ರಸಚೇತನ ಅನಕೃ


ಅನಕೃ ಕನ್ನಡಕ್ಕಾಗಿ ಸಲ್ಲಿಸಿದ ಸೇವೆಗಾಗಿ ನಾವು ಏನು ಮಾಡಿದ್ದೇವೆ? ಏಕೆ ಮಾಡಬೇಕು? ಅವರು ಮಂತ್ರಿಗಳೇ? ರಾಜ್ಯಪಾಲರೇ? ಯಾವುದಾದರು ಅಧಿಕಾರ ಸ್ಥಾನದಲ್ಲಿದ್ದವರೆ? ಶ್ರೀಮಂತರೇ? ಪ್ರಸಿದ್ಧ ಪತ್ರಿಕೆಯ ಸಂಪಾದಕರೆ? ಪ್ರಿಂಸಿಪಾಲರೆ? ಪ್ರೊಫೆಸರರೇ? ಕುಲಪತಿಗಳೆ? ರಾಜಕಾರಣಿಗಳೆ? ಅವರಿಗೆ ಸತ್ಕರಿಸುವುದರಿಂದ ಏನು ಪ್ರಯೋಜನ? ಅಭಿನಂದನ ಗ್ರಂಥಗಳನ್ನು ಹೊರಡಿಸಿ ಏನು ಉಪಯೋಗ?...

ಇನ್ನು ಕನ್ನಡಕ್ಕೆ ಸೇವೆ ಸಲ್ಲಿಸಿದ್ದಾರಲ್ಲ!. ಅದು ಬೇರೆ ಮಾತು. ಯಾರ ಉಪಕಾರಕ್ಕಾಗಿ ಅವರು ಬರೆದರು? ಸ್ವತಃದ ತೀಟೆ ತೀರಿಸಿಕೊಳ್ಳಲು ತಾನೆ ಬರೆದ್ದದ್ದು? ಬರೆದರೆ ನಮಗೇನಂತೆ? ಅವರಿಂದ ಕೆಲಸ ಸಾಧಿಸುವುದಿದೆಯೆ? ಹಾಗಿದ್ದರೆ ಒಂದಲ್ಲ ನಾಲ್ಕುಬಾರಿ ಅವರ ಸತ್ಕಾರ, ಪದ್ಮಶ್ರೀ, ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಗೌರವ, ಮಾಸಾಶನ, ವರ್ಷಾಶನ!. ಇಲ್ಲದಿದ್ದರೆ ಹೋಗಲಿ ಬಿಡಿ ಸತ್ತಮೇಲೆ ಸಮಾಧಿ ಕಟ್ಟಿಸಿದರಾಯಿತು. ಮೊಸಳೆ ಕಣ್ಣೀರು ಸುರಿಸಿದರಾಯಿತು. ಪರಿವಾರದವರು ಅನ್ನಾನ್ನಗತಿಕರಾಗಿ ಕೂಲಿ ಮಾಡುತ್ತಿದ್ದರೂ ಏನಂತೆ? ನಾವು ಇಲ್ಲಿ ಸಮಾಧಿಗೆ ಹೂವೇರಿಸಿ ನಾಲ್ಕು ಫೋಟೊಗ್ರಾಫರರಿಂದ ಫೋಟೊ ತೆಗೆಸಿ, ಅದನ್ನು ಪತ್ರಿಕೆಗಳಲ್ಲಿ ಮೂಡಿಸಿ ಸಂತೋಷಪಡುತ್ತೇವೆ. ಅತ್ತಕಡೆ ಅವರು ಕಣ್ಣೀರ ಕೊಳವೆಯಿಂದ ಕೈ ತೊಳೆಯುತ್ತಾರೆ. " ಮುದ್ದಣ " ಇರಲಿಲ್ಲವೆ? ಅವನು ಪಟ್ಟ ಪಾಡು ಏನು? ಕರ್ನಾಟಕದ ಶೇಕ್ಸ್‌ಪಿಯರ ಕಂದಗಲ್ಲ ಹನುಮಂತರಾಯರ ಕೊನೆಯ ದಿನಗಳ ಕಥೆ ಕೇಳಿದ್ದೀರೇನು? ಇಂಥ ನೂರಾರು ಹೆಸರುಗಳನ್ನು ಹೇಳಬಹುದು. ಇದ್ದಾಗ ಯಾರಿಗೂ ಬೇಕಾಗದ ಆತ ಕೊರಗಿ-ಸೊರಗಿ ಸತ್ತ ಮೇಲೆ ಸ್ಮೃತಿಗೋಪುರ ಕಟ್ಟುವ ಜಾಯಮಾನ ನಮ್ಮದೆ? ಗಾಂಧೀಜಿಯವರ ಬಗ್ಗೆ ನಾವು ಮಾಡಿದ್ದೇನು? ಅವರ ತತ್ವದ ಸಮಾಧಿ ಕಟ್ಟಿ ಶತಮಾನೋತ್ಸವ ಆಚರಿಸಿದೆವು. ಇದು ಸೂಕ್ತವೆ? ಇದು ತಿಳಿದವರ ಬುದ್ದಿಗೊಂದು ಸವಾಲು. ಈ ಒಗಟು ಬಿಡಿಸಿದಾಗ ನಮ್ಮ ಬಾಹ್ಯಾಡಂಬರ, ಒಣ ಪ್ರಶಂಸೆ, ಸ್ವಾರ್ಥ ಸ್ವವಂಚನೆ, ಎಲ್ಲವೂ ಬಯಲಿಗೆ ಬರುತ್ತದೆ.

