ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

 

ಮೊದಲ ಮಾತು

ಪ್ರಿಸಮ್ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಾಣೇಶ ಸಿರಿವರ ಅವರು ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟಿನ ತಯಾರಿಕೆಯ ಹಿನ್ನೆಲೆಯಲ್ಲಿಯೇ, ಶಾಲೆ ಮತ್ತು ಕಾಲೇಜುಗಳ ಅಧ್ಯಾಪಕವರ್ಗಕ್ಕೂ ವಿದ್ಯಾರ್ಥಿವರ್ಗಕ್ಕೂ ಕನ್ನಡದ ತಿಳಿವಳಿಕೆಯನ್ನು ಹೆಚ್ಚಿಸುವ ಕ್ಲಿಷ್ಟಪದ ಕೋಶವೊಂದನ್ನು ಸಿದ್ಧಮಾಡಿ ಕೊಡಬೇಕೆಂದು ಸೂಚಿಸಿದರು. ಜೊತೆಗೆ ಇಂದಿನ ಕನ್ನಡ ಭಾಷಾ ಬೆಳವಣಿಗೆಯಲ್ಲಿ ಮತ್ತು ಅದು ಸೃಷ್ಟಿ ಮಾಡಿರುವ ಅನೇಕ ಗೊಂದಲಗಳಲ್ಲಿ, ಉದಾಹರಣೆಗೆ— ಶಬ್ದೋತ್ಪತ್ತಿ, ಉಚ್ಚಾರಣೆ, ಕಾಗುಣಿತ ಮುಂತಾದವನ್ನು ವಿಶೇಷವಾಗಿ ಗಮನದಲ್ಲಿರಿಸಿ ಒಂದು ಹೊಸ ಕೋಶವನ್ನು ಸಂಯೋಜಿಸಲು ಕೇಳಿಕೊಂಡರು. ಇಂಥ ನಿಘಂಟಿನ ಕೊರತೆ ಇರುವುದು ನನಗೂ ತಿಳಿದಿತ್ತು. ಆದುದರಿಂದ ಅವರ ಸೂಚನೆಯನ್ನು ನಾನು ಸ್ವೀಕರಿಸಿದೆ.

ಇಂದಿನ ಪೀಳಿಗೆಯವರಿಗೆ, ಕನ್ನಡ ಭಾಷೆಯ ಸಂಪತ್ತನ್ನು, ಸೊಗಡನ್ನು ಸವಿಯಲು ಇಂತಹ ನಿಘಂಟಿನ ಅವಶ್ಯಕತೆಯಿದೆ. ಹಾಗಾಗಿ ಈ ಕ್ಲಿಷ್ಟ ಪದಕೋಶವನ್ನು ಸಿದ್ಧಪಡಿಸಲಾಗಿದೆ.

ಈ ನಿಘಂಟಿನ ವಿಶಿಷ್ಟತೆಯನ್ನು ಪ್ರತಿಯೊಬ್ಬ ಓದುಗನೂ ಗಮನಿಸತಕ್ಕದ್ದು.

  • ಪ್ರತಿ ಶಬ್ದದ ವ್ಯುತ್ಪತ್ತಿಯನ್ನು ಕೊಟ್ಟಿರುವುದು
  • ಶಬ್ದಗಳ ಸ್ಪಷ್ಟ ಉಚ್ಚಾರಣೆಯ ಮಹತ್ವ ಮತ್ತು ಅದರ ಕಲಿಕೆಯ ಬಗ್ಗೆ ವಿವರಿಸಿರುವುದು
  • ಕನ್ನಡ ಶಬ್ದಗಳ ಸರಿಯಾದ ಕಾಗುಣಿತದ ವಿವರ ನೀಡಿರುವುದು
  • ವಿರಾಮ ಚಿಹ್ನೆಗಳನ್ನು ಉಪಯೋಗಿಸುವುದರ ಬಗ್ಗೆ ಮಾಹಿತಿ ನೀಡಿರುವುದು
  • ಕೆಲವು ಆರಿಸಿದ ಶಬ್ದಗಳಿಗೆ ವಿಶೇಷವಾದ ಹಾಗೂ ಆಸಕ್ತಿ ಮೂಡಿಸುವ ವಿವರಗಳನ್ನು ನೀಡಿರುವುದು
  • ಕೊನೆಯ ಅನುಬಂಧಗಳಲ್ಲಿ ಅನೇಕ ಮಾಹಿತಿಗಳಿವೆ. ಇವು ಶಿಕ್ಷಕರಿಗೂ, ವಿದ್ಯಾರ್ಥಿಗಳಿಗೂ, ಜನಸಾಮಾನ್ಯರಿಗೂ ಉಪಯುಕ್ತವಾದುದು

ಕನ್ನಡದ ಒಂದೇ ಆವೃತ್ತಿಯಲ್ಲಿ ಇಷ್ಟೊಂದು ಮಾಹಿತಿ ಇರುವ ನಿಘಂಟು ಇದೇ ಮೊದಲ ಬಾರಿಗೆ ನಿಮ್ಮ ಮುಂದಿದೆ.

ಇಂಥ ಕಾರ್ಯದಲ್ಲಿ ಕನ್ನಡ ಭಾಷೆಯ ಬಗ್ಗೆ ಒಲವಿರುವ ಹಾಗೂ ತಿಳಿವಳಿಕೆಯಿರುವ ಅನೇಕರು ಸಹಾಯ ಮಾಡಿದ್ದಾರೆ. ಸಂಪಾದನಾ ಭಾಗದ ಸಹಾಯವನ್ನು ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟಿನ ಸಹ ಸಂಪಾದಕಿಯಾಗಿರುವ ಶ್ರೀಮತಿ ರಾಜ್ಯಶ್ರೀ ಸತೀಶ್ ಈ ನಿಘಂಟಿನಲ್ಲಿಯೂ ಅವಿರತವಾಗಿ ಸಹಾಯ ಮಾಡಿದ್ದಾರೆ. ಅವರು ನಿಘಂಟು ಶಾಸ್ತ್ರದ ಬಗ್ಗೆ ಪಡೆದುಕೊಂಡಿರುವ ತಿಳಿವಳಿಕೆಗಾಗಿ ಅವರನ್ನು ವಿಶೇಷವಾಗಿ ಆಭಿನಂದಿಸುತ್ತೇನೆ. ಅವರಿಗೆ ನಾನು ಆಭಾರಿಯಾಗಿದ್ದೇನೆ.

ಹಸ್ತಪ್ರತಿ ತಯಾರಿಕೆಯಲ್ಲಿ ಶ್ರೀಮತಿ ಉಮಾರಾವ್ ಕೋಲಾರ್ ಮತ್ತು ಶ್ರೀಮತಿ ನಂ. ನಾಗಲಕ್ಷ್ಮಿಯವರು ಪ್ರಮುಖರಾಗಿದ್ದಾರೆ. ಇವರಿಬ್ಬರ ಸಹಾಯಕ್ಕೆ ನಾನು ಕೃತಜ್ಞ.

ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿರುವ ಇಗೋ ಕನ್ನಡ–೨ ರಿಂದ ಸ್ವಲ್ಪ ಭಾಗವನ್ನು ಇಲ್ಲಿ ಸೇರಿಸಲಾಗಿದೆ.

ಈ ನಿಘಂಟಿನ ತಯಾರಿಕೆಯಲ್ಲಿ ಮುದ್ರಣಕ್ಕೆ ಸಹಾಯ ನೀಡಿದ ಡಾ|| ಯೋಗಾನಂದ, ಎಮ್. ಆರ್. ಶಂಕರ್ ಮತ್ತು ಅವರ ತಂಡದವರನ್ನೂ ಮತ್ತು ಪ್ರಕಾಶಕರಾದ ಶ್ರೀಮಾನ್ ಪ್ರಾಣೇಶ್ ಸಿರಿವರರನ್ನೂ ನಾನು ವಿಶೇಷವಾಗಿ ಸ್ಮರಿಸುತ್ತೇನೆ.

ಪ್ರೊ ಜಿ. ವೆಂಕಟಸುಬ್ಬಯ್ಯ
೫೮, ೩೧ನೇ ಕ್ರಾಸ್, ೭ನೇ ಬ್ಲಾಕ್
ಜಯನಗರ, ಬೆಂಗಳೂರು-೭೦

 

ಈ ನಿಘಂಟನ್ನು ಉಪಯೋಗಿಸುವ ಬಗ್ಗೆ

ಸಾಮಾನ್ಯ ನಿಘಂಟುಗಳಲ್ಲಿ ಇರದ ಕೆಲವು ವಿವರಗಳು ಇಲ್ಲಿ ಇವೆ. ಒಂದು ಶಬ್ದದ ದಾಖಲೆಯನ್ನು ಪರಿಶೀಲಿಸೋಣ:

ಹೀಗೆ ಎಲ್ಲ ಶಬ್ದಗಳಿಗೂ ದಾಖಲೆಗಳಿವೆ.

1. ಮೊದಲನೆಯ ಶಬ್ದ ಹಾಯು— ಇದು ಮುಖ್ಯ ಉಲ್ಲೇಖ.

2. ಶಬ್ದ ವ್ಯುತ್ಪತ್ತಿ = ಮುಖ್ಯ ಉಲ್ಲೇಖದ ಮುಂದೆ ( ) ಈ ಬಗೆಯ ಕಂಸದಲ್ಲಿ ಆ ಶಬ್ದವು ಯಾವ ಭಾಷೆಯ ಶಬ್ದ — ಅದರ ಮೂಲರೂಪ ಏನು? ಎಂಬ ವಿವರಗಳಿರುತ್ತವೆ. ದೇ ಎಂದಾದ್ದರೆ ಅದು ದೇಶ್ಯ ಶಬ್ದ— ದ್ರಾವಿಡ ಶಬ್ದ— ಇದಕ್ಕೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಜ್ಞಾತಿ ಶಬ್ದಗಳು ಇರಬಹುದು ಎಂಬ ಸೂಚನೆ. ಈ ಭಾಗದಲ್ಲಿ ಮುಖ್ಯ ಉಲ್ಲೇಖವು ದ್ರಾವಿಡವಲ್ಲದೇ ಹೊದರೆ ಸಂ = ಸಂಸ್ಕೃತ, ಪಾರ = ಪಾರಸೀ ಭಾಷೆ, ಅರ = ಅರಬ್ಬಿ ಭಾಷೆ, ಇಂ = ಇಂಗ್ಲಿಷ್ ಭಾಷೆ, ಮರಾ = ಮರಾಠಿ ಭಾಷೆ, ಹಿಂ = ಹಿಂದಿ ಭಾಷೆ ಮುಂತಾಗಿ ಇತರ ಭಾಷೆಗಳ ಸಂಬಂಧದ ಸೂಚನೆ ಇರುತ್ತವೆ. ಸಂ. ಎಂದರೆ ಸಂಸ್ಕೃತ. <ಸಂ. ಎಂದರೆ ತದ್ಭವ ಎಂದರ್ಥ. ಕನ್ನಡದ್ದೇ ಶಬ್ದವಾದರೂ ಅದರ ಸ್ವರೂಪವೂ ಹೇಗೆ ಸಾಧನೆಯಾಗಿದೆ ಎಂಬುದರ ಬಗ್ಗೆ ವಿವರವಿರುತ್ತದೆ. ಹೆಚ್ಚು ವಿವರಕ್ಕೆ ಸಂಕ್ಷಿಪ್ತ ಸೂಚಿಯನ್ನು ನೋಡಿ.

3. ವ್ಯಾಕರಣ ವಿವರ = ಬಳಿಕ ಮೂರನೆಯ ಭಾಗದಲ್ಲಿ ( ) ಈ ಬಗೆಯ ಕಂಸಗಳಲ್ಲಿ ಆ ಶಬ್ದ ವ್ಯಾಕರಣದಲ್ಲಿ ಯಾವ ಗುಂಪಿಗೆ ಸೇರಿದುದು ಎಂಬ ವಿವರವಿರುತ್ತದೆ. ಕ್ರಿ = ಕ್ರಿಯಾಪದ, ನಾ = ನಾಮಪದ, ಗು = ಗುಣವಾಚಕ, ಅ = ಅವ್ಯಯ.

4. ಅರ್ಥಗಳು = ಇದು ಅರ್ಥದ ಭಾಗ. ಕನ್ನಡದಲ್ಲಿಯೂ ಸಂಸ್ಕೃತದಲ್ಲಿಯೂ ಒಂದು ಶಬ್ದಕ್ಕೆ ಅನೇಕ ರೀತಿಯ ಅನೇಕ ಅರ್ಥಗಳಿರುತ್ತವೆ. ಈ ಅರ್ಥಗಳು ಆ ಶಬ್ದವು ಉಪಯೋಗವಾಗಿರುವ ವಾಕ್ಯದ ಸಂಬಂಧದಲ್ಲಿ ದೊರೆಯುವ ಶಬ್ದಾರ್ಥಗಳು. ಈ ನಿಘಂಟನ್ನು ಉಪಯೋಗಿಸುವವರು ಈ ಅರ್ಥಗಳಿಗೆ ಸರಿಯಾಗಿ ತಾವೇ ವಾಕ್ಯಗಳನ್ನು ನಿರ್ಮಾಣ ಮಾಡಬಹುದು. ಇದೊಂದು ಉತ್ತರ ವ್ಯಾಯಾಮವಾಗುತ್ತದೆ. ಇಲ್ಲದಿದ್ದರೆ ಆ ಶಬ್ದವು ಗ್ರಂಥ ಒಂದರಲ್ಲಿ ಪ್ರಯೋಗವಾಗಿರುವ ವಾಕ್ಯಗಳನ್ನು ಹುಡುಕಿ ಅಲ್ಲಿ ಯಾವ ಅರ್ಥದಲ್ಲಿ ಪ್ರಯೋಗವಾಗಿದೆ ಎಂದು ಕಂಡುಹಿಡಿಯಬಹುದು. ಇದಿಷ್ಟು ಸಾಧಾರಣವಾದ ವಿವರಗಳು.

