ಕನ್ನಡಲೋಕ

ಕನ್ನಡ ಇಂಗ್ಲಿಷ್

೧೦ ಮುಂದೆ›


ನಮಾಮಿ ಬ್ರಹ್ಮಪುತ್ರ- ಎಲ್ಲಿ ನೋಡಿದರೂ ನೀರೇ ನೀರು!
Mouna kanive - ಶುಕ್ರವಾರ ೧೧:೩೩, ಏಪ್ರಿಲ್ ೨೮, ೨೦೧೭

ಭಾರತದ ಏಕೈಕ ಗಂಡು ನದಿ ಬ್ರಹ್ಮಪುತ್ರ.
ಹೀಗೆಂದು ಭಾರತಿಯರೆಲ್ಲರೂ ಭಾವಿಸಿಕೊಂಡಿದ್ದಾರೆ. ಆದರೆ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ನೇತ್ರಾವತಿಯಲ್ಲಿ ಐಕ್ಯಗೊಳ್ಳುವ ಕುಮಾರಧಾರ ನದಿ ದಂಡೆಯಲ್ಲಿ ಹುಟ್ಟಿ ಬೆಳೆದ ನನ್ನಂತವರುರು ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ? ಇಲ್ಲವಲ್ಲ. ಯಾಕೆಂದರೆ ಕುಮಾರಧಾರ ಗಂಡು ನದಿ, ಇದರ ದೊಡ್ಡಣ್ಣನಂತಿರುವ ಬ್ರಹ್ಮಪುತ್ರ ನದಿಗೆ ಗೌರವ ಸಮರ್ಪಿಸುವ ’ನಮಾಮಿ ಬ್ರಹ್ಮಪುತ್ರ’ ಎಂಬ ಉತ್ಸವವೊಂದು ಕಳೆದ ಮಾರ್ಚ್ ೩೧ರಿಂದ ಏಪ್ರಿಲ್ ೪ರ ತನಕ ಐದು ದಿನಗಳ ತನಕ ಅಸ್ಸಾಂನ ವಿವಿದೆಡೆಗಳಲ್ಲಿ ಬ್ರಹ್ಮಪುತ್ರದ ನದಿ ದಂಡೆಗಳಲ್ಲಿ ನಡೆಯಿತು..
 ಅಸ್ಸಾಂನ ರಾಜಧಾನಿ ಗೌಹಾಟಿ. ಪುರಾಣ್ದ ಹಿನ್ನೆಲೆಯಿಂದ ನೋಡಿದರೆ ಮಹಾಭಾರತದಲ್ಲಿ ಕಾಮರೂಪವೆಂಬ ರಾಜ್ಯದ ಉಲ್ಲೇಖವಿದೆ. ಅದರ ರಾಜಧಾನಿ ಪ್ರಾಗ್ಜ್ಯೋತಿಷ್ಯಪುರ. ಅಂದಿನ ಪ್ರಾಗ್ಜೋತಿಷ್ಯಪುರವೇ ಇಂದಿನ ಗೌಹಾಟಿ.
ಯಾಕೋ ಗೊತ್ತಿಲ್ಲ. ನದಿಗಳೆಂದರೆ ನನಗೆ ವಿಪರೀತ ಆಕರ್ಷಣೆ. ನದಿ ದಂದೆಯಲ್ಲಿ ಹುಟ್ಟಿ, ಐದಾರು ನದಿಗಳನ್ನು ದಾಟಿ ಶಾಲೆಗೆ ಹೋಗುತ್ತಾ ಕೌಮಾರ್ಯವನ್ನು ಕಳೆದದ್ದಕ್ಕಿರಬಹುದೆನೋ! ಒಟ್ಟಿನಲ್ಲಿ ನದಿಯೆಂಬುದು ರಮ್ಯಗೆಳೆಯನಂತೆ ನನ್ನ ಬದುಕಿನುದ್ದಕ್ಕೂ  ಪ್ರವಹಿಸುತ್ತಲೇ ಇದೆ.
ಬ್ರಹ್ಮಪುತ್ರ ಹಲವು ವೈಶಿಷ್ಟಗಳನ್ನೊಳಗೊಂಡ ಮಹಾನದಿ. ಅದು ಈಗ ಚೀನಾದ ಸ್ವಾಧೀನದಲ್ಲಿರುವ ಟಿಬೇಟ್ ನಲ್ಲಿ ಸಮುದ್ರ ಮಟ್ಟದಿಂದ ೧೭೦೯೩ ಅಡಿ ಎತ್ತರದಲ್ಲಿ ಹುಟ್ಟುತ್ತದೆ. ಅಲ್ಲಿ ಅದಕ್ಕಿರುವ ಹೆಸರು ಯಾರ್ಲುಂಗ್ ಟಾಂಗ್ಪೋ. ಇಲ್ಲಿಂದ ಆರಂಭವಾಗುವ ಅದರ ಪಯಣ ಭಾರತವನ್ನು ದಾಟಿ ಬಾಂಗ್ಲಾ ದೇಶದತ್ತ ಮುನ್ನುಗ್ಗಿ ಬಂಗಾಳಕೊಲ್ಲಿಯನ್ನು ಸೇರುವಲ್ಲಿಯವರೆಗಿನ ಅದರ ಉದ್ದ ೨೯೦೦ ಕಿಮೀ. ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಅದರ ಉದ್ದ ೩೩೫೦ ಕಿಮೀ. ಇದರಲ್ಲಿ ೧೭೦೦ ಕಿಮೀ ತಿಬೇಟ್ ನಲ್ಲಿ ಹರಿಯುತ್ತದೆ. ಬಾರತದಲ್ಲಿ  ೯೧೬ ಕಿಮೀ ಮತ್ತು ಬಾಂಗ್ಲಾದಲ್ಲಿ ೨೮೪ ಕಿಮೀ ದೂರ ಕ್ರಮಿಸುತ್ತದೆ. ಬಾಂಗ್ಲದಲ್ಲಿ ಅದಕ್ಕಿರುವ ಹೆಸರು ಜಮುನಾ. ಟಿಬೇಟ್ ನಲ್ಲಿ ಇದು ಹತ್ತುಸಾವಿರ ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿ ಹರಿಯುತ್ತಿರುತ್ತದೆ.. ಇಷ್ಟು ಎತ್ತರದಲ್ಲಿ ಹರಿಯುತ್ತಿರುವ ಜಗತ್ತಿನ ಮೊದಲ ನದಿಯಿದು. 
ಅರುಣಾಚಲಪ್ರದೇಶದ ಮುಖಾಂತರ ಭಾರತವನ್ನು ಪ್ರವೇಶಿಸುತ್ತದೆ. ಹಿಮಾಚಲ ಪ್ರದೇಶ  ಕೂಡಾ ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುವ ಕಾರಣದಿಂದಾಗಿ ಅಲ್ಲಿಯೂ ಬ್ರಹ್ಮಪುತ್ರ ಉಪ್ಪರಿಗೆಯ ಮೇಲಿನ ನದಿಯೇ. ಅಲ್ಲಿ ಅದಕ್ಕಿರುವ ಹೆಸರು ಸಿಯಾಂಗ್. ಸಿಯಾಂಗ್ ನದಿಗೆ ಡಿಬಾಂಗ್ ಮತ್ತು ಲೋಹಿತ್ ನದಿಗಳು ಸೇರಿಕೊಳ್ಳುತ್ತವೆ. ಅಸ್ಸಾಂಗೆ ಇಳಿದ ಮೇಲೆ ಅದು ಸ್ವಲ್ಪ ಮಟ್ಟಿಗೆ ನೆಲದ ನದಿಯಾಗುತ್ತದೆ. ಇಲ್ಲಿ ಹಲವಾರು ಉಪನದಿಗಳು ಇದರೊಡನೆ ಸೇರಿಕೊಂಡು ಅದಕ್ಕೆ ಬ್ರಹ್ಮಪುತ್ರ ಎಂಬ ಅಭಿಧಾನ ದೊರೆಯುತ್ತದೆ.
ಬ್ರಹ್ಮದೇವನ ಪುತ್ರನಾದ ಕಾರಣ ಇದು ಇದು ಬ್ರಹ್ಮಪುತ್ರ. ಹಾಗಾಗಿಯೇ ಇದು ಗಂಡುನದಿ, ಗಂಡಾದ ಕಾರಣದಿಂದಾಗಿಯೇ ಅಬ್ಬರ ಜಾಸ್ತಿ; ವಿದ್ವಂಸಕತೆಯೆಡೆಗೆ ಒಲವು. ಇದರ ಹರಹನ್ನು ನೋಡಿದವರು ಖಂಡಿತವಾಗಿಯೂ ಇದನ್ನು ನದಿಯೆನ್ನಲಾರರು ಅದೊಂದು ಸಮುದ್ರ.ಅದರಲ್ಲಿಯೂ ಸಾಗರದಂತೆ ಅಲೆಗಳೇಳುತ್ತವೆ. ಸೊಕ್ಕಿ ಹರಿದರೆ ಅಪಾರ ಸಂಖ್ಯೆಯಲ್ಲಿ ಆಸ್ತಿ ಮತ್ತು ಜೀವ ಹಾನಿಯನ್ನು ಉಂಟುಮಾಡುತ್ತದೆ. ಪ್ರತಿವರ್ಷವೂ ಈ ನದಿ ಉಕ್ಕಿ ಹರಿಯುತ್ತದೆ; ಇಲ್ಲಿಯ ಜನರ ದುಃಖಕ್ಕೆ ಕಾರಣವಾಗುತ್ತದೆ. ಬ್ರಹ್ಮಪುತ್ರ ಅಸ್ಸಾಂ ಜನತೆಯ ಜೀವಚೈತನ್ಯವೂ ಹೌದು, ಕಣ್ಣೀರಿನ ನದಿಯೂ ಹೌದು. ಈ ನದಿ ಅಸ್ಸಾಂ ರಾಜ್ಯವನ್ನು ಸದಾ ಹಚ್ಚ ಹಸಿರನ್ನಾಗಿ ನೋಡಿಕೊಳ್ಳುತ್ತದೆ, ಸುತ್ತ ನೀಲಾಚಲ ಪರ್ವತ. ಎಲ್ಲಿ ನೋಡಿದರೂ ಹಸಿರಾದ ಬಯಲು, ಈತ ರೊಚ್ಚಿಗೆದ್ದರೆ ಮಾರಣಹೋಮ ನಡೆಯುತ್ತದೆ.  ೧೯೭೦ರಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಸುಮಾರು ಮೂರು ಲಕ್ಷದಿಂದ ಐದು ಲಕ್ಷದಷ್ಟು ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಈ ನದಿಯಲ್ಲಿ ನೆರೆ ಬಂದು ಕಾಜೀರಂಗ ನ್ಯಾಷನಲ್ ಪಾರ್ಕ್ ಮುಳುಗಿ ಅಸಂಖ್ಯಾತ ಪ್ರಾಣಿಗಳು ಕೊಚ್ಚಿ ಹೋಗಿದ್ದವು. ಇಲ್ಲಿಯೇ ಅಳಿವಿನಂಚಿನಲ್ಲಿರುವ ಘೆಂಡಾಮ್ರುಗಳಿರುವುದು. ಹಾಗಾಗಿ ಕಾಜಿರಂಗ ವರ್ಲ್ಡ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿದೆ.
ಅಸ್ಸಾಂನಲ್ಲಿ ಬ್ರಹ್ಮಪುತ್ರದ ಆಳ ವಿಸ್ತಾರಗಳು ಎಷ್ಟಿದೆಯೆಂದರೆ ಕೆಲವೆಡೆ ಇದರ ಅಗಲ ಹತ್ತು ಕಿಮೀ ಗಳಿಗಿಂತಲೂ ಹೆಚ್ಚು. ಆಳ  ಸರಾಸರಿ ೧೨೪ ಅಡಿ. ಕೆಲವೆಡೆ ಇದು ೩೬೦ ಅಡಿ ತಲುಪುತ್ತದೆ. ಆಳ ಮತ್ತು ವಿಸ್ತಾರದಲ್ಲಿ ಇದಕ್ಕೆ ದಕ್ಷಿಣ ಅಮೇರಿಕಾದ ಅಮೇಜಾನ್ ನದಿಯ ನಂತರದ ಸ್ಥಾನ ದೊರೆಯುತ್ತದೆ.
ಬ್ರಹ್ಮಪುತ್ರ ಎಗ್ಗಿಲ್ಲದ ಹರಿಯುವ ನದಿ. ಇದು ತನ್ನ ಬಾಹುಗಳನ್ನು ಎಲ್ಲಿ ಬೇಕಾದರೂ ಚಾಚಿಕೊಳ್ಳಬಹುದು. ತನ್ನ ದೇಹವನ್ನೇ ಸೀಳಿಕೊಳ್ಳಬಹುದು, ಹಾಗೆ ಎರಡು ಕವಲಾಗಿ ಹರಿದು ನಡುವೆ ಮಾಜುಲಿ ಎಂಬ ೧೨೨೫ ಚದರ ಕಿಮೀ ದ್ವೀಪವೊಂದನ್ನು ಸ್ರುಷ್ಟಿಸಿದೆ, ಇದು ಪ್ರಪಂಚದಲ್ಲಿಯೇ ನದಿಯೊಂದು ಸ್ರುಜಿಸಿದ ಅತ್ಯಂತ ದೊಡ್ಡ ದ್ವೀಪವಾಗಿದೆ. ಕಳೆದ ವರ್ಷ ಅದನ್ನೊಂದು ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿದೆ. ಪ್ರಸ್ತುತ ಅಸ್ಸಾಂನ ಮುಖ್ಯಮಂತ್ರಿಯಾಗಿರುವ ಸಬ್ರಾನಂದ ಸೋನುವಾಲ ಮಾಜುಲಿ ದ್ವೀಪಕ್ಕೆ ಸೇರಿದವರು.
ಇಂತಹ ಉನ್ಮತ್ತ  ನದಿಯ ಉತ್ಸವವನ್ನು ನೋಡುವ ಬಯಕೆ ಹುಟ್ಟಿದರೆ ಅದನ್ನು ಹತ್ತಿಕ್ಕಲು ಸಾಧ್ಯವೇ? ಈ ಹಿಂದೆ ಲಡಾಕ್ ನಲ್ಲಿ ನಡೆದ ’ಸಿಂಧು ಉತ್ಸವ’ದಲ್ಲಿ ಭಾಗಿಯಾಗಿದ್ದೆ. ಅದೇ ಗುಂಗಿನಲ್ಲಿ ಗೌಹಾಟಿಗೆ ವಿಮಾನ ಹತ್ತಿದ್ದೆ.  ಆದರೆ ನಾನಲ್ಲಿ ಇಳಿಯುತ್ತಿರುವಾಗಲೇ ಮಳೆರಾಯ ಅದ್ದೂರಿಯ ಸ್ವಾಗತ ನೀಡಿದ್ದ. ಮಳೆ ಹೊಯ್ದರೆ  ಗೌಹಾಟಿ ನಗರದ ಹೊರವಲಯವೆಲ್ಲಾ ಕೊಚ್ಚೆಗುಂಡಿಯಂತಾಗುತ್ತದೆ. ಅಲ್ಲಿ ಹಲವಾರು ಕಡೆ ಸಮರ್ಪಕವಾದ ಒಳಚರಂಡಿ ವ್ಯವಸ್ಥೆಯಿದ್ದಂತಿರಲಿಲ್ಲ.ಗೌಹಾಟಿ ವಿಮಾನ ನಿಲ್ದಾಣದಿಂದ ಗೌಹಾಟಿಯ ಹೊರವಲಯದಲ್ಲಿರುವ ಬ್ರಹ್ಮಪುತ್ರ ದಂಡೆಯಲ್ಲಿರುವ ಸುಕ್ರೇಶ್ವರ ಘಾಟ್ ಗೆ ೨೨ ಕಿ.ಮೀ ದೂರವಿದೆ. ಇಲ್ಲೆಯೇ ನಮಾಮಿ ಬ್ರಹ್ಮಪುತ್ರದ ಮುಖ್ಯ ಉತ್ಸವ ನಡೆಯುತ್ತಿರುವುದು.
ನಮಾಮಿ ಬ್ರಹ್ಮಪುತ್ರ ಉತ್ಸವದ ಆಚರಣೆಗೆ ಅಸ್ಸಾಮಿನ ಎಲ್ಲಾ ೨೧ ಜಿಲ್ಲೆಗಳೂ ಸಜ್ಜುಗೊಂಡಿದ್ದವು. ಹದಿನಾಲ್ಕು ಕೋಟಿ ರೂಪಯಿಗಳ ವೆಚ್ಚದಲ್ಲಿ ಬ್ರಹ್ಮಪುತ್ರ ನದಿ ದಂಡೆಗಳು ಮದುವೆ ಮಂಟಪದಂತೆ ಸಿಂಗಾರಗೊಂಡಿದ್ದವು. ಬಗೆ ಬಗೆಯ ಭಕ್ಷಬೋಜ್ಯದ ಶಾಖಾಹಾರಿ ಮತ್ತು ಮಾಂಸಹಾರಿ ಸ್ಟಾಲ್ ಗಳು ತಲೆಯೆತ್ತಿ ನಿಂತಿದ್ದವು. ಆದರೆ ಮಳೆರಾಯ ಇದೆಲ್ಲವನ್ನೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಮಾಡಿಬಿಟ್ಟ.
ನಮ್ಮಲ್ಲಿ ಅಂದರೆ ಕರ್ನಾಟ್ಕದಲ್ಲಿ ಜೂನ್ ಮೊದಲ ಅಥವಾ ಎರಡನೆ ವಾರದಲ್ಲಿ ಮಳೆಗಾಲ ಆರಂಭವಾಗುತ್ತದೆ. ಅದಕ್ಕೂ ಒಂದು ವಾರಕ್ಕಿಂತ ಮೊದಲು ನೈರುತ್ಯ ಮಾರುತ ಕೇರಳವನ್ನು ಪ್ರವೇಶಿಸಿಸುತ್ತದೆ. ಬೌಗೋಳಿಕವಾಗಿ ನಮ್ಮ ದೇಶ ಬಹು ವಿಸ್ತಾರವನ್ನು ಹೊಂದಿದೆ. ಕರ್ನಾಟಕದಿಂದ ಮೂರು ಸಾವಿರ ಕಿ.ಮೀ ದೂರದಲ್ಲಿರುವ ಅಸ್ಸಾಂಗೆ ವಾಡಿಕೆಯ ಪ್ರಕಾರ ಮಳೆಗಾಲ ಆರಂಭವಾಗುವುದು ಬಿಹು ಹಬ್ಬದ ನಂತರವೇ.ಅಂದರೆ ಏಪ್ರಿಲ್ ೧೪ರ ನಂತರ. ಅದೇ ದಿನವನ್ನು ತುಳುನಾಡಿಗರೂ ಬಿಸು ಎಂದು ಆಚರಿಸುತ್ತಾರೆ, ಅಂದು ಸೂರ್ಯಮಾನ ಯುಗಾದಿ. ಅಂದರೆ ಹೊಸ ವರ್ಷದ ಆರಂಭ. ರೈತಾಪಿ ಜನರು ಬಿತ್ತನೆಗೆ ಭೂಮಿ ಹದಗೊಳಿಸಿ ವಸಂತಋತುವನ್ನು ಬರಮಾಡಿಕೊಳ್ಳುವ ಕಾಲ.
ಇದೆಲ್ಲಾ ಲೆಕ್ಕಾಚಾರವನ್ನು ಹಾಕಿಯೇ ನಮಾಮಿ ಬ್ರಹ್ಮಪುತ್ರ ಉತ್ಸವನ್ನು ಆಯೋಜಕರು ಹಮ್ಮಿಕೊಂಡಿದ್ದರು. ಆಯೋಜಕರಿಗೆ ಮಧ್ಯ ಪ್ರದೇಶ ಸರಕಾರವು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ’ನಮಾಮಿ ನರ್ಮದಾ’ ಉತ್ಸವ ಫ್ರ‍ೇರಣೆಯಾಗಿತ್ತು. ಪ್ರವಾಸೋಧ್ಯಮ, ಅರ್ಥಿಕ , ಮತ್ತು ಸಾಂಸ್ಕ್ರುತಿಕ ಆಯಾಮಗಳ ಬೆಸುಗೆಯನ್ನು ನಮಾಮಿ ಬ್ರಹ್ಮಪುತ್ರದ ಈ ಮೊದಲ ಉತ್ಸವದಲ್ಲಿ ಜಗತ್ತಿನೆದುರು ತೋರಿಸಲು ಅವರು ಉತ್ಸುಕರಾಗಿದ್ದರು. ಆದರೆ ಈ ಬಾರಿ ಏಪ್ರಿಲ್ ಆರಂಭಕ್ಕೆ ಮುನ್ನವೇ ಮಳೆರಾಯ ಧಾಂಗುಡಿಯಿಟ್ಟಿದ್ದ.
ಅಸ್ಸಾಂ ಮೂಲತಃ ಬೋಡೋ ಎಂಬ ಬುಡಕಟ್ಟು ಜನಾಂಗದವರ ನಾಡು. ಅವರು ಇದನ್ನು ’ಬುಲ್ಲಮ್ ಬುಧೂರ್’ ಎಂದು ಕರೆಯುತ್ತಾರೆ. ಅವರ ಹಾಡು, ಕವಿತೆಗಳಲ್ಲಿ ಈ ನದಿಗೆ ವಿಶೇಶವಾದ ಮನ್ನಣೆಯಿದೆ. ಬೋಡೋ ಸೇರಿದಂತೆ ಇನ್ನಿತರ ಹಲವು ಬುಡಕಟ್ಟು ಜನರನ್ನು, ಮುಸ್ಲಿಮರನ್ನು, ಕ್ರಿಶ್ಚಿಯನರನ್ನು ಸರಕಾರವು ನವಾಮಿ ಬ್ರಹ್ಮೋತ್ಸವದಿಂದ ದೂರವಿಡಲಾಗಿತ್ತು ಎಂಬ ಮಾತುಗಳು ಉತ್ಸವದಲ್ಲಿ ಅಲ್ಲಲ್ಲಿ ಕೇಳಿಬಂದವು. ಗಂಗಾ ಆರತಿಯ ಮಾದರಿಯಲ್ಲೇ ಉದ್ಘಾಟನೆಯಂದು ಬ್ರಹ್ಮಪುತ್ರನಿಗೆ ದಶಾಸ್ವಮೇದ ಘಾಟ್ ನಲ್ಲಿ ದೀಪದಾರತಿಯನ್ನು ಮಾಡಲಾಗಿತ್ತು. ಅದಕ್ಕೆಂದೇ ನಿಯೋ ವೈಷ್ಣವ ಪೂಜಾರಿಗಳನ್ನು ಹರಿದ್ವಾರದಿಂದ ಕರೆಸಲಾಗಿತ್ತು. ಆದರೆ ಗೌಹಾಟಿಯ ರಕ್ಷಕ ದೇವತೆಯಂತೆ ಎತ್ತರದ ಗುಡ್ಡದ ಮೇಲೆ ಕುಳಿತಿರುವ ಶಕ್ತಿ ದೇವತೆ ಕಾಮಕ್ಯ ದೇವಾಲಯದ ಮುಖ್ಯ ಅರ್ಚಕರಿಗೆ ಉತ್ಸವಕ್ಕೆ ಅಹ್ವಾನ ಕೊಟ್ಟಿರಲಿಲ್ಲ, ಇದು ಅಸ್ಸಾಮಿನ ಸತ್ರಿಯಾ [Sattriya] ಕಲ್ಚರ್ ಗೆ ಮಾಡಿದ ಅವಮಾನ ಎಂಬ ಮಾತುಗಳೂ ಕೇಳಿ ಬಂದವು.
ರಾಷ್ಟ್ರಪತಿ ಪ್ರಣವ ಮುಖರ್ಜಿಯವರು ಉತ್ಸವನ್ನು ಉದ್ಘಾಟನೆಯನ್ನು ಮಾಡಿದಾಗ ಮಳೆರಾಯ ಅತ್ತ ಸುಳಿದಾಡದೆ ಮಾನ ಕಾಪಾಡಿದ್ದ. ಆದರೆ ಮರುದಿನ ಏಪ್ರಿಲ್ ಒಂದರಿಂದ ಸತತ ನಾಲ್ಕು ದಿನ ಹನಿ ತುಂಡಾಗಲೇ ಇಲ್ಲ. ಹಾಗಾಗಿ ಯಾವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರಗಲಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಕಲಾತಂಡಗಳು, ಕ್ಲಾವಿದರು, ಹಾಡುಗಾರರು, ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲೆಂದು ಉತ್ಸಾಹದಿಂದ ಬಂದಿದ್ದರು. ಅವರೆಲ್ಲಾ ನಿರಾಶೆಯಿಂದ ಹಿಂದಿರುಗಬೇಕಾಯ್ತು. ಕೊನೆಯ ದಿನ ಸಮಾರೋಪವನ್ನು ಕೂಡಾ ದೂರದ ಒಂದು ಸಭಾಂಗಣದಲ್ಲಿ ಮಾಡಬೇಕಾಯ್ತು. ಮಳೆ ಎಕ್ಕಸಕ್ಕ ಸುರಿಯುತ್ತಿದ್ದ ಕಾರಣ ನಾನೂ ಸೇರಿದಂತೆ ಬಹುತೇಕ ಪ್ರವಾಸಿಗರಿಗೆ ಅಲ್ಲಿಗೆ ಹೋಗಲಾಗಲಿಲ್ಲ. ಕೊನೆಯ ದಿನ ಸಂಜೆಯಾಗುತ್ತಿದ್ದಂತೆ ಬ್ರಹ್ಮಪುತ್ರಾ ಉಕ್ಕೇರಿ ವೇದಿಕೆಯತ್ತ ಮುನ್ನುಗ್ಗಲು ಪ್ರಯತ್ನಿಸುತ್ತಿತ್ತು. ಮೆಲ್ಲ ಮೆಲ್ಲನೆ ಅಂಗಡಿ ಮುಂಗಟ್ಟುಗಳತ್ತ ತೋಳು ಚಾಚತೊಡಗಿತು. ದಂಡೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಾ ಅವು ಪುಟ್ಟ ಪುಟ್ಟ ಕಣಿವೆಗಳಾಗುತ್ತಾ ದೊಡ್ಡದಾಗತೊಡಗಿತು. ಅಲ್ಲೇ ಇದ್ದ ಸೇನೆಯ ವಿಪತ್ತು ನಿರ್ವಹಣ ತಂಡದ ಸೈನಿಕರು ಅತ್ತಿತ್ತ ಓಡಾಡುವುದು ಹೆಚ್ಚಾಗತೊಡಗಿತು. ಅದನ್ನೆಲ್ಲಾ ನೋಡುತ್ತಾ ನಾನು ಮನಸ್ಸಿನಲ್ಲೇ ಅಂದುಕೊಂಡೆ; ''ಉದ್ಘಾಟನೆಯನ್ನು ಮನುಷ್ಯರು ತಮಗೆ ಬೇಕಾದಂತೆ ಮಾಡಿಕೊಂಡರು. ಸಮಾರೋಪವನ್ನು ನನಗೆ ಬೇಕಾದಂತೆ ನಾನೇ ಮಾಡಿಕೊಂಡೆ''  ಎಂದು ಬ್ರಹ್ಮಪುತ್ರ ಹೇಳಿಕೊಳ್ಳುತ್ತಿರಬಹುದೇ? ಅಂತ. ಆಶ್ಚರ್ಯವೆಂಬಂತೆ ಮರುದಿನ ಮಧ್ಯಾಹ್ನ ನಾನು ಏರ್ಪೋರ್ಟಿಗೆ ಬರುವ ತನಕ ಮಳೆಯಾಗಲಿಲ್ಲ!
ಇದೆಲ್ಲಾ ಏನೇ ಇರಲಿ. ದೂರದೇಶಗಳಿಂದ, ದೇಶದ ಇನ್ನಿತರ ರಾಜ್ಯಗಳಿಂದ ಉತ್ಸವದಲ್ಲಿ ಪಾಲ್ಗೊಳ್ಳಲು ಜನರು ಉತ್ಸಾಹದಿಂದ ಆಗಮಿಸಿದ್ದರು. ಕೈಯ್ಯಲ್ಲಿ ಬಣ್ಣಬಣ್ಣದ ಕೊಡೆ ಹಿಡಿದುಕೊಂಡೋ, ಇಲ್ಲವೇ ಮಳೆಯಲ್ಲಿ ನೆಂದುಕೊಂಡೋ ಉತ್ಸವಕ್ಕೆಂದು ನಿಗದಿಯಾದ ಜಾಗದಲ್ಲಿ ಓಡಾಡುತ್ತಾ, ಸ್ಟಾಲ್ ಗಳಲ್ಲಿ ತಮಗೆ ಬೇಕಾದ ಬಟ್ಟೆ ಬರೆ, ವಸ್ತುಗಳನ್ನು ಖರೀದಿಸುತ್ತಾ. ಬ್ರಹ್ಮಪುತ್ರನೊಡನೆ ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಿಸುತ್ತಿದ್ದರು. ಸುರಿಯುವ ಮಳೆಯಲ್ಲೇ ಬ್ರಹ್ಮಪುತ್ರದ ನಡುಗಡ್ಡೆಯಲ್ಲಿರುವ ಉಮಾನಂದ ಮತ್ತು ಗುಡ್ಡದ ಮೇಲೆ ಕುಳಿತಿರುವ ಶಕ್ತಿ ದೇವತೆ ಕಾಮಾಕ್ಯದ ದರ್ಶನಕ್ಕೆ ಹೋಗಿ-ಬರುತ್ತಿದ್ದರು.
’ನಮಾಮಿ ಬ್ರಹ್ಮಪುತ್ರ’ ಆಯೋಜಕರ ದ್ರುಷ್ಟಿಯಲ್ಲಿ ಮಳೆಯಿಂದಾಗಿ ಉತ್ಸವ ಅಸ್ತವ್ಯಸ್ತಗೊಂಡಿರಬಹುದು. ಆದರೆ ಪ್ರವಾಸಿಗರ, ಜನಸಾಮಾನ್ಯರ ದ್ರುಷ್ಟಿಯಲ್ಲಿ ಗೆದ್ದಿದೆ. ಮುಂದಿನ ವರ್ಷ ಈ ಸಲ ಈ ಬಾರಿ ಆದ ಲೋಪ ದೋಶಗಳನ್ನು ಸರಿಪಡಿಸಿಕೊಂಡರೆ ದೇಶದ ಅತೀ ದೊಡ್ಡ ನದಿ ಉತ್ಸವ ಇನ್ನೂ ಹಲವು ನದಿ ಉತ್ಸವಗಳಿಗೆ ಮುನ್ನುಡಿಯಾಗಬಹುದು, ಯಾಕೆಂದರೆ ಕರ್ನಾಟಕದಲ್ಲಿಯೂ  ಪ್ರವಾಸೋಧ್ಯಮವನ್ನು ಬಲಪಡಿಸುವ ಉದ್ದೇಶದಿಂದ ’ಕಾವೇರಿ ದರ್ಶನ ಉತ್ಸವ’ಕ್ಕೆ ಕೊಡಗು ಜಿಲ್ಲಾ ಪಂಚಾಯತ್ ಮುಂದಾಗಿದೆ. ಇದಕ್ಕಾಗಿ ಅದು ಕೇಂದ್ರಕ್ಕೆ ೯೪ ಲಕ್ಷ ರೂಪಾಯಿಗಳ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.
ನೆಲ ಜಲ ಭಾಷೆಗಳು ಮನುಷ್ಯರನ್ನು ಭಾವನಾತ್ಮಕವಾಗಿ ಬೆಸೆಯುತ್ತವೆ. ಚೀನಾ ಈಗಾಗಲೇ  ಬ್ರಹ್ಮಪುತ್ರ ನದಿಗೆ ಬಲು ದೊಡ್ಡದಾದ ಅಣೆಕಟ್ಟನ್ನು ಕಟ್ಟಿದೆ. ಈ ನದಿಯ ಇನ್ನಷ್ಟು ನೀರನ್ನು ಕಬಳಿಸಿಕೊಳ್ಳಲು ಅದು ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇದೆ , ಇಂತಹ ಸಂದರ್ಭಗಳಲ್ಲಿ ಈ ನದಿ ನಮ್ಮದು ಎಂಬ ಭಾವನೆ ಮತ್ತಷ್ಟು ಬಲಗೊಳ್ಳಲು ಆ ನದಿ ದಡದಲ್ಲಿ ಹುಟ್ಟಿದ ಕಲೆ, ಸಂಸ್ಕ್ರುತಿಯನ್ನು ಪ್ರಚುರಪಡಿಸುವ ಇಂತಹ ಉತ್ಸವಗಳು ಇನ್ನಷ್ಟು ನಡಿಯುತ್ತಿರಬೇಕು. ಆದರೆ ಇಂತಹ ಉತ್ಸವಗಳು ವೈದಿಕ ಸಂಸ್ಕ್ರುತಿಯ ಮೆರೆಸುವಿಕೆ ಆಗದೆ ನೆಲಮೂಲ ಸಂಸ್ಕ್ರುತಿಯನ್ನೂ ಒಳಗೊಂಡಿರಬೇಕು.
·         [ ಉದಯವಾಣಿ ಪತ್ರಿಕೆಯ ಭಾನುವಾರದ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ]
... ಮುಂದೆ ಓದಿ


