ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು

 

ಮೊದಲ ಮಾತು

ಎರಡು ವರ್ಷಗಳ ಹಿಂದೆ ಒಂದು ದಿನ ನನ್ನನ್ನು ಕಂಡ ಶ್ರೀ ಪ್ರಾಣೇಶ ಸಿರಿವರ ಅವರು ಒಂದು ಸೂಚನೆಯನ್ನು ನೀಡಿದರು. ಇಂದಿನ ಭಾರತದಲ್ಲಿ ಭಾಷಾಸಂಬಂಧಗಳು ಹೆಚ್ಚು ವ್ಯಾಪಕವಾಗುತ್ತಿರುವುದನ್ನು ಗಮನಿಸಿ ವಿದ್ಯಾರ್ಥಿಗಳಿಗೂ ಲೇಖನ ವೃತ್ತಿಯಲ್ಲಿ ಆಸಕ್ತರಾಗಿರುವವರಿಗೂ ಅನುವಾದಕರಿಗೂ ಪ್ರಯೋಜನಕರವಾಗಿರುವ ಒಂದು ಇಂಗ್ಲಿಷ್-ಕನ್ನಡ ನಿಘಂಟನ್ನು ಸಿದ್ಧಪಡಿಸಬೇಕೆಂಬುದೇ ಆ ಸೂಚನೆ. ಇಂಥ ಕಾರ್ಯದ ಬಗ್ಗೆ ನಾನು ಚಿಂತಿಸುತ್ತಿರುವಾಗಲೇ ಬಂದ ಅವರ ಸೂಚನೆ ನನಗೆ ಅರಸುವ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ಆಯಿತು. ಅವರಾಡಿದ ಪ್ರೋತ್ಸಾಹದ ಮಾತುಗಳು ನನ್ನನ್ನು ಕಾರ್ಯಮುಖನನ್ನಾಗಿ ಮಾಡಿದುವು. ನನಗೆ ಭಾಷಾಪರಿಣತರ ಸಹಾಯ ಬೇಕಾದುದನ್ನು ತಿಳಿದು ಶ್ರೀ ಪ್ರಾಣೇಶ್ ಅವರು ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಆಳವಾಗಿ ಅಭ್ಯಾಸ ಮಾಡಿರುವ ಶ್ರೀಮತಿ ರಾಜ್ಯಶ್ರೀ ಸತೀಶ್ ಅವರ ಸಹಾಯವನ್ನು ಒದಗಿಸಿಕೊಟ್ಟರು.

ಎರಡು ವರ್ಷಗಳ ಕಾಲ ಶ್ರೀಮತಿ ರಾಜ್ಯಶ್ರೀ ಅವರೂ ನಾನೂ ದುಡಿದು ಸಿದ್ಧಪಡಿಸಿದ ಈ ನಿಘಂಟನ್ನು ಈಗ ಶ್ರೀ ಪ್ರಾಣೇಶ್ ಅವರು ಕನ್ನಡನಾಡಿನ ಓದುಗರಿಗೆ ದೊರಕುವಂತೆ ಅಂದವಾಗಿ ಪ್ರಕಟಿಸಿದ್ದಾರೆ.