ಆದರೆ ಈ ನಿಘಂಟಿನಲ್ಲಿ ವ್ಯುತ್ಪತ್ತಿ ವಿಭಾಗದಲ್ಲಿ ಅಂದರೆ ವಿಭಾಗ 2 ರಲ್ಲಿ ಕನ್ನಡ ಶಬ್ದಗಳು ಸೃಷ್ಟಿಯಾಗಿರುವ ವಿವರಗಳು ದೊರಕುತ್ತವೆ. ಕನ್ನಡದಲ್ಲಿ ಅನೇಕ ವಾಕ್ಯಗಳಿವೆ, ಮೂಲ ಶಬ್ದಕ್ಕೆ ಈ ಪ್ರತ್ಯಯಗಳು ಸೇರಿದಾಗ ಅವು ಬೇರೆಯ ಸತ್ವವನ್ನೇ ನುಡಿಯುತ್ತವೆ.

ಉದಾಹರಣೆಗೆ ಗ, ಇಗ, ಕೆ, ಇಕೆ, ವಳಿ, ವಳ, ಗುಳಿ, ವಂತ ಮುಂತಾದ ಪ್ರತ್ಯಯಗಳು ಸೇರಿದಾಗ ಅವು ನಾಮವಾಚಕವಾಗುತ್ತವೆ.

ಓದು + ಗ — ಓದು (ಕ್ರಿ) + ಗ (ಪ್ರತ್ಯಯ) = ಓದುಗ = ಓದುವವನು. ನಾಮಪದಕ್ಕೂ ಈ ಪ್ರತ್ಯಯಗಳು ಸೇರಬಹುದು.

ಲಂಚ + ಗುಳಿ = ಲಂಚಗುಳಿ = ಲಂಚ ತಿನ್ನುವವನು

ಗಾಣ + ಇಗ = ಗಾಣದ ವೃತ್ತಿಯವನು ಇತ್ಯಾದಿ. ಹೀಗೆ ಇಂಥ ಪ್ರತ್ಯಯಗಳನ್ನು ಪಟ್ಟಿಮಾಡಿ ಇಟ್ಟುಕೊಂಡರೆ ಹೊಸ ಪದಗಳ ಸೃಷ್ಟಿ ಹೇಗೆಂಬುದು ಗೊತ್ತಾಗುತ್ತದೆ.

ಈ ನಿಘಂಟನ್ನು ಉಪಯೋಗಿಸುವ ಕನ್ನಡ ಅಧ್ಯಾಪಕರ ಸಹಾಯಕ್ಕಾಗಿ ಈ ಮುಂದೆ ಕೆಲವು ವ್ಯಾಕರಣ ವಿವರ ಗಳನ್ನು ಸೇರಿಸಲಾಗಿದೆ. ಇವುಗಳನ್ನು ಆಳವಾಗಿ ಅಭ್ಯಾಸಮಾಡಿದರೆ ವಿದ್ಯಾರ್ಥಿಗಳಲ್ಲಿ ಉಚ್ಚಾರಣೆಯ ಸ್ಪಷ್ಟತೆಯನ್ನು ಉಂಟುಮಾಡಬಹುದು. ಸ್ಪಷ್ಟವಾದ ಶಬ್ದಗಳ ಉಚ್ಚಾರಣೆ ವಿದ್ಯಾವಂತನ ಮುಖ್ಯ ಲಕ್ಷಣಗಳಲ್ಲಿ ಒಂದು. ಆದುದರಿಂದ ಕನ್ನಡದ ಅಧ್ಯಾಪಕರು ತಾವೂ ಸ್ಪಷ್ಟವಾದ ಉಚ್ಚಾರಣೆ ಮಾಡಬೇಕು ಮತ್ತು ವಿದ್ಯಾರ್ಥಿಗಳಿಗೂ ಅದನ್ನು ಕಲಿಸಬೇಕು. ಇದೊಂದು ಅತಿ ಪ್ರಧಾನವಾದ ಕರ್ತವ್ಯ— ಕನ್ನಡ ಅಧ್ಯಾಪಕನದು. ಈ ಭಾಗವನ್ನು ಅಧ್ಯಾಪಕರು ಗಮನಿಸಬೇಕಾಗಿ ವಿನಂತಿ.

ಕನ್ನಡದ ಕಾಗುಣಿತದ ಬಗ್ಗೆ ಒಂದೆರಡು ವಿವರಗಳಿವೆ. ಇವುಗಳನ್ನು ಕುರಿತು ನಾನು ಬೇರೆಯೇ ಲೇಖನಗಳನ್ನು ಬರೆದಿದ್ದೇನೆ. ಅವುಗಳಿಗಿಂತ ಹೆಚ್ಚಾಗಿ ಕನ್ನಡದ ಬರಹದಲ್ಲಿ ವಿರಾಮಚಿಹ್ನೆಗಳ ಉಪಯೋಗವು ಅಷ್ಟು ಖಚಿತವಾಗಿಲ್ಲ. ಈ ಬಗ್ಗೆ ನಾನು ನೀಡಿರುವ ಮುಂದಿನ ಸೂಚನೆಗಳನ್ನು ವಿಶೇಷವಾಗಿ ಗಮನಿಸಬೇಕಾಗಿ ನನ್ನ ಅರಿಕೆ.

 

ವಿರಾಮ ಚಿಹ್ನೆಗಳು

ಕನ್ನಡದಲ್ಲಿ ಗದ್ಯವನ್ನಾಗಲಿ, ಪದ್ಯವನ್ನಾಗಲಿ ಬರೆಯುವಾಗ ಹಿಂದಿನ ಕಾಲದಲ್ಲಿ ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತ ಇರಲಿಲ್ಲ. ತಾಳೆಗರಿಗಳಲ್ಲಿ ಒಂದು ಪದ್ಯವನ್ನು ಪೂರ್ತಿ ಸಾಲಾಗಿ ಬರೆದ ಮೇಲೆ ಕೊನೆಯಲ್ಲಿ ಒಂದು (|) ಗೂಟವನ್ನು ಹಾಕಿ ಗುರುತಿಸಿದರೆ ಆಗಿಹೋಯಿತು. ಕೆಲವರು ಅದನ್ನೂ ಹಾಕುತ್ತಿರಲಿಲ್ಲ. ಇಂಗ್ಲಿಷ್ ಭಾಷೆಯ ಅಭ್ಯಾಸವು ಹೆಚ್ಚಾದ ಹಾಗೆಲ್ಲ, ಆ ಭಾಷೆಯಲ್ಲಿ ಉಪಯೋಗಿಸುತ್ತಿದ್ದ ವಿರಾಮ ಚಿಹ್ನೆಗಳ ಪ್ರಯೋಜನದ ಪರಿಚಯವಾಯಿತು, ನಮ್ಮವರಿಗೂ. ಹೀಗಾಗಿ ಈಗ ಕನ್ನಡದಲ್ಲಿ ಬರಹ ಮಾಡುವರು ಕೆಲವು ವಿರಾಮ ಚಿಹ್ನೆಗಳನ್ನು ಉಪಯೋಗಿಸುತ್ತಿದ್ದಾರೆ. ಆದರೂ ಈ ಚಿಹ್ನೆಗಳ ಉಪಯೋಗವು ಒಂದೇ ಬಗೆಯಾಗಿ ಆಗುತ್ತಿಲ್ಲ. ಆದುದರಿಂದ, ಈ ಚಿಹ್ನೆಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯನ್ನು ಪಡೆದಿರುವುದು ಒಳ್ಳೆಯದು.

ವಿರಾಮ ಚಿಹ್ನೆಗಳು ಓದುಗನಿಗೆಂದು ಲೇಖಕನು ನೀಡುವ ಮಾರ್ಗದರ್ಶನ ಎಂದು ತಿಳಿಯಬೇಕು. ಓದುಗನು ಒಂದು ಲೇಖನವನ್ನು ಓದುವಾಗ ಕೆಲವು ಕಡೆ ಸ್ವಲ್ಪ ತಡೆದು ಓದುತ್ತಾನೆ. ಆಗ ಓದಿದ ವಾಕ್ಯದ ಅರ್ಥ ಹೆಚ್ಚು ಸ್ಪಷ್ಟವಾಗುತ್ತದೆ. ಒಂದೊಂದು ವಿರಾಮ ಚಿಹ್ನೆಗೂ ಒಂದು ಅರ್ಥವಿದೆ. ಅದನ್ನು ಉಪಯೋಗಿಸುವಾಗ ಲೇಖಕನು ಒಂದು ಉದ್ದೇಶವನ್ನು ಇಟ್ಟುಕೊಂಡಿರುತ್ತಾನೆ. ಆದುದರಿಂದ ಈ ಚಿಹ್ನೆಗಳ ಬಗ್ಗೆ ವಿವರವಾಗಿ ತಿಳಿವಳಿಕೆ ಹೊಂದಿರುವುದು, ಲೇಖಕನ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಈ ದೃಷ್ಟಿಯಿಂದ ವಿರಾಮ ಚಿಹ್ನೆಗಳನ್ನೂ ಅವುಗಳನ್ನೂ ಉಪಯೋಗಿಸುವ ಬಗೆಯನ್ನೂ ಕುರಿತು ವಿವರಣೆಯನ್ನು ನೀಡಲಾಗಿದೆ.

ವಿರಾಮ ಚಿಹ್ನೆಗಳು ಹೀಗಿವೆ:

 ಚಿಹ್ನೆಯ ಹೆಸರುಚಿಹ್ನೆ
೧.ಪೂರ್ಣವಿರಾಮ.
೨.ಅರ್ಧವಿರಾಮ;
೩.ಅಲ್ಪ ವಿರಾಮ,
೪.ವಿವರಣಸೂಚಿ:
೫.ಕಂಸ ಅಥವಾ ಆವರಣ ( ) ಅಥವಾ - --
೬.ಪ್ರಶ್ನಾರ್ಥಕ ಚಿಹ್ನೆ?
೭.ಆಶ್ಚರ್ಯ ಸೂಚಕ ಚಿಹ್ನೆ!
೮.ಉದ್ಧಾರ ಸೂಚಕ ಚಿಹ್ನೆ “ ” ಅಥವಾ ‘ ’

ಇವುಗಳ ಬಗ್ಗೆ, ಇವುಗಳನ್ನು ಏಕೆ ಉಪಯೋಗಿಸುತ್ತಾರೆ ಎಂಬ ಬಗ್ಗೆ ವಿವರಗಳನ್ನು ತಿಳಿದುಕೊಳ್ಳೋಣ.

ಪೂರ್ಣವಿರಾಮ ಇದು- .
ಒಂದು ವಾಕ್ಯವು ಪೂರೈಸಿದಾಗ ಆ ವಾಕ್ಯದ ಕೊನೆಯಲ್ಲಿ ಈ ಚಿಹ್ನೆಯನ್ನು ಉಪಯೋಗಿಸುತ್ತಾರೆ. ಪ್ರತಿಯೊಂದು ವಾಕ್ಯವಾದ ಮೇಲೆಯೂ ಇದನ್ನು ಉಪಯೋಗಿಸುತ್ತಾರೆ. ಅಂದರೆ ಒಂದು ಅಭಿಪ್ರಾಯ ಆ ವಾಕ್ಯದಲ್ಲಿ ಪೂರ್ತಿಯಾಗಿ ಹೇಳಲಾಗಿದೆ ಎಂದು ಅರ್ಥ. ಆ ವಾಕ್ಯಗಳು ಹೇಳಿಕೆ ಆಗಿರಬಹುದು; ವಿನಂತಿ, ಪ್ರಾರ್ಥನೆ ಆಗಿರಬಹುದು.

ಉದಾ:
೧. ಕನ್ನಡಭಾಷೆಯು ತುಂಬ ಪ್ರಾಚೀನವಾದ ಭಾಷೆ.
೨. ನಾನು ನಿಮಗೆ ಒಂದು ಪತ್ರವನ್ನು ಬರೆಯಬಹುದೆ.
೩. ನನ್ನಿಂದ ನಿಮಗೆ ತೊಂದರೆಯಾಗಿಲ್ಲ, ತಾನೆ.

ಈ ವಾಕ್ಯಗಳಲ್ಲಿ ಮೊದಲನೆಯದು ಒಂದು ಹೇಳಿಕೆ. ಎರಡನೆಯ ಮತ್ತು ಮೂರನೆಯ ವಾಕ್ಯಗಳು ಪ್ರಶ್ನೆಯಂತೆ ಇವೆ. ಆದರೂ, ಆ ವಾಕ್ಯಗಳು ಒಂದು ರೀತಿಯಾಗಿ ವಿನಂತಿ ಮಾಡುತ್ತಿರುವುದು ಕಂಡುಬರುತ್ತದೆ. ಅಂಥ ವಾಕ್ಯಗಳೂ ಹೇಳಿಕೆಗೆ ಸಮಾನವೆಂದು ಗಣಿಸಬಹುದು.

ಎಲ್ಲ ಸಂಕ್ಷಿಪ್ತಗಳ (abbreviations) ಮುಂದೆ ಪೂರ್ಣ ವಿರಾಮವನ್ನು ಹಾಕಬೇಕು.

