‘ಅನಕೃ ಮತ್ತು ಕನ್ನಡ ಸಂಸ್ಕೃತಿ’ ಕೃತಿ ಬಿಡುಗಡೆ


ಪ್ರಜಾವಾಣಿ ವಾರ್ತೆ
೧೭ ಸೆಪ್ಟೆಂಬರ್ ೨೦೦೬, ಬೆಂಗಳೂರು

‘ಅನಕೃ ಅವರು ಅಪ್ರತಿಮ ಭಾಷಣಕಾರರಾಗಿದ್ದು, ಅವರಂತಹ ಅಪರೂಪದ ಭಾಷಣಕಾರರು ಯಾವ ಭಾಷೆಯಲ್ಲೂ ಇಲ್ಲ’ ಎಂದು ವಿಮರ್ಶಕ ಸಿ.ಎನ್. ರಾಮಚಂದ್ರನ್ ಭಾನುವಾರ ಅಭಿಪ್ರಾಯಪಟ್ಟರು. ಅಂಕಿತ ಪುಸ್ತಕ ಹಾಗೂ ಅನಕೃ ಪ್ರತಿಷ್ಠಾನ ಜಂಟಿಯಾಗಿ ಇಂಡಿಂiನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದ್ಲಲಿ ಹಮ್ಮಿಕೊಂಡಿದ್ದ ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ‘ಅನಕೃ ಮತ್ತು ಕನ್ನಡ ಸಂಸ್ಕೃತಿ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಅನಕೃ ಅವರ ಭಾಷಣದ ಆಕರ್ಷಕ ಶೈಲಿ, ವಿದ್ವತ್ತು, ನೈತಿಕ ಸ್ಥೈರ್ಯ ಹಾಗೂ ದೈಹಿಕ ಆಕೃತಿ ಕೇಳುಗರನ್ನು ಸೆಳೆಯುತ್ತಿದ್ದದವು. ಆ ಮಟ್ಟದ ವಾಕ್ ಚಾತುರ್ಯವನ್ನು ಹೊಂದಿದ್ದರು’ ಎಂದರು.