ಈ ಶತಮಾನದ ಮೊದಲನೆಯ ವರ್ಷದಲ್ಲಿ ಪ್ರಕಟವಾಗುತ್ತಿರುವ ಈ ಇಂಗ್ಲಿಷ್-ಕನ್ನಡ ನಿಘಂಟು ಅನೇಕ ದೃಷ್ಟಿಗಳಿಂದ ಹೊಸ ಬಗೆಯ ನಿಘಂಟಾಗಿದೆ. ಕಳೆದ ಶತಮಾನದ ಕೊನೆಯ ಭಾಗದಲ್ಲಿ ರಚಿತವಾದ ಇಂಗ್ಲಿಷ್ ಭಾಷೆಯ ಸೃಷ್ಟಿಶೀಲ ಕೃತಿಗಳಲ್ಲಿಯೂ ಮತ್ತು ಪ್ರಭಾವ ಬೀರುವ ಮಾನವಿಕ ಶಾಸ್ತ್ರಗಳ ಚಿಂತನ ಕೃತಿಗಳಲ್ಲಿಯೂ ಭಾಷೆಯ ಶೈಲಿ ಮತ್ತು ಶಬ್ದ ಪ್ರಯೋಗಗಳು ಒಂದು ಹೊಸತನವನ್ನು ಪಡೆದುವು. ಅನೇಕ ಹೊಸ ಹೊಸ ಶಬ್ದಗಳು ನುಸುಳಿ ಬರವಣಿಗೆಯಲ್ಲಿ ನೂತನತೆ ಕಾಣಬಂತು. ಆದರೆ ಅದನ್ನು ಓದಿದ ಕನ್ನಡ ಓದುಗನಿಗೆ ಆ ಶಬ್ದಗಳಿಗೆ ಕನ್ನಡ ನಿಘಂಟುಗಳಲ್ಲಿ ಅರ್ಥ ದೊರಕದಾಯಿತು. ಇಂಥ ಇಂಗ್ಲಿಷ್ ಬರಹಗಳ ಓದನ್ನು ಸುಲಭಗೊಳಿಸಲು ಆಧುನಿಕವಾದ ಬೇರೊಂದು ಇಂಗ್ಲಿಷ್-ಕನ್ನಡ ನಿಘಂಟು ಬೇಕಾಯಿತು.

ಇದನ್ನು ಗಮನಿಸಿ ಇಂಗ್ಲಿಷಿನಲ್ಲಿ ಹೆಚ್ಚಾಗಿ ಪ್ರಯೋಗಗೊಳ್ಳುತ್ತಿದ್ದ ಅಪರಿಚಿತ ಶಬ್ದಗಳ ದೀರ್ಘಪಟ್ಟಿಯೊಂದನ್ನು ತಯಾರು ಮಾಡಿದ್ದಾಯಿತು. ಈಚೆಗೆ ಪ್ರಕಟವಾದ ಇಂಗ್ಲಿಷ್-ಇಂಗ್ಲಿಷ್ ನಿಘಂಟುಗಳನ್ನು ಪರಿಶೀಲಿಸಿ ಅವುಗಳಲ್ಲಿಯ ಶಬ್ದಗಳನ್ನೂ ಒಂದು ಮಿತಿಯಲ್ಲಿ ಜೋಡಿಸಲಾಯಿತು. ಹೊಸ ಇಂಗ್ಲಿಷ್ ನಿಘಂಟುಗಳಲ್ಲಿ ಭಾರತೀಯವಾದ ವೇದ, ಗಾನ, ರಾಕ್ಷಸ, ಮಂತ್ರ, ಶಾದಿ, ಸಾಂಬಾರ್, ಕಬಾಬ್, ಘೇರಾವ್, ಗುರು, ಸಂಯಮ, ಸಂನ್ಯಾಸಿ, ಕರ್ಮ, ವೇದಾಂತ, ಪಂಖ, ತತ್ಸಮ, ವೀಣಾ, ಸಿಪಾಯ್ ಮುಂತಾದ ಅನೇಕ ಶಬ್ದಗಳೂ ಯೂರೋಪಿನ ಇತರ ಭಾಷೆಗಳ ಅನೇಕ ಶಬ್ದಗಳೂ ದಾಖಲಾಗಿವೆ. ಇವೆಲ್ಲ ಆಧುನಿಕ ಇಂಗ್ಲಿಷಿನಲ್ಲಿ ಜನ ಸಾಮಾನ್ಯರಲ್ಲಿಯೂ ಪ್ರಯೋಗವಾಗುತ್ತಿವೆ.

ಮುಖ್ಯೋಲ್ಲೇಖಗಳನ್ನು ದಾಖಲಿಸುವಾಗ ಹೊಸ ಇಂಗ್ಲಿಷ್ ನಿಘಂಟುಗಳಲ್ಲಿ ಸಮಾಸ ಶಬ್ದಗಳನ್ನೂ ನಾಮಪದದಂತೆ ಪ್ರಯೋಗವಾಗುವ ಪದಪುಂಜ (Phrase) ಗಳನ್ನೂ ಮುಖ್ಯೋಲ್ಲೇಖ (Head word) ಗಳಾಗಿಯೇ ಜೋಡಿಸಿರುವುದು ಕಂಡು ಬಂತು. ಇದೊಂದು ಪ್ರಯೋಜನಕರವಾದ ಕ್ರಮವೆಂದು ತಿಳಿದು ಈ ನಿಘಂಟಿನಲ್ಲಿಯೂ ಅದೇ ಕ್ರಮವನ್ನು ಅನುಸರಿಸಲಾಗಿದೆ.