ಉದಾ: ಡಾ. ಯು.ಎಸ್.ಎ., ಕ.ಸಾ.ಪ.
ಕುವೆಂಪು, ಪು.ತಿ.ನ. ವ್ಯಕ್ತಿಗಳ ಸಂಕ್ಷಿಪ್ತ ನಾಮವನ್ನು ಉಪಯೋಗಿಸುವಾಗ ಅವರು ಹೇಗೆ ಬರೆಯುತ್ತಿದ್ದರೋ ಹಾಗೆಯೇ ಬರೆಯಬೇಕು.

ಬರಹದಲ್ಲಿ ಯಾವುದಾದರೂ ಭಾಗವನ್ನು ಬಿಟ್ಟಿದ್ದರೆ ಅದನ್ನು ಮೂರು ಪೂರ್ಣವಿರಾಮಗಳನ್ನು ಹಾಕಿ ತೋರಿಸಬೇಕು (...)

ಬೇರೊಬ್ಬರ ವಾಕ್ಯಗಳನ್ನು ಉದ್ಧಾರ ಮಾಡಿ ಕೊನೆಯಲ್ಲಿ ಸ್ವಲ್ಪ ಭಾಗವನ್ನು ಬಿಟ್ಟಿದ್ದರೆ ಅದನ್ನು ನಾಲ್ಕು ಪೂರ್ಣವಿರಾಮಗಳನ್ನು ಹಾಕಿ ತೋರಿಸಬೇಕು (....)

* * * * *

ಅರ್ಧ ವಿರಾಮ ಇದು- ;
ಎರಡು ಸಂಪೂರ್ಣ ವಾಕ್ಯಗಳು ಬೇರೆಬೇರೆಯವೇ ಆಗಿದ್ದರೂ ಅವುಗಳಿಗೆ ಸಂಬಂಧ ಇದ್ದರೆ ಅವುಗಳ ನಡುವೆ ಅರ್ಧವಿರಾಮವನ್ನು ಉಪಯೋಗಿಸಬೇಕು.

ಉದಾ:
೧) ಧರ್ಮದ ಸ್ವರೂಪ ಬಹು ಸೂಕ್ಷ ವಾದದ್ದು; ಅದನ್ನು ಮಹಾತ್ಮರೂ ತಿಳಿಯುವುದು ಕಷ್ಟ.
೨) ಒಂದು ಸಂಗತಿಯೇನೋ ನಿಶ್ಚಯ; ಈ ಕಾಲಕ್ಕೆ ಕೊನೆಗಾಲ ಒದಗಿದೆ; ಅದಕ್ಕೇ ಈ ಕೌರವರು ಲೋಭ ಮೋಹಗಳಿಗೆ ವಶರಾಗಿದ್ದಾರೆ.

ಎರಡನೆಯ ವಾಕ್ಯದಲ್ಲಿ ಮೂರು ಉಪವಾಕ್ಯಗಳಿದ್ದರೂ ಎಲ್ಲಕ್ಕೂ ಸಂಬಂಧವಿರುವುದು ಸ್ಪಷ್ಟ.

ಎರಡು ವಾಕ್ಯಗಳಿಗೆ ಸಂಬಂಧವಿದ್ದು ಎರಡನೆಯ ವಾಕ್ಯವು ಹೀಗೆ, ಆಮೇಲೆ, ಅಲ್ಲದೆ, ಪರಿಣಾಮವಾಗಿ, ಕೊನೆಗೆ, ಇನ್ನು ಮುಂದೆ, ಬಳಿಕ, ಆದರೆ, ಈ ರೀತಿಯಲ್ಲಿ ಎಂಬಂಥ ಶಬ್ದಗಳಿಂದ ಮೊದಲಾದರೆ ಅಂಥ ಕಡೆಗಳಲ್ಲಿ ಮೊದಲ ವಾಕ್ಯದ ಕೊನೆಯಲ್ಲಿ ಅರ್ಧವಿರಾಮ ಚಿಹ್ನೆಯನ್ನು ಹಾಕಬೇಕು.

ಉದಾ: ನನ್ನ ರಕ್ಷಣೆಯಲ್ಲಿ ದನದ ಮಂದೆ ಬೆಳೆಯುತ್ತಿದೆ; ರೋಗರಹಿತವಾಗಿರುತ್ತದೆ; ಅಲ್ಲದೆ ನಾನು ಒಳ್ಳೆಯ ಜಾತಿಯ ಹೋರಿಗಳ ಲಕ್ಷಣವನ್ನು ಬಲ್ಲೆ.

ಈ ಉದಾಹರಣೆಯಲ್ಲಿ ಎರಡೂ ಬಗೆಯ ವಾಕ್ಯಗಳಿರುವುದನ್ನು ಕಾಣಬಹುದು.

ಈ ವಿರಾಮ ಚಿಹ್ನೆಯ ಬಗ್ಗೆ ಒಂದು ಎಚ್ಚರಿಕೆಯನ್ನು ನೀಡಬೇಕು. ಇದನ್ನು ಅತಿಯಾಗಿ ಉಪಯೋಗಿಸುವದರಿಂದ ಶೈಲಿಯಲ್ಲಿ ಕೊಂಚ ಬೇಸರ ತರುವ ಗುಣ ಕೂಡಿಬಿಡುತ್ತವೆ.

* * * * *

ಅಲ್ಪ ವಿರಾಮ ಇದು- ,
ವಿರಾಮ ಚಿಹ್ನೆಗಳಲ್ಲೆಲ್ಲ ಅತ್ಯಂತವಾಗಿ ಉಪಯೋಗವಾಗುವ ಚಿಹ್ನೆ ಇದು --, . ಇದನ್ನು ಎಲ್ಲೆಲ್ಲಿ ಉಪಯೋಗಿಸಬೇಕು ಎಂಬುದನ್ನು ವಿವರವಾಗಿ ತಿಳಿದಿದ್ದರೆ ಒಳ್ಳೆಯದು.

ಒಂದು ವಾಕ್ಯವು ದೀರ್ಘವಾಗಿದ್ದು ಅಧೀನವಾಕ್ಯವು ಪ್ರಾರಂಭದಲ್ಲಿ ಬಂದರೆ ಆ ಅಧೀನವಾಕ್ಯವಾದ ಕೂಡಲೆ ಒಂದು ಅಲ್ಪ ವಿರಾಮವನ್ನು ಉಪಯೋಗಿಸಬೇಕು.

ಉದಾ: ಶಂಕರನು ಕ್ಷಮಿಸಿ, ಅರ್ಜುನನಿಂದ ಕಿತ್ತುಕೊಂಡಿದ್ದ ಅಕ್ಷಯ ಬಾಣಗಳನ್ನೂ ಗಾಂಡೀವವನ್ನೂ ಹಿಂತಿರುಗಿಕೊಟ್ಟು, ಅವನ ಅಪೇಕ್ಷೆಯಂತೆ ತನ್ನಲ್ಲಿದ್ದ ಪಾಶು ಪತಾಸ್ತ್ರವನ್ನು ಕೊಟ್ಟನು. (ವಚನ ಭಾರತ - ೧೨೭).

ಅಧೀನವಾಕ್ಯವು ಹೃದಯದಿಂದ ಕೊನೆಯಾಗಿ ವಾಕ್ಯವು ಮುಂದುವರಿದರೆ, ಹೃದಯದ ಬಳಿಕ ಅಲ್ಪ ವಿರಾಮವನ್ನು ಉಪಯೋಗಿಸಬೇಕು.

ಉದಾ: ಆ ಬೀದಿಯಲ್ಲಿ ಮನೆಯ ಸಂಖ್ಯೆಯನ್ನು ಗುರುತಿಸಿ, ಆ ಮನೆಯ ಬಳಿಗೆ ಬಂದನು.

ವಾಕ್ಯವು ಆದರೆ, ಮತ್ತೆ, ಆದ್ದರಿಂದ, ಹೀಗೆ, ಮುಂತಾದ ಶಬ್ದಗಳಿಂದ ಮೊದಲಾದರೆ ಆ ಶಬ್ದಗಳಿಂದ ಬಳಿಕ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ಅವನೇನೋ ಬುದ್ಧಿವಂತನೆ; ಆದರೆ, ಸೋಮಾರಿ.

ವಾಕ್ಯವು ವಿವರಣಾತ್ಮಕ ನುಡಿಗಟ್ಟುಗಳಿಂದ ಪ್ರಾರಂಭವಾದರೆ, ಆಗ ಅಲ್ಪವಿರಾಮವಿರಬೇಕು, ಆ ನುಡಿಗಟ್ಟುಗಳು ಮುಂದೆ. (ನ್ಯಾಯಾಲಯವು ಹೇಳಿರುವಂತೆ, ಮನುಸೂಚಿಸುವರಂತೆ ರಾಮಾಯಣದಲ್ಲಿರುವಂತೆ, ಪುರಾಣಗಳು ತಿಳಿಸುವಂತೆ - ಇತ್ಯಾದಿ ನುಡಿಗಟ್ಟುಗಳನ್ನು ನೆನೆಯಬಹುದು)

ಉದಾ: ವಕೀಲರು ವಿವರಿಸಿರುವಂತೆ, ಆತನು ಕಣ್ಣಾರೆ ನೋಡಿರಲಾರ; ಏಕೆಂದರೆ, ಅವನು ಕುರುಡ.

ವಾಕ್ಯದ ಯಾವುದಾದರೂ ಮುಖ್ಯವಾಕ್ಯಕ್ಕೆ ಸಂಬಂಧ ಹೊಂದಿರದಿದ್ದರೆ ಆಗ ಆ ಸಂಬಂಧ ಹೊಂದಿರದ ನುಡಿಗಟ್ಟಿನ ಹಿಂದೆ ಮುಂದೆ ಅಲ್ಪ ವಿರಾಮವಿರಬೇಕು.

ಉದಾ: ಶ್ರೀರಾಮರಾಯರು, ನನ್ನ ಸೋದರಮಾವ ಮಹಾ ಶ್ರೀಮಂತರು; ಊರಿನ ದೇವಸ್ಥಾನಕ್ಕೆ ಅವರೇ ಧರ್ಮದರ್ಶಿ.

ಅನೇಕ ಶಬ್ದಗಳು, ನುಡಿಗಟ್ಟುಗಳು ಒಂದೇ ವಾಕ್ಯದಲ್ಲಿ ಬಂದರೆ ಅವುಗಳಲ್ಲಿ ಕೊನೆಯದನ್ನು ಬಿಟ್ಟು ಮಿಕ್ಕವುಗಳಾದ ಮೇಲೆ ಅಲ್ಪ ವಿರಾಮವಿರಬೇಕು.

ಉದಾ: ದಯಾನಂದರು ಉದಾರಿ, ಧರ್ಮಿಷ್ಠ, ವಿದ್ಯಾವಂತ, ಅಭಿಮಾನಿ, ಸಮರ್ಥ ಮತ್ತು ವಿವೇಕಿ.

ಈ ದಿನ ಸ್ನೇಹಿತರು ಬರುತ್ತಾರೆ; ಊಟಕ್ಕೆ ಅನ್ನ, ಸಾರು, ಹಪ್ಪಳ, ಸಂಡಿಗೆ, ಒಬ್ಬಟ್ಟು ಮತ್ತು ಕಾಯ್ಗಡುಬು-- ಇಷ್ಟನ್ನೂ ತಯಾರಿಸಿರಬೇಕು. ಹೀಗೆಯೇ ದ್ವಂದ್ವ ಶಬ್ದಗಳು ಜೊತೆಯಾಗಿ ಬಂದರೂ ವಾಕ್ಯದಲ್ಲಿ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ವಿದ್ಯಾಭ್ಯಾಸದಲ್ಲಿ ಅಕ್ಷರ ಮತ್ತೆ ಕಾಗುಣಿತ, ವ್ಯಾಕರಣ ಮತ್ತು ಛಂದಸ್ಸು, ಪದ್ಯ ಮತ್ತು ಗದ್ಯ ಇವುಗಳನ್ನು ಯಾವಾಗಲೂ ಜೊತೆಯಾಗಿಯೇ ಕಲಿಯಬೇಕು.

ತಾರೀಕು, ತಿಂಗಳು, ವರ್ಷ ಇವುಗಳನ್ನು ಬರೆಯುವಾಗ ಪ್ರತಿಯೊಂದರ ಮುಂದೆ ಅಲ್ಪ ವಿರಾಮವಿರಬೇಕು.

ಉದಾ: ೧೫, ಏಪ್ರಿಲ್, ೨೦೦೫, ಶುಕ್ರವಾರ, ಈ ನನ್ನ ಮನೆಯ ಗೃಹಪ್ರವೇಶವಾಯಿತು.

ಉದ್ಧಾರಮಾಡಿದ ವಾಕ್ಯಗಳ ಹೀಗೆ ಅಲ್ಪವಿರಾಮವಿರಬೇಕು.

ಉದಾ: ವಿದ್ಯಾರ್ಥಿಗೆ ಉಪಾಧ್ಯಾಯರು ಹೇಳಿದರು, “ನೀನು ಮೂರ್ಖ; ಆದರೆ, ಸಿರಿವಂತ; ಆದ್ದರಿಂದ, ನಿನ್ನನ್ನು ಕ್ಷಮಿಸಿದ್ದೇನೆ.”

ಆಶ್ಚರ್ಯಸೂಚಕ ಉದ್ಗಾರಗಳ ಮುಂದೆ ಅಲ್ಪವಿರಾಮವಿರಬೇಕು.

ಉದಾ: ಆಹಾ, ಏನು ನೋಟ! ಏನು ಊಟ! ಅಬ್ಬಾ, ಎಂಥ ದೊಡ್ಡ ಸಭೆ!