ಯಾರೇ ನೀ ಸ್ವಪ್ನ ಸುಂದರಿ
ಹೊನಲು - ಗುರುವಾರ ೦೯:೩೦, ಏಪ್ರಿಲ್ ೨೭, ೨೦೧೭

– ಚೇತನ್ ಪಟೇಲ್. ಕವಿಯಾದೆ ನಾ ನವಿರಾದ ಕವಿತೆ ಬರೆದು ಪದವಾದೆ ನೀ ಸವಿಯಾದ ನೆನಪ ನೆನೆದು ಮುಸುಕಿನ ಮುನ್ನುಡಿ ನಿನ್ ಹೆಸರಿನ ಕೈಪಿಡಿ ಸ್ವಾರಸ್ಯವೇನೂ ಕೇಳು ಸಾರಾಂಶ ನಿನ್ ಹೊರತು ಬೇರೇನೂ ಸ್ವಾಬಿಮಾನಿ ಈ ಮನಸಿನಲ್ಲಿ ಸರ‍್ವಾಂತಾರ‍್ಯಾಮಿ ನೀನು ಕವಲು ದಾರಿಯಲಿ ಕಣ್ಮುಚ್ಚಿ ನಡೆದೇ ಸವಿಯಾದ ಸರಿದಾರಿ ನಿನ್ನೆಡೆಗೆ ಸೆಳೆದಂತಿದೆ ಸಾವಿರಾರು ಹೆಜ್ಜೆಗಳು ನಾಲ್ಕಾರು ತಿರುವುಗಳು... Read More ›... ಮುಂದೆ ಓದಿ