ಇಲ್ಲಿಯವರೆಗೆ ಇಂಗ್ಲಿಷ್-ಕನ್ನಡ ನಿಘಂಟುಗಳಲ್ಲಿ ಕಂಡು ಬರುತ್ತಿದ್ದ ಶಬ್ದಗಳ ಸಂಖ್ಯೆಗಿಂತ ಅಧಿಕವಾದ ಶಬ್ದಗಳ ಆಯ್ಕೆ ಅಗತ್ಯವಾಯಿತು. ಆದುದರಿಂದ ಈ ನಿಘಂಟಿನಲ್ಲಿ ಸುಮಾರು 25,000 ಮುಖ್ಯೋಲ್ಲೇಖಗಳೂ ಕನ್ನಡದ ಅರ್ಥಗಳಲ್ಲಿ ಒಂದು ಲಕ್ಷಕ್ಕೂ ಮಿಕ್ಕು ಕನ್ನಡಶಬ್ದಗಳೂ ಉಪಯೋಗವಾಗಿವೆ.

ಇದು ಇಂಗ್ಲಿಷ್ ಗ್ರಂಥಗಳನ್ನು ಓದುವವರ ಸಹಾಯಕ್ಕೆ ಮಾತ್ರ ಮೀಸಲಾದ ನಿಘಂಟಲ್ಲ. ಕನ್ನಡದಲ್ಲಿ ಈಗ ಅನೇಕ ಅನುವಾದಕರು ಕಾರ್ಯಮುಖರಾಗಿದ್ದಾರೆ. ಲೇಖನ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಪತ್ರಿಕಾ ವರದಿಗಾರರು ಅಧಿಕಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಇವರೆಲ್ಲರಿಗೂ ಸಹಾಯ ದೊರೆಯುವಂತೆ ಈ ನಿಘಂಟು ರಚಿತವಾಗಿದೆ.

ಒಂದು ಮುಖ್ಯೋಲ್ಲೇಖದ ಅಡಿಯಲ್ಲಿ ಅದಕ್ಕೆ ಸಂಬಂಧಪಟ್ಟ ಅನೇಕ ಪದಪುಂಜಗಳನ್ನು (Phrases) ಮತ್ತು ನುಡಿಗಟ್ಟುಗಳನ್ನು (idioms) ಅಕಾರಾದಿಯಾಗಿ ಜೋಡಿಸಿ ಕನ್ನಡ ಅರ್ಥಗಳನ್ನು ನೀಡಲಾಗಿದೆ. ಒಂದು ಇಂಗ್ಲಿಷ್ ಶಬ್ದಕ್ಕೆ ಅನೇಕ ಅರ್ಥಗಳಿದ್ದಾಗ ಅವುಗಳಿಗೆ ಬೇರೆ ಬೇರೆ ಅಂಕಿಗಳನ್ನು ಕೊಟ್ಟು ಒಂದೊಂದಕ್ಕೂ ಅನೇಕ ಸಮೀಪಾರ್ಥ ಗಳುಳ್ಳ ಕನ್ನಡ ಶಬ್ದಗಳನ್ನು ಹೊಂದಿಸಲಾಗಿದೆ. ಅನುವಾದಕರು ತಮಗೆ ಬೇಕಾದುದನ್ನು ಆರಿಸಿಕೊಳ್ಳಬಹುದು. ವೈಜ್ಞಾನಿಕವಾದ ಪಾರಿಭಾಷಿಕ ಶಬ್ದಗಳನ್ನು ಇಲ್ಲಿ ಸೇರಿಸಿಲ್ಲ. ಈಗ ಕನ್ನಡದಲ್ಲಿ ಅನೇಕ ಪಾರಿಭಾಷಿಕ ಶಬ್ದಗಳ ನಿಘಂಟುಗಳು ಪ್ರಕಟವಾಗಿವೆ. ಆದರೂ ಇಲ್ಲಿರುವ ಪದಸಂಪತ್ತು ವೈಜ್ಞಾನಿಕ ಲೇಖನಗಳ ಶೈಲಿನಿರ್ಮಾಣಕ್ಕೆ ಉಪಯೋಗವಾಗುತ್ತದೆ.