ವ್ಯಕ್ತಿಯ ಸದರಿಗಳನ್ನು ತಿಳಿಸುವಾಗ ಅಲ್ಪವಿರಾಮವನ್ನು ಉಪಯೋಗಿಸಬೇಕು.

ಉದಾ: ಶ್ರೀ ಗೋಪಾಲರಾಯರು ಎಂ.ಎ., ಬಿ.ಎಲ್.

ಅಂಕಿಗಳನ್ನು ಬರೆಯುವಾಗ ಸಾವಿರವನ್ನು ಸೂಚಿಸುವ ಅಂಕಿಯ ಮುಂದೆ
1,117 20,636 1,81,000

ವಿಳಾಸಗಳನ್ನು ಬರೆಯುವಾಗ ಯಾವ ವಿರಾಮ ಚಿಹ್ನೆಗಳನ್ನೂ ಉಪಯೋಗಿಸಬೇಕಾಗಿಲ್ಲ.
ಶ್ರೀ ಸಂತಾನ ಗೋಪಾಲಕೃಷ್ಣರಾಯರು
೩೭, ಪಾತಾಳಮ್ಮ ಬೀದಿ
ಜಯನಗರ ೫೬೦ ೦೭೦

ಭಾಷೆಯಲ್ಲಿ ಎಲ್ಲ ಬಗೆಯ ವಾಕ್ಯಗಳನ್ನೂ ಉದಾಹರಣೆಗಳ ಮೂಲಕ ತೋರಿಸಲಾಗುವುದಿಲ್ಲ. ಈ ಮಾದರಿಗಳಿಂದ ವಾಕ್ಯಗಳಲ್ಲಿ ಓದುಗರು ಎಲ್ಲಿ ಸ್ವಲ್ಪ ನಿಲ್ಲಿಸಿ ಓದಬೇಕು ಎನ್ನಿಸುತ್ತದೆಯೋ ಅದನ್ನು ಗಮನಿಸಿ ಅಲ್ಪ ವಿರಾಮವನ್ನು ಉಪಯೋಗಿಸಬೇಕು.

* * * * *

ವಿವರಣ ಸೂಚಿ ಇದು- : (ಕೆಲವು ವೇಳೆ ಇದನ್ನು :- ಎಂದೂ ಬರೆಯುವುದುಂಟು) ಒಂದು ವಾಕ್ಯದಲ್ಲಿ : ಈ ಚಿಹ್ನೆಯು ಬರಬೇಕಾದರೆ ವಾಕ್ಯದ ವಾಚನಕ್ಕೆ ಹೆಚ್ಚಾದ ತಡೆ ಬಂದಿದೆ ಎಂದು ಅರ್ಥ. ಈ ಕಡೆಗೆ ಕಾರಣಗಳನ್ನು ವಿವರವಾಗಿ ತಿಳಿಯೋಣ.

ಒಂದು ವಾಕ್ಯದಲ್ಲಿ ವಸ್ತುಗಳ ಪಟ್ಟಿ ಅರ್ಥ ವಿವರಗಳ ಪಟ್ಟಿ ಬಂದರೆ ಆಗ : ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನನಗೆ ಈ ಮುಂದೆ ತಿಳಿಸಿರುವವುಗಳನ್ನು ಕಳುಹಿಸಿ: ನಾಲ್ಕು ಗಡಿಯಾರಗಳು, ಹದಿನೈದು ಕತ್ತರಿಗಳು, ಮೂವತ್ತು, ಚಾಕುಗಳು ಮತ್ತು ಒಂದು ಡಜನ್ ಉಳಿಗಳು.

ಇನ್ನೊಂದು ವಾಕ್ಯ.
ನೀನು ಈ ದಿನ ಮಾಡಬೇಕಾದ ಕೆಲಸಗಳು: ಬ್ಯಾಂಕಿಗೆ ಹೋಗಿ ಹಣ ತರುವುದು, ಅಂಗಡಿಯಿಂದ ಸಾಮಾನು ತರುವುದು, ಔಷಧಗಳನ್ನು ಕೊಳ್ಳುವುದು ಮತ್ತು ಅಂಚೆಯ ಪತ್ರಗಳನ್ನು ಅಂಚೆಯ ಪೆಟ್ಟಿಗೆಗೆ ಹಾಕುವುದು.

ವ್ಯವಹಾರದ ಪತ್ರಗಳಲ್ಲಿ ವ್ಯಕ್ತಿಯ, ಸಂಸ್ಥೆಯ ಹೆಸರನ್ನೂ ಬರೆದ ಬಳಿಕ
ಮಾನ್ಯ ಪ್ರಿನ್ಸಿಪಾಲರೇ:

ಸ್ನೇಹದ, ಸಾಂಸಾರಿಕವಾದ ಪತ್ರಗಳಲ್ಲಿ ಅಲ್ಪವಿರಾಮವನ್ನು ಉಪಯೋಗಿಸಬೇಕು.
ಪ್ರಿಯ ಗೆಳೆಯ,
ಪ್ರಿಯ ಗೆಳತಿ,

ಕಾಲ, ಅಂಕೆ, ಸಂದರ್ಭಗಳನ್ನು ತಿಳಿಸುವಾಗ ಭಾಗಗಳನ್ನು ಬೇರ್ಪಡಿಸಬೇಕಾದರೆ

ಉದಾ: ಗಂಟೆ ೧೦:೩೦, ಅಧ್ಯಾಯ X : ಭಾಗ ೬, ಅಲಂಕಾರ ೧೫ : ಉದಾ ೬

* * * * *

ಕಂಸ ಅಥವಾ ಆವರಣ ಚಿಹ್ನೆ ಇದು- ( )
ಕೆಲವು ವೇಳೆ ( ) ಕಂಸಗಳ ಬದಲು ಹೀಗೆ ಕಿರು ಅಡ್ಡ ಗೀಟುಗಳನ್ನು ಉಪಯೋಗಿಸುತ್ತಾರೆ. ಇಂಗ್ಲಿಷಿನಲ್ಲೂ parentheses ಎಂದು ಕರೆಯುವ ಇದನ್ನು ವಾಕ್ಯಗಳಲ್ಲಿ ವ್ಯಾಕರಣದ ಬಾಂಧವ್ಯವಿಲ್ಲದ ಭಾಗಗಳನ್ನು ಗುರುತಿಸಲು ಉಪಯೋಗಿಸುತ್ತಾರೆ.

ಉದಾ: ಶಾಂತಿ (ನನ್ನ ತಂಗಿಯ ಮಗಳು) ಈಗ ಅಮೇರಿಕದಲ್ಲಿ ನೆಲೆಸಿದ್ದಾಳೆ.
ಮನೆಯ ಮುಂದೆ ಹೀಗೆ ಬರೆದಿದೆ: ಸರ್ವೇಜನಾಃ ಸುಖಿನೋಭವಂತು (ಎಲ್ಲರೂ ಸುಖಿಗಳಾಗಿರಲಿ).
ಮಾನವರು ಗರ್ವಿಷ್ಠರಾದರೆ - ನಾವೆಲ್ಲರೂ ಗರ್ವಿಷ್ಠರೆ - ಸ್ನೇಹವು ವರ್ಧಿಸಲಾರದು.

ಇಂಥ ಸಂದರ್ಭಗಳಲ್ಲಿ ಬೇರೆಯ ವಾಕ್ಯಗಳನ್ನು ಬರೆಯುವುದೇ ಲೇಸು. ಅರ್ಥ ಸರಳವಾಗಿ ತಿಳಿಯಬರುತ್ತದೆ.

* * * * *

ಪ್ರಶ್ನಾರ್ಥಕ ಚಿಹ್ನೆ ಇದು- ?
ಎಲ್ಲ ಪ್ರಶ್ನೆಗಳ ಕೊನೆಯಲ್ಲಿ ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನಿನ್ನ ಹೆಸರೇನು?
ಆ ಪೆಟ್ಟಿಗೆಯಲ್ಲಿ ಏನಿದೆ?
ನಿಮ್ಮ ತಂದೆ ಊರಿನಲ್ಲಿದ್ದಾರೆಯೆ?
ಇಂದು ಶಾಲೆಯನ್ನು ಏಕೆ ಮುಚ್ಚಿದ್ದಾರೆ?

ವಾಕ್ಯದಲ್ಲಿ ಅನೇಕ ಪ್ರಶ್ನೆಗಳಿದ್ದರೆ ಎಲ್ಲ ಪ್ರಶ್ನೆಗಳಿಗೂ ಈ ಚಿಹ್ನೆಯನ್ನು ಉಪಯೋಗಿಸಬೇಕು.

ಉದಾ: ನಿನ್ನ ಗೆಳೆಯ ಆರೋಗ್ಯವೆ? ಊರಿನಲ್ಲಿ ಹಾಗೆಯೇ ಶಾಲೆಗೆ ಹೋಗುತ್ತಿದ್ದಾನೆಯೇ?

* * * * *

ಆಶ್ಚರ್ಯಸೂಚಕ ಚಿಹ್ನೆ ಇದು- !
ಇದನ್ನು ಆಶ್ಚರ್ಯ, ಭಾವುಕತೆ, ಅನುಕಂಪ, ಆಜ್ಞೆ, ಉದ್ವೇಗ ಮುಂತಾದ ಭಾವನೆಗಳನ್ನು ತಿಳಿಸುವ ಉದ್ಗಾರಗಳ ಮುಂದೆ ಉಪಯೋಗಿಸಬೇಕು.

ಉದಾ:
ಆ ಹಳದಿ ಹೂಗಳ ಮರವನ್ನು ನೋಡು!
ನಿನ್ನ ವೇಷವನ್ನು ನೋಡುವುದು ಕಷ್ಟ!
ಓ! ಮರ ಉರುಳಿಹೋಯಿತು.
ರಸೀತಿಯನ್ನು ಇಂದೇ ಹಿಂದಿರುಗಿಸು!
ಅವನ ಮಾತನ್ನು ನಂಬಬಹುದೇ!
ಆ ಮಾತಿನ ಅರ್ಥ ತಿಳಿಯಿತೆ!

* * * * *

ಉದ್ಧಾರ ಸೂಚಕ ಚಿಹ್ನೆ ಇದು- “ ” ಅಥವಾ ‘ ’.
ಮತ್ತೊಬ್ಬರು ಆಡಿದ ಮಾತುಗಳೆಂದು ತಿಳಿಸಬೇಕಾದಾಗ ಆ ಮಾತುಗಳನ್ನು ಉದ್ಧಾರ ಚಿಹ್ನೆಗಳ ಒಳಗೆ ಬರೆಯಬೇಕು. (ಈ ಚಿಹ್ನೆಯನ್ನು 'ಬಕಗ್ರೀವ' ಎಂದು ಕೆಲವರು ಕರೆಯುತ್ತಾರೆ.)

ಉದಾ: ಸಚಿವರು ಹೇಳಿದರು: “ಆಗಲಿ, ನಿಮ್ಮ ಶಾಲೆಯ ಕಟ್ಟಡಕ್ಕೆ ತಗಲುವ ವೆಚ್ಚದಲ್ಲಿ ಅರ್ಧವನ್ನು ಊರಿನವರು ಕೂಡಿಸುವುದಾದರೆ ನಾನು ಸರಕಾರದಿಂದ ಮಿಕ್ಕ ಅರ್ಧವನ್ನು ಕೊಡಿಸುತ್ತೇನೆ.”

ಈ ವಾಕ್ಯದ ಮೊದಲ ಭಾಗವನ್ನು ಕೊನೆಯಲ್ಲಿ --ಎಂದು ಸಚಿವರು ಹೇಳಿದರು, ಎಂದು ಬೇಕಾದರೆ ಬರೆಯಬಹುದು.

ಗ್ರಂಥಗಳ ಹೆಸರು, ಕವನಗಳ ಹೆಸರು, ಅಧ್ಯಾಯಗಳ ಹೆಸರು ಮುಂತಾದುವನ್ನು ಈ ಬಿಟ್ಟವುಗಳಲ್ಲಿ ಸೂಚಿಸಬಹುದು. “ಮಂದ್ರ” ಎಂಬ ಕಾದಂಬರಿ. “ಕಲ್ಕಿ” ಎಂಬ ಕವನ. “ವಿಗಡವಿಕ್ರಮರಾಯ” ಎಂಬ ನಾಟಕ.

ಗ್ರಾಮ್ಯ ಶಬ್ದಗಳನ್ನು ಈ ಚಿಹ್ನೆಯಿಂದ ತೋರಿಸಬಹುದು.

ಉದಾ: ‘ಸೂಳೆಮಗನೆ’, ಎಂದು ಬೈದವನನ್ನು ‘ಸಂಭಾವ್ಯ’, ಎಂದು ಕರೆಯಬಹುದೆ?

ದೀರ್ಘವಾದ ವಾಕ್ಯಗಳನ್ನು ತಿಳಿಸಬೇಕಾದಾಗ ಅವುಗಳನ್ನು ; ಚಿಹ್ನೆಯಿಂದ ಗುರುತಿಸುವುದು ಒಳ್ಳೆಯದು.

ಈ ಉದಾರಸೂಚಕಗಳ ನಡುವೆ ಒಂದು ಸಂಪೂರ್ಣ ವಾಕ್ಯ ಬಂದರೆ ಆ ವಾಕ್ಯಕ್ಕೆ ಸಂಬಂಧಿಸಿದಂತೆ ಅದರ ಅಂತ್ಯದಲ್ಲಿ ಬರುವ ವಿರಾಮ ಚಿಹ್ನೆಗಳನ್ನು ಬರೆದ ಮೇಲೆ ಉದ್ಧಾರಕ ಚಿಹ್ನೆಯನ್ನು ಹಾಕಬೇಕು.