ವಿಶ್ವವಿದ್ಯಾಲಯಗಳನ್ನು ಪಳಗಿಸುವ ಪ್ರಯತ್ನಗಳು
ಕನ್ನಡ ಜಾನಪದ karnataka folklore - ಗುರುವಾರ ೦೨:೧೮, ಏಪ್ರಿಲ್ ೨೭, ೨೦೧೭

ಅನು: ಶಿವಸುಂದರ್ ಸಮಾಜ ವಿಜ್ನಾನ ಸಂಶೋಧನೆಗೆ ನಿಧಿ ಕಡಿತ ಮಾಡಿರುವುದು ದೂರದೃಷ್ಟಿ ಇಲ್ಲದ ಕ್ರಮ. ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೇಲೆ ಅದರಲ್ಲೂ ಅದರ ಸಮಾಜ ವಿಜ್ನಾನದ ಶಿಕ್ಷಣದ ಮೇಲೆ ಇದೀಗ ಮತ್ತೊಂದು ಪ್ರಹಾರ ನಡೆದಿದೆ. ವಿಶ್ವವಿದ್ಯಾಲಯ ಅನುದಾನ ಅಯೋಗ (ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್- ಯು.ಜಿ.ಸಿ)ವು ಸಮಾಜ ವಿಜ್ನಾನ ಶಿಕ್ಷಣಕ್ಕೆ ಕೊಡುತ್ತಿದ್ದ ಅನುದಾನವನ್ನು ಕಡಿತ ಮಾಡಿದೆ. ಪಂಚವಾರ್ಷಿಕ ಯೋಜನೆಗಳು ಸ್ಥಗಿತಗೊಂಡ ಮೇಲೆ  ೧೧ನೇ ಪಂಚವಾರ್ಷಿಕ ಯೋಜನೆಯಡಿ ಯುಜಿಸಿಯು ಸ್ಥಾಪಿಸಿದ್ದ ಹಲವಾರು ಸಮಾಜ ವಿಜ್ನಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳು ಹಣಕಾಸಿನ ಕೊರತೆಯಿಂದ ಕೊನೆಯುಸಿರೆಳೆಯುತ್ತಿವೆ. ಈ ಸಂಸ್ಥೆಗಳಿಗೆ ಹಣಕಾಸು ಅನುದಾನ ನೀಡುವ ಬಗ್ಗೆ ಯುಜಿಸಿ ಯ ದ್ವಂದ್ವಾತ್ಮಕ ನಿಲುವುಗಳು ಹಲವಾರು ಅಧ್ಯಾಪಕರ, ಸಂಶೋಧಕರ ಮತ್ತು ವಿದ್ಯಾರ್ಥಿಗಳ ಹಾಗೂ ಉದಯೋನ್ಮುಖವಾದ ಹಲವಾರು ಅಧ್ಯಯನ ಶಿಸ್ತು ಮತ್ತು ಸಂಕಥನಗಳ ಭವಿಷ್ಯಗಳನ್ನೇ ಪ್ರಶ್ನೆಗೊಳಪಡಿಸಿವೆ. ಭಾರತದ ಹಲವಾರು ಪ್ರಮುಖ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಹರಡಿಹೋಗಿರುವ ಈ ಸಂಶೋಧನಾ ಸಂಸ್ಥೆಗಳು ವಿವಿಧ ಮಟ್ಟಗಳಲ್ಲಿ ಯೋಜನಾ ಅನುದಾನವನ್ನೇ ನೆಚ್ಚಿಕೊಂಡಿವೆ. ಕೆಲವು ಕಡೆ ಈ ಸಂಸ್ಥೆಗಳನ್ನು ವಿಶ್ವವಿದ್ಯಾಲಯಗಳ ವಿಭಾಗಗಳನ್ನಾಗಿಸಲಾಗಿದೆ. ಇನ್ನೂ ಕೆಲವು ಕಡೆ ಅವು ರಾಜ್ಯ ಸರ್ಕಾರದ ಹಾಗು ಮತ್ತಿತರ ಮೂಲಗಳ ಹಣಕಾಸು ನೆರವನ್ನೇ ಆಧರಿಸಿವೆ. ಆದೇನೇ ಇದ್ದರೂ ಎಲ್ಲೆಲ್ಲಿ ಅವು ಸಂಪೂರ್ಣವಾಗಿ ಯೋಜನಾ ಅನುದಾನವನ್ನೇ ನೆಚ್ಚಿಕೊಂಡಿವೆಯೋ ಅಲ್ಲೆಲ್ಲಾ ಒಂದೋ ಮುಚ್ಚಿಹೋಗುವ ಅಥವಾ ಸಿಬ್ಬಂದಿ/ಸಾಮರ್ಥ್ಯ ಕಡಿತದ ಅಪಾಯವನ್ನು ಎದುರಿಸುತ್ತಿವೆ. ಈ ಅನುದಾನದ ಕಡಿತದ ತತ್ಕ್ಷಣದ ಪರಿಣಾಮಗಳೇನೆಂಬ ಸೂಚನೆ ಹೋದ ತಿಂಗಳೇ ದೊರೆತಿತ್ತು. ಕಳೆದ ತಿಂಗಳು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಂಸ್ಥೆಯು ತನ್ನ ಆಡ್ವಾನ್ಸ್ಡ್ ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ (ಮಹಿಳಾ ಅಧ್ಯಯನಗಳ ಉನ್ನತ ಕೇಂದ್ರ), ಸೆಂಟರ್ ಫಾರ್ ಸ್ಟಡಿಸ್ ಆಫ್ ಸೊಷಿಯಲ್ ಎಕ್ಸ್ಲೂಷನ್ ಅಂಡ್ ಇನ್ಕ್ಲೂಸೀವ್ ಪಾಲಿಸೀಸ್ (ಸಾಮಾಜಿಕ ಹೊರದೂಡುವಿಕೆ ಮತ್ತು ಒಳಗೊಳ್ಳುವಿಕೆ ನೀತಿಗಳ ಅಧ್ಯಯನ ಕೇಂದ್ರ), ನೋಡಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್ ಫಾರ್ ಹ್ಯೂಮನ್ ರೈಟ್ ಎಜುಕೇಷನ್ (ಮಾನವ ಹಕ್ಕುಗಳ ಶಿಕ್ಷಣದ ಶ್ರೇಷ್ಠ ಸಂಯೋಜನಾ ಕೇಂದ್ರ)ಗಳ ಹಲವಾರು ಅಧ್ಯಾಪಕರು ಮತ್ತು ಸಂಶೋಧಕರಿಗೆ ಸೇವೆಯಿಂದ ಬಿಡುಗಡೆ ಮಾಡುವ ಪತ್ರಗಳನ್ನು ರವಾನಿಸಿತ್ತು. ಆದರೆ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ಬಂದ ಅಪಾರ ವಿಮರ್ಶೆಗಳಿಂದ ಮತ್ತು ಇತರ ಕಾರಣಗಳಿಂದ ಯುಜಿಸಿಯು ಯೋಜನಾ ಬಾಬತ್ತಿನಲ್ಲಿ ಅನುದಾನವನ್ನು ಪಡೆಯುತ್ತಿದ್ದ ಎಲ್ಲಾ ಯೋಜನೆಗಳನ್ನು ಒಂದು ವರ್ಷಗಳ ಕಾಲ ಅಂದರೆ ೨೦೧೮ರ ಮಾರ್ಚ್ ೩೧ರವರೆಗೆ ವಿಸ್ತರಿಸಿತು. ಹೀಗಾಗಿ ಟಾಟಾ ಸಾಮಾಜಿಕ ಅಧ್ಯಯನಗಳ ಸಂಸ್ಥೆಯೂ ಬಹುಪಾಲು ಅಧ್ಯಾಪಕರ ಸೇವೆಗಳನ್ನು ತಾತ್ಕಾಲಿಕವಾಗಿ ಮುಂದುವರೆಸಿದೆ. ಈ ತುಂಡು ತುಂಡು ಕ್ರಮವು ಸದ್ಯದ ಹೋರಾಟಗಳನ್ನು ತಣ್ಣಗಾಗಿಸಿದ್ದರೂ ಇಂಥಾ ಕೇಂದ್ರಗಳ ದೀರ್ಘಕಾಲೀನ ಭವಿಷ್ಯವೇನು ಎಂಬ ಪ್ರಶ್ನೆಯನ್ನೇನು ಬಗೆಹರಿಸಿಲ್ಲ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳು ೧೯೭೦ರ ಮೊದಲ ಭಾಗದಲ್ಲೇ ಸ್ಥಾಪಿತವಾಗಿದ್ದರೂ ಯುಜಿಸಿ ಅವಕ್ಕೆ ಅನುದಾನ ನೀಡಿದ್ದು ೧೯೮೦ರ ದಶಕದ ಮಧ್ಯಭಾಗದಲ್ಲಿ. ಹಾಗಿದ್ದರೂ ಇಂಥಾ ವಿಶೇಷ ಅಧ್ಯಯನ ಕೇಂದ್ರಗಳನ್ನು ಅಧ್ಯಾಪನ, ಸಂಶೋಧನೆ ಮತ್ತು ವಿಸ್ತರಣೆಗಳನ್ನು ಒಳಗೊಂಡಂಥ ಒಂದು ಪರಿಪೂರ್ಣ ವಿಭಾಗಗಳನ್ನಾಗಿ ಬೆಳೆಸಲು ಮತ್ತು ವಿಸ್ತರಿಸಲು ಬೇಕಾದ ಸಂಪನ್ಮೂಲಗಳನ್ನು ಒದಗಿಸುವ ಅಗತ್ಯವಿದೆಯೆಂದು ೧೧ನೇ ಪಂಚವಾರ್ಷಿಕ ಯೋಜನೆಯಲ್ಲಿ ಬಲವಾದ ಪ್ರತಿಪಾದನೆ ಮಾಡಲಾಗಿತ್ತು. ಉದಾಹರಣೆಗೆ ಮಹಿಳಾ ಅಧ್ಯಯನ ಕೇಂದ್ರಗಳಿಗೆ ಅಂತರ್ ಶಿಸ್ತೀಯ ಅಧ್ಯಯನ ಚೌಕಟ್ಟನ್ನು ಅಭಿವೃದ್ಧಿಪಡಿಸುವ, ಇತರ ಶಿಸ್ತುಗಳನ್ನು ಪರಿವರ್ತನೆ ಮಾಡುವಂಥಾ ದೃಷ್ಟಿಕೋನವನ್ನು ರೂಪಿಸುವ, ನೀತಿಗಳನ್ನು ರೂಪಿಸುವ ಮತ್ತು  ಸಂಶೋಧನೆಯಲ್ಲಿ ಮತ್ತು ನೀತಿಗಳಲ್ಲಿ  ದಲಿತ, ಆದಿವಾಸಿ, ದುಡಿಯುವ ಮತ್ತು ಧಾರ್ಮಿಕ ಸಮುದಾಯಗಳಿಗೆ ಸೇರಿದ ಮಹಿಳೆಯರು ಎದ್ದು ಕಾಣುವಂಥ ಅಧ್ಯಯನಗಳನ್ನು ರೂಪಿಸುವ ನಿರ್ದೇಶನಗಳನ್ನು ನೀಡಲಾಗಿತ್ತು. ಅಂಥಾ ಕೇಂದ್ರಗಳು ಹೊಸ ಅಂತರ್ ಶಿಸ್ತೀಯ ವಿಧಾನಗಳಿಂದ ಸಬಲರಾದ ಅಧ್ಯಾಪನಾ ಸಿಬ್ಬಂದಿಗಳೊಂದಿಗೆ ಜಾತಿ, ವರ್ಗ ಮತ್ತು ಲಿಂಗಸಂಬಂಧೀ ಅಧ್ಯಯನಗಳಲ್ಲಿ ಹೊಸ ಮತ್ತು ವಿಮರ್ಶಾತ್ಮಕ ಸಂಶೋಧನಾ ಕಾರ್ಯಸೂಚಿಗಳನ್ನೇ ಮುಂದಕ್ಕೆ ತಂದರು. ಈ ಪತ್ರಿಕೆಯ ೨೦೦೨ರ ಡಿಸೆಂಬರ್ ೧೫ರ ಸಂಚಿಕೆಯಲ್ಲಿ ಸಮಾಜಶಾಸ್ತ್ರಜ್ನ ಗೋಪಾಲ್ ಗುರು ಅವರು  ಸಮಾಜ ವಿಜ್ನಾನಗಳು ಎಷ್ಟರಮಟ್ಟಿಗೆ ಆದರ್ಶಮಯವಾಗಿವೆ (ಹೌ ಎಗಿಲಟೇರಿಯನ್ ಆರ್ ದಿ ಸೊಷಿಯನ್ ಸೈನ್ಸಸ್) ಎಂದು ಪ್ರಶ್ನಿಸಿದ್ದರು. ಅವರು ನಮ್ಮ ಅಕಡೆಮಿಕ್ ಮತ್ತು ಸಾಂಸ್ಥಿಕ ರಚನೆಗಳ ಗುಣಲಕ್ಷಣಗಳಲ್ಲಿ ಅಡಕವಾಗಿರುವ ಸಾಂಸ್ಕೃತಿಕ ಶ್ರೇಣೀಕರಣಗಳನ್ನು ಖಂಡಿಸಿದ್ದಲ್ಲದೆ ನಮ್ಮ ಸಮಾಜ ವಿಜ್ನಾನಗಳ ಪರಿಕಲ್ಪನಾತ್ಮಕ ಕಾಣ್ಕೆಗಳ ಸಾಮಾಜಿಕ ತಳಹದಿಯನ್ನೇ ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದರು. ನಿರ್ದಿಷ್ಟವಾಗಿ ಇಂಥಾ ಅಕೆಡೆಮಿಕ್ ವಾತಾವರಣದಲ್ಲಿಯೇ ಈ ಕೇಂದ್ರಗಳು ಸ್ಥಾಪಿತಗೊಂಡು ತಮ್ಮ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದ್ದವು. ಅವು ಸಾಂಪ್ರದಾಯಿಕ ಸಮಾಜ ಶಾಸ್ತ್ರೀಯ ಶಿಸ್ತುಗಳಿಗೆ ಮತ್ತು ವಿದ್ವತ್ತುಗಳ ಜ್ನಾನ ಮೀಮಾಂಸೆಗಳಿಗೆ ಸವಾಲು ಹಾಕಿದವು.  ಸಿದ್ಧಾಂತ ಮತ್ತು ಆಚರಣೆ, ರಚನೆ ಮತ್ತು ಏಜೆನ್ಸಿ ಮತ್ತು ಎಡ ಮತ್ತು ಬಲಪಂಥೀಯ ರಾಜಕೀಯಗಳೆಂಬ, ಆವರೆಗೆ ಚಾಲ್ತಿಯಲ್ಲಿದ್ದ ಧ್ರೃವೀಕೃತ ಇಬ್ಬಗೆ ಪರಿಕಲ್ಪನೆಗಳನ್ನು ಮತ್ತೊಮ್ಮೆ ಪರೀಕ್ಷೆಗೊಡ್ಡಿದವು. ಉದಾಹರಣೆಗೆ ಪುಣೆಯ ಕ್ರಾಂತಿಜ್ಯೋತಿ ಸಾವಿತ್ರಿಭಾಯಿ ಫುಲೆ ಮಹಿಳಾ ಅಧ್ಯಯನ ಕೇಂದ್ರವು ಈವರೆಗೆ ಕೇವಲ ಅಧ್ಯಯನಗಳ ವಸ್ತುವಾಗಿದ್ದ ಅಲಕ್ಷಿತ ಸಮುದಾಯಗಳ ವಿದ್ವಾಂಸರನ್ನು ಒಳಗೊಳ್ಳಲು ಬೇಕಾಗುವ ಪರ್ಯಾಯ ಶಿಕ್ಷಣಶಾಸ್ತ್ರ ಮತ್ತು ಸಂಪನ್ಮೂಲಗಳನ್ನು ಒಟ್ಟುಮಾಡಿತು. ಈಬಗೆಯ ಅಂತರ್ಶಿಸ್ತೀಯ ಕೇಂದ್ರಗಳು ಸ್ಥಾಪನೆಯಾಗುತ್ತಿರುವ ಕಾಲದಲ್ಲೇ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿ ಮೀಸಲಾತಿ ಕಾಯಿದೆ-೨೦೦೬ ಕೂಡ ಜಾರಿಗೆ ಬಂದಿತ್ತು. ಇದರಿಂದಾಗಿ ೨೦೦೭ರಿಂದ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ಜಾತಿಗಳ ಮೀಸಲಾತಿಯೂ ಜಾರಿಗೆ ಬಂದಿತು ಮತ್ತು ಒಟ್ಟಾರೆಯಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯು ಹೆಚ್ಚಿತು. ಈ ಮೀಸಲಾತಿಯು ಉನ್ನತ ಶಿಕ್ಷಣದಲ್ಲಿನ ವಿದ್ಯಾರ್ಥಿ ಸಮುದಾಯದ ಹಿನ್ನೆಲಗಳ ವೈವಿಧ್ಯತೆಯನ್ನು ವಿಸ್ತರಿಸಿತು. ಹೊಸದಾಗಿ ಸ್ಥಾಪಿತವಾದ ಈ ಸಂಸ್ಥೆಗಳು ಜಾತಿ, ಪಿತೃಪ್ರಾಧಾನ್ಯತೆ, ಮುಖ್ಯಧಾರೆ ಸಂಕಥನಗಳನ್ನು ಮತ್ತು ಪ್ರಭುತ್ವ ದಮನಗಳನ್ನು ಪ್ರಶ್ನಿಸಲು ಬೇಕಾದ ಸೈದ್ಧಾಂತಿಕ ಪ್ರೇರಣೆಯನ್ನು ಒದಗಿಸಿತು. ಇದು ಜಸ್ಟೀಸ್ ಫಾರ್ ರೋಹಿತ್ ವೇಮುಲ (ದಮನಿತ ಸಮುದಾಯಗಳು ಎದುರಿಸುವ ಸಾಂಸ್ಥಿಕ ತಾರತಮ್ಯಗಳ ವಿರುದ್ಧ), ಪಿಂಜಿರಾ ಥೋಡ್ (ವಿದ್ಯಾರ್ಥಿನಿ ನಿಲಯಗಳಲ್ಲಿ ಮತ್ತು ಕ್ಯಾಂಪಸ್ಸುಗಳಲ್ಲಿ ವಿದ್ಯಾರ್ಥಿನಿಯರು ಮಾತ್ರ ಎದುರಿಸುವ ಲಿಂಗ ತಾರತಮ್ಯ ಮತ್ತು  ಕಣ್ಗಾವಲುಗಳ ವಿರುದ್ಧ), ಹೋಕ್ ಕೋಲೋರೋಬ್ (ಜಾಧವ್ಪುರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಎದುರಿಸಬೇಕಾಗಿಬಂದ ಲೈಂಗಿಕ ಕಿರುಕುಳದ ವಿರುದ್ಧ), ಮದ್ರಾಸಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳು ಕಟ್ಟಿಕೊಂಡಿದ್ದ  ಅಂಬೇಡ್ಕರ್ ಸ್ಟಡಿ ಸರ್ಕಲ್ಗೆ ಆಡಳಿತ ಮಂಡಳಿ ಮಾನ್ಯತೆ ರದ್ದುಪಡಿಸಿದರ ವಿರುದ್ಧದ ವಿದ್ಯಾರ್ಥಿಗಳು ರಚಿಸಿಕೊಂಡ ವಿದ್ಯಾರ್ಥಿ ಗುಂಪುಗಳಂಥಾ ಹೊಸ ವಿದ್ಯಾರ್ಥಿ  ಗುಂಪುಗಳು ಹೆಚ್ಚಿನ ರೀತಿಯಲ್ಲಿ ಪ್ರಸರಣವಾಗುತ್ತಿರುವುದಕ್ಕೆ ಕೂಡಾ ಒಂದು ಕಾರಣವಾಗಿದೆ. ಈ ಚಳವಳಿಗಳು ಇಂದು ವಿದ್ಯಾರ್ಥಿ ರಾಜಕಾರಣದಲ್ಲಿ ಮತ್ತು ಪ್ರತಿಪಾದನೆಗಳಲ್ಲಿ ಲಿಂಗ ಮತ್ತು ಜಾತಿ ಸಂಬಂಧೀ ಸಂಗತಿಗಳನ್ನು ಮುನ್ನೆಲೆಗೆ ತಂದಿವೆ, ಅಸ್ಥಿತ್ವದಲ್ಲಿರುವ ವಿದ್ಯಾರ್ಥಿ ಸಂಘಗಳ ನಾಯಕತ್ವವನ್ನೂ ಮತ್ತು ಸಂಘಟನಾ ತತ್ವಗಳನ್ನು ಪ್ರಶ್ನಿಸಿವೆ, ಮತ್ತು ಅವು ತಮಗೆಂದೇ ಒಂದು ಪ್ರತ್ಯೇಕ ಸ್ವಾಯತ್ತ ಎಡೆಯೊಂದನ್ನು ಗಳಿಸಿಕೊಂಡಿರುವುದಲ್ಲದೆ ಇತರ ಕೇಂದ್ರೀಯ ಮತ್ತು ರಾಜ್ಯ ವಿಶ್ವದ್ಯಾಲಯಗಳ ವಿದ್ಯಾರ್ಥಿಗಳ ನಡುವೆ ಸೌಹಾರ್ದತೆ ಮತ್ತು ಪರಸ್ಪರ ಮೈತ್ರಿ ಮತ್ತು  ಸಹಕಾರವನ್ನು ರೂಢಿಸಿಕೊಂಡಿವೆ. ಸಮಾಜವಿಜ್ನಾನ ಸಂಸ್ಥೆಗಳಿಗೆ ನೀಡಲಾಗಿರುವ ಈ ಒಂದು ವರ್ಷದ ವಿಸ್ತರಣೆ ವಿದ್ಯಾರ್ಥಿಗಳು-ಅಧ್ಯಾಪಕ ಸಿಬ್ಬಂದಿಗಳು ಹಾಗು ಯುಜಿಸಿಯ ನಡುವಿನ ಬಿಕ್ಕಟ್ಟಿನಲ್ಲಿ ಒದಗಿಬಂದಿರುವ ಒಂದು ತಾತ್ಕಾಲಿಕ ಪರಿಹಾರವಷ್ಟೇ ಆಗಿದೆ. ಆದರೆ ಇನ್ನೂ ಹೆಚ್ಚಿನ ಸಮಾನತೆ ಮತ್ತು ಪ್ರಾತಿನಿಧ್ಯಗಳ ಪರವಾಗಿರುವಂತೆ ಅಸ್ಥಿತ್ವದಲ್ಲಿರುವ ಶೈಕ್ಷಣಿಕ ಸಂಕಥನಗಳನ್ನು ಮತ್ತು ಸಂಸ್ಥೆಗಳನ್ನು ಮಾರ್ಪಾಡು ಮಾಡಬಯಸುವ ವಿಮರ್ಶಾತ್ಮಕ ಸಂಶೋಧನಾ ಕಾರ್ಯಸೂಚಿಗಳು ನಿಜವಾದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಇಂಥಾ ಸಂಶೋಧನಾ ಕಾರ್ಯಸೂಚಿಗಳನ್ನು ಯೋಜನಾ ಅವಧಿ  ಮುಗಿದುಹೋದರೂ ಪ್ರಭುತ್ವವೇ ನೇರ ಅನುದಾನಗಳ ಮೂಲಕ ರಕ್ಷಿಸ್ಸಬೇಕು. ಇಂಥಾ ಸಂಸ್ಥೆಗಳು ಅತ್ಯಂತ ಅಲಕ್ಷಿತ ಸಮುದಾಯಕ್ಕೆ ಸಂಬಂಧಪಟ್ಟ ಮತ್ತು ಅಲಕ್ಷಿತ ಸಮುದಾಯಗಳೇ ಸೃಷ್ಟಿಸುವ ಜ್ನಾನವನ್ನು ಒಳಗೊಳ್ಳುವುದರಿಂದ ಅವುಗಳ ಅಸ್ಥಿತ್ವ ಮತ್ತು ವಿಸ್ತರಣೆಗಳು ವಿಶ್ವವಿದ್ಯಾಲಯಗಳನ್ನು ಬೌದ್ಧಿಕವಾಗಿ ಇನ್ನಷ್ಟು ಸಂಪದ್ಭರಿತಗೊಳಿಸುತ್ತವೆ. ಹಾಗೆ ಮಾಡುವ ಮೂಲಕ ಅವು ಸಾಂಪ್ರದಾಯಿಕ ಕಲಿಕಾ ಪದ್ಧತಿಗಳಿಗೆ ಸವಾಲು ಹಾಕುವುದಲ್ಲದೆ, ಮತ್ತಷ್ಟು ವಿಮರ್ಶಾತ್ಮಕವಾಗಿ ನೋಡುವುದಕ್ಕೂ ಮತ್ತು ತಿಳಿಯುವುದಕ್ಕೂ ವಿದ್ಯಾರ್ಥಿಗಳ ಮನಸ್ಸನ್ನು ಮುಕ್ತಗೊಳಿಸುತ್ತದೆ. ಒಂದು ವಿಶ್ವವಿದ್ಯಾಲಯ ಮತ್ತು ಒಟ್ಟಾರೆಯಾಗಿ ಶಿಕ್ಷಣ ಮಾಡಬೇಕಿರುವುದು ಇದನ್ನೇ ಅಲ್ಲವೇ?   ಕೃಪೆ: Economic and Political Weekly   April 22, 2017. Vol.52. No.16
... ಮುಂದೆ ಓದಿ