‘ಅನಕೃ ಅವರು ೧೧೧ ಕಾದಂಬರಿಗಳು, ೨೪ ನಾಟಕಗಳು, ೩೧ ವೈಚಾರಿಕ ಕೃತಿಗಳು, ೧೧ ಸಂಪಾದಿತ ಕೃತಿಗಳು, ಎರಡು ಅನುವಾದ ಕೃಗಳು, ಒಂದು ಆತ್ಮಕತೆ ಸೇರಿದಂತೆ ಒಟ್ಟು ೧೯೨ ಕೃತಿಗಳನ್ನು ರಚಿಸಿದ್ದರು ಎಂದರೆ ನಿಜಕ್ಕೂ ಅಮೋಘ’ ಎಂದು ಶ್ಲಾಘಿಸಿದರು. ‘ಒಂದು ಕಾಲಘಟ್ಟದಲ್ಲಿ ಒಂದು ಪ್ರಭಾವಿ ವೈಚಾರಿಕತೆ ಪ್ರಸಿದ್ಧಿ ಪಡೆಯುತ್ತದೆ. ಮತ್ತೊಂದು ಕಾಲಘಟ್ಟದಲ್ಲಿ ಇನ್ನೊಂದು ವೈಚಾರಿತೆ ಬಂದಾಗ ಅದು ಶ್ರೇಷ್ಠ ಎನಿಸಿಕೊಳ್ಳುತ್ತದೆ. ಆದರೆ ಈ ಎರಡನ್ನೂ ಪರಸ್ಪರ ಹೋಲಿಸಿ ಶ್ರೇಷ್ಠತೆ ಗುರುತಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ನವೋದಯ ಕಾಲ: ‘ನವೋದಯ ಕಾಲದ ಎಲ್ಲಾ ಲೇಖಕರು ವಿವಿಧ ಕ್ಷೇತ್ರಗಳಲ್ಲಿ ವಿಫುಲವಾದ ಸಾಧನೆ ಮಾಡಿದ್ದಾರೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಮತ್ತೆ ಕಟ್ಟುವ ಆತುರ, ಕಾಳಜಿ, ಶ್ರಮ ಪ್ರತಿಯೊಬ್ಬ ಲೇಖಕರಲ್ಲೂ ಇತ್ತು’ ಎಂದು ವಿವರಿಸಿದರು. ‘ಬಿಎಂಶ್ರೀ ಹಾಗೂ ಅನಕೃ ಅವರು ನೋಡದ ಹಳ್ಳಿಗಳಿಲ್ಲ. ಅವರು ಭಾಷಣಗಳ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದರು. ಆದರೆ ನಾವೆಲ್ಲಾ ಅವರನ್ನೂ ಅವರ ಸಾಧನೆಗಳನ್ನು ಸುಲಭವಾಗಿ ಮರೆಯುವುದನ್ನು ಕಂಡಾಗ ಗಾಬರಿಯಾಗುತ್ತದೆ’ ಎಂದು ವಿಷಾದಿಸಿದರು. ‘ಪ್ರಗತಿಶೀಲ ಲೇಖಕರು ಸಾಹಿತ್ಯ ಸೃಷ್ಟಿಯನ್ನೇ ಜೀವನ ವಿಧಾನ ಮಾಡಿಕೊಂಡಿದ್ದರು. ಅನಕೃ ಕೂಡ ಬರವಣಿಗೆಯನ್ನೇ ವೃತ್ತಿಯಾಗಿ ಸ್ವೀಕರಿಸಿದ್ದದರಿಂದ ಅವರಲ್ಲಿ ಬದ್ಧತೆ ಇತ್ತು’ ಎಂದರು. ‘ಅನಕೃ ಸಾಮಾನ್ಯ ಜನರಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ಮೂಲಕ ಸಾವಿರಾರು ಓದುಗರನ್ನು ಸೃಷ್ಟಿಸಿದರು. ಕನ್ನಡ ಕಲಾವಿದರ ಅಸ್ತಿತ್ವದ ಉಳಿವಿಗಾಗಿ ಕೂಡ ಹೋರಾಡಿದರು. ಜೊತೆಗೆ ಕನ್ನಡ ಲೇಖಕರನ್ನು ಪ್ರೋತ್ಸಾಹಿಸಿದರು’ ಎಂದರು. ಕೃತಿಯ ಕುರಿತು ಮಾತನಾಡಿದ ಅವರು ‘ಅನಕೃ ಅವರ ಕನ್ನಡಕ್ಕಾಗಿ ದುಡಿದ ಬಗೆಯ ಒಂದು ಎಳೆಯ ಮೇಲೆ ಇಡೀ ಕೃತಿ ರಚನೆಯಾಗಿದೆ. ಇದರಿಂದಾಗಿ ‘ಅನಕೃ ಮತ್ತು ಕನ್ನಡ ಸಂಸ್ಕೃತಿ’ ಎಂಬ ಶೀರ್ಷಿಕೆಯೂ ಅರ್ಥಪೂರ್ಣವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್, ‘ನನ್ನ ಆದರ್ಶ ವ್ಯಕ್ತಿಗಳಲ್ಲಿ ಅನಕೃ ಕೂಡ ಒಬ್ಬರು. ಅವರ ಉತ್ಕೃಷ್ಟವಾದ ವಾಗ್ಮಿಯತೆ ಎಲ್ಲರನ್ನೂ ಸೆಳೆಯುತಿತ್ತು. ಜನರ ಹಿತ ಮತ್ತು ಅಭಿವೃದ್ಧಿಗಾಗಿ ಹಾಗೂ ಭಾಷೆಯ ಸಂರಕ್ಷಣೆಗಾಗಿ ಬೀದಿಗಿಳಿದು ಹೋರಾಟ ನಡೆಸಿದ ಅಪರೂಪದ ವ್ಯಕ್ತಿ’ ಎಂದರು.‘ಸಾಮಾನ್ಯ ಜನರಲ್ಲಿ ಓದುವ ಪ್ರವೃತ್ತಿಯನ್ನು ಹೆಚ್ಚಿಸುವ ಜೊತೆಗೆ ಕನ್ನಡಾಭಿಮಾನವನ್ನು ಮೂಡಿಸಿದರು. ಲೇಖಕನಿಗೆ ಎಲ್ಲಕ್ಕಿಂತಲೂ ಪ್ರೀತಿ, ಗೌರವಗಳೇ ಮುಖ್ಯ. ಇದನ್ನು ಅನಕೃ ಅಪಾರವಾಗಿ ಗಳಿಸಿದ್ದರು. ಅನೇಕ ಲೇಖಕರನ್ನು ರೂಪಿಸಿ ಪ್ರೋತ್ಸಾಹಿಸಿದರು’ ಎಂದು ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ರಾಘವೇಂದ್ರ ಪಾಟೀಲ ಕೃತಿ ಕುರಿತು ಮಾತನಾಡಿದರು. ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಉಪಸ್ಥಿತರಿದ್ದರು.

ದಟ್ಸ್‌ಕನ್ನಡವಾರ್ತೆ: ಅನಕೃ ಅವರ ಹೆಸರು ಕೇಳದ ಕನ್ನಡಿಗರಿಲ್ಲ. ಕಾದಂಬರಿ ಸಾರ್ವಭೌಮನಾಗಿ, ನಾಡು-ನುಡಿ ಹೋರಾಟದಲ್ಲಿ ಮುಂದಾಳಾಗಿ, ಅನುವಾದಕರಾಗಿ ಅನಕೃ ಎಲ್ಲರಿಗೂ ಪರಿಚಿತರು. ಅವರ ಬಗೆಗಿನ ಪುಸ್ತಕವೊಂದು ಇದೀಗ ಮಾರುಕಟ್ಟೆಗೆ ಬಂದಿದೆ.

ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಬರೆದಿರುವ ‘ಅನಕೃ ಮತ್ತು ಕನ್ನಡ ಸಂಸ್ಕೃತಿ’ ಪುಸ್ತಕವನ್ನು ಕವಿ ನಿಸಾರ್ ಅಹಮದ್ ಮತ್ತು ಪ್ರೊ. ರಾಘವೇಂದ್ರ ಪಾಟೀಲ್ ಬಿಡುಗಡೆ ಮಾಡಿದ್ದಾರೆ. ಅಂಕಿತ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ ರೂ.೯೫.

ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಅನಕೃ ವಿಶ್ವರೂಪವನ್ನು ವಿಮರ್ಶಕ ಸಿ.ಎನ್.ರಾಮಚಂದ್ರನ್ ವಿವರಿಸಿದರು. ಸುಮಾರು ೧೧೧ ಕಾದಂಬರಿ, ೨೪ ನಾಟಕ, ೩೧ ವೈಚಾರಿಕ ಕೃತಿ, ೧೧ ಸಂಪಾದಿತ ಕೃತಿ, ಎರಡು ಅನುವಾದ ಮತ್ತು ಒಂದು ಆತ್ಮಕತೆ ಸೇರಿದಂತೆ, ಒಟ್ಟು ೧೯೨ ಕೃತಿಗಳನ್ನು ಅನಕೃ ರಚಿಸಿದ್ದಾರೆ. ಆ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರಂತಹ ಉತ್ತಮ ಭಾಷಣಕಾರರು ಅತಿ ವಿರಳ ಎಂದು ರಾಮಚಂದ್ರನ್ ಶ್ಲಾಘಿಸಿದರು.

‘ಅನಕೃ ಮತ್ತು ಕನ್ನಡ ಸಂಸ್ಕೃತಿ’ ಕೃತಿಯಲ್ಲಿ ಅನಕೃ ಅವರ ದೈತ್ಯ ಶಕ್ತಿಯನ್ನು, ಆ ಶಕ್ತಿಯನ್ನು ಕನ್ನಡಕ್ಕಾಗಿ ಬಳಸಿಕೊಂಡ ವಿವರಗಳನ್ನು ಬಾಲಸುಬ್ರಹ್ಮಣ್ಯ ದಾಖಲಿಸಿದ್ದಾರೆ. ಅವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುವೆಂಪು ಸಾಹಿತ್ಯದ ಬಗ್ಗೆ ಅಧ್ಯಯನವನ್ನು ಪ್ರಸ್ತುತ ಬಾಲಸುಬ್ರಹ್ಮಣ್ಯ ಮುಂದುವರೆಸಿದ್ದಾರೆ.