ಉದಾ:
“ಈ ಶಬ್ದವು ಆ ಗ್ರಂಥದಲ್ಲಿ ಪ್ರಯೋಗವಾಗಿಲ್ಲ.”
“ನೀನೇನು ಮಹಾಪುರುಷನೋ!”
“ನಿನ್ನ ಮದುವೆ ಯಾವಾಗ?”

ಮೇಲೆ ತಿಳಿಸಿದ ಚಿಹ್ನೆಗಳು ತುಂಬ ಪ್ರಚಾರದಲ್ಲಿ ಇರುವ ಚಿಹ್ನೆಗಳು. ಆದರೆ, ಇವಲ್ಲದೆ ಗಣಿತಶಾಸ್ತ್ರದ ಕೆಲವು ಚಿಹ್ನೆಗಳನ್ನು ಭಾಷೆಯ ಸಂಬಂಧದಲ್ಲಿಯೇ ಉಪಯೋಗಿಸುತ್ತಾರೆ. ಅವು ವಿರಾಮ ಚಿಹ್ನೆಗಳಲ್ಲ. ಅವುಗಳಿಗೆ ಬೇರೆ ಅರ್ಥಗಳಿವೆ. ಅವುಗಳ ವಿವರಗಳು ಮುಂದೆ ಇವೆ:

* * * * *

+ ಇದು plus ಚಿಹ್ನೆ.
ಕನ್ನಡದಲ್ಲಿ ವ್ಯಾಕರಣದ ಪಾಠಮಾಡುವಾಗ ರಾಮ + ಅನ್ನು = ರಾಮನನ್ನು ಎಂದು ಹೇಳುತ್ತಾರೆ. ಈ ವಾಕ್ಯದಲ್ಲಿ ಒಂದು plus ಚಿಹ್ನೆ, ಇನ್ನೊಂದು equals ಚಿಹ್ನೆ. ಅದಕ್ಕೆ ಕನ್ನಡದಲ್ಲಿ ಸಾಮಾನ್ಯವಾಗಿ ಅಧ್ಯಾಪಕರು plus ಮತ್ತು equals ಎಂದೇ ಉಪಯೋಗಿಸುತ್ತಾರೆ. + ಇದು ಸಂಕಲನ ಚಿಹ್ನೆ. ವ್ಯಾಕರಣ ಪಾಠ ಮಾಡುವಾಗ ‘ಜೊತೆಗೆ’ ಎಂಬುದಾಗಿ ಉಪಯೋಗಿಸಬಹುದು.

ರಾಮ ‘ಜೊತೆಗೆ’ ಅನ್ನು ಎಂಬುದು ರಾಮನನ್ನು ಎಂದಾಗುತ್ತದೆ. ಈ ವಾಕ್ಯ ದೊಡ್ಡದಾಗುವುದರಿಂದ ಅಧ್ಯಾಪಕರು ರಾಮ plus ಅದು equals ರಾಮನನ್ನು ಎಂದೇ ಹೇಳುತ್ತಾರೆ. ಆದ್ದರಿಂದ +, = ಈ ಚಿಹ್ನೆಗಳನ್ನು ನಾವು ಉಪಯೋಗಿಸಬೇಕು.

* * * * *

<, > ಎಂಬ ಎರಡು ಬೇರೆ ಚಿಹ್ನೆಗಳಿವೆ. ಇವುಗಳನ್ನು ಉಪಯೋಗಿಸುವ ಸಂದರ್ಭವನ್ನು ನೋಡಿ:
ಪರ್ವ > ಹಬ್ಬ
ಸ್ವರ್ಗ > ಸಗ್ಗ
ಬೇಹಾರ < ವ್ಯಾಪಾರ
ಬೇಸಾಯ < ವ್ಯವಸಾಯ

ಹೀಗೆ ಬರೆದರೆ ಹಬ್ಬ ಎಂಬ ಶಬ್ದ ಪರ್ವ ಶಬ್ದದಿಂದ ಬಂದಿದೆ ಎಂದು ಅರ್ಥ. ಮೊದಲನೆಯ ಶಬ್ದ ಪರ್ವ-ಸಂಸ್ಕೃತ. ಅದರಿಂದ ಬಂದ ಹಬ್ಬ ತದ್ಭವ. ವ್ಯಾಪಾರ ಎನ್ನುವ ಶಬ್ದ ಬೇಹಾರ ಎಂದು ಪಡೆಯುತ್ತದೆ. ಆಗ ನಾವು ಬೇಹಾರ < ವ್ಯಾಪಾರ ಎಂದು ತಿಳಿಸಬಹುದು. ಬೇಸಾಯ < ವ್ಯವಸಾಯ ಎಂದು ಬರೆಯಬಹುದು. ಈ ಚಿಹ್ನೆ > ಇದು ಯಾವ ಶಬ್ದದಿಂದ ಬಂದಿದೆ ಎಂದೂ; ಈ ಚಿಹ್ನೆ < ಯಾವ ಶಬ್ದ ಮೂಲ ಎಂದು ಅರ್ಥ ಮಾಡಿಕೊಳ್ಳಬೇಕು.

ನಿಘಂಟುಗಳಿಂದ ಶಬ್ದದ ವ್ಯುತ್ಪತ್ತಿಯನ್ನು ತಿಳಿಸುವಾಗ ಈ ಚಿಹ್ನೆಗಳನ್ನು ಉಪಯೋಗಿಸುತ್ತಾರೆ ಎಂದು ತಿಳಿದಿದ್ದಾರೆ ಒಳ್ಳೆಯದು.

 

ಕನ್ನಡ ಭಾಷೆ ಮತ್ತು ಶಿಕ್ಷಣ

ಶಿಕ್ಷಣ ಕ್ಷೇತ್ರದ ಮತ್ತು ಕನ್ನಡವನ್ನು ಬೋಧಿಸುವ ಅಧ್ಯಾಪಕರ ದೃಷ್ಟಿಯಿಂದ ಹೇಳಬೇಕಾದ ಕೆಲವು ವಿಷಯಗಳಿವೆ. ಇದಕ್ಕೆ ಮುಖ್ಯ ಕಾರಣ ಕನ್ನಡದ ಅಧ್ಯಾಪಕರು ನನಗೆ ಆಗಿಂದಾಗ ಕಳುಹಿಸುವ ಪ್ರಶ್ನೆಗಳು ಮತ್ತು ನನ್ನಲ್ಲಿಗೆ ಬಂದು ಮಾಡುವ ಚರ್ಚೆಗಳು. ಹೀಗೆ ಬರುವ ಪ್ರಶ್ನೆಗಳಲ್ಲಿ ಮಹಾಪ್ರಾಣಗಳ ಉಚ್ಚಾರಣೆಗೆ, ಕಾಗುಣಿತಕ್ಕೆ, ಪರೀಕ್ಷೆಯ ಪ್ರಶ್ನೆಗಳಿಗೆ ಕೊಡಬೇಕಾದ ಉತ್ತರಗಳಿಗೆ ಸಂಬಂಧಿಸಿದುವೇ ಹೆಚ್ಚು. ಇತರ ವಿಷಯಗಳನ್ನು ಕುರಿತು ಪ್ರಶ್ನೆಗಳು ಇಲ್ಲವೆಂದಲ್ಲ. ಆದರೆ ಅವು ಕಡಮೆ.

ಮೊದಲು ಮಹಾಪ್ರಾಣಗಳ ಉಚ್ಚಾರಣೆಯನ್ನು ತೆಗೆದುಕೊಳ್ಳೋಣ. ಈಗ ಮುಂದಿನ ಪುಟಗಳಲ್ಲಿ ಮುದ್ರಣವಾಗಿರುವ ಚಿತ್ರಪಟದ ವಿವರಣೆಯನ್ನು ಚೆನ್ನಾಗಿ ನೋಡಿ ಅರ್ಥಮಾಡಿಕೊಳ್ಳಬೇಕು. ಬಳಿಕ ಇರುವ ವಿವರಣೆಯನ್ನು ಓದಿಕೊಂಡು ಅದರಂತೆ ಒಂದೊಂದು ಅಕ್ಷರವನ್ನೂ ಉಚ್ಚಾರಮಾಡಿ ಅದು ಪಟದ ವಿವರಣೆಗೆ ಸರಿಯಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಈ ಚಿತ್ರಗಳ ಮೂಲಕವೇ ಪಾಠ ಮಾಡಬೇಕು.

ಶಿಕ್ಷಕರಿಗೆ ಸೂಚನೆಗಳು

ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರಲಿಪಿಯಿಂದ ಹಿಡಿದು ಇಂದಿನ ಮುದ್ರಣ— ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳ ಬ್ರಾಹ್ಮೀಲಿಪಿಯೇ ಮೂಲ. ಶತಮಾನಗಳು ಕಳೆದ ಮೇಲೆಯೂ ಈಗ ಕನ್ನಡದ ಅಕ್ಷರಗಳು ಬ್ರಾಹ್ಮೀಲಿಪಿಯಿಂದ ಹೇಗೆ ಬೆಳೆದು ಬಂದಿವೆ ಎಂಬುದನ್ನು ಕ್ರಮವಾಗಿ ವಿವರಿಸಬಹುದು. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇದರಿಂದ ಅಕ್ಷರಗಳು ಬದಲಾದ ಸ್ವರೂಪವನ್ನು ಪಡೆದ ಕ್ರಮವನ್ನು ನಾವು ಕಣ್ಣಾರೆ ಕಾಣಬಹುದು. ಮುದ್ರಣ ಬಂದ ಮೇಲೆ ಕನ್ನಡಕ್ಕೆ ಈಗಿನ ರೂಪ ನಿಂತಿದೆ. ಪ್ರಪಂಚದಲ್ಲಿ ೧೮ ಬಗೆಯ ಲಿಪಿಗಳಿವೆ. ಇವುಗಳಲ್ಲಿ ೮ ಅಕ್ಷರ ಲಿಪಿಗಳು. ಮಿಕ್ಕವು ಚಿತ್ರಲಿಪಿ ಮುಂತಾದವು. ಭಾರತದಲ್ಲಿ ಅನೇಕ ಭಾಷೆಗಳಿಗೆ ಬ್ರಾಹ್ಮಿಲಿಪಿಯಿಂದ ಬಂದ ಅನೇಕ ಲಿಪಿಗಳೇ ಇವೆ. ಜೊತೆಗೆ ಪರ್‍ಸೋ-ಅರಾಬಿಕ್ ಲಿಪಿಗಳೂ ಇವೆ.

ಉದಾ:
ಉರ್ದು, ಕಾಶ್ಮೀರಿ, ಪುಷ್ಟು.

ಕನ್ನಡ ವರ್ಣಮಾಲೆಯಲ್ಲಿ ಇರಬೇಕಾದ ಅಕ್ಷರಗಳ ಬಗ್ಗೆ ವಿದ್ವಾಂಸರಲ್ಲಿ ಬೇಕಾದಷ್ಟು ಚರ್ಚೆಯಾಗಿದೆ. ಕೊನೆಯದಾಗಿ ಈಗ ಕನ್ನಡದ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:

ಅ ಆ ಇ ಈ ಉ ಊ ಋ ಎ ಏ ಐ ಒ ಓ ಆ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ಮತ್ತು ಹಳೆಗನ್ನಡದ ಱ ಮತ್ತು ೞ - ಜೊತೆಗೆ (ಂ = ಅನುಸ್ವಾರ, ಃ = ವಿಸರ್ಗ) = ಒಟ್ಟು ೫೧.

ಈಚೆಗೆ ಇಂಗ್ಲಿಷಿನ F, Z ಎಂಬ ಧ್ವನಿಯನ್ನು ಫ಼ ಜ಼ ಎಂಬಂತೆ ಗುರುತಿಸುತ್ತ ಇದ್ದಾರೆ. ಆಗ ೫೩.

ಕನ್ನಡದ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಲು ಕೆಲವು ಕಾಲಮಾನಗಳನ್ನು ನಿರ್ಧರಿಸಿದ್ದಾರೆ.

೧. ಪೂರ್ವದ ಹಳಗನ್ನಡ ಅನಿಶ್ಚಿತ ಪ್ರಾರಂಭದಿಂದ ೭ನೆಯ ಶತಮಾನದವರೆಗೆ
೨. ಹಳಗನ್ನಡ ೭ ರಿಂದ ೧೩ ನೆಯ ಶತಮಾನದವರೆಗೆ
೩. ನಡುಗನ್ನಡ ೧೭ ನೇ ಶತಮಾನದ ಪ್ರಾರಂಭದಿಂದ ೧೮ನೇ ಶತಮಾನದವರೆಗೆ
೪. ಹೊಸಗನ್ನಡ ೧೮ನೆಯ ಶತಮಾನದ ಆದಿಯಿಂದ ಈಚೆಗೆ

ಕಳೆದ ಶತಮಾನದಲ್ಲಿ ಆಗಿರುವ ಅತಿವ್ಯಾಪಕವಾದ ಕನ್ನಡದ ಅಭಿವೃದ್ಧಿಯನ್ನು ಗಮನಿಸಿದರೆ ೨೦ನೆಯ ಶತಮಾನದಿಂದ ಈಚಿನ ಕಾಲವನ್ನು ಆಧುನಿಕ ಕನ್ನಡ ಎಂದು ಹೊಸ ಯುಗವಾಗಿ ಪರಿಗಣಿಸಬೇಕಾಗುತ್ತದೆ.