ಡಿಜಿಟಲ್ ಸಿಗ್ನೇಚರ್: ಇದು ಇ-ಲೋಕದ ಆಟೋಗ್ರಾಫ್!
ಇಜ್ಞಾನ ಡಾಟ್ ಕಾಮ್ - ಗುರುವಾರ ೦೧:೪೮, ಏಪ್ರಿಲ್ ೨೭, ೨೦೧೭

... ಮುಂದೆ ಓದಿ


ದೆಹಲಿ ಪಾಲಿಕೆಯ ಫಲಿತಾಂಶದಲ್ಲಿ ಕರ್ನಾಟಕ ಬಿಜೆಪಿಗೇನು ಪಾಠ?
ನಿಲುಮೆ - ಗುರುವಾರ ೦೧:೦೫, ಏಪ್ರಿಲ್ ೨೭, ೨೦೧೭

– ವಿನಾಯಕ ಹಂಪಿಹೊಳಿ ಕಳೆದ ಹತ್ತು ವರ್ಷಗಳಿಂದ ದೆಹಲಿಯ ಮಹಾನಗರ ಪಾಲಿಕೆಯು ಬಿಜೆಪಿಯ ಕೈಯಲ್ಲಿದೆ. ಇಂದು ಸತತ ಮೂರನೇ ಬಾರಿ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ನಿರ್ಮಿಸಿದೆ. ಆದರೆ ಹತ್ತು ವರ್ಷಗಳ ಆಡಳಿತದ ಕುರಿತು ಜನರಿಗೇನೂ ಒಳ್ಳೆಯ ಅಭಿಪ್ರಾಯವಿಲ್ಲ. ಮಹಾನಗರ ಪಾಲಿಕೆಗೆ ಆಯ್ಕೆಯಾದ ಬಿಜೆಪಿಗರಲ್ಲಿ ಹತ್ತು ವರ್ಷ ಭ್ರಷ್ಟಾಚಾರವೂ ವ್ಯಾಪಕವಾಗಿಯೇ ನಡೆದಿತ್ತು. ಎರಡು ವರ್ಷಗಳ ಹಿಂದೆ ರಾಜ್ಯ ಚುನಾವಣೆಯಲ್ಲಿ ಆಪ್ ಪಕ್ಷವು ಪ್ರಚಂಡ ಬಹುಮತದಿಂದ ಗೆದ್ದಿತ್ತು. ೨೦೧೩ ಹಾಗೂ ೨೦೧೫ರಲ್ಲಿ ಆಪ್ ಪಕ್ಷಕ್ಕೆ ದೆಹಲಿಯ ಜನತೆ ವೋಟಿನ […]... ಮುಂದೆ ಓದಿ


ಅಂಕಣರಂಗ ೧ – ಅನಿಯತಕಾಲಿಕ ಅಂಕಣದ ಅಂಕುರಾರ್ಪಣ!!
ನಿಲುಮೆ - ಬುಧವಾರ ೧೦:೩೨, ಏಪ್ರಿಲ್ ೨೬, ೨೦೧೭

– ಮು ಅ ಶ್ರೀರಂಗ, ಬೆಂಗಳೂರು ನಿಲುಮೆಯಲ್ಲಿ ವಾರಕ್ಕೊಮ್ಮೆ ಒಂದು ಅಂಕಣ ಬರೆಯುವ ಆಸೆ ಸುಮಾರು ದಿನಗಳಿಂದ  ಇತ್ತು. ಸುಮಾರು ಎರಡು ವರ್ಷಗಳ ಹಿಂದೆ ನಾನು ಇದೇ ಜಾಲತಾಣದಲ್ಲಿ ‘ನಿನ್ನೆಗೆ ನನ್ನ ಮಾತು’ ಎಂಬ ತುಂಬಾ  ಧ್ವನಾರ್ಥಕವುಳ್ಳ ಹೆಸರನ್ನಿಟ್ಟುಕೊಂಡು ಒಂದು ಅಂಕಣ ಬರೆದಿದ್ದೆ. ಅದು ಐದು ಲೇಖನಗಳ ನಂತರ ಮುಂದುವರಿಯಲಿಲ್ಲ.  ಬರೀ ಆರಂಭ ಶೂರತ್ವವಾಗಿ ಹೋಯಿತು. ಈ ಸಲದ ಲೇಖನಗಳಿಗೆ   ಅಂಕಣರಂಗ ಎಂಬ ಹೆಸರನ್ನೇನೋ ಇಟ್ಟುಕೊಂಡಿರುವೆ. ಜತೆಗೇ ಯಾವುದಕ್ಕೂ ಇರಲಿ ಎಂಬ ಹುಷಾರಿನಿಂದ ಅನಿಯತಕಾಲಿಕ ಎಂಬ ರಕ್ಷಾಕವಚವನ್ನೂ ಧರಿಸಿಕೊಂಡಿರುವೆ!!. ಏಕೆಂದರೆ  ವಾರಕ್ಕೊಂದರಂತೆಯೋ  ಅಥವಾ ಹದಿನೈದು ದಿನಗಳಿಗೊಮ್ಮೆಯೋ ತಪ್ಪದೆ ಬರೆಯುವ ಬಗ್ಗೆ […]... ಮುಂದೆ ಓದಿ


ಸೊಳ್ಳೆ ಬತ್ತಿ ಹೇಗೆ ಸೊಳ್ಳೆಯನ್ನು ಓಡಿಸುತ್ತೆ ಗೊತ್ತಾ?
ಹೊನಲು - ಬುಧವಾರ ೦೯:೩೦, ಏಪ್ರಿಲ್ ೨೬, ೨೦೧೭

– ನಾಗರಾಜ್ ಬದ್ರಾ. ಸೊಳ್ಳೆಗಳಿಂದ ಕಿರಿಕಿರಿ ಅನುಬವಿಸಿದವರು ಯಾರಿಲ್ಲ ಹೇಳಿ. ಸೊಳ್ಳೆಗಳು ನಮ್ಮ ನಿದ್ದೆಯನ್ನು ಹಾಳುಮಾಡುವುದಲ್ಲದೇ ಮಯ್ಯೊಳಿತಿಗೂ ತೊಂದರೆ ಉಂಟುಮಾಡುತ್ತವೆ. ಇವನ್ನು ಓಡಿಸಲು ಸೊಳ್ಳೆ ಬತ್ತಿ, ಮಸ್ಕಿಟೊ ಮ್ಯಾಟ್, ಮಸ್ಕಿಟೊ ರಿಪೆಲ್ಲಂಟ್ ಲಿಕ್ವಿಡ್, ಲೋಶನ್ ಹೀಗೆ ಬಗೆ ಬಗೆಯ ಉತ್ಪನ್ನಗಳನ್ನು ಬಳಸುತ್ತಾರೆ. ಹಾಗಾದರೆ ಇವುಗಳನ್ನು ಮೊದಲು ಯಾರು ಕಂಡುಹಿಡಿದರು? ಇವುಗಳು ಹೇಗೆ ಕೆಲಸ ಮಾಡುತ್ತವೆ? ಹೀಗೆ ಹಲವಾರು... Read More ›... ಮುಂದೆ ಓದಿ


ಇನ್ನೊಂದು ವರ್ಷ, ಇನ್ನಷ್ಟು ಕನಸು
ಇಜ್ಞಾನ ಡಾಟ್ ಕಾಮ್ - ಬುಧವಾರ ೦೪:೧೮, ಏಪ್ರಿಲ್ ೨೬, ೨೦೧೭

... ಮುಂದೆ ಓದಿ


ಈ ನಾಯಿ ಏಕೆ ನಮ್ಮಂತೆ ಮುಖವಾಡ ಧರಿಸುತ್ತಿಲ್ಲ?
ಕನಸು-ಕನವರಿಕೆ - ಮಂಗಳವಾರ ೧೧:೧೧, ಏಪ್ರಿಲ್ ೨೫, ೨೦೧೭

