ಅರ್ಕಾವೊತ್ತು ಚಿಹ್ನೆಯ ಬಳಕೆ

ಕನ್ನಡದಲ್ಲಿ ಅರ್ಕಾವೊತ್ತು ಚಿಹ್ನೆಯು ಬರುವ “ನಿರ್ದೇಶಕ”, “ಮಾರ್ಗೋಪಾಯ” ಮುಂತಾದ ಪದಗಳಲ್ಲಿ ಅರ್ಕಾವೊತ್ತು ಧೀರ್ಘ ಚಿಹ್ನೆಗಿಂತ (length mark) ಮುಂಚೆ ಬರಬೇಕೋ ಅಥವಾ ಆಮೇಲೆ ಬರಬೇಕೋ ಎಂಬ ಸಂದೇಹ ಇದೆ.


ಚಿತ್ರ ೧) ಮೊದಲು ಅರ್ಕಾವೊತ್ತು, ಆಮೇಲೆ ಧೀರ್ಘ.


ಚಿತ್ರ ೨) ಮೊದಲು ಧೀರ್ಘ, ಆಮೇಲೆ ಅರ್ಕಾವೊತ್ತು.

ಗಣಕಗಳಲ್ಲಿ ಕನ್ನಡ ಬರುವದಕ್ಕೂ ಮೊದಲು ಮೊಳೆ ಅಚ್ಚುಗಳನ್ನು ಉಪಯೋಗಿಸಿ ಮುದ್ರಿತವಾದ ಹಲವಾರು ಪುಸ್ತಕಗಳನ್ನು ಗಮನಿಸಿದಾಗ (ಜ್ಞಾನ ಗಂಗೋತ್ರಿ (೧೯೭೧), ಕನ್ನಡ ರತ್ನಕೋಶ(೧೯೮೦), ಕನ್ನಡ ಸಾಹಿತ್ಯ ಪರಿಷತ್ತಿನ ೮ ಸಂಪುಟಗಳ ಬೃಹತ್ ನಿಘಂಟು...) ಮೊದಲು ಅರ್ಕಾವೊತ್ತು ನಂತರ ಧೀರ್ಘ ಚಿಹ್ನೆ ಉಪಯೋಗಿಸಿರುವುದನ್ನು ಕಾಣಬಹುದು. ಬರಹ ತಂತ್ರಾಂಶದಲ್ಲೂ ಇದೇ ಕ್ರಮವನ್ನು ಅನುಸರಿಸಲಾಗಿತ್ತು.


ಚಿತ್ರ ೩) ನಿಘಂಟುಗಳಲ್ಲಿ ಅರ್ಕಾವೊತ್ತಿನ ಬಳಕೆ

ಇತ್ತೀಚೆಗೆ ಕೆಲವು ಕನ್ನಡ ತಂತ್ರಾಂಶಗಳನ್ನು ಉಪಯೋಗಿಸಿ ತಯಾರಿಸಿದ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ ಅರ್ಕಾವೊತ್ತು ಧೀರ್ಘ ಚಿಹ್ನೆಯ ನಂತರ ಬಂದಿರುವುದನ್ನು ನಾವು ಕಾಣಬಹುದು. ಆ ತಂತ್ರಾಂಶಗಳ ಕನ್ನಡ ಕೀಬೋರ್ಡಿನಲ್ಲಿ ಒಂದು ಅಕ್ಷರವನ್ನು ಸಂಪೂರ್ಣವಾಗಿ ಟೈಪು ಮಾಡಿದ ನಂತರವೇ ಅರ್ಕಾವೊತ್ತು ಚಿಹ್ನೆಯನ್ನು ಟೈಪು ಮಾಡುವ ಅವಕಾಶವಿರುವುದೇ ಇದಕ್ಕೆ ಕಾರಣ. ಯೂನಿಕೋಡ್ ಆಧಾರಿತ ಮೈಕ್ರೋಸಾಫ್ಟಿನ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಈ ಕ್ರಮವನ್ನು ಅನುಸರಿಸಲಾಗಿದೆ.

ಬಹಳಷ್ಟು ಜನ ಎರಡು ರೀತಿಯ ಬಳಕೆಯನ್ನು ಒಪ್ಪುತ್ತಾರಾದರೂ ಕೆಲವರಲ್ಲಿ ಇದು ತಪ್ಪು ಅದು ಸರಿ ಎಂಬ ಭಾವನೆ ಇದೆ. ನಿಘಂಟು ತಜ್ಞ ಶ್ರೀ ಜಿ. ವೆಂಕಟಸುಬ್ಬಯ್ಯ ಅವರು ಎರಡೂ ಕ್ರಮಗಳನ್ನು ಅನುಮೋದಿಸುತ್ತಾರಾದರೂ ಚಿತ್ರ ೨) ರಲ್ಲಿ ತೋರಿಸಿರುವ ಕ್ರಮ ಹೆಚ್ಚು ಸಮಂಜಸ, ತಾರ್ಕಿಕವಾದದ್ದು ಎಂದು ಸೂಚಿಸಿದ್ದಾರೆ.


ಚಿತ್ರ ೪) ಜಿ.ವೆಂಕಟಸುಬ್ಬಯ್ಯ ಅವರ “ಇಗೋ ಕನ್ನಡ”ದಿಂದ

ಆದ್ದರಿಂದ, ಹಳೆಯ ಪುಸ್ತಕಗಳಲ್ಲಿ ಅರ್ಕಾವೊತ್ತಿನ ಬಳಕೆ ಏಕೆ ಹಾಗಿತ್ತು? ಎನ್ನುವ ಪ್ರಶ್ನೆಗಿಂತ ಕನ್ನಡ ಬಳಕೆಯಲ್ಲಿ ಗೊಂದಲಗಳಿಲ್ಲದಿರುವುದು, ಇತರೆ ತಂತ್ರಾಂಶಗಳ ಜೊತೆ ಹೊಂದಾಣಿಕೆಯಿರುವುದು ಮುಖ್ಯ ಎಂಬ ಉದ್ದೇಶದಿಂದ ಇನ್ನು ಮುಂದೆ ‘ಬರಹ’ದಲ್ಲಿ ಒಂದು ಅಕ್ಷರದ ಕಾಗುಣಿತ ಪೂರ್ತಿಯಾದ ನಂತರವೇ ಅರ್ಕಾವೊತ್ತನ್ನು ಮೂಡಿಸುವ ಕ್ರಮವನ್ನು ಅನುಸರಿಸಲಾಗುವುದು.