ಪದಪುಂಜಗಳಿಗೂ ನುಡಿಗಟ್ಟುಗಳಿಗೂ ಇರುವ ವ್ಯತ್ಯಾಸವನ್ನೂ ನಾವು ಗಮನಿಸಬೇಕು. ಪದಪುಂಜಗಳಿಗೆ ಅವುಗಳಲ್ಲಿರುವ ಶಬ್ದಗಳ ಅರ್ಥ ಮಾತ್ರ ಅನ್ವಯವಾಗುತ್ತವೆ. ನುಡಿಗಟ್ಟುಗಳಲ್ಲಿ ಅವುಗಳಲ್ಲಿರುವ ಶಬ್ದಗಳನ್ನು ಮೀರಿದ ಅರ್ಥಗಳು ಗೋಚರಿಸುತ್ತವೆ. ಇಂಥ ಅರ್ಥಗಳು ಸ್ಪಷ್ಟವಾಗಿರುವಂತೆ ನುಡಿಗಟ್ಟುಗಳಿಗೆ ಕನ್ನಡ ಅರ್ಥಗಳನ್ನು ಸರಿ ಹೊಂದಿಸಲಾಗಿದೆ.

ಕೊನೆಯಲ್ಲಿ ಅನುಬಂಧದಲ್ಲಿ ಅನೇಕ ಕೋಷ್ಠಕಗಳಿವೆ. ಕರ್ನಾಟಕದ ಭೂಪಟವಿದೆ. ಇದು ವಿದ್ಯಾರ್ಥಿಗಳಿಗೂ ಜನಸಾಮಾನ್ಯರಿಗೂ ತುಂಬ ಪ್ರಯೋಜನಕರವಾಗಿದೆ.

ಕನ್ನಡದಲ್ಲಿ ಕೆಲವು ಶಬ್ದಗಳಿಗೆ ಪರ್‍ಯಾಯ ರೂಪಗಳಿರುತ್ತವೆ. ಈ ನಿಘಂಟಿನಲ್ಲಿ ಆ ಪರ್‍ಯಾಯಗಳನ್ನೂ ಉಪಯೋಗಿಸಲಾಗಿದೆ. ಶರತ್ತು-ಷರತ್ತು, ಬರಹ-ಬರೆಹ, ಮರವು-ಮರೆವು ಹೀಗೆ ಆ ಎರಡು ರೂಪಗಳೂ ಶುದ್ಧವಾದುವೇ ಎಂದು ತಿಳಿಯಬೇಕು.

ಈಗ ಜನಜೀವನದಲ್ಲಿ ಕಂಪ್ಯೂಟರಿನ ಪ್ರಭಾವ ಅಧಿಕವಾಗಿದೆ. ಆದುದರಿಂದ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಶಬ್ದಗಳನ್ನು ಸೇರಿಸಿ ಕನ್ನಡ ಅರ್ಥಗಳನ್ನು ಕೊಡಲಾಗಿದೆ.

ಆಡಳಿತದಲ್ಲಿ ನಿರತರಾದ ಅಧಿಕಾರಿಗಳಿಗೂ ಕಛೇರಿಯ ಇತರ ಕೆಲಸಗಾರರಿಗೂ ಆಡಳಿತದಲ್ಲಿ ಕನ್ನಡವನ್ನು ತರುವುದಕ್ಕೆ ಸಹಾಯವಾಗುವಂತೆ ಆಡಳಿತ ಶಬ್ದಕೋಶವೂ ಇಲ್ಲಿ ಸೇರಿದೆ.

ಈ ನಿಘಂಟಿನಲ್ಲಿ ನಸುಕಪ್ಪು ಹಿನ್ನೆಲೆಯಲ್ಲಿ ಕೆಲವು ಶಬ್ದಗಳಿಗೆ ವಿಶೇಷವಾದ ವಿವರಗಳನ್ನು ಮುದ್ರಿಸಲಾಗಿದೆ. ಇವು ಅಂಥ ಶಬ್ದಗಳಿಗೆ ವಿಶ್ವಕೋಶದ ಮಾದರಿಯ ವಿವರಗಳು. ಅಗತ್ಯವಾದರೆ ಮುಂದೆ ಇಂಥವನ್ನು ಇನ್ನೂ ಅಧಿಕವಾಗಿ ಸೇರಿಸಬಹುದು. ಈಗ ಇವು ಮಾದರಿಗಾಗಿ ಮಾತ್ರ ನೀಡಿರುವ ವಿವರಗಳು ಅಷ್ಟೆ.