ಮೊನ್ನೆ ಇದ್ದಕ್ಕಿದ್ದಂತೆ ಒಂದು ವಿಚಿತ್ರ ಕಳವಳ ಶುರುವಾಗತೊಡಗಿತ್ತು. ತೀರ ಅಷ್ಟೇನೂ ಹಿಂದಿನ ಮಾತಲ್ಲ, ಹತ್ತು ಹದಿನೈದು ವರ್ಷಗಳ ಹಿಂದೆ ಒಂದಿಷ್ಟು ಯಾವ ಕಾರ್ಟುನು ನೋಡಿದರೂ ಅಲ್ಲೊಂದು ಚಿತ್ರಣ ಸರ್ವೇಸಾಮಾನ್ಯವಾಗಿರುತ್ತಿತ್ತು. ಅಲ್ಲಿ ಇಬ್ಬರು ಮನುಷ್ಯರು ರಾಜಕೀಯವನ್ನೋ, ಭ್ರಷ್ಟಾಚಾರವನ್ನೋ ವಿಡಂಬನೆ ಮಾಡುತ್ತಿದ್ದರೆ, ಪಕ್ಕದ ತಿಪ್ಪೆಗುಂಡಿ ಅಥವಾ ಲೈಟುಕಂಬದ ಕೆಳಗೆ ನಾಯಿಯೊಂದು ಮಜದಿಂದ ಜೊಲ್ಲು ಸುರಿಸಿಕೊಂಡು ನಿಂತಿರುತ್ತಿತ್ತು. ಜೊತೆಗೆ ಪಕ್ಕದಲ್ಲೊಂದು ಮೂಳೆ ಇದ್ದೇ ಇರುತ್ತಿತ್ತು. ಇವತ್ತು ಕಾರ್ಟುನುಗಳೇನೋ ಇವೆ. ಆದರೆ ಮೂಳೆ ಮೂಸಿಕೊಂಡು ನಿಂತಿರುತ್ತಿದ್ದ ನಾಯಿ ಮಾತ್ರ ಎಲ್ಲೋ ನಾಪತ್ತೆಯಾಗಿದೆ. ಹೀಗೆ ಎಲುಬಿಗಾಗಿ ಕಾತರಿಸುತ್ತಿದ್ದ ಈ ನಾಯಿಗಳು ತಮ್ಮ ಮೂಲಸ್ವಭಾವವನ್ನೇ ಬದಲಾಯಿಸಿಕೊಂಡವೇ? ಅಥವಾ ನಮ್ಮ ಕಾರ್ಟೂನಿಷ್ಟುಗಳು ಇಂಥ ಚಿತ್ರಣ ಕೊಡುವದನ್ನೇ ನಿಲ್ಲಿಸಿದರೆ? 
   ಸ್ನೇಹಿತರಲ್ಲಿ ಈ ಪ್ರಶ್ನೆಯನ್ನಿಟ್ಟಾಗ ಮಜಮಜ ಉತ್ತರಗಳು ಬಂದವು. ಚಿಕನ್ ರೇಟು ಜಾಸ್ತಿಯಾಗಿದೆ, ಹಾಗಾಗಿ ನಾಯಿಗಳು ಇವತ್ತು ಎಲುಬು ಮೂಸುತ್ತಿಲ್ಲ ಎನ್ನುವದರಿಂದ ಹಿಡಿದು, ಈಗವು 'ಪೆಡಿಗ್ರಿ' ತಿಂತವೆ ಕಣ್ರೀ ಅನ್ನುವಂಥ ಉತ್ತರಗಳೂ ಬಂದವು. ಒಂದಿಬ್ಬರಂತೂ 'ಯೋಗಿ ಮಹಾರಾಜ್ ಭಯ ಮಾರಾಯ!' ಅಂತನ್ನುವ ಬಾಂಬು ಕೂಡ ಸಿಡಿಸಿದರು! 
   ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು? 
  ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು? 
ಅನ್ನುತ್ತಾನೆ ಅಂಬಿಗರ ಚೌಡಯ್ಯ. ಶ್ರೀಗಂಧ, ದೇವದಾರು, ರಕ್ತಚಂದನದಂಥ ಮರಗಳೆಲ್ಲ ಹುಟ್ಟುತ್ತಲೇ ಸುಗಂಧವನ್ನು ಹೊತ್ತುಕೊಂಡು ಬರುವದಿಲ್ಲ. ಸಸಿಯೊಂದು ಬೆಳೆದುನಿಂತು ಮರವಾಗುವ ಯಾವುದೋ ಒಂದು ಹಂತದಲ್ಲಿ ಪರಿಮಳವನ್ನು ಸೂಸತೊಡಗುತ್ತವೆ. ಈ ಸಮಯದಲ್ಲಿ ಯಾರೋ ಹೊರಗಿನವರು ಸುಗಂಧವನ್ನು ತಂದು ಕಾಂಡಕ್ಕೆ ಹುಯ್ಯುವದಿಲ್ಲ. ಅದೆಲ್ಲ ಅವುಗಳ ಅಂಗಸ್ವಭಾವವೆಂದು ಚೌಡಯ್ಯ ಬಣ್ಣಿಸುತ್ತಾನೆ.  
ಗುಣ ಮತ್ತು ಸ್ವಭಾವ. ಇವಕ್ಕೆಲ್ಲ ನೂರಾರು ವರ್ಷಗಳ ಇತಿಹಾಸ ಇರುತ್ತದೆಂದು ಬಲ್ಲೆವು. ಇದಕ್ಕೆ ವರ್ಣತಂತುಗಳ ಬೆಂಬಲವೂ ಇರುತ್ತದೆಂದು ಬಲ್ಲೆವು. ಇಲ್ಲಿ ಕೆಲವೊಂದು ಗುಣಗಳು ಅಂತರಂಗದಲ್ಲಿ ಅಡಗಿದ್ದರೆ, ಕೆಲವು ಬಹಿರಂಗವಾಗಿಯೇ ಬಿತ್ತರಗೊಳ್ಳುತ್ತಿರುತ್ತವೆ. ಮೋಸ, ಕಳ್ಳತನ, ಹಿಂಸೆ, ತಂಟೆ ಮತ್ತು ಗಾಸಿಪ್ ಮನುಷ್ಯನ ಮೂಲ ಗುಣಗಳಾಗಿವೆ ಅಂತ ಓದಿದಾಗ ಗಾಬರಿಬಿದ್ದಿದ್ದೆ. ಇನ್ನು ಸುಳ್ಳಂತೂ ಸರಿಯೇ ಸರಿ. ತನ್ನ ಘನತೆಗೆ ಕುಂದು ಬರುತ್ತಿದೆ ಅಂತ ಗೊತ್ತಾಗುತ್ತಿದ್ದಂತೆಯೇ ಮನುಷ್ಯ ಸುಳ್ಳಿನ ಆಶ್ರಯ ಪಡೆಯುತ್ತಾನೆ. ಸತ್ಯವನ್ನು ಒಪ್ಪಿಕೊಳ್ಳುವದಕ್ಕಿಂತ ಒಂದು ಸುಳ್ಳಿಗಾಗಿ 30% ಹೆಚ್ಚಿನ ಶ್ರಮ ಮತ್ತು ಸಮಯವನ್ನು ವಿನಿಯೋಗಿಸಲೂ ನಾವು ತಯಾರಾಗಿರುತ್ತೇವೆಂದು ಪ್ರಾಕ್ಟಿಕಲ್ ವರದಿ ಹೇಳುತ್ತದೆ. 
   ತಂಟೆ, ತಕರಾರುಗಳೂ ಅಷ್ಟೇ. ಇದೊಂದು ಕತೆ ನೋಡಿ: ಒಬ್ಬ ಚಿತ್ರಕಲೆಯ ವಿದ್ಯಾರ್ಥಿ ಒಂದು ಸಲ ಚಿತ್ರವೊಂದನ್ನು ಬಿಡಿಸಿದಾಗ ತನ್ನಷ್ಟಕ್ಕೆ ತಾನೇ ಖುಷಿಪಟ್ಟನಂತೆ. ಅದ್ಬುತ ಚಿತ್ರವದು. ಸಹಜವಾಗಿ, ಆತನಿಗೆ ಅದನ್ನು ಎಲ್ಲರಿಗೂ ತೋರಿಸಿಕೊಳ್ಳಬೇಕೆಂಬ ಹಂಬಲ. ಹಾಗಾಗಿ ಹೆಮ್ಮೆಪಟ್ಟುಕೊಂಡು, 'ಇದರಲ್ಲೇನಾದರೂ ತಪ್ಪಿದ್ದರೆ ಮಾರ್ಕ್ ಮಾಡಿ' ಎಂಬ ಟ್ಯಾಗ್ ಲೈನ್ ಬರೆದು ಶಾಲೆಯ ನೋಟೀಸು ಬೋರ್ಡಿಗೆ ತಗಲುಹಾಕಿ ಹೋದನಂತೆ. ಮರುದಿನ ನೋಡಿದರೆ, ಪೇಂಟಿಂಗ್ ನಲ್ಲಿ ಛಪ್ಪನ್ನಾರು ಮಾರ್ಕುಗಳು! ಅದನ್ನೆಲ್ಲ ನೋಡಿದ ಹುಡುಗ ಅನ್ಯಮನಸ್ಕನಾಗಿ ಕುಳಿತಿದ್ದನ್ನು ಗಮನಿಸಿದ ಮೇಸ್ಟ್ರು ಒಂದು ಐಡಿಯಾ ಕೊಟ್ಟರಂತೆ. ಮರುದಿನ ಅದೇ ಚಿತ್ರವನ್ನು ಇನ್ನೊಮ್ಮೆ ಅಷ್ಟೇ ಅದ್ಭುತವಾಗಿ ಬಿಡಿಸಿದ ಹುಡುಗ ಮತ್ತದೇ ನೋಟೀಸು ಬೋರ್ಡಿಗೆ ತಗುಲಿಸಿ ಹೋದ. 
ಅಚ್ಚರಿಯೆಂಬಂತೆ ಮರುದಿನ ಪೇಂಟಿಂಗ್ ಗೆ ಸಂಬಂಧಿಸಿದಂತೆ ಯಾವ ತಕರಾರೂ ಇರಲಿಲ್ಲ. ಇಷ್ಟಕ್ಕೂ ಅಲ್ಲಿದ್ದ ಟ್ಯಾಗ್ ಲೈನ್: 'ಇದರಲ್ಲೇನಾದರೂ ತಪ್ಪಿದ್ದರೆ ನೀವೇ ಸರಿಪಡಿಸಿ!'   
*
   ಹೀಗೆ ಎಲ್ಲಿಂದ ಎಲ್ಲಿಗೋ ಜಿಗಿಯುವದು ನನಗಿಷ್ಟ. ಎಲೆಕ್ಟ್ರಾನಿಕ್ ವೋಟಿಂಗ್ ಮಶೀನ್ (EVM) ಬಗ್ಗೆ ಸೋತ ಅಭ್ಯರ್ಥಿಗಳು ತಕರಾರು ತೆಗೆಯುವದು ಮಾಮೂಲಾಗುತ್ತಿದೆ. ಮೊನ್ನೆ ಮಾಯಾವತಿ, ಕೇಜ್ರಿವಾಲ್ ತಕರಾರು ತೆಗೆದಿದ್ದರು. ಈಗ ಅಖಿಲೇಶ್ ಯಾದವ್ ಕೂಡ. ಹೀಗಿರುವಾಗಲೇ, ಚುನಾವಣಾ ಆಯೋಗ ತನ್ನ EVMಗಳ ಬಗ್ಗೆ ಅಪರಿಮಿತ ಕಾನ್ಫಿಡೆನ್ಸ್ ತೋರಿಸುವ ನಿಟ್ಟಿನಲ್ಲಿ, 'ಯಾರಾದರೂ ಈ ಮಶೀನುಗಳನ್ನು ಟ್ಯಾಂಪರ್ ಮಾಡುವದಿದ್ದಲ್ಲಿ ಪ್ರೂವ್ ಮಾಡಿ ತೋರಿಸಿ' ಅಂತ ಓಪನ್ ಚಾಲೆಂಜ್ ಹಾಕಿದೆ. ತಮಾಷೆಯೆಂದರೆ, ನಮ್ಮಲ್ಲಿ ತಂತ್ರಜ್ಞಾನದ ತಳಬುಡ ಗೊತ್ತಿಲ್ಲದವರೂ ತಾಂತ್ರಿಕತೆಯ ಬಗ್ಗೆ ಘಂಟಾಘೋಷದಿಂದ ಮಾತನಾಡುತ್ತಾರೆ. ಆದರೆ ಹೀಗೆ ಮಾತನಾಡುವವರ ಬಳಿ ಎಲ್ಲದಕ್ಕೂ ಜೈಕಾರ ಹಾಕುವವರ ಪಡೆಯೇ ಇರುತ್ತದಾದ್ದರಿಂದ ಸರಳವಾಗಿ ತಳ್ಳಿಹಾಕಬಹುದಾದ ಸಂಗತಿಗಳೂ ದೊಡ್ಡ ಕಿರಿಕಿರಿಯಾಗಿ ಕಾಡತೊಡಗುತ್ತವೆ.
   ಸುಮಾರು ವರ್ಷಗಳ ಹಿಂದಿನ ಮಾತು. ನನ್ನ ಪರಿಚಯದ ವ್ಯಕ್ತಿಯೊಬ್ಬರು ಚುನಾವಣೆಗೆ ನಿಂತಿದ್ದರು. ಆನಂತರ ಮೇಯರ್ ಕೂಡ ಆದರು. ಮತದಾನದ ದಿನ ಮತಗಟ್ಟೆಯಿಂದ ಅನತಿ ದೂರದಲ್ಲಿ ಕೆಲವೊಂದಿಷ್ಟು ಜನ ಟೇಬಲ್ ಹಾಕಿಕೊಂಡು ಕೂತಿರುತ್ತಾರಷ್ಟೇ. ಯಾರಾದರೂ ತಮ್ಮ ಮತಗಟ್ಟೆ ಎಲ್ಲಿದೆ? ಅಂತ ಕೇಳಿಕೊಂಡು ಬಂದಾಗ, ಇವರು ಆಯಾ ವಾರ್ಡಿನ ವಿವರಗಳುಳ್ಳ ದೊಡ್ಡದೊಂದು ಫೈಲಿನಲ್ಲಿ ಸದರಿ ವ್ಯಕ್ತಿಯ ಹೆಸರು, ವಿಳಾಸ, ಫೋಟೋ ಎಲ್ಲ ಹುಡುಕಾಟ ನಡೆಸಿ ಮತಗಟ್ಟೆ ಸಂಖ್ಯೆ/ವಿವರ ಹೇಳುತ್ತಿರುತ್ತಾರೆ. ಎಲ್ಲರಿಗೂ ಬೇಗ ವಿವರ ಒದಗಿಸಿ, ಆದಷ್ಟೂ ಎಲ್ಲರೂ ಮತದಾನದಂಥ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಎಲ್ಲ ಪಕ್ಷದವರೂ ಇದನ್ನೆಲ್ಲ ಮಾಡುವದುಂಟು. ಆದರೆ ಈ ಹುಡುಕಾಟದ ಕ್ರಿಯೆ ಸಾಕಷ್ಟು ಸಮಯ ತಿನ್ನುತ್ತದೆಂಬ ಕಾರಣಕ್ಕೆ ಆವತ್ತು ಒಂದು ಸಲಹೆ ಕೊಟ್ಟಿದ್ದೆ. ಅಭ್ಯರ್ಥಿಯ ಮಗ ನನ್ನನ್ನು ಭೇಟಿಯಾದಾಗಲೆಲ್ಲ ಹೊಸಹೊಸ ಟೆಕ್ನಾಲಜಿಗಳ ಬಗ್ಗೆ ಆಸಕ್ತಿಯಿಂದ ಮಾತನಾಡುವದರಿಂದ ಈ ನನ್ನ ಹೊಸ ಐಡಿಯಾ ಒಪ್ಪಿದರು. ಅಭ್ಯರ್ಥಿಯನ್ನೂ ಒಪ್ಪಿಸಿದರೆಂದು ಕಾಣುತ್ತದೆ. 
   ಅಷ್ಟಾದಮೇಲೆ ಸದರಿ ವಾರ್ಡಿನ ಎಲ್ಲ ವಿವರಗಳನ್ನೂ ಹತ್ತಾರು ಲ್ಯಾಪಟಾಪಿನಲ್ಲಿ ಹಾಕಿ, ಅದಕ್ಕೊಂದು ಸಾಫ್ಟೇರನ್ನೂ ಹಾಕಿ, ಯಾರಾದರೂ ತಮ್ಮ ವಿವರ ಕೇಳಿಕೊಂಡು ಬಂದಾಗ ಆಯಾ ವ್ಯಕ್ತಿಯ ಹೆಸರು ಟೈಪಿಸಿದ ಕೂಡಲೇ ಬೂತಿನ ಸಂಖ್ಯೆ/ವಿಳಾಸ ತೋರಿಸುವ ಹಾಗೆ ವ್ಯವಸ್ಥೆ ಮಾಡಲಾಯಿತು. ಚುನಾವಣೆಯ ದಿನ ಒಂದು ಮತಗಟ್ಟೆಯಿಂದ ಸಾಕಷ್ಟು ದೂರದಲ್ಲಿ ಹೀಗೆ ಲ್ಯಾಪಟಾಪನ್ನು ಇಟ್ಟುಕೊಂಡು 'ನನ್ನ ಮತಗಟ್ಟೆ ಎಲ್ಲಿದೆ' ಅಂತ ವಿವರ ಕೇಳಿಕೊಂಡು ಬಂದವರಿಗೆ ಕ್ಷಣಾರ್ಧದಲ್ಲೇ ಎಲ್ಲ ವಿವರ ಒದಗಿಸಲಾಗುತ್ತಿತ್ತು. ಅರ್ಧ ಮುಕ್ಕಾಲು ಗಂಟೆ ಆಗಿತ್ತೋ ಇಲ್ಲವೋ, ಅಲ್ಲಿಗೆ ಧಾವಿಸಿದ ಇನ್ನೊಂದು ಪಕ್ಷದ ಗುಂಪು, 'ನೀವು ಇಲ್ಲಿ ಕುಳಿತುಕೊಂಡೇ ಮತಗಟ್ಟೆಯಲ್ಲಿರುವ ಯಂತ್ರವನ್ನು ಕಂಟ್ರೋಲ್ ಮಾಡುತ್ತಿದ್ದೀರಿ' ಅಂತ ಆರೋಪ ಮಾಡತೊಡಗಿದರು. ಜಗಳಿಕ್ಕಿಳಿದರು. ಅಷ್ಟೇ ಅಲ್ಲ, ಅಲ್ಲಿದ್ದವರೆಲ್ಲ ತಮ್ಮ ಲ್ಯಾಪಟಾಪ್ ಗಳೊಂದಿಗೆ ಜಾಗ ಖಾಲಿ ಮಾಡದೇ ಹೋಗಿರದಿದ್ದರೆ, ಅವೆಲ್ಲವೂ ಪುಡಿಪುಡಿಯಾಗುವ ಎಲ್ಲ ಸಾಧ್ಯತೆಗಳೂ ಇದ್ದವೆಂದು ನನಗೆ ಆಮೇಲೆ ಕತೆ ಮಾಡಿ ಹೇಳಿದ್ದರು.
*
   ಹೀಗೆ ಅಂತರಂಗದಲ್ಲಿ ಅಡಗಿರುವ ಗುಣ, ಸ್ವಭಾವಗಳ ಬಗ್ಗೆ ಯೋಚಿಸುತ್ತಿರುವಾಗ ತುಂಬ ಹಿಂದೆ ನೋಡಿದ್ದ TED ಸಮೂಹದ ವಿಡಿಯೋವೊಂದು ನೆನಪಾಗುತ್ತಿದೆ: ಇವರು ಕೀಸ್ ಮೋಯ್ಲಿಕರ್(Kees Moeliker). ಸತ್ತ ಪ್ರಾಣಿಗಳನ್ನು ಸಂಗ್ರಹಿಸುವ ವೃತ್ತಿಯಲ್ಲಿರುತ್ತಾರೆ. ನೆದರ್ ಲ್ಯಾಂಡಿನ 'ರೊಟ್ಟರ್ ಡ್ಯಾಮ್' ನಲ್ಲಿ ಕೆಲಸ. ಒಂದು ದಿನ ತಮ್ಮ ಕೆಲಸದ ಮಧ್ಯೆ ಅಚ್ಚರಿಗೊಳಗಾಗುವ ಘಟನೆಯೊಂದಕ್ಕೆ ಸಾಕ್ಷಿಯಾಗುತ್ತಾರೆ. ಸುತ್ತಲೂ ಗಾಜಿನ ಗೋಡೆಯನ್ನಾವರಿಸಿದ ಅವರ ಕಚೇರಿಯ ಗೋಡೆಗೆ ಅದು ಗಾಜು ಅಂತ ತಿಳಿಯದೇ ಒಂದು ಬಾತುಕೋಳಿ ಅಪ್ಪಳಿಸಿ ಸತ್ತುಹೋಗುತ್ತದೆ. ಇದನ್ನು ಗಮನಿಸಿದ ಕೀಸ್ ಮೋಯ್ಲಿಕರ್ ಬಾತುಕೋಳಿಯನ್ನು ನೋಡಲು ಹೊರಗೆ ಬರುತ್ತಿದ್ದಂತೆ ಇನ್ನೊಂದು ಆಶ್ಚರ್ಯಕರ ಘಟನೆಗೆ ಸಾಕ್ಷಿಯಾಗುತ್ತಾರೆ. ಅಲ್ಲಿ ಸತ್ತು ಮಲಗಿದ್ದ ಕೋಳಿಯ ಮೇಲೆ ಇನ್ನೊಂದು ಜೀವಂತ ಕೋಳಿಯು ರತಿಕ್ರೀಡೆಯಾಡುವ ಪ್ರಯತ್ನ ಮಾಡುತ್ತಿರುತ್ತದೆ!
   ಹಾಗೆ ಕುತೂಹಲದಿಂದ 75 ನಿಮಿಷ(!)ದವರೆಗೂ ಗಮನಿಸುತ್ತಿದ್ದ ಮೋಯ್ಲಿಕರ್ ಇನ್ನಷ್ಟು ಹತ್ತಿರಕ್ಕೆ ಹೋಗಿ ನೋಡಿದಾಗ ಎರಡೂ ಕೋಳಿಗಳು ಸಲಿಂಗಿಗಳೆಂಬ ವಿಷಯ ಗೊತ್ತಾಗುತ್ತದೆ. ಅಷ್ಟೇ, ಸದರಿ ಘಟನೆಯನ್ನು ಅವರು Necrophilia ಅಂತ ಗುರುತಿಸುತ್ತಾರೆ. (ಸತ್ತ ವ್ಯಕ್ತಿಯ ಮೇಲಿನ ಮೋಹದಿಂದಾಗಿ ಶವದ ಜೊತೆಗೂ ರತಿಕ್ರೀಡೆಯಾಡ ಬಯಸುವ ವಾಂಛೆಗೆ ‘ನೆಕ್ರೋಫಿಲಿಯ’ ಅಂತ ಕರೆಯಲಾಗುತ್ತದೆ.) ಆದರೆ ಕೀಸ್ ಮೋಯ್ಲಿಕರ್ ರಿಗೆ ಭಯ. ಜಗತ್ತು ಇದನ್ನು ಒಪ್ಪಿಕೊಳ್ಳಬಹುದೇ ಅಂತನ್ನುವ ಭಯ. ಹಾಗಾಗಿ ಅಳೆದೂ ಸುರಿದೂ ಅಭ್ಯಾಸ ಮಾಡುತ್ತ ಸದರಿ ಘಟನೆಯಾದ ಆರು ವರ್ಷಗಳ ಬಳಿಕ ತಮ್ಮ ಪ್ರಬಂಧವನ್ನು ಪ್ರಕಟಿಸುತ್ತಾರೆ. ಹಾಗೆ ಜಗತ್ತಿನ ಮೊಟ್ಟಮೊದಲ ಪಕ್ಷಿಗಳ ನೆಕ್ರೋಫಿಲಿಯ ಪ್ರಬಂಧಕ್ಕೆ Ignobel ಪಾರಿತೋಷಕ ಕೂಡ ಲಭಿಸಿಬಿಡುತ್ತದೆ. ಕಪ್ಪೆ, ಹಾವು, ಕೋಣ ಸೇರಿದಂತೆ ಜಗತ್ತಿನ ಬಹುತೇಕ ಪ್ರಾಣಿ-ಪಕ್ಷಿಗಳ ವಿಚಿತ್ರ ನಡುವಳಿಕೆಗಳ ಬಗ್ಗೆ ಇರಬಹುದಾದ ಎಲ್ಲ ಫೋಟೋ/ವಿಡಿಯೋಗಳು ಮೋಹ್ಲಿಕರ್ ಬಳಿ ಬಂದು ಬೀಳುತ್ತವೆ. ಅವರು ಕುತೂಹಲದ ಸಂಶೋಧನೆಗೆ ಇಳಿಯುತ್ತಾರೆ. ಪ್ರಾಣಿ-ಪಕ್ಷಿಗಳಲ್ಲೂ ಕೂಡ ಸಲಿಂಗಕಾಮ, ಕಾಮ ವೈಪರಿತ್ಯ ಮತ್ತು Necrophilia ಉದ್ಭವಿಸಬಲ್ಲದು ಅಂತ ಕೀಸ್ ಮೋಯ್ಲಿಕರ್ ತಮ್ಮ ಮುಂದಿನ ಸಂಶೋಧನೆಗಳಲ್ಲಿ ಹಂತ ಹಂತವಾಗಿ ಕಂಡುಕೊಳ್ಳುತ್ತಾರೆ.
*
   ಮೊನ್ನೆ ಹೀಗೆ ಚಿತ್ರವಿಚಿತ್ರ ಸಂಗತಿಗಳ ಬಗ್ಗೆ ಯೋಚಿಸುತ್ತ ಆಫೀಸಿಗೆ ಹೊರಟಿದ್ದೆ. ದಾರಿಯಲ್ಲಿ ಯಾರೋ ತಮ್ಮ ಕಸದಬುಟ್ಟಿಯನ್ನು ತಮ್ಮದೇ ಮನೆಯ ಅಂಗಳದಲ್ಲಿಟ್ಟು ಹೋಗಿದ್ದರು. ಡಬ್ಬಿಯ ಕೆಳಅಂಚಿನಲ್ಲಿ ಹಲಗೆಯಾಕಾರದ ಭಾಗವನ್ನು ಕಾಲಿನಿಂದ ಒತ್ತಿದಾಗ ತಂತಾನೇ ಮುಚ್ಚಳ ತೆರೆಯುವಂಥ ಡಬ್ಬಿಯದು. ಮೈತುಂಬ ಕೇಶರಾಶಿ ಹೊಂದಿದ್ದ ಸ್ಟೈಲಿಶ್ ಆದ ಕರಿನಾಯಿಯೊಂದು ಈ ಡಬ್ಬಿ ಮುಚ್ಚಳವನ್ನು ತೆರೆಯುವ ಸಾಹಸ ಮಾಡುತ್ತಿತ್ತು. ಸುಮಾರು ಹೊತ್ತು ಹಾಗೆ ಗುದ್ದಾಡಿದ ಬಳಿಕ ಪ್ಲಾಸ್ಟಿಕ್ ಮುಚ್ಚಳವೇ ಮುರಿದು ಹೋಯಿತು. ಸಡಗರದಿಂದ ಇನ್ನೇನು ಬಾಯಿ ಹಾಕಬೇಕು ಅನ್ನುವಷ್ಟರಲ್ಲಿ ಎಲ್ಲಿಂದಲೋ ನಾಯಿಯ ಮಾಲೀಕ ಸ್ಕೂಟರ್ ನಲ್ಲಿ ಅಲ್ಲಿಗೆ ಬಂದಿಳಿದ. ತನ್ನ ಸ್ಟೈಲಿಶ್ ನಾಯಿ ಹೀಗೆ ಯಾರದೋ ಮನೆಯ ಡಸ್ಟ್ ಬಿನ್ ಮೂಸುವದೆಂದರೇನು? 
   ಆಸಾಮಿ ಸಿಡಿಮಿಡಿ ಮಾಡಿಕೊಂಡ. ಕೋಪದಿಂದ ಎಂಥದೋ ಹೆಸರು ಆರೋಪಿಸುತ್ತ ತೋರುಬೆರಳನ್ನೆತ್ತಿ     ಗಾಡಿಯೇರುವಂತೆ ಆಜ್ಞಾಪಿಸಿದ. ನಾಯಿ ವಿಧೇಯವಾಗಿ ಹತ್ತಿಕುಳಿತ ಮೇಲೆ ಈತ ಗಾಡಿಬಿಟ್ಟ. ಆದರೆ ಮಾರ್ಗದ ಮಧ್ಯೆ ಪರಿಚಿತರ್ಯಾರೋ ಸಿಕ್ಕ ಕಾರಣಕ್ಕೆ ಈತ ಗಾಡಿ ನಿಲ್ಲಿಸಿ ಒಂಚೂರು ಮಾತಿಗಿಳಿದಿದ್ದನೋ ಇಲ್ಲವೋ, ಕಾತರಿಸುತ್ತಿದ್ದ ಕರಿನಾಯಿ ಟಣ್ಣನೇ ಜಿಗಿಯಿತು. ಓಡೋಡಿ ಕಸದಡಬ್ಬಿಯತ್ತ ಬಂದು ಅವಸರದಿಂದ ವಜ್ರಕ್ಕಾಗಿ ತಡಕಾಡಿತು. ನೋಡನೋಡುತ್ತಿದ್ದಂತೆಯೇ ಬಾಯಲ್ಲಿ ಮೂಳೆ ಕಚ್ಚಿಕೊಂಡು ಗಾಡಿಯ ವಿರುದ್ಧ ದಿಕ್ಕಿನೆಡೆ ಓಟ ಕಿತ್ತಿತು.
ಓಹ್ ದೇವರೇ, ಇದೆಂಥ ಕೆಟ್ಟ ನಾಯಿ. ಇದ್ಯಾಕೆ ನಮ್ಮಂತೆ ಮುಖವಾಡ ಧರಿಸುತ್ತಿಲ್ಲ..    
-  
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ(ವಿಜಯಕರ್ನಾಟಕದಲ್ಲಿ 26.04.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)ಸ್ಥಳಾವಕಾಶದ ಕೊರತೆಯಿಂದಾಗಿ ಲೇಖನ ಕೊಂಚ ಎಡಿಟ್ ಆದ ಕಾರಣಕ್ಕಾಗಿ ಮೂಲ ಬರಹ ಇಲ್ಲಿ ಪ್ರಕಟಿಸಿರುವೆ. 
... ಮುಂದೆ ಓದಿ