 

ಧ್ವನ್ಯಂಗಗಳು ಮತ್ತು ಉಚ್ಚಾರಣೆ

ನಾವು ಮಾತನಾಡುವಾಗ ನಮ್ಮ ಧ್ವನಿಯು ಹುಟ್ಟುವುದು ಹೇಗೆ ಎಂಬುದನ್ನು ನಾವು ತಿಳಿದಿರಬೇಕು. ಇದನ್ನು ಕುರಿತು ನಮ್ಮ ವೈಯಾಕರಣರು ಏನು ಹೇಳಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಕನ್ನಡದ ವ್ಯಾಕರಣಕಾರರಲ್ಲಿ ಪ್ರಮುಖನಾದ ಕೇಶಿರಾಜನು (ಕ್ರಿ. ಶ. ೧೩ನೆಯ ಶತಮಾನ) ಈ ಬಗ್ಗೆ ಒಂದು ಸೂತ್ರವನ್ನು ರಚಿಸಿದ್ದಾನೆ.

ಅನುಕೂಲ ಪವನನಿಂ ಜೀ
ವನಿಷ್ಟದಿಂ ನಾಭಿಮೂಲದೊಳ್ ಕಹಳೆಯ ಪಾಂ
ಗಿನವೋಲ್ ಶಬ್ದದ್ರವ್ಯಂ
ಜನಿಯಿಸುಗುಂ ಶ್ವೇತಮದಱಕಾರ್ಯಂ ಶಬ್ದಂ

ಮಾತನಾಡಬೇಕೆಂಬ ವ್ಯಕ್ತಿಯ ಅಪೇಕ್ಷೆಯಂತೆ ಅನುಕೂಲವಾದ ಗಾಳಿಯ ಸಹಾಯದಿಂದ ನಾಭಿಮೂಲದಲ್ಲಿ ಕಹಳೆಯ ಅಕಾರದಲ್ಲಿ ಶಬ್ದವೆಂಬ ದ್ರವ್ಯವು ಹುಟ್ಟುತ್ತದೆ. ಅದರ ಬಣ್ಣ ಬಿಳಿ. ಆ ದ್ರವ್ಯದ ಕಾರ್‍ಯವೇ ಶಬ್ದ (ಜೈನರು ಶಬ್ದಕ್ಕೆ ದ್ರವ್ಯತ್ವವನ್ನೂ ಧವಳವರ್ಣವನ್ನೂ ಆರೋಪಿಸುತ್ತಾರೆ). ಇದರ ಜೊತೆಗೆ ಕೇಶಿರಾಜನು ಮತ್ತೂ ಒಂದು ಸೂತ್ರವನ್ನು ಸೇರಿಸಿದ್ದಾನೆ.

ತನು ವಾದ್ಯಂ ನಾಲಗೆ ವಾ
ದನದಂಡಂ ಕರ್ತೃವಾತ್ಮನವನ ಮನೋವೃ
ತ್ತಿನಿಮಿತ್ತಮಾಗಿ ಶಬ್ದಂ
ಜನಿಯಿಸುಗುಂ ಧವಳವರ್ಣಮಕ್ಷರರೂಪಂ

ದೇಹವೇ ವಾದ್ಯ. ನಾಲಗೆ ಬಾಜನೆ ಮಾಡುವ ಅಂದರೆ ವಾದ್ಯವನ್ನು ನುಡಿಸುವ ಕುಡುಹು (ದಂಡ). ಬಾಜಿಸುವವನು ಆತ್ಮ. ಅವನ ಮನಸ್ಸಿನ ಅಪೇಕ್ಷೆಯಂತೆ ಶಬ್ದವು ಬಿಳಿಯ ಬಣ್ಣದಿಂದ ಅಕ್ಷರದ ರೂಪದಲ್ಲಿ ಉತ್ಪತ್ತಿಯಾಗುತ್ತದೆ.

ಇದು ಆರುನೂರು ವರ್ಷಗಳ ಹಿಂದಿನ ಮಾತು. ಈ ನಾಲ್ಕಾರು ಶತಮಾನಗಳಲ್ಲಿ ಶರೀರಶಾಸ್ತ್ರದ ವಿಜ್ಞಾನಿಗಳು ಬಹುವಾಗಿ ಸಂಶೋಧನೆಗಳನ್ನು ನಡೆಸಿ ಈ ಬಗ್ಗೆ ಖಚಿತವಾದ ವಿವರಗಳನ್ನು ನಿರೂಪಿಸಿದ್ದಾರೆ. ಸಂಗೀತ, ನಾಟಕಾಭಿನಯ, ಭಾಷಣ ಮುಂತಾದ ಎಲ್ಲ ಕ್ರಿಯೆಗಳಿಗೂ ಬೇರೆ ಬೇರೆ ಸಿದ್ಧತೆಗಳು ಬೇಕಾದರೂ ಮೂಲಭೂತವಾಗಿ ಧ್ವನಿನಿರ್ಮಾಣ ಎಂಬುದರ ಕ್ರಿಯೆ ಒಂದೇ. ಧ್ವನಿ ನಿರ್ಮಾಣದಲ್ಲಿ ಕೆಲವು ಅಂಗಗಳು ಸಂಬಂಧ ಹೊಂದಿರುವುದನ್ನು ಅರಿತರೆ ಆಯಾ ಕ್ಷೇತ್ರದ ಸಾಧನೆಯಲ್ಲಿ ತುಂಬ ಸಹಾಯ ಒದಗುತ್ತದೆ.

ಶ್ವಾಸಕೋಶವೂ ವಪೆಯೂ ಶ್ವಾಸ ನಿಯಂತ್ರಣದಲ್ಲಿ ಸಹಾಯ ಮಾಡುವ ಅಂಗಗಳು. ಉಸಿರಿನಿಂದ ಧ್ವನಿಯು ಉತ್ಪತ್ತಿಯಾಗುತ್ತದೆ. ತುಂಬು ಉಸಿರಿನ‌ಉಚ್ಛ್ವಾಸ ನಿಶ್ವಾಸಗಳಿಂದ ಉತ್ತಮವಾದ ಧ್ವನಿ ನಿರ್ಮಾಣವು ಸಾಧ್ಯ. ಇದನ್ನು ನಾವು ನಮ್ಮ ಹತೋಟಿಯಲ್ಲಿ ಇಟ್ಟುಕೊಂಡಿರಬೇಕು.

ಇಲ್ಲಿರುವ ಎರಡು ಚಿತ್ರಗಳ ಸಹಾಯದಿಂದ ಧ್ವನಿ ನಿರ್ಮಾಣದ ಮತ್ತು ಅಕ್ಷರಗಳು ಉತ್ಪತ್ತಿಯಾಗುವ ಸ್ಥಾನಗಳ ಪರಿಚಯವನ್ನು ನಾವು ಮಾಡಿಕೊಳ್ಳಬಹುದು. ಮೊದಲು ಆಯಾ ಅಂಗಗಳನ್ನು ಸಂಖ್ಯೆಯ ಸಹಾಯದಿಂದ ಗುರುತಿಸಿಕೊಳ್ಳಿ.

ವಪೆಯ ತಳಹದಿಯ ಮೇಲೆ ಗಾಳಿಯ ಸ್ತಂಭವು (Column) ಸ್ಥಾಪಿತವಾಗಿರುತ್ತದೆ. ಆ ಗಾಳಿಯು ನಮ್ಮ ಧ್ವನ್ಯಂಗಗಳ ಬಳಿಗೆ ಬರಬೇಕಾದರೆ ಈ ವಪೆಯು ಮೇಲಕ್ಕೆ ಚಲಿಸಬೇಕು. ನಾವು ಉಸಿರನ್ನು ಒಳಕ್ಕೆ ಎಳೆದುಕೊಂಡಾಗ ನಮ್ಮ ಹೊಟ್ಟೆಯ ಪಕ್ಕೆಗಳು ದೊಡ್ಡವಾಗುತ್ತವೆ. ಗುಮ್ಮಟಾಕಾರದ ವಪೆಯು (Diaphram) ಸಮತಳವಾಗುತ್ತದೆ. ಅಂದರೆ ಸಪಾಟಾಗುತ್ತದೆ. ನಾವು ಉಸಿರು ಬಿಟ್ಟಾಗ ವಪೆಯು ಹಿಂದಿನ ಆಕಾರಕ್ಕೆ ಬರುತ್ತದೆ. ಅಂದರೆ ಸಡಿಲಗೊಂಡ ವಪೆಯು ಮೇಲೆದ್ದು ಕೋಶದ ಉಸಿರನ್ನು ಹೊರಕ್ಕೆ ನೂಕುತ್ತದೆ. ಹೀಗೆ ಹೊರಕ್ಕೆ ತಳ್ಳಿದ ಗಾಳಿಯೇ ಧ್ವನಿಯ ನಿರ್ಮಾಣಕ್ಕೆ ಕಾರಣ.

ಗಾಳಿಯು ಮೇಲಕ್ಕೆ ಹೊರಟು ಧ್ವನಿ ತಂತುಗಳನ್ನು ವಿರಳಗೊಳಿಸಿ ಅವುಗಳ ನಡುವೆ ಮೇಲಕ್ಕೆ ನುಗ್ಗುತ್ತದೆ. ಗಾಳಿಯ ಚಲನೆ ಮತ್ತು ಘೋಷ ತಂತುಗಳ ಸ್ಥಿತಿಸ್ಥಾಪಕತ್ವ (Elasticity) ಇವುಗಳಿಂದ ಧ್ವನಿ ತಂತುಗಳು ಕಂಪಿಸುತ್ತವೆ. ಈ ಕಂಪನವೇ ಶಬ್ದ ನಿರ್ಮಾಣ. ಗಾಳಿಯಿಂದ ತುಂಬಿದ ಬಲೂನಿನ ಬಾಯಿಯನ್ನು ತೆರೆದಾಗ ಧ್ವನಿ ಹೇಗೆ ಉಂಟಾಗುತ್ತದೆ ಎಂಬುದನ್ನು ಗಮನಿಸಿ. ಹಾಗೆಯೇ ಮಾತಿನ ಧ್ವನಿಯೂ ಉಂಟಾಗುತ್ತದೆ. ಈಗ ಆ ಗಾಳಿಯೂ ಉಂಟಾಗುತ್ತದೆ. ಈಗ ಆ ಗಾಳಿಯು ಮುಂದುವರಿದು ಗಂಟಲು, ಬಾಯಿ, ಮೂಗುಗಳ ಮೂಲಕ ಹೊರಹೊಮ್ಮಿ ಮಾತನಾಡುವವನ ಸುತ್ತ ಗಾಳಿಯ ಒತ್ತಡದ ವ್ಯತ್ಯಾಸವನ್ನುಂಟುಮಾಡುತ್ತದೆ. ಈ ಒತ್ತಡದ ವ್ಯತ್ಯಾಸವನ್ನೇ ಧ್ವನಿತರಂಗಗಳು ಎನ್ನುತ್ತಾರೆ. ಅವು ಕೇಳುವವರ ಕಿವಿಗೆ ತಗುಲಿ ಧ್ವನಿಯು ಅನುಭವಕ್ಕೆ ಬರುತ್ತದೆ.

ಧ್ವನ್ಯಂಗಗಳು ಎಂದರೆ ಧ್ವನಿಯನ್ನು ನಿರ್ಮಾಣ ಮಾಡುವ ಅಂಗಗಳು ಎಂದು ಅರ್ಥ. ಮೊದಲು ಈ ಚಿತ್ರದಲ್ಲಿರುವ ಸ್ಥಾನಗಳನ್ನು ಗುರುತಿಸಿ. ಬಾಯಿ ಒಂದು ಕುಹರ. ಅದರ ಒಳಭಾಗದಲ್ಲಿರುವ ಚಲಿಸುವ ಅಂಗಗಳು ಆಕ್ರಮಿಸುವ ಸ್ಥಳಗಳನ್ನು ಅನುಸರಿಸಿ ಬಾಯಿಯ ಆಕಾರವು ಬದಲಾಗುತ್ತದೆ. ಈ ವ್ಯತ್ಯಾಸವು ಉಚ್ಚಾರವಾಗುವ ಶಬ್ದದ ಕಾಕು (Tone)ವನ್ನು ಬದಲು ಮಾಡಬಹುದು. ಅವೇ ನಿರ್ದಿಷ್ಟವಾದ ಧ್ವನಿಯನ್ನೂ ಉಂಟು ಮಾಡಬಹುದು (Produce or Articulate). ಈ ಅಂಗಗಳು ಹೀಗಿವೆ. ನಂಗಿಲು (Uvula), ಮೃದುತಾಲು (Soft Palate), ಕಠಿನತಾಲು (Hard Palate), ಹಲ್ಲುಗಳು (Teeth), ನಾಲಿಗೆ (Tongue), ತುಟಿಗಳು (Lips), ಮೂಗು (Nose), ಅಲ್ಲದೆ ನಾಸಾಕುಹರ (Nasal Passage) ಮತ್ತು ಬಟವೆಗಳು (Sinuses) ಶ್ವಾಸನಿಗ್ರಹಕ್ಕೂ, ಧ್ವನಿಯ ಅನುರಣನಕ್ಕೂ ಸಹಾಯಕವಾಗುತ್ತವೆ.