ಈಚೆಗೆ ಕನ್ನಡದಲ್ಲಿ ಹೊಸ ಶಬ್ದಗಳ ಸೃಷ್ಟಿಗೆ ಚಾಲನೆ ದೊರಕಿದೆ. ಅಂಥ ನೂತನ ಶಬ್ದ ಸೃಷ್ಟಿಗಳಲ್ಲಿ ನಮಗೆ ಒಪ್ಪಿಗೆಯಾದ ಅನೇಕ ಶಬ್ದಗಳನ್ನು ಇಲ್ಲಿ ಸೇರಿಸಲಾಗಿದೆ. Grinder = ರುಬ್ಬುಗ, Sieve = ಸೋಸಿಗೆ, Supply= ಒದಗಣೆ ಹೀಗೆ. ಇವು ಮಾದರಿಯಾಗಿ ಇತರ ಶಬ್ದಗಳೂ ಹುಟ್ಟಿಕೊಳ್ಳಬಹುದು. ಕ್ರಮೇಣ ಉಳಿಯುವ ಶಬ್ದಗಳು ಕನ್ನಡಕ್ಕೆ ಆಸ್ತಿಯಾಗುತ್ತವೆ. ಅಳಿಯುವ ಶಬ್ದಗಳನ್ನು ನಾವು ಲೆಕ್ಕಿಸಬೇಕಿಲ್ಲ.

ಇಂಗ್ಲಿಷ್ ಶಬ್ದಗಳ ಉಚ್ಚಾರಣೆಯ ಬಗ್ಗೆ ಈ ನಿಘಂಟಿನಲ್ಲಿ ಯಾವ ವಿವರವನ್ನೂ ನೀಡಿಲ್ಲ. ಕನ್ನಡ ಅಕ್ಷರಗಳಲ್ಲಿ ನೀಡುವ ಉಚ್ಚಾರಣೆ ಅನೇಕ ವೇಳೆ ಹಾಸ್ಯಾಸ್ಪದವಾಗಿ ಕಾಣುತ್ತದೆ. ಇಂಗ್ಲಿಷ್ ಉಚ್ಚಾರಣೆಯನ್ನು ತರಗತಿಗಳಲ್ಲಿ ಅಧ್ಯಾಪಕರನ್ನು ನೋಡಿ ಕಲಿಯುವುದೇ ಉತ್ತಮ. ಅಲ್ಲದೆ ಈ ನಿಘಂಟನ್ನು ಉಪಯೋಗಿಸುವ ಮಟ್ಟದ ಓದುಗರಿಗೆ ಇಲ್ಲಿನ ಶಬ್ದಗಳ ಉಚ್ಚಾರಣೆ ತಿಳಿದೇ ಇರುತ್ತದೆ.

ಈ ನಿಘಂಟನ್ನು ಉಪಯೋಗಿಸುವುದಕ್ಕೆ ಮುಂಚೆ ಕೆಲವು ದೃಷ್ಟಾಂತಗಳನ್ನು ಪರಿಶೀಲಿಸಿದರೆ ಉತ್ತಮ

1. ಮುಖ್ಯ ಉಲ್ಲೇಖ (Head word). ಇಲ್ಲಿ ಒಂದು ಪದ, ಒಂದು ಸಮಾಸ ಅಥವಾ ಒಂದು ನುಡಿಗಟ್ಟು ಇರುತ್ತದೆ. ಇವೆಲ್ಲವನ್ನೂ ಒಂದೇ ಶಬ್ದವನ್ನಾಗಿ ಪರಿಗಣಿಸಿ ಅವುಗಳಿಗೆ ವ್ಯಾಕರಣದ ಸಂಬಂಧವನ್ನು ನಾ. ಕ್ರಿ. ಮುಂತಾಗಿ ಸೂಚಿಸಿದೆ. ನೋಡಿ: - beer; black money; balance of payment.