ನಗೆಬರಹ: ಹತ್ತು ರೂಪಾಯಿ
ಹೊನಲು - ಮಂಗಳವಾರ ೦೯:೩೦, ಏಪ್ರಿಲ್ ೨೫, ೨೦೧೭

– ಬರತ್ ಜಿ. ಬೆಳಿಗ್ಗೆ ಎದ್ದಾಗಿನಿಂದಲೂ ನನಗೆ ಒಂದೇ ಯೋಚನೆ.ಆ 10 ರೂಪಾಯಿ ನೋಟನ್ನು ಹೇಗೆ ಕರ‍್ಚು ಮಾಡುವುದು? ಯಾರಿಗೆ ಕೊಡುವುದು? ಅಶ್ಟಕ್ಕೂ ಆ ನೋಟಿನ ಬಗ್ಗೆ ಅಶ್ಟೊಂದು ಯೋಚನೆ ಏಕೆ ಮಾಡುತ್ತಿದ್ದೆ ಎಂದರೆ ಆ ನೋಟಿನಲ್ಲಿದ್ದ ಗಾಂದಿ ತಾತನಿಗೆ ಎಶ್ಟು ವಯಸ್ಸಾಗಿತ್ತೋ ಅದಕ್ಕೂ ಅಶ್ಟೇ ವಯಸ್ಸಾಗಿತ್ತು. ಅಂಚುಗಳಲ್ಲಿ ತೂತು ಬಿದ್ದಿತ್ತು, ಮದ್ಯ ಗೆರೆಯ ಬಳಿ ತೇಪೆ ಹಾಕಲಾಗಿತ್ತು.... Read More ›... ಮುಂದೆ ಓದಿ


...
ಸಾಕ್ಷಿಪ್ರಜ್ಞೆ - ಮಂಗಳವಾರ ೦೪:೦೪, ಏಪ್ರಿಲ್ ೨೫, ೨೦೧೭

ಅದೊಂದು ಜ್ಯಾಮಿತೀಯ ಆಕಾರಹಿಗ್ಗಿಸಿ ಕುಗ್ಗಿಸಿ ತುಳಿಯಲೂ ಬಹುದುಉಳಿಯುವುದಿದೆಯಲ್ಲಅದು ಮತ್ತೆ ಒಂದು ಜ್ಯಾಮಿತೀಯ ಆಕಾರಸ್ವರೂಪ ಬಹಳ ಮುಖ್ಯಇಲ್ಲದಿದ್ದಾಗ ಉಳಿಯುವುದೇನು ಬರೀ ಲೆಕ್ಕಾಚಾರಅದೂ ಸಹ ಹಲವೊಮ್ಮೆ ರಚನೆಯ ಒಳಗೇ ಬರತಕ್ಕದ್ದುಹಾಗಾಗಿ ಆಕಾರ ಮುಖ್ಯಇದ್ದರೆ, ತಂದು ಕೂರಿಸುವುದೆಲ್ಲವನ್ನುಅದಕ್ಕೊಂದು ಜಾಗ ಬೇಕೇ ಬೇಕುಆಕಾರ ನಿರ್ಧಾರವಾದಾಗ ಉಳಿದದ್ದೆಲ್ಲವೂ ಜುಜುಬಿಯಾವ ಅಬ್ಬೇಪಾರಿ ಸಹ ಬಣ್ಣ ಹಚ್ಚಬಲ್ಲರಂಗವನ್ನು ನಿರ್ಮಿಸಬಲ್ಲ ನಾಟಕವಾಡಬಲ್ಲಎರಡು ವಾಕ್ಯಗಳ ನಡುವಿನ ಬಿಡುವಲ್ಲಿರಂಗಮಂದಿರದಲ್ಲದೆಷ್ಟು ನಿಶ್ಯಬ್ದವಡಗಿರುತ್ತೆಅದು ಬೇಕಾದದ್ದುಕಡಿದ ಮೀನಿನ ಪ್ಲಾಸ್ಟಿಕ್ ಬಲೆಯ ದಾರಗಳುಅದೆಷ್ಟೋ ಬಾರಿ ಕಡಲ ತಡಿಯಲ್ಲಿ ಬಂದು ಬಿದ್ದಿರುತ್ತದಲ್ಲಹಾಗೇ ಇದೂ ಸಹಬಲೆ ನೇಯುವುದು ಅವನ ಹೊಟ್ಟೆ ಪಾಡಾದರೆಮೀನಿಡಿಯುವುದು ಇವನದುತಿನ್ನುವುದು ನನ್ನದು ಸ್ವರೂಪ ಹರಿಯುವುದಿಲ್ಲವೆಂದೇನೂ ಅಲ್ಲರೂಪಾಂತರವನ್ನು ಸಹಿಸುವ ತಂತಿಜಾಲ ಉಳಿದಿರುತ್ತದೆಯಲ್ಲ ಅದು ಸಲಹಿಬಿಡುತ್ತೆಹಾಗಾಗಿ ನಾನು ಬದುಕಿದ್ದೇನೆ.
... ಮುಂದೆ ಓದಿ