ಧ್ವನಿಯನ್ನು ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಬಹು ಸಂಕೀರ್ಣವಾದ ಕಾರ್ಯ. ಕೊರಳಿನ ಮಾಂಸಖಂಡಗಳ ಬಿಗಿಯು ಗಂಟಲಿನ ಮೇಲೆ ಪ್ರಭಾವವನ್ನು ಬೀರಬಹುದು. ಕೆಳಗಿನ ದವಡೆಯ ಚಲನೆ, ಮುಖದ ಕೆಲವು ಮಾಂಸಖಂಡಗಳು ಕೂಡ ಬಾಯಿಯ ಆಕಾರವನ್ನು ಬದಲಿಸಬಹುದು. ಇದರಿಂದ ಹೊರಡುವ ಧ್ವನಿಯು ಬದಲಾಗುತ್ತದೆ. ದೇಹದ ಮೇಲ್ಭಾಗವು ಕಂಪಿಸುತ್ತದೆ. ತಲೆಯ ಮತ್ತು ಎದೆಯ ಮೂಳೆಗಳು ಧ್ವನಿವರ್ಧಕಗಳಾಗಬಹುದು.

ಧ್ವನಿಯನ್ನು ಪ್ರಭಾವಯುತವಾಗಿ ಉಪಯೋಗಿಸುವ ಎಲ್ಲರೂ ಆ ಅಂಗಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸಮರ್ಥರಾಗಿರುತ್ತಾರೆ. ಅವರಿಂದ ಭಾಷೆಯ ನಿರ್ದಿಷ್ಟವಾದ ಮತ್ತು ಸ್ಪಷ್ಟವಾದ ಪ್ರಯೋಗ ಸಾಧ್ಯ. ಭಾವಾವೇಗ, ವಿಶೇಷಾರ್ಥಗಳುಳ್ಳ ಶಬ್ದಗಳ ಪ್ರಯೋಗ ಇವುಗಳನ್ನು ಗಮನಿಸಿದರೆ ಈ ಸಾಮರ್ಥ್ಯ ಎಷ್ಟು ಪ್ರೌಢವಾದುದು ಎಂದು ತಿಳಿದುಬರುತ್ತದೆ.

ಕನ್ನಡದ ಅಕ್ಷರಗಳನ್ನು ಉಚ್ಚಾರಣೆ ಮಾಡುವಾಗ ನಡೆಯುವ ಕ್ರಿಯೆಯನ್ನು ಸ್ವಲ್ಪ ವಿವರವಾಗಿ ತಿಳಿಯೋಣ.

ಈ ಚಿತ್ರಗಳ ವಿವರವನ್ನು ಸಂಖ್ಯೆಗಳ ಸಹಾಯದಿಂದ ಗುರುತಿಸಿಕೊಳ್ಳಿ.

ಕನ್ನಡ ಅಕ್ಷರಗಳು ಇರುವ ಪಟ್ಟಿಯನ್ನು ಪರಿಶೀಲಿಸಿ. ಕನ್ನಡದ ಅಕ್ಷರಗಳನ್ನು ಅವು ಹುಟ್ಟುವ ಸ್ಥಾನಗಳನ್ನು ಗಮನಿಸಿ ಐದು ವಿಧವಾಗಿ ವಿಂಗಡಿಸಿದ್ದಾರೆ.

೧. ಕಂಠ್ಯ, ೨. ತಾಲವ್ಯ ೩. ಮೂರ್ಧನ್ಯ, ೪. ದಂತ್ಯ, ೫. ಓಷ್ಠ್ಯ.

ಮೃದು, ಕರ್ಕಶ ಎಂದರೇನು? ಅಕ್ಷರಗಳು ಬಾಯಿಯಲ್ಲಿ ಉಚ್ಚಾರವಾಗುತ್ತವೆ. ಬಾಯಿಯ ಮೇಲ್ಭಾಗವನ್ನು ಅಂಗಳು ಅಥವಾ ಅಟ್ಟ ಎಂದು ಕರೆಯುತ್ತಾರೆ. ಆಂಗಳು ಇರುವ ಆಟ್ಟದ ಮುಂಭಾಗ ಮಾತ್ರ ನಾಲಿಗೆಯು ತಗಲುವಂತೆ ಉಚ್ಚಾರವಾಗುವ ಅಕ್ಷರಗಳು ಮೃದು. ಉದಾ. ದ, ಧ, ಣ ಇತ್ಯಾದಿಗಳು. ಅಂಗಳ ಮೇಲ್ಭಾಗಕ್ಕೆ ನಾಲಿಗೆಯು ತಗುಲದೆ ಉಚ್ಚಾರವಾಗುವ ಅಕ್ಷರಗಳು ಕರ್ಕಶ ವರ್ಣಗಳು. ಉದಾ: ಕ, ಬ, ಟ, ಡ ಇತ್ಯಾದಿಗಳು.

ಕಂಠ ಎಂದರೆ ಗಂಟಲು. ಅದರಲ್ಲಿ ಉಚ್ಚಾರಗೊಳ್ಳುವ ಅಕ್ಷರಗಳು ಕಂಠ್ಯಗಳು. ತಾಲು ಎಂದರೆ ಅಂಗಳು. ಅಲ್ಲಿ ಉಚ್ಚಾರವಾಗುವ ಅಕ್ಷರಗಳು ತಾಲವ್ಯಗಳು. ಮೂರ್ಧ ಎಂದರೆ ನೆತ್ತಿ. ಅಂಗಳಿನ ಮಧ್ಯಭಾಗ. ಅಲ್ಲಿ ಹುಟ್ಟುವ ಅಕ್ಷರಗಳು ಮೂರ್ಧನ್ಯಗಳು. ದಂತ ಎಂದರೆ ಹಲ್ಲು. ಹಲ್ಲಿನ ಬಳಿ ಉಚ್ಚಾರವಾಗುವ ಅಕ್ಷರಗಳು ದಂತ್ಯಗಳು. ಓಷ್ಠ ಎಂದರೆ ತುಟಿ. ತುಟಿಗಳಲ್ಲಿ ಉಚ್ಚಾರವಾಗುವ ಅಕ್ಷರಗಳು ಓಷ್ಠ್ಯಗಳು. ಈಗ ಅಕ್ಷರಗಳ ಪಟ್ಟಿಯನ್ನು ನೋಡಿ. ಕನ್ನಡದ ಯಾವ ಯಾವ ಅಕ್ಷರಗಳು ಎಲ್ಲೆಲ್ಲಿ ಹುಟ್ಟುತ್ತವೆ ಎಂಬುದನ್ನು ಬೇರೆ ಬೇರೆಯಾಗಿ ಅಲ್ಲಿ ತೋರಿಸಿದೆ. ಇದು ನಿಧಾನವಾಗಿ ಪ್ರತಿಯೊಂದು ಅಕ್ಷರವನ್ನೂ ಉಚ್ಚರಿಸಿ ಅದು ಹುಟ್ಟುವ ಸ್ಥಳವನ್ನು ಗುರುತಿಸುವ ಒಂದು ಪ್ರಯೋಗ. ಬೇಗ ಆಗುವ ಕೆಲಸವಲ್ಲ. ಕೆಲವು ಅಕ್ಷರಗಳು ಎರಡು ಭಾಗಗಳಲ್ಲಿ ಕಂಡುಬರುತ್ತವೆ. ಅವುಗಳ ಉಚ್ಚಾರಣೆಗೆ ಎರಡು ಅಂಗಗಳ ಸಹಾಯವೂ ಬೇಕು ಎಂದು ಅರ್ಥ. ನಮ್ಮ ಭಾಷೆಯಲ್ಲಿಲ್ಲದ ಎಷ್ಟೋ ಧ್ವನಿಗಳು ಪ್ರಪಂಚದ ಇತರ ಭಾಷೆಗಳಲ್ಲಿ ಇವೆ. ಇವೆಲ್ಲವನ್ನೂ ಗುರುತಿಸುವುದಕ್ಕೆ ಭಾಷಾ ಶಾಸ್ತ್ರಜ್ಞರು The International Phonetic Alphabet ಎಂಬ ವರ್ಣಮಾಲೆಯನ್ನು ಸಿದ್ಧಪಡಿಸಿದ್ದಾರೆ. ಅದನ್ನು ಕ್ರಮೇಣ ತಿಳಿದುಕೊಳ್ಳಬಹುದು.

ಕೆಲವು ಪಾರಿಭಾಷಿಕ ಶಬ್ದಗಳ ವಿವರಣೆ:

ಅ. ಊಷ್ಮವರ್ಣ : ಊಷ್ಮ ಎಂದರೆ ಉಷ್ಣ, ಕಾವು ಎಂದರ್ಥ. ಶ. ಷ. ಸ.—ಈ‌ ಅಕ್ಷರಗಳ ಉಚ್ಚಾರದಲ್ಲಿ ಸ್ವಲ್ಪ ಉಷ್ಣ ನಿರ್ಮಾಣವಿದೆ ಎಂಬರ್ಥದ ಶಬ್ದ ಇದು. ಇಂಗ್ಲಿಷಿನಲ್ಲಿ ಇಂಥ ವ್ಯಂಜನಗಳನ್ನು Sibilants ಎಂದು ಕರೆಯುತ್ತಾರೆ. ಇವುಗಳಿಗೆ Whistling consonants ಎಂದೂ ಹೆಸರಿದೆ. ಅಂಗಳು ಮತ್ತು ನಾಲಗೆಗಳ ನಡುವೆ ನುಗ್ಗುವ ಗಾಳಿ ಶಿಲ್ಪಿಯ ಹಾಗೆ ಶಬ್ದವನ್ನುಂಟುಮಾಡಬಹುದು—ತುಂಬ ಗಟ್ಟಿಯಾಗಿ ಉಚ್ಚರಿಸಿದರೆ.

ಆ. ಅಂತಸ್ಥವರ್ಣಗಳು : ಯ, ರ, ಲ, ವ ಅಕ್ಷರಗಳಿಗೆ ಈ ಹ³†ಸರಿವೆ. ಇಂಗ್ಲಿಷಿನಲ್ಲಿ ಇವನ್ನು Semi vovels ಎಂದು ಕರೆಯುತ್ತಾರೆ. ಇದು ವ್ಯಂಜನವೂ ಸ್ವರವೂ ಆಗಬಹುದಾದ ಗುಣಗಳನ್ನು ಹೊಂದಿವೆ ಎಂದರ್ಥ.

ಇ. ಧ್ವನಿಪೆಟ್ಟಿಗೆ, Voice Box : ಶ್ವಾಸನಾಳದ ಮೇಲು ತುದಿ ಇದು. Adams Apple ಎನ್ನುವ ಸಾಮಾನ್ಯ ಹೆಸರು ಇದಕ್ಕೆ ಇದೆ. ಕನ್ನಡದ ಮೆಟ್ರೆ. ಇದರಲ್ಲಿ ಧ್ವನಿತಂತುಗಳು ಅಥವಾ ಘೋಷ ತಂತುಗಳು ಇವೆ. Larynx ಎನ್ನುವುದು ಪಾರಿಭಾಷಿಕ ಹೆಸರು. ಇದು ಧ್ವನಿ ತಂತುಗಳನ್ನು ರಕ್ಷಿಸುತ್ತದೆ. ಹೀಗೆ ಇತರ ವಿವರಗಳನ್ನು ತಿಳಿದು ಬರಹದಲ್ಲಿ ಇಟ್ಟುಕೊಂಡಿರಬೇಕು.

ಮಹಾಪ್ರಾಣಗಳ ಉಚ್ಚಾರಣೆಯನ್ನು ಮಾಧ್ಯಮಿಕ ಶಾಲೆಯಿಂದಲೇ ಕಲಿಸಬೇಕು. ಮಹಾಪ್ರಾಣಗಳು ಎಂದರೆ ಖ ಘ ಛ ಝ ಠ ಢ ಥ ಧ ಫ ಭ ಮತ್ತು ಹ. ಈ ಹನ್ನೊಂದು ಅಕ್ಷರಗಳ ಜೊತೆಗೆ ಶ ಷ ಸ ಎಂಬ ಅಕ್ಷರಗಳನ್ನು ಉಚ್ಚಾರ ಮಾಡುವುದನ್ನು ವಿಶೇಷ ಗಮನವಿಟ್ಟು ಹೇಳಿಕೊಡಬೇಕು.

ಅಕ್ಷರಗಳ ಉತ್ಪತ್ತಿ ಸ್ಥಾನಗಳನ್ನು ಚಿತ್ರಗಳ ಮೂಲಕ ವಿವರಿಸಿದ ಮೇಲೆ ಅಧ್ಯಾಪಕರು ಈ ಅಕ್ಷರಗಳನ್ನು ತಾವೇ ಅನೇಕ ಸಲ ಉಚ್ಚರಿಸಬೇಕು. ಬಳಿಕ ಮಹಾಪ್ರಾಣಗಳು ಬರುವ, ಅಲ್ಪಪ್ರಾಣಗಳು ಬರುವ ಎರಡು ಅಥವಾ ಮೂರು ಅಕ್ಷರಗಳ ಶಬ್ದಗಳನ್ನು ಆರಿಸಿ ಒಂದೊಂದು ಜೊತೆಯನ್ನೂ ಒಂದಾದ ಮೇಲೆ ಮತ್ತೊಂದರಂತೆ ಒಟ್ಟು ತರಗತಿಯೇ ಉಚ್ಚರಿಸುವಂತೆ DRILL ಮಾಡಿಸಬೇಕು. ಇದು DRILL ಪಾಠ. DRILL ಎಂದರೆ ಒಂದೇ ಕಾರ್‍ಯವನ್ನು ಅನೇಕ ಸಲ ಮಾಡಿಸಿ ತರಬೇತು ಕೊಡುವುದು ಎಂದು ಅರ್ಥ. ಭರತ-ಬಡವ, ಅಖಾಡ-ವಿಕಾರ, ಧನ-ದನ, ಗಾಢ-ಬಾಡ ಇತ್ಯಾದಿ ಆರಿಸಬೇಕು.

ಭರತ ಎಂಬುದನ್ನು ತರಗತಿಯ ಅರ್ಧಭಾಗ ಬಲಗಡೆಯವರು ಉಚ್ಚರಿಸಿದಮೇಲೆ ಬಡವ ಶಬ್ದವನ್ನು ಎಡಗಡೆಯ ಅರ್ಧಭಾಗ ಉಚ್ಚರಿಸಬೇಕು. ಅಧ್ಯಾಪಕ ಅವರೊಡನೆ ಉಚ್ಚರಿಸಬೇಕು. ಹೀಗೆ ಮಾಡಿದರೆ, ಪ್ರತಿ ದಿನ ೧೫ ನಿಮಿಷ ಈ DRILL ಮಾಡಿಸಿ ನೋಡಿ; ೧೫ ದಿನಗಳ ಬಳಿಕ ವಿದ್ಯಾರ್ಥಿಗಳು ಹೇಗೆ ಈ ವಿಚಾರದಲ್ಲಿ ಪರಿಣತರಾಗುತ್ತಾರೆ, ಎಂಬುದನ್ನು.

 

ಪರೀಕ್ಷೆಗಳು

ಪರೀಕ್ಷೆ ಎಂಬುದು ಒಂದು ಅತ್ಯಗತ್ಯವಾದ ಪೀಡೆ. ಏಕೆಂದರೆ ಅದಕ್ಕಿಂತ ಬೇರೆ ಯಾವ ಮೌಲ್ಯಮಾಪನವನ್ನೂ ಮಾನವನ ಬುದ್ಧಿ ಇನ್ನೂ ಕಂಡುಹಿಡಿದಿಲ್ಲ. ಅಂಥ ಸಾಧನವನ್ನು ಅನ್ವೇಷಣೆ ಮಾಡುವ ತನಕ ಪರೀಕ್ಷೆಗಳನ್ನು ನಡೆಸುತ್ತಲೇ ಇರಬೇಕು. ಆದರೆ ಅದನ್ನು ನಡೆಸುವ ಮಾರ್ಗದಲ್ಲಿ ಕೆಲವು ಸುಧಾರಣೆಗಳನ್ನು ಮಾಡಲು ಇನ್ನೂ ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುವ ವಿಧಾನದಲ್ಲಿ ಹೆಚ್ಚು ಎಚ್ಚರಿಕೆ ವಹಿಸುವುದು ಸಾಧ್ಯವಿದೆ. ಅದಕ್ಕೆ ಅಧ್ಯಾಪಕವರ್ಗವೂ ಶಿಕ್ಷಣ ಇಲಾಖೆಯೂ ಶ್ರಮವಹಿಸಬೇಕು.

ಪರೀಕ್ಷೆಗಳಲ್ಲಿ ಶಬ್ದಗಳಿಗೆ ಅರ್ಥವನ್ನು ಬರೆಯಿರಿ ಎಂಬ ಒಂದು ಪ್ರಶ್ನೆ ಇದ್ದೇ ಇರುತ್ತದೆ. ಇಂಥ ಪ್ರಶ್ನೆಗಳಲ್ಲಿ ಬರುವ ಶಬ್ದಗಳಿಗೆ ಪಾಠಗಳಲ್ಲಿ ಬರುವ ಅರ್ಥವನ್ನೇ ಬರೆಯಬೇಕೋ ಬೇರೆಯ ಅರ್ಥ ಇದ್ದರೆ ಅದನ್ನೂ ಬರೆಯಬಹುದೋ ಎಂಬುದು ಒಂದು ಸಂದೇಹವಿದೆ. ಒಂದು ಶಬ್ದಕ್ಕೆ ಅನೇಕ ಅರ್ಥಗಳಿರುತ್ತವೆ. ಯಾವ ವಾಕ್ಯದಲ್ಲಿ ಒಂದು ಶಬ್ದ ಪ್ರಯೋಗವಾಗಿದೆಯೋ ಅಲ್ಲಿ ಸಂದರ್ಭಕ್ಕೆ ತಕ್ಕ ಅರ್ಥ ಆ ಪದಕ್ಕೆ ಬರುತ್ತದೆ. ಆದರೆ ಪರೀಕ್ಷೆಯಲ್ಲಿ ವಾಕ್ಯವನ್ನು ಕೊಡುವುದಿಲ್ಲ. ಆ ಪದ ಬರುವ ಸಂದರ್ಭವನ್ನೂ ತಿಳಿಸಿರುವುದಿಲ್ಲ. ಹೀಗಿರುವುದರಿಂದ ವಿದ್ಯಾರ್ಥಿಗಳು ಆ ಶಬ್ದಕ್ಕೆ ಬರುವ ಯಾವ ಅರ್ಥವನ್ನು ಬರೆದರೂ ಅಂಕಗಳನ್ನು ಕೊಡಬೇಕು. ಏಕೆಂದರೆ ವಿದ್ಯಾರ್ಥಿಗೆ ಆ ಪದದ ಬಗ್ಗೆ ತಿಳಿವಳಿಕೆ ಇದೆ ಎಂದೂ ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ಮತ್ತೊಂದು ಸಂದಿಗ್ಧವಿದೆ. ಪಠ್ಯಪುಸ್ತಕಗಳ ಮುದ್ರಣದಲ್ಲಿ ಬಹು ಅವ್ಯವಸ್ಥೆ ಇದೆ, ಕರ್ನಾಟಕದಲ್ಲಿ. ಪಠ್ಯಪುಸ್ತಕಗಳಲ್ಲಿಯೂ ಪಾಠಗಳಿಗೆ ಬರೆದ ಟಿಪ್ಪಣಿಗಳಲ್ಲಿಯೂ ಅನೇಕ ತಪ್ಪುಗಳು ಇರುತ್ತವೆ. ಈ ತಪ್ಪುಗಳನ್ನು ಕಂಡುಹಿಡಿದ ಅಧ್ಯಾಪಕರು ಕೂಡ ತರಗತಿಗಳಲ್ಲಿ ಆ ತಪ್ಪುಗಳನ್ನು ತಿದ್ದುವುದಿಲ್ಲ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಿ ಅನ್ಯಾಯವಾಗುತ್ತದೋ ಎಂಬ ಹೆದರಿಕೆ. ಹೀಗಿರುವುದರಿಂದ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವವರು ಉಪಾಧ್ಯಾಯರೇ ಆಗಬೇಕು. ಆಯಾ ತರಗತಿಗಳಿಗೆ ಪಾಠ ಹೇಳುವವರೇ ಆಗಬೇಕು. ಈ ಬಗ್ಗೆ ಖಚಿತ ಕಾನೂನು ಇರಬೇಕು. ಇಂಥ ಸಮಸ್ಯೆಗಳನ್ನು ಅಧ್ಯಾಪಕರ ಸಮ್ಮೇಳನಗಳಲ್ಲಿ ಚರ್ಚಿಸಿ ಪರಿಹಾರವನ್ನು ಕಂಡುಹಿಡಿದು ಎಲ್ಲ ಶಾಲೆಗಳಿಗೂ ಅಲ್ಲಿರುವ ಅಧ್ಯಾಪಕರಿಗೂ ತಿಳಿಯಪಡಿಸಬೇಕು.

ಕಾಗುಣಿತ

ಹೀಗೆಯೇ ಕನ್ನಡ ಶಬ್ದಗಳ ಕಾಗುಣಿತದ ಬಗ್ಗೆ ಕೆಲವು ಪ್ರಶ್ನೆಗಳು ತಲೆಯೆತ್ತುತ್ತಿವೆ. ಉದಾಹರಣೆಗೆ, ಪುತ್ಥಳಿ-ಪಿತ್ಥ ಎಂಬ ಎರಡು ಶಬ್ದಗಳನ್ನು ತೆಗೆದುಕೊಳ್ಳೋಣ. ಇವು ಎರಡೂ ಸಂಸ್ಕೃತ ಶಬ್ದಗಳು. ಸಂಸ್ಕೃತದಲ್ಲಿ ಆ ಶಬ್ದಗಳ ಸ್ವರೂಪ ಪುತ್ತಲಿ, ಪಿತ್ತ. ಆದರೆ ಕನ್ನಡದಲ್ಲಿ ಪ್ರಸಿದ್ಧ ಕಾವ್ಯಗಳ ಹಸ್ತ ಪ್ರತಿಗಳಲ್ಲಿ ಕೂಡ ಈ ಎರಡು ಶಬ್ದಗಳು ಪುತ್ಥಳಿ, ಪಿತ್ಥ ಎಂದು ದಾಖಲಾಗಿವೆ. ಇದನ್ನು ಅರಿತೋ ಏನೋ ಅನೇಕರು ಈ ಕಾಗುಣಿತವನ್ನೇ ತಮ್ಮ ಬರಹದಲ್ಲಿಯೂ ರೂಢಿಗೆ ತಂದಿದ್ದಾರೆ. ಕೆಲವರು ವಿದ್ವಾಂಸರು ಕೂಡ ತಮ್ಮ ಬರಹದಲ್ಲಿ ಇವುಗಳನ್ನು ಉಪಯೋಗಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ‌ಈ ಕಾಗುಣಿತವನ್ನೂ ನಾನು ಒಪ್ಪುತ್ತೇನೆ. ಸಂಸ್ಕೃತದಲ್ಲಿಯೇ ಕೆಲವು ಶಬ್ದಗಳಿಗೆ ಎರಡು ಸ್ವರೂಪಗಳಿವೆ —ಕೋಷ–ಕೋಶ ಇತ್ಯಾದಿ. ಇಂಗ್ಲಿಷಿನ ನಿಘಂಟುಗಳಲ್ಲಿ ಕೂಡ waggon ಎಂದು wagon ಎಂದೂ ಎರಡು ಕಾಗುಣಿತವನ್ನು ದಾಖಲಿಸುತ್ತಾರೆ. ಭಾಷೆಯಲ್ಲಿ ಚಾರಿತ್ರಿಕವಾಗಿ ಆಧಾರವಿದ್ದ ಕೆಲವು ತಪ್ಪುಗಳು ಪ್ರಯೋಗ ಬಲದಿಂದ ಸರಿಯೆನಿಸಿಕೊಳ್ಳುತ್ತವೆ. ಪುತ್ತಲಿ, ಪುತ್ಥಲಿ, ಪುತ್ತಳಿ, ಎಂಬುದನ್ನೂ ಪಿತ್ತ, ಪಿತ್ಥ ಎಂಬುದನ್ನೂ ನಾನು ಒಪ್ಪುತ್ತೇನೆ.

 

ಸಂಕ್ಷಿಪ್ತಸೂಚಿ

ಅವ್ಯಯ      ಪ್ರಪ್ರತ್ಯಯ
ಅರಅರಬ್ಬಿ      ಪ್ರಾಪ್ರಾಕೃತ
ಇಂಇಂಗ್ಲೀಷ್      ಪೋರ್ಚುಪೋರ್ಚುಗೀಸ್
ಕ್ರಿಕ್ರಿಯಾಪದ      ಫ್ರೆಫ್ರೆಂಚ್
ಗುಗುಣವಾಚಕ      ಮರಾಮರಾಠಿ
ಗ್ರೀಗ್ರೀಕ್      ಮಲೆಮಲೆಯಾಳ
ತಮಿತಮಿಳು      ಮುಂ.ಮುಂತಾದ
ತುತುಳು      ಮೊ.ಮೊದಲಾದ
ತೆಲುತೆಲುಗು      ಯಾಅಥವ
ದೇದೇಶ್ಯ      ಸ.ನಾಸರ್ವನಾಮ
ನಾನಾಮಪದ      ಸಂಸಂಸ್ಕೃತ
ಪಾರಪಾರಸಿ      ಹಿಂಹಿಂದಿ

ಕೆಲವು ಪದಗಳ ಅರ್ಥಗಳ ಮುನ್ನ ವಿವರಣೆ ನೀಡಲಾಗಿದೆ. ಆ ವಿವರಣೆಯು ಎಲ್ಲ ಅರ್ಥಗಳಿಗೂ ಅನ್ವಯಿಸುತ್ತದೆ ಎಂದು ತೋರಿಸಲು ಒಂದು ಅಡ್ಡಗೆರೆ ಎಳೆಯಲಾಗಿದೆ (—). ಪದದ ಅರ್ಥದ ಮೊದಲು ಓದುಗರು ವಿವರಣೆಯನ್ನು ಸೇರಿಸಿಕೊಳ್ಳಬೇಕು.

ಮುಖ್ಯೋಲ್ಲೇಖಗಳ ಕೆಳಗಿನ ಪದಪುಂಜಗಳ ವ್ಯಾಕರಣರೂಪವು ಬದಲಾಗಿದ್ದರೆ, ಅವುಗಳ ಬದಲಾದ ರೂಪವನ್ನು ಮಾತ್ರ ಸೂಚಿಸಲಾಗಿದೆ.

ಚಿಹ್ನೆಗಳು

< ಶಬ್ದಮೂಲವನ್ನು ಸೂಚಿಸುವ ಚಿಹ್ನೆ
> ಶಬ್ದಮೂಲವನ್ನು ಸೂಚಿಸುವ ಚಿಹ್ನೆ
= ಸಮಾನ ಎಂಬರ್ಥವನ್ನು ಸೂಚಿಸುವ ಚಿಹ್ನೆ
+ ಜೊತೆಗೆ ಎಂಬರ್ಥವನ್ನು ಸೂಚಿಸುವ ಚಿಹ್ನೆ