತ್ತರಾದ ಶ್ರೀಮತಿ ಡಾ. ಟಿ.ಎನ್.ನಾಗರತ್ನ ಅವರ ಮಾರ್ಗದರ್ಶನದ ಭರವಸೆ ಸಿಕ್ಕಿತು. ಅವರ ಮಾರ್ಗದರ್ಶನದಂತೆ ನಿರ್ದಿಷ್ಟ ಕ್ರಮದಲ್ಲಿ ಕೆಲಸ ಪ್ರಾರಂಭಿಸಿದೆ.

ಸಹಾಯಕ ಸಾಹಿತ್ಯದಲ್ಲಿನ ಗ್ರಂಥಗಳಲ್ಲಿ ಸಿದ್ಧವಾಗಿದ್ದ ಕಠಿಣ ಶಬ್ದಾರ್ಥಗಳನ್ನು ಸಂಗ್ರಹಿಸುತ್ತಾ ಹೋದಂತೆ, ಸುಮಾರು ೧೫,೦೦೦ ಶಬ್ದಗಳ ಸಂಗ್ರಹಣೆಯಾಯಿತು.

ಅಧ್ಯಯನ ಮುಂದುವರಿದಂತೆ ಅನೇಕ ಸಂಸ್ಕೃತ ಪದಗಳು ಕಂಡು ಬಂದವು. ಲೋಕರೂಢಿಯಲ್ಲಿಲ್ಲದೆ ಕೇವಲ ಶಾಸ್ತ್ರವ್ಯವಹಾರದಲ್ಲಿರುವ ಪದಗಳನ್ನು ಪಾರಿಭಾಷಿಕ ಪದಗಳೆಂದು ಪರಿಗಣಿಸಿ ಪ್ರತ್ಯೇಕವಾದ ಪಟ್ಟಿ ಕೊಡಲಾಗಿದೆ.

ಪ್ರತ್ಯೇಕವಾದ ಶಬ್ದಕೋಶದ ಅಗತ್ಯ ಏನು ?

ಭಾಷೆಯ ದೃಷ್ಟಿಯಿಂದ ರಚಿತವಾಗಿರುವ ಶಬ್ದಕೋಶಗಳಲ್ಲಿ ದೊರೆಯದ ಹಾಗೂ ಹರಿದಾಸ ಸಾಹಿತ್ಯದ ಹಿನ್ನೆಲೆಯಲ್ಲಿ ವಿಶೇಷ ಅರ್ಥ ನೀಡುವ ಅನೇಕ ಶಬ್ದಗಳು ಗಮನಕ್ಕೆ ಬಂದವು. ಹರಿದಾಸರೇ ಅನೇಕ ಹೊಸ ಪದಗಳನ್ನು ಸೃಷ್ಟಿಸಿಕೊಂಡಿದ್ದಾರೆ; ಎರಡು ಅಥವಾ ಹೆಚ್ಚಿನ ಪದಗಳನ್ನು ಸೇರಿಸಿ ತಮ್ಮ ಅರ್ಥಕ್ಕೆ ಅನುಗುಣವಾದ, ಪ್ರಾಸ-ತಾಳಗಳಿಗೆ ಹೊಂದುವಂಥಹ ಸಂಯುಕ್ತ ಪದಗಳನ್ನು ರಚಿಸಿಕೊಂಡಿದ್ದಾರೆ. ಹಾಗಾಗಿ ದಾಸ ಸಾಹಿತ್ಯಾಭ್ಯಾಸಕ್ಕೆ ಅನುಕೂಲವಾಗುವ ಪ್ರತ್ಯೇಕ ಶಬ್ದಕೋಶವೊಂದರ ಅಗತ್ಯವಿದೆ ಎನ್ನಿಸಿತು. ಆ ಅನಿಸಿಕೆಯೇ ಈ ದಾಸ ಸಾಹಿತ್ಯ ಕೋಶ.

ಹರಿದಾಸ ಸಾಹಿತ್ಯದಲ್ಲಿ ದೊರೆಯುವ ಷಷ್ಠ್ಯಂತ ಪದಸಮುಚ್ಚಯಗಳನ್ನು ಹಾಗೇಯೇ ಉಳಿಸಿಕೊಳ್ಳಲಾಗಿದೆ. ಉದಾಹರಣೆಗೆ: ಕದಬಾಗಿರಿಸಿದಕಳ್ಳಮನೆ, ಕಂಗಳಯ್ಯ, ತಲೆಯಗಾಯ್ದನ, ತಳಪಟವಮಾಡು, ತ್ರಿಪುರವಹಾಸ್ಯಗೈಸಿದನಿಪುಣ.

ಅನ್ಯಾರ್ಥಪ್ರಧಾನವಾದ ಬಹುವ್ರೀಹಿ ಸಮಾಸದಂಥಹ ಪದಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

- ಜಿ. ವೆಂಕಟೇಶ್