...
ಸಾಕ್ಷಿಪ್ರಜ್ಞೆ - ಮಂಗಳವಾರ ೦೪:೦೦, ಏಪ್ರಿಲ್ ೨೫, ೨೦೧೭

ಮದರಾಸಿನ ರೈಲ್ವೆನಿಲ್ದಾಣದಲ್ಲಿನ ಪುಸ್ತಕದಂಗಡಿಯ ಮಾಲಿ'ಮತ್ತೆ ಊರಿಗೆ ಹೊರಟಿರ' ಪ್ರಶ್ನೆಗೆಭಾಷೆ ಬಾರದ ನನ್ನ ತಮಿಳಿನ ಉತ್ತರ ಕೇಳಿ ನಕ್ಕುಸುಮ್ಮನಾದರೂಸುಮ್ಮನಿರಲಾರದ ನನ್ನ ಅವಸ್ಥೆಬರಿ ನೆಲದ ಮೇಲೆ ಮಲಗಿದ ರೈಲ್ವೆ ಕೂಲಿಗೆ  ಬಹುಷಃ ಅರ್ಥವಾಗಿರಬಹುದು ಅವಳ ಕಳುಹಿಸುವುದೇನೂ ಸಂಭ್ರಮವಲ್ಲಹಾಗೆಂದು ಬೇಸರವೂ ಇಲ್ಲಮದರಾಸಿನ ಸೆಕೆಗೆ ಮೈಯೆಲ್ಲ ಒದ್ದೆತಾಳಲಾರದ ಹಿಂಸೆಗಣಿತದಲ್ಲಿ ಊಹೆಗೆ ಬಹಳ ಮಹತ್ವMathematical conjecturesತರ್ಕಕ್ಕೆ ರುಜುವಾತಿಗೆ ಕ್ರಮಕ್ಕೆ ಎಲ್ಲಕ್ಕೂ ತನ್ನದೇ ನಿಯಮ ಬಂಧಅವಳನ್ನು ಕಳುಹಿಸಬಾರದಿತ್ತುಔಪಚಾರಿಕ ವ್ಯವಸ್ಥೆಗೆ ಗ್ರಹಿಕೆಯಲ್ಲಿ ಒಮ್ಮತದ ವಿಶ್ವಾಸಎಣಿಸಲಾಗದ ಲೆಕ್ಕಾಚಾರವೂ ಇಲ್ಲಿ ಉಂಟುಅವಳನ್ನು ಕಳುಹಿಸಬಾರದಿತ್ತ?ನಾಳೆ ಪತ್ರ ಬಂದು ಸೇರಬಹುದುಸಹಿಗೆ ನನ್ನ ಲೇಖನಿಯಲ್ಲಿ ಮಸಿ ಉಳಿದಿರುತ್ತದೆಯೆ ಎಂಬುದು ನಿರ್ದರಿಸಲಾಗದ ಅತಿ ಸರಳ ಹೇಳಿಕೆ
... ಮುಂದೆ ಓದಿ


ಶಾಶ್ವತ ಬರಪ್ರದೇಶದ ಘೋಷಣೆಗೆ ಸಿದ್ಧರಾಗಿ!
ನೆಲದ ಮಾತು - ಸೋಮವಾರ ೧೧:೫೧, ಏಪ್ರಿಲ್ ೨೪, ೨೦೧೭

ನಾವು ಜ್ವಾಲಾಮುಖಿಯ ಮೇಲೆ ಕುಳಿತಿದ್ದೇವೆ. ಸಿಡಿಯುವ ದಿನ, ವಾರ ಗೊತ್ತಿಲ್ಲದಿರಬಹುದು. ಆದರೆ ಸದ್ಯಕ್ಕೇ ಸಿಡಿಯಲಿದೆ ಎಂಬ ಸತ್ಯವಂತೂ ತಿಳಿದಿದೆ. ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ನ ಅಧ್ಯಯನದ ಪ್ರಕಾರ 1997 ರಿಂದೀಚೆಗೆ ಭಾರತದಲ್ಲಿ ಕ್ಷಾಮಕ್ಕೆ ತುತ್ತಾಗಬಹುದಾದ ಪ್ರದೇಶಗಳ ಸಂಖ್ಯೆ ಶೇಕಡಾ 57ರಷ್ಟು ಏರಿಕೆ ಕಂಡಿದೆ. ದುರ್ದೈವವೆಂದರೆ ಇವ್ಯಾವುವೂ ಮಳೆಯ ಕೊರತೆಯಿಂದ ಆದದ್ದಲ್ಲ. ‘ಭಾರತದ ಜನಸಂಖ್ಯೆಯ 25 ಪ್ರತಿಶತ ಜನ ಅಂದರೆ 33 ಕೋಟಿಯಷ್ಟು ಜನ ಬರಗಾಲದ ಬೇಗೆಗೆ ತುತ್ತಾಗಿದ್ದಾರೆ’ ಹಾಗಂತ ಡೆಕ್ಕನ್ ಕ್ರೋನಿಕಲ್ ಎಂಬ ಇಂಗ್ಲೀಷ್ ಪತ್ರಿಕೆ … Continue reading ಶಾಶ್ವತ ಬರಪ್ರದೇಶದ ಘೋಷಣೆಗೆ ಸಿದ್ಧರಾಗಿ! ... ಮುಂದೆ ಓದಿ


ಗಾಳಿಯಿಂದ ನೀರಿನ ಕೊಯ್ಲು
Today's Science ಇಂದಿನ ವಿಜ್ಞಾನ - ಸೋಮವಾರ ೧೦:೦೨, ಏಪ್ರಿಲ್ ೨೪, ೨೦೧೭

ಇಂದಿನ  ಇಪತ್ರಿಕೆ.ಕಾಮ್ ನಲ್ಲಿ ನನ್ನ ಲೇಖನ. ಈ ಲೇಖನದ ಮೂಲ, ಸಂಪಾದಕರ ಕತ್ತರಿಗೆ ಸಿಗದ ವಿವರಗಳು ಇದೋ ಇಲ್ಲಿವೆ. ಬರಗಾಲದಿಂದಾಗಿ ಬೇಸಗೆಯ ದಿನಗಳು ನೀರಿಲ್ಲದೆ ಭಣಗುಡುತ್ತಿರುವ ಈ ದಿನಗಳಲ್ಲಿ ನೀರಿನ ವಿಷಯವನ್ನು ಎತ್ತುವುದೇ ತಪ್ಪು. ಆದರೂ ಬೇಸಗೆಯ ಈ ಒಣಗಾಳಿಯಿಂದಲೂ ನೀರನ್ನು ಪಡೆಯಬಹುದು ಎಂದರೆ ಅದು ನಿಜಕ್ಕೂ ಅಚ್ಚರಿಯ ವಿಷಯವಲ್ಲವೇ? ಹೀಗೆ ಒಣಗಾಳಿಯಿಂದಲೂ ನೀರನ್ನು ‘ಕೊಯ್ಲು’ ಮಾಡುವ ಸರಳ ವಿಧಾನವೊಂದು ಸಾಧ್ಯ ಎಂದು ಅಮೆರಿಕೆಯ ಬರ್ಕಲಿ ವಿವಿಯ ವಿಜ್ಞಾನಿಗಳು ತೋರಿಸಿದ್ದಾರಂತೆ. ಮಳೆಯ ಕೊಯ್ಲು ಕೇಳಿದ್ದೀರಿ. ಮಳೆಯ ವೇಳೆ […]... ಮುಂದೆ ಓದಿ


ವಿಂಚೆಸ್ಟರ್ ಮ್ಯಾನ್‍ಶನ್ ಎಂಬ ನಿಗೂಡ ಮನೆ
ಹೊನಲು - ಸೋಮವಾರ ೦೯:೩೦, ಏಪ್ರಿಲ್ ೨೪, ೨೦೧೭

– ಕೆ.ವಿ.ಶಶಿದರ. ಅದೊಂದು ನಿಗೂಡ ಮನೆ. ಅತ್ಯಂತ ವಿಶಾಲವಾದ ಮನೆ. ಸಾವಿರಾರು ಬಾಗಿಲುಗಳು ಸಾವಿರಾರು ಕಿಟಕಿಗಳು ಇವೆ. ಯಾವ ಬಾಗಿಲಿನ ಮೂಲಕ ಹೋದರೆ ಎಲ್ಲಿಗೆ ತಲಪುತ್ತೇವೆ ಎಂಬುದೊಂದು ಯಕ್ಶಪ್ರಶ್ನೆ. ಅಂದು ಕೊಂಡ ಜಾಗಕ್ಕೆ ತಲಪುವುದಿಲ್ಲ. ಬೇರೆಲ್ಲಿಗೊ ಅದು ನಮ್ಮನ್ನು ಕರೆದೊಯ್ಯುವುದೇ ಇದರ ವೈಶಿಶ್ಟ್ಯ. ಎಲ್ಲೆಂದರಲ್ಲಿ ಮೆಟ್ಟಲುಗಳು, ಯಾವ ಮೆಟ್ಟಲು ಹತ್ತಿ ಹೋದರೆ ಎಲ್ಲಿಗೆ ತಲಪಬಹುದು ಎಂಬ ಲವಲೇಶ... Read More ›... ಮುಂದೆ ಓದಿ


ಹಂದಿಗಳೂ ಮತ್ತು ಅಂಕಣಕಾರನೂ…
The Mysore Post - ಸೋಮವಾರ ೧೨:೩೩, ಏಪ್ರಿಲ್ ೨೪, ೨೦೧೭

ಹಂದಿಯನ್ನು ಕಬಳಿಸಿದರೆ ನರಮನುಷ್ಯನಿಗೂ ಹಂದಿಯ ಗುಣಗಳು ಬರುತ್ತವೆ ಎಂಬುದಾಗಿ ಹಂದಿಯನ್ನು ಕಬಳಿಸದ ಪಂಗಡಕ್ಕೆ ಸೇರಿದ ಮತಪಂಡಿತರೊಬ್ಬರು ಇತ್ತೀಚೆಗೆ ಫರ್ಮಾನು ಹೊರಡಿಸಿದ್ದಾರೆ. ಇದು ಹೀಗೇ ಮುಂದುವರಿದರೆ ಕೋಳಿಯನ್ನು ಕಬಳಿಸದ ಪಂಗಡಕ್ಕೆ ಸೇರಿದ ಮತಪಂಡಿತರು, ಜಿರಳೆಯನ್ನು ಕಬಳಿಸದ ಪಂಗಡಕ್ಕೆ ಸೇರಿದ ಮತಪಂಡಿತರು, ಕೋಣವನ್ನು ಕಬಳಿಸದ ಪಂಗಡಕ್ಕೆ ಸೇರಿದ ಮತಪಂಡಿತರುಗಳು ಇವುಗಳನ್ನೆಲ್ಲಾ ಕಬಳಿಸುವ ನರಮನುಷ್ಯರ ಕುರಿತು ಇಂತಹದೇ ಫರ್ಮಾನುಗಳನ್ನು ಹೊರಡಿಸುತ್ತಾರೆ. ಹಾಗಾಗಿ ಇನ್ನುಮುಂದೆ ಈ ಭೂಲೋಕದ ತುಂಬ ಹಂದಿಯ ಗುಣವುಳ್ಳ, ಕೋಣನ ಗುಣವುಳ್ಳ, ಜಿರಳೆಯ ಗುಣವುಳ್ಳ, ಕೋಳಿಯ ಗುಣವುಳ್ಳ ಹೀಗೆ ಮನುಷ್ಯರು […]... ಮುಂದೆ ಓದಿ