2. ಮುಖ್ಯ ಉಲ್ಲೇಖಕ್ಕೆ ಅರ್ಥಗಳನ್ನು ಕೊಟ್ಟಿರುವ ರೀತಿ ಹೀಗಿದೆ: - ನೋಡಿ: 1. about 2. bill

3. ಮುಖ್ಯ ಉಲ್ಲೇಖಗಳ ಕೆಳಗೆ ಅಕಾರಾದಿಯಾಗಿ ಅನೇಕ ನುಡಿಗಟ್ಟುಗಳು ಇವೆ. ಅವಕ್ಕೆ ಕನ್ನಡ ಭಾಷೆಯ ಜಾಯಮಾನಕ್ಕೆ ಹೊಂದುವ ಅರ್ಥಗಳನ್ನು ನೀಡಲಾಗಿದೆ.

ನೋಡಿ: 1. breach 2. break ಮೊದಲನೆಯದರ ಕೆಳಗೆ ನಾಮಾರ್ಥಕ ನುಡಿಗಟ್ಟುಗಳನ್ನೂ ಎರಡನೆಯದರ ಕೆಳಗೆ ಕ್ರಿಯಾರ್ಥಕ ನುಡಿಗಟ್ಟುಗಳನ್ನೂ ಕೊಡಲಾಗಿದೆ. ಕ್ರಿಯಾರ್ಥಕ ನುಡಿಗಟ್ಟುಗಳಿಗೆ to ಎಂಬ preposition ಅನ್ನು ಸೇರಿಸಿ ಓದಿಕೊಳ್ಳಬೇಕು.

4. ಕೋಷ್ಠಕಗಳಲ್ಲಿ ಇರುವ ವಿವರಗಳು ವಿದ್ಯಾರ್ಥಿಗಳಿಗೂ ಸಾಮಾನ್ಯ ಜನರಿಗೂ ಬಹು ಉಪಯೋಗಕರ. ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ನಿಘಂಟನ್ನು ಉಪಯೋಗಿಸುವ ಕ್ರಮವನ್ನು ಹೇಳಿಕೊಡಬೇಕು.

ಕನ್ನಡದಲ್ಲಿ ಪ್ರಕಟವಾಗಿರುವ ಎಲ್ಲ ನಿಘಂಟುಗಳನ್ನು ಪರಿಶೀಲಿಸಿ ಈ ನಿಘಂಟನ್ನು ಸಿದ್ಧಪಡಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ನಿಘಂಟಿನ ಮೂರು ಸಂಪುಟಗಳ ಸಹಾಯವನ್ನು ಹೆಚ್ಚಾಗಿ ಪಡೆಯಲಾಗಿದೆ. ಅದನ್ನು ಕೃತಜ್ಞತೆಯಿಂದ ನೆನೆಯುತ್ತೇವೆ. ಅದರ ಸಂಪಾದಕ ವರ್ಗದವರು ಸಂಸ್ಕ ತವನ್ನು ಉಪಯೋಗಿಸಿರುವ ಕ್ರಮ ತುಂಬ ಪ್ರಯೋಜನಕರವಾಗಿದೆ.

ಈ ಗ್ರಂಥವನ್ನು ಸಿದ್ಧಪಡಿಸುತ್ತಿದ್ದಾಗ ಶ್ರೀ ಎಸ್. ಎನ್. ರಾಮಸ್ವಾಮಿ ಅಯ್ಯರ್, ಶ್ರೀಮತಿ ಉಮಾರಾವ್ ಕೋಲಾರ, ಶ್ರೀ ಕೆ. ಎನ್. ಹರಿಹರ ಅವರು ನೀಡಿದ ಸಹಾಯಕ್ಕೆ ನಾವು ಋಣಿಗಳು. ಶ್ರೀ ಆರ್. ಎಸ್. ಶ್ರೀಧರ್ ಅವರು ನೀಡಿರುವ ಮುದ್ರಣದ ಸಹಾಯಕ್ಕೆ ನಾವು ಕೃತಜ್ಞರು. ಕೋಷ್ಠಕದಲ್ಲಿ ಸೇರಿದ್ದ ಕೆಲವು ತಪ್ಪುಗಳನ್ನು ಸರಿಪಡಿಸಿ ಇತರ ವಿವರಗಳನ್ನು ಕಂಪ್ಯೂಟರಿನ ಮೂಲಕ ತೆಗೆದುಕೊಟ್ಟ ನನ್ನ ಕಿರಿಯ ಮಗ ಜಿ. ವಿ. ಅರುಣನಿಗೆ ನಾನು ಆಭಾರಿ. ವಿಶೇಷವಾಗಿ ಶ್ರೀಮತಿ ಸಂಧ್ಯಾ ಪ್ರಾಣೇಶ್ ಅವರು ನಿಘಂಟಿನ ಪ್ರತಿಪುಟವನ್ನೂ ಓದಿ ಕೊನೆಗೂ ಉಳಿದಿದ್ದ ಕೆಲವು ತಪ್ಪುಗಳನ್ನು ತಿದ್ದಿ ಉಪಕರಿಸಿದ್ದಾರೆ. ಅವರಿಗೆ ನಾವು ಋಣಿಯಾಗಿದ್ದೇವೆ. ಇದನ್ನು ಉಪಯೋಗಿಸುವ ಓದುಗರು ಇದನ್ನು ಉತ್ತಮಗೊಳಿಸಲು ನೀಡುವ ಸಲಹೆಗಳನ್ನು ಗಾಢವಾಗಿ ಪರಿಶೀಲಿಸಿ ಅಳವಡಿಸಿಕೊಳ್ಳಲು ನಾವು ಸದಾ ಸಿದ್ಧರಾಗಿದ್ದೇವೆ.

-ಜಿ. ವೆಂಕಟಸುಬ್ಬಯ್ಯ

 

ನಿಘಂಟುವಿನಲ್ಲಿ ಕೆಳಗಿನ ಸಂಕ್ಷಿಪ್ತಗಳನ್ನು ಬಳಸಿದೆ.

abrabbreviation ಸಂಕ್ಷಿಪ್ತ
adjadjectiveಗುಗುಣವಾಚಕ
advadverbಕ್ರಿ ವಿಕ್ರಿಯಾ ವಿಶೇಷಣ
conjconjunctionಸಂ ಅಸಂಬಂಧಾವ್ಯಯ
interjinterjectionಭಾ. ಅಭಾವ ಅವ್ಯಯ
prfxprefixಸಪೂಪಸಮಾಸ ಪೂರ್ವ ಪದ
prepprepositionಉಪಉಪಸರ್ಗ
pronpronoun ಸನಾಸರ್ವನಾಮ
nnounನಾನಾಮಪದ
vverbಕ್ರಿಕ್ರಿಯಾಪದ
adj-advadjective-adverb ಗುಣವಾಚಕ-ಕ್ರಿಯಾ ವಿಶೇಷಣ
prep-advpreposition-adverb ಉಪಸರ್ಗ-ಕ್ರಿಯಾ ವಿಶೇಷಣ
n-advnoun-adverb ನಾಮಪದ-ಕ್ರಿಯಾ ವಿಶೇಷಣ
FFrench ಫ್ರೆಂಚ್
GerGerman ಜರ್ಮನ್
GkGreek ಗ್ರೀಕ್
ItItalian ಇಟಾಲಿಯನ್
LLatin ಲ್ಯಾಟಿನ್

ಕನ್ನಡದಲ್ಲಿ ಅರ್ಥಗಳನ್ನು ಕೊಡುವಾಗ ಈ ಕೆಳಗಿನ ಸಂಕ್ಷಿಪ್ತಗಳನ್ನು ಬಳಸಿದೆ

ಅನೌಅನೌಪಚಾರಿಕ
ಆಲಂಆಲಂಕಾರಿಕ
ಪ್ರಾ.ಪ್ರ.ಪ್ರಾಚೀನ ಪ್ರಯೋಗ
ಬ.ವ.ಬಹುವಚನ
ಮು.ಮುಂತಾದ
ಮು.ವಾಗಿಮುಖ್ಯವಾಗಿ
ಮು.ವುಮುಂತಾದವು
ಮೊ.ವುಮೊದಲಾದವುಗಳು
ಯಾಅಥವಾ
ವಿ.ವಿಷಯ
ವೈ.ವಿ.ವೈದ್ಯ ವಿಜ್ಞಾನ
ವ್ಯಾವ್ಯಾಕರಣ
ಸ.ವಿಸಸ್ಯ ವಿಜ್ಞಾನ
ಸಾ.ವಾಗಿಸಾಮಾನ್ಯವಾಗಿ
ಸಂ.ಸಂಗೀತ