-ಶಾ. ಮಂ. ಕೃಷ್ಣರಾಯ


ಅನಕೃ ಸಿದ್ಧಪ್ರಸಿದ್ಧ ವಾಗ್ಮಿ. ಅವರು ಭಾಷಣಕ್ಕೆ ನಿಂತರೆ ಸಾಕು, ಶಬ್ದಗಳು ಪುಂಖಾನುಪುಂಖವಾಗಿ ಸಿಂಹಗರ್ಜನೆಯಲ್ಲಿ ಹೊರಬರುತ್ತಿರುತ್ತವೆ. ಶ್ರೀಸಾಮಾನ್ಯನಿಗೂ ಅರ್ಥವಾಗುವ ವೈಖರಿ. ಆ ಸಿಡಿಲ ನುಡಿಯಲ್ಲಿ ಸಂಪ್ರದಾಯದ ವಿರುದ್ಧ ಬಂಡೇಳುವ, ರಾಜಕೀಯದ ವಿರುದ್ಧ ಹೋರಾಡುವ, ಅನ್ಯಾಯದ ವಿರುದ್ಧ ಕಾದಾಡುವ ಕೆಚ್ಚು ಇದೆ. ಯಾವ ವಿಷಯ ಕೊಟ್ಟರೂ ನಿರರ್ಗಳವಾಗಿ ಗಂಟೆಗಟ್ಟಲೆ ಮಾತನಾಡುವ ಕೃಷ್ಣರಾಯರು ನಿರ್ದಾಕ್ಷಿಣ್ಯರು. ಯಾರನ್ನೂ ನಿಷ್ಕಾರಣವಾಗಿ ಹೊಗಳುವುದಾಗಲಿ, ತೆಗಳುವುದಾಗಲಿ ಅವರಿಗೆ ಸೇರುವುದಿಲ್ಲ. ಅವರ ಅನೇಕ ಭಾಷಣಗಳನ್ನು ಕೇಳಿದ್ದೇನೆ. ಅವರ ವಾಗ್ವೈಖರಿಗೆ, ಸ್ಮರಣಶಕ್ತಿಗೆ ಮಾರು ಹೋಗಿದ್ದೇನೆ.

ಅನಕೃ ಮಾಡಿದ ಒಂದು ಮಹತ್ತರ ಕಾರ್ಯವೆಂದರೆ ಕನ್ನಡ ಚಳುವಳಿ. ಕರ್ನಾಟಕದ ರಾಜಧಾನಿಯಲ್ಲಿ ಕನ್ನಡೇತರ ಭಾಷಾಪ್ರೇಮ ಬೆಳೆಯುತ್ತಿರುವಾಗ, ಕರ್ನಾಟಕದಲ್ಲಿಯೇ ಕನ್ನಡಕ್ಕೆ ಬೆಲೆಯಿಲ್ಲವೆಂಬ ಭಾವನೆ ಮೂಡುತ್ತಿರುವಾಗ ಕೃಷ್ಣರಾಯರು ಕನ್ನಡದ ಪಾಂಚಜನ್ಯ ಊದಿದರು. ಬೆಂಗಳೂರು ನಗರದ ಕನ್ನಡಿಗರೆಲ್ಲ ಒಂದಾದರು. ದಿ.ರಾಮಮೂರ್ತಿಯವರು, ಶ್ರೀ ಎಂ.ಎಸ್. ನಟರಾಜನ್ ಸಾರಥಿಯಾದರು. ಅನೇಕರು ಅವರಿಗೆ ಬೆಂಬಲವಾದರು. "ಕನ್ನಡ ನಮ್ಮ ಭಾಷೆ, ಅದನ್ನು ಮರೆತು ಬಾಳುವುದು ಸರ್ವಥಾ ಮೂರ್ಖತನ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಧಾನ ಪೂಜೆ ಸಲ್ಲಲೇಬೇಕು. ಕನ್ನಡ ಆಡಳಿತ ಭಾಷೆಯಾಗಬೇಕು. ಕನ್ನಡ ಬಾಳಿ ಬದುಕಬೇಕು. ಇಲ್ಲದಿದ್ದರೆ ಕನ್ನಡ ಕಣ್ಮರೆಯಾದೀತು. ಅಂಗಡಿ-ಅಂಗಡಿಗಳಿಗೆ ಕನ್ನಡ ನಾಮಫಲಕ ತೂಗು ಹಾಕಬೇಕು. ಚಲಚಿತ್ರ ಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು, ವೃತ್ತಿಗಳಿಗೆ-ವ್ಯವಸಾಯಗಳಲ್ಲಿ ಕನ್ನಡಿಗರನ್ನು ಸೇರಿಸಬೇಕು."ಎಂಬ ಚಳುವಳಿ ಹೂಡಿದರು. ಬೆಂಗಳೂರಿನ ಬೀದಿ-ಬೀದಿಗಳಲ್ಲಿ ನಿಂತು ರಾಯರು ಮತ್ತು ಅವರ ಸಂಗಡಿಗರು ಕಹಳೆಯೂದಿದರು. ಅಂದು ಒಂದೊಂದು ಸಭೆಗೆ ಲಕ್ಷಾಂತರ ಜನ ಸೇರುತ್ತಿದ್ದರು. ಹೂಮಾಲೆಗಳ ರಾಶಿ, ಜಯಘೋಷಗಳಂತೂ ಗಗನಭೇದಿಸುವಂತೆ. ಇದರಿಂದ ಬೆಂಗಳೂರಿನಲ್ಲಷ್ಟೇ ಅಲ್ಲ. ಕರ್ನಾಟಕದ ತುಂಬ ಜಾಗೃತೆಯಾಯಿತು. ಹಿನ್ನಡೆಯಲ್ಲಿ ಕನ್ನಡ ಮುನ್ನಡೆಯಿತು. ಕನ್ನಡಿಗರಿಗೆ ವೃತ್ತಿ-ವ್ಯವಸಾಯಗಳಲ್ಲಿ ಅವಕಾಶ ಸಿಕ್ಕಿತು; ಕನ್ನಡ ಚಲಚಿತ್ರ ಪ್ರಪಂಚಕ್ಕಂತೂ ಅದರಿಂದ ತುಂಬ ಲಾಭವಾಯಿತು. ಚಿತ್ರ ಪ್ರದರ್ಶನಕ್ಕೆ ಎಲ್ಲ ಥಿಯೇಟರ್ ಮಾಲೀಕರೂ ಒಪ್ಪಿದರು. ತತ್ಪರಿಣಾಮವಾಗಿ ಕನ್ನಡ ಚಿತ್ರಗಳ ವಸಂತ ಋತು ಆರಂಭವಾಯಿತು. ಕೊನೆಗೆ ರಾಯರು ಸುಮ್ಮನಾದರು.

-ಆರ್. ನಾಗೇಂದ್ರರಾವ್


ತಾನು ಜನ್ಮವೆತ್ತಿದ ನಾಡಿಗೆ ಒಬ್ಬ ಸಾಹಿತಿ, ಕಲಾವಿದ, ಶ್ರೀಸಾಮಾನ್ಯ ಕೂಡ ಸಲ್ಲಿಸಬೇಕಾದ ಸೇವೆಯುಂಟು. ಋಣ ತೀರಿಕೆ ಎನ್ನಬಹುದು ಬೇಕಾದರೆ. ಅದನ್ನು ಎಷ್ಟು ಘನತರವಾಗಿ ಮಾಡಿದ್ದಾರೆ ಅನಕೃ!. ಒಬ್ಬ ಕೃಷ್ಣರಾಯರು ಸಲ್ಲಿಸಿರುವುದು ನೂರು ಸಾಹಿತಿಗಳ, ನೂರು ಕಲಾವಿದರ, ನೂರು ಜನ ನಾಡು ಕಟ್ಟುವವರ ಸಾಲವನ್ನು. ಒಂದು ಜೀವಮಾನದಲ್ಲೇ ಮಾಡಿರುವುದು ಹಲವು ಜನ್ಮಗಳ ಕೆಲಸ.

ಅ.ನ. ಕೃಷ್ಣರಾಯರ ಹಲವು ಸಾಧನೆಗಳಲ್ಲಿ ಅತ್ಯಂತ ಶ್ರೇಷ್ಠವಾದುದು ಯಾವುದು ? ತನ್ನತನದ ಅರಿವನ್ನು ಕನ್ನಡ ಜನಪದದಲ್ಲಿ ಮೂಡಿಸಿದ್ದು. ಸತ್ತವರಂತೆ ಬಿದ್ದಿದ್ದ ಕನ್ನಡ ಜನ ಅನಕೃ ವಾಣಿಯನ್ನು ಕೇಳಿ ಚೇತರಿಸಿಕೊಂಡರು. ಹಲವು ಆಡಳಿತಗಳಲ್ಲಿ ನಾಡು ಹಂಚಿಹೋಗಿದ್ದ ವೇಳೆಯಲ್ಲೂ, ಕನ್ನಡಿಗರೆಲ್ಲ ಒಂದೇ ನೆಲದ ಮಕ್ಕಳೆಂಬ ಭಾವನೆಯನ್ನು ರೂಪಿಸಿದರು. ವಾಚನಾಭಿರುಚಿಯನ್ನು ಕನ್ನಡ ಜನರಲ್ಲಿ ಉಂಟುಮಾಡಿದ ವೆಂಕಟಾಚಾರ್ಯ, ಗಳಗನಾಥರ ಸಾಲಿನಲ್ಲಿ ನಿಲ್ಲುವ ಹೆಸರು ಅನಕೃ. ಅವರು ಕಣ್ಡಾಡಿಸಿದ ಲೇಖನಿ, ಸಂದರ್ಶಿಸಿದ ಕುಂಚ ಹೊಸ ಸೃಷ್ಟಿಗೆ ಕಾರಣವಾದವು. ಅವರ ಭುಜವನೇರಿ,"ಇನ್ನೂ ದೂರ ಕಾಣಿಸುತ್ತದೆ"ಎಂದು ನುಡಿದವರು ಎಷ್ಟು ಜನ!. ಸರಸ್ವತಿಯ ಅನುಗ್ರಹದ ಬೆಲೆ ಅವರ ಒಂದು ಪ್ರೋತ್ಸಾಹದ ನುಡಿಗೆ. ನವೋದಯದ ತಂಗಾಳಿ, ಹೊಂಬಿಸಿಲುಗಳಲ್ಲಿ ಗರಿಗೆದರಿದ ನಾಡಿನ ಹತ್ತು ಮೂಲೆಗಳ ನೂರು ಹಕ್ಕಿಗಳಿಗೆ"ಅನುಭವ ಮಂಟಪ"ವಾಯಿತು ಅನಕೃ ಮನೆ.

ವಿಮರ್ಶಕರು ನುಡಿಯಬಹುದು:"ಅನಕೃ ಬರೆದುದೆಲ್ಲ ಶ್ರೇಷ್ಟ ಸಾಹಿತ್ಯವಲ್ಲ".

ನಿಜವಾದ ಮಾತೇ. ಆದರೆ ಬರೆದುದೆಲ್ಲವೂ ಶ್ರೇಷ್ಟವಾಗಿರುವ ಸಾಹಿತಿ ಈ ಲೋಕದಲ್ಲಿ ಯಾರಿದ್ದಾರೆ? ಒಂದು ಕೃತಿ ಇರಬಹುದು, ಹತ್ತು ಇರಬಹುದು, ಶ್ರೇಷ್ಠ ಸಾಹಿತ್ಯವನ್ನು ಲೇಖಕನೊಬ್ಬ ರಚಿಸಿದ್ದಾನೆ ಎನ್ನುವುದೇ ಹೆಗ್ಗಳಿಕೆಯ ಅಂಶ. ವಾಸ್ತವ ಸಂಗತಿಯೆಂದರೆ, ಅನಕೃ ಹಿರಿಮೆಗೆ ಕಾರಣ ಅವರ ಬರವಣಿಗೆ ಮಾತ್ರವಲ್ಲ. ಅದು, ಅವರ ಒಟ್ಟು ಕಾಯಕ; ಮೇರೆ, ತೂಕಗಳನ್ನು ಖಚಿತಪಡಿಸಲಾರದಂಥ ಸಾಧನೆ. ಅನಕೃರಿಂದ ಸಾಹಿತ್ಯ ಜನಪ್ರಿಯವಾಯಿತು. ಅವರ ಕಣ್ಕಾಪಿನಲ್ಲಿ ಹಲವಾರು ಯುವಕ ಲೇಖಕರು ಉತ್ತಮ ಕತೆಗಾರರಾದರು, ಕಾದಂಬರಿಕಾರರಾದರು. ಕಲಾವಿದರು - ಚಿತ್ರಕಾರರು, ಸಂಗೀತಗಾರರು, ನಟರು ಬೆಳಕಿಗೆ ಬಂದರು. ಜಾತಿಯ ಕೋಟೆಗಳು ಪಾಳು ಬಿದ್ದವು. ಕುರುಡು ಸಂಪ್ರದಾಯಗಲೂ ಬಿಲ ಸೇರಿದವು. ಏಕೀಕೃತ ನಾಡಿನ ಚಿತ್ರ ಸ್ಫುಟವಾಯಿತು.

-ನಿರಂಜನ