ಅಣ್ಣನೆಂಬ ಅಭಯರಾಗ
:ಮೌನಗಾಳ: - ಸೋಮವಾರ ೦೩:೦೮, ಏಪ್ರಿಲ್ ೨೪, ೨೦೧೭

ಎಲ್ಲ ದಿಕ್ಕಿನಿಂದಲೂ ಸುತ್ತುವರೆದಿರುವ ಕೇಡಿಗಳು. ನಿಗೂಢವೆನಿಸುವ ಬಣ್ಣಬಣ್ಣದ ಗೋಡೆಗಳ ಕೋಣೆಯೊಳಗೆ ನುಗ್ಗಿರುವ ಹೀರೋ. ಸರಕ್ಕನೆ ತಂತಾನೆ ಮುಚ್ಚಿಕೊಳ್ಳುವ ಬಾಗಿಲುಗಳು. ಅಕ್ಕಪಕ್ಕ ಮೂಲೆಯನ್ನೆಲ್ಲ ನೋಡಿದರೂ ಯಾರೂ ಕಾಣದ ನಿರ್ವಾತ. ಫಕ್ಕನೆ ತುಸು ಮೇಲೆ ನೋಡಿದರೆ, ಅಲ್ಲಿ ತನ್ನನ್ನು ಕಟ್ಟಿದ ಹಗ್ಗಗಳಿಂದ ಬಿಡಿಸಿಕೊಳ್ಳಲು ಹೆಣಗುತ್ತಾ, ಹೆಲ್ಪ್ ಹೆಲ್ಪ್ ಎಂದು ಕೂಗುತ್ತಾ, ಕೊಸರಾಡುತ್ತಿರುವ ನಾಯಕಿ. ನಮ್ಮ ಹೀರೋ ಇನ್ನೇನು ಅತ್ತ ಧಾವಿಸಬೇಕು, ಅಷ್ಟೊತ್ತಿಗೆ ಬೆಚ್ಚಿಬೀಳುವಂತೆ ಕೇಳಿಬರುವ ಖಳನ ಅಟ್ಟಹಾಸ. ಗೋಡೆಗೆ ಅಂಟಿಸಿದ ಪಿಕಿಪಿಕಿ ಕೆಂಪು ದೀಪದಿಂದ ಬರುತ್ತಿರುವ ಸ್ವರ.  ಯಾರು ವಜ್ರಮುನಿಯೇ? ಧ್ವನಿ ಕೇಳಿದರೆ ಅಲ್ಲ. ಎಲ್ಲ ದಿಕ್ಕಿನಿಂದಲೂ ಬಂಧಿಯಾದಂತೆನಿಸುತ್ತಿರುವ ನಮ್ಮ ನಾಯಕ ಈಗ ಹೇಗೆ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ? ಹೇಗೆ ತನ್ನವರನ್ನು ರಕ್ಷಿಸುತ್ತಾನೆ? ಹೇಗೆ ಆ ಗೂಂಡಾಗಳಿಗೆಲ್ಲ ಮಣ್ಣು ಮುಕ್ಕಿಸುತ್ತಾನೆ? ನಮ್ಮೂರಿಗೆ ಟೀವಿ ಬಂದಿದ್ದ ಹೊಸದರಲ್ಲಿ, ಪಟೇಲರ ಮನೆಯ ಜಗಲಿಯಲ್ಲಿ, ಭಾನುವಾರದ ಸಂಜೆಗಳಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ದೃಶ್ಯ. ವೃದ್ಧರು-ಕಿರಿಯರು-ಮಕ್ಕಳೆನ್ನದೆ ಎಲ್ಲರೂ ಜಮಾಯಿಸಿ ನೋಡುತ್ತಿದ್ದ ಈ ಸಿನೆಮಾಗಳಲ್ಲಿ ಮಿಂಚುತ್ತಿದ್ದ, ಪತ್ತೇದಾರಿ ಮಾಡಿ ತಪ್ಪಿತಸ್ಥರನ್ನು ಪತ್ತೆ ಹಚ್ಚುತ್ತಿದ್ದ, ಖಳನಾಯಕರಿಗೆ ಬಿಸಿಬಿಸಿ ಕಜ್ಜಾಯವುಣಿಸುತ್ತಿದ್ದ, ಚಂದದ ನಟಿಯರೊಡನೆ ಕುಣಿಯುತ್ತಿದ್ದ, ಸಂಪತ್ತಿಗೆ ಸವಾಲ್ ಹಾಕುತ್ತಿದ್ದ, ಚಪ್ಪಾಳೆ ತಟ್ಟುವಂತಹ ಮಾತುಗಳನ್ನಾಡುತ್ತಿದ್ದ, ಮೈಕನ್ನು ಎಡಗೈಯಿಂದ ಬಲಗೈಗೆ ಹಾರಿಸಿ ಹಿಡಿದು ಹೊಸಬೆಳಕೂ ಎಂದು ಹಾಡುತ್ತಿದ್ದ, ಅತ್ತ ಇತ್ತ ಸುತ್ತ ಮುತ್ತ ಕಾಂತಿಯನ್ನು ಚೆಲ್ಲುತ್ತಿದ್ದ, ನಟಸಾರ್ವಭೌಮನೇ ಆಗಿದ್ದ ನಾಯಕ: ಡಾಕ್ಟರ್ ರಾಜ್‌ಕುಮಾರ್! ಟೀವಿ ನಮ್ಮೂರಿಗೆ ಲಗ್ಗೆಯಿಡುವ ಹೊತ್ತಿಗೆ, ಎಳೆಯರಾಗಿದ್ದ ನಮಗೆ, ಅದಾಗಲೇ ಆಯ್ಕೆಗಳಿದ್ದವು. ಬಹಳಷ್ಟು ಹೊಸ ಹೀರೋಗಳು ಬಂದಿದ್ದರು. ಯಾರು ಚೆನ್ನಾಗಿ ಫೈಟ್ ಮಾಡುವರೋ ಅವರೇ ನಮ್ಮ ನೆಚ್ಚಿನ ಹೀರೋ ಆಗುತ್ತಿದ್ದರು. ಆದರೆ ರಾಜ್ ಬಿಟ್ಟುಕೊಡಲಿಲ್ಲ: ಗೋವಾದಲ್ಲಿ ಸಿ‌ಐಡಿಯಾಗಿ ಮ್ಯಾಜಿಕ್ ಮಾಡಿ ಮೋಡಿ ಮಾಡಿದರು. ಜೇಡರಬಲೆಯಲ್ಲಿ ಸಿಲುಕಿದರೂ ಗನ್ ಹಿಡಿದು ಡಿಶೂಂ ಮಾಡಿದರು. ತೂಗುದೀಪ ಶ್ರೀನಿವಾಸ್ ವಿಕಟ ನಗೆಗೈದರೆ ಮುಗುಳ್ನಗೆಯಲ್ಲೇ ಆತನ ಜಯಿಸಿದರು. ನರಸಿಂಹರಾಜು ಜತೆಗೆ ತಾವೂ ನಗಿಸಿದರು. ಪಂಡರೀಬಾಯಿ ‘ಏನೂಂದ್ರೆ’ ಅಂತ ಕರೆದರೆ ಮುದ್ದು ಬರುವಂತೆ ತಿರುಗಿ ನೋಡಿದರು. ಮನೆಗೆ ಬಂದ ನಾವು, ‘ನೀನೂ ಅಪ್ಪನನ್ನ ಹಾಗೇ ಕರೀಬೇಕು’ ಅಂತ ಅಮ್ಮನನ್ನು ಪೀಡಿಸಿ ಮಜಾ ತಗೊಂಡೆವು. ಬೆಳಿಗ್ಗೆಯ ವಾರ್ತೆಯ ನಂತರ, ಮಧ್ಯಾಹ್ನದ ಊಟದ ಸಮಯದಲ್ಲಿ, ರಾತ್ರಿ ಕರೆಂಟು ಹೋದಾಗ –ರೇಡಿಯೋ ಹಚ್ಚಿದರೆ ಸಾಕು, ರಾಜ್ ಹಾಡುತ್ತಿದ್ದರು: ಖುದ್ದು ನಮಗೇ ಎಂಬಂತೆ. ಬಾನಿಗೊಂದು ಎಲ್ಲೆ ಎಲ್ಲಿದೇ... ಪೇಟೆಗೆ ಹೋದರೆ, ಬಸ್‌ಸ್ಟಾಂಡ್ ಗೋಡೆಯ ಮೇಲೆ, ದೊಡ್ಡ ಮರದ ಕಾಂಡದ ಮೇಲೆ, ವಾಹನಗಳ ಬೆನ್ನಮೇಲೆ, ಎಲ್ಲಿ ನೋಡಿದರೂ ಅಣ್ಣನೇ. ನಾಟಕಕ್ಕೆಂದು ಹೋದರೆ ಅಲ್ಲೂ ಜ್ಯೂನಿಯರ್ ರಾಜ್‌ಕುಮಾರ್! ಭರಪೂರ ಶಿಳ್ಳೆ. ರಾಜ್‌ಹೊಸ ಸಿನೆಮಾ ಬಂದಾಗಲೆಲ್ಲ ಅಪ್ಪ ನೆನಪು ಮಾಡಿಕೊಂಡು ಹೇಳುತ್ತಿದ್ದ: ‘ಮಯೂರ’ ಸಿನೆಮಾವನ್ನು ತಾನು ಹನ್ನೆರಡು ಸಲ ಟಾಕೀಸಿಗೆ ಹೋಗಿ ನೋಡಿದ್ದನ್ನು. ತನ್ನ ಗೆಳೆಯನೊಬ್ಬ ಆ ಸಿನೆಮಾವನ್ನು ನೋಡಲೆಂದೇ ನೂರು ದಿನ ಸಾಗರಕ್ಕೆ ಬಸ್ ಹಿಡಿದು ಹೋಗಿತ್ತಿದ್ದುದನ್ನು. ‘ಸಂಪತ್ತಿಗೆ ಸವಾಲ್’ ಚಿತ್ರದ ಯಶಸ್ಸಿನ ಸಮಾರಂಭಕ್ಕೆಂದು ದಾವಣಗೆರೆಗೆ ಅಣ್ಣಾವ್ರು ಬಂದಾಗ ಹೂವಿನ ಹಾಸಿನ ಮೇಲೆ ಅವರನ್ನು ನಡೆಸಿದ್ದನ್ನು. ಆತ ಅದೆಷ್ಟು ಸಿಂಪಲ್ ಮನುಷ್ಯ, ಹೇಗೆ ಯಾರ ಜೊತೆಗಾದರೂ ಖುಷಿಖುಷಿಯಿಂದ ಮಾತಾಡುತ್ತಿದ್ದರು, ಬಿಳಿ ಅಂಗಿ-ಬಿಳಿ ಪಂಚೆ ತೊಟ್ಟು, ತಮ್ಮ ಹೆಸರಿಗೆ ಅನ್ವರ್ಥವಾಗುವಂತೆ ಬದುಕಿದರು, ಗೋಕಾಕ್ ಚಳವಳಿಯನ್ನು ತಾವೇ ಮುನ್ನಡೆಸಿದರು, ಹೇಗೆ ಎಲ್ಲರಿಗೂ ಆದರ್ಶವಾದರು ಎಂಬುದನ್ನು. ‘ಬಂಗಾರದ ಮನುಷ್ಯ’ ಬಿಡುಗಡೆಯಾಗಿ ವರ್ಷಗಟ್ಟಲೆ ಥಿಯೇಟರುಗಳಲ್ಲಿ ಓಡಿದಾಗ ಪತ್ರಿಕೆಯೊಂದರಲ್ಲಿ ಬಂದಿತ್ತಂತೆ: ಇನ್ನೂ ಈ ಸಿನೆಮಾ ನೋಡದವರು ಕನ್ನಡಿಗರೇ ಅಲ್ಲ ಎಂದು. ರಾಜ್ ಅಪಹರಣವಾದಾಗ ನಾವು ಕಾಲೇಜಿಗೆ ಹೋಗುತ್ತಿದ್ದೆವು. ಎಲ್ಲೆಲ್ಲು ಆವರಿಸಿದ ಮೌನ. ಪ್ರತಿದಿನ ಪತ್ರಿಕೆಗಳಲ್ಲಿ-ಟೀವಿಗಳಲ್ಲಿ ಅದೇ ಸುದ್ದಿ. ಇನ್ನೂ ನ್ಯೂಸ್‌ಛಾನೆಲ್ಲುಗಳ ಆರ್ಭಟ ಶುರುವಾಗಿರದ ಆ ದಿನಗಳಲ್ಲಿ ಸಂಜೆಯ ಟೀವಿ ವಾರ್ತೆ ನೋಡಲು ಎಲ್ಲರ ಮನೆಗಳಲ್ಲೂ ನುಗ್ಗು. ಎಲ್ಲರಿಗೂ ಆತಂಕ, ತಣಿಯದ ಬಾಧಕ. ಕಾಡಿಗೆ ನುಗ್ಗುವ ಧೀರರು, ಇಳಿಸಂಜೆಯ ರೇಡಿಯೋ ಸಂದೇಶಗಳು, ಇಲ್ಲಸಲ್ಲದ ಗಾಳಿಸುದ್ದಿಗಳು. ನೂರೆಂಟು ದಿನಗಳ ನಂತರ ಅವರು ಬಿಡುಗಡೆಯಾಗಿ ಬಂದಮೇಲೆಯೇ ಎಲ್ಲರೂ ನಿಟ್ಟುಸಿರಾದದ್ದು.  ರಾಜ್ ಆಮೇಲೆ ಸಿನೆಮಾ ಮಾಡಲೇ ಇಲ್ಲ. ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾಗ ಇಡೀ ನಾಡೇ ಕಣ್ಣೀರಾಯಿತು.ರಾಜ್ ಇಲ್ಲವಾಗಿ ಹತ್ತು ವರ್ಷಗಳೇ ಕಳೆದಿವೆ ಈಗ. ಹೊಸಹೊಸ ಹೀರೋಗಳು, ಥರಥರದ ಪ್ರಯೋಗಗಳು, ಯಾವ್ಯಾವುದೋ ದೇಶಗಳಲ್ಲಿ ನಡೆವ ಚಿತ್ರೀಕರಣಗಳು, ಬಿಡುಗಡೆಗೂ ನಾನಾ ವಿಶೇಷಗಳು. ಚಿತ್ರರಂಗ ಏನೆಲ್ಲ ಮಾಡಿದೆ, ನಾವು ಏನೆಲ್ಲ ನೋಡಿದ್ದೇವೆ. ಈ ಎಲ್ಲದರ ನಡುವೆ, ಅಣ್ಣಾವ್ರ ಹಳೆಯ ಸಿನೆಮಾವೊಂದು ಬಣ್ಣ ಹಚ್ಚಿಕೊಂಡು ಮತ್ತೆ ಬರುತ್ತಿದೆ ಎಂದಾದರೆ ಕುತೂಹಲದಿಂದ ಎದುರು ನೋಡುತ್ತೇವೆ.  ಯುಟ್ಯೂಬಿನಲ್ಲಿ ಆರ್‌ಎಜೆಕೆ ಎಂದು ಟೈಪ್ ಮಾಡಿದರೆ ಸಾಕು, ಅವರ ಸಿನೆಮಾಗಳನ್ನೂ, ಹಾಡುಗಳನ್ನೂ, ಡೈಲಾಗುಗಳನ್ನೂ ಸೂಚಿಸುತ್ತದೆ ತಂತ್ರಾಂಶ. ಸುಮ್ಮನೆ ಕ್ಲಿಕ್ ಮಾಡಿ: ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು -ರಾಜ್ ಹಾಡತೊಡಗುತ್ತಾರೆ ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ. ರಾಜ್ ಡೈಲಾಗುಗಳ ಡಬ್‌ಸ್ಮಾಶ್‌ಗಳು ಸೂಪರ್‌ಹಿಟ್. ಹಾರ್ಡ್‌ಡಿಸ್ಕ್ ಹೊಕ್ಕು ಭಾಗ್ಯದ ಲಕ್ಷ್ಮೀ ಬಾರಮ್ಮಾ ಎಂದು ಕರೆದರೆ, ರಾಜ್ ಬಂದು ‘ಏನು ಮಾಯವೋ ಏನು ಮರ್ಮವೋ’ ಎನ್ನುತ್ತಾ ನಮ್ಮನ್ನು ನಗಿಸುತ್ತಾರೆ. ‘...ಆ‌ಆ‌ಆ ಜಾರಿಣಿಯ ಮಗ’ –ಎಂದವರು ಅವುಡು ಕಚ್ಚಿ ಇತ್ತ ತಿರುಗಿದರೆ ನಮ್ಮ ಮೈ ರೋಮಾಂಚಗೊಳ್ಳುತ್ತದೆ. ನಮಗೂ ಅದೇ ಬೇಕಾಗಿದೆ. ಆಫೀಸು ಮುಗಿಸಿ ಮನೆಗೆ ಬಂದು ಟೀವಿ ಹಾಕಿದರೆ ದೇವತಾ ಮನುಷ್ಯನೊಬ್ಬ ಬರಬಾರದೇ ಎನಿಸುತ್ತದೆ. ಕೆಂಪಂಗಿ ತೊಟ್ಟು ನಗುನಗುತಾ ನಲೀ ಎಂದು ಉತ್ಸಾಹದ ಬುಗ್ಗೆಯಂತೆ ಯಾರಾದರೂ ಸಕ್ಕರೆ ಹಂಚಲಿ ಎನಿಸುತ್ತದೆ. ಸುಸ್ತಾಗಿ ಬಂದ ಹೆಂಡತಿಯ ಬಯಕೆಯೂ ಅದೇ: ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಅಂತ ಹಾಡಬಾರದೇ ಗಂಡ! ಸಿಟ್ಟಾದ ಈ ಸತ್ಯಭಾಮೆಯನ್ನು ಅನುನಯಿಸುವುದಾದರೂ ಹೇಗೆ? ರಾಜ್ ಹೇಳಿಕೊಟ್ಟಿದ್ದಾರೆ. ಒಡಹುಟ್ಟಿದವರೊಂದಿಗೆ ಹೇಗೆ ಬಾಳಬೇಕೆಂಬುದಕ್ಕೆ ರಾಜ್ ಬಳಿಯಿದೆ ಸೂತ್ರ. ಸಜ್ಜನಿಕೆ ಬಿಟ್ಟುಕೊಡದೆಯೂ ಅನ್ಯಾಯದ ವಿರುದ್ಧ ಹೋರಾಡುವುದು ಹೇಗೆ? ರಾಜ್ ಸಿನೆಮಾ ನೋಡಿ ಸಾಕು. ಅದಕ್ಕೇ ಅವರು ಅಂದೂ, ಇಂದೂ, ಮುಂದೂ ಪ್ರಸ್ತುತ. ಸದಾ ಮಿನುಗಬಲ್ಲ ಧ್ರುವತಾರೆ. ಯಾವಾಗ ಬಯಸಿದರೂ ಬರುವ ಶ್ರಾವಣ. ಬಿಸಿಲುಮಳೆಯಿಲ್ಲದಿದ್ದರೂ ಮೂಡಬಲ್ಲ ಕಾಮನಬಿಲ್ಲು.[ಡಾ। ರಾಜಕುಮಾರ್  ಹುಟ್ಟುಹಬ್ಬಕ್ಕಾಗಿ ಬರೆದದ್ದು . ವಿಶ್ವವಾಣಿಯ ವಿರಾಮದಲ್ಲಿ ಪ್ರಕಟಿತ. ]

... ಮುಂದೆ ಓದಿ


ಡಾ|| ರಾಜ್ – ಒಂದು ಮುತ್ತಿನ ಕತೆ
ಹೊನಲು - ಭಾನುವಾರ ೦೯:೩೦, ಏಪ್ರಿಲ್ ೨೩, ೨೦೧೭

– ವೆಂಕಟೇಶ್ ಯಗಟಿ. ಅದೊಂದು ದ್ರುವತಾರೆ, ಅದೊಂದು ಹೊಸಬೆಳಕು, ಅದೊಂದು ಮುತ್ತು ಮತ್ತು ಇದು ಒಂದು ಮುತ್ತಿನ ಕತೆ! ನನಗೆ ತಿಳಿದಿರೋ ಹಾಗೆ ಅಬಿಮಾನಿಗಳನ್ನು ದೇವರು ಎಂದು ಕರೆದ ಏಕೈಕ ವ್ಯಕ್ತಿ ಡಾ||ರಾಜಕುಮಾರ್. ನಮ್ಮೆಲ್ಲರ ಮುತ್ತುರಾಜ್. ರಾಜಕುಮಾರ್ ಅವರಂತಹ ನಟ ಸಾರ‍್ವಬೌಮ ಮತ್ತೆ ಹುಟ್ಟಿಬರಲು ನಾವಿನ್ನೆಶ್ಟು ಶತಮಾನಗಳು ಕಾಯಬೇಕೋ ದೇವರೇ ಬಲ್ಲ!! 24 ಏಪ್ರಿಲ್ 1929 ರಂದು... Read More ›... ಮುಂದೆ ಓದಿ


ಹಳೆಗನ್ನಡಕಾವ್ಯ ಸಂಗ್ರಹ
ಬಾಲವನ - ಭಾನುವಾರ ೦೪:೪೩, ಏಪ್ರಿಲ್ ೨೩, ೨೦೧೭

ಸೋಮೇಶ್ವರ ಶತಕ ಕುಮಾರವ್ಯಾಸ ರಚಿತ ಕರ್ನಾಟಕ ಭಾರತ ಕಥಾಮಂಜರಿಯಿಂದ ಆಯ್ದ ಕಾವ್ಯ ಸಂಗ್ರಹ ರನ್ನನ ಗಧಾಯುದ್ದ ಅಥವಾ ಸಾಹಸಭೀಮ ವಿಜಯFiled under: ಇತರೆ... ಮುಂದೆ ಓದಿ


ಇದುವೆ ಪ್ರೀತಿಯೋ?
ಹೊನಲು - ಶನಿವಾರ ೦೯:೩೦, ಏಪ್ರಿಲ್ ೨೨, ೨೦೧೭

– ಸುರಬಿ ಲತಾ. ಹೇಳದೇ ಕೇಳದೇ ಎದೆಯ ಗೂಡಿಗೆ ಲಗ್ಗೆ ಇಟ್ಟೆ, ಕಳ್ಳನಂತೆ ಕನಸುಗಳ ಕದ್ದೆ ನಿರಾಯಾಸವಾಗಿ ನಿರ‍್ಬಯವಾಗಿ ನಿದಿರೆಯ ಓಡಿಸಿದೆ ನಿಲ್ಲದೇ ಕಣ್ಣ ಮುಂದೆ ಕನವರಿಕೆಯಾದೆ ವಿನಯದಿಂದಲೇ ವಿರಹವ ಮೂಡಿಸಿ ಮನವ ಸೆಳೆದು ಮೌನವಾದೆ ಮುಗುಳು ನಗೆಯಲಿ ಸೆರೆಯಾದೆ ನೀನು ಮುಂಗೋಪಿಯೂ ಅಲ್ಲ ಮುಗ್ದನು ನೀನಲ್ಲ ನಿನಗಿಂತ ನನ್ನ ಅರಿತವರಾರೂ ಇಲ್ಲ ಇದುವೆ ಪ್ರೀತಿಯೋ? ನನಗರಿವಿಲ್ಲ... Read More ›... ಮುಂದೆ ಓದಿ


೧೦ ಮುಂದೆ›

“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ.