ಅನಕೃ ಮನೆ ಈಗ ಚಪ್ಪಲಿ ಗೋದಾಮು



ಅನಕೃ ಅವರ ವಿವಿ ಪುರಂ ಮನೆ

ಖ್ಯಾತ ಕಾದಂಬರಿಕಾರ ಅ.ನ. ಕೃಷ್ಣರಾಯರ ಜತೆಯಲ್ಲೇ ಅವರ ಮನೆಯೂ ಇತಿಹಾಸ ಸೇರಲು ಸಿದ್ಧವಾಗಿದೆ!

ಬೆಂಗಳೂರು, ಮೇ ೧೪-ಕನ್ನಡ ಸಾಹಿತ್ಯದ ದಿಗ್ಗಜ ಅನಕೃ ಬಾಳಿದ ಮನೆ ಈಗ ಪಾದರಕ್ಷೆಗಳನ್ನಿಡುವ ಗೋದಾಮು. ಹೌದು, ಕನ್ನಡದ ಪ್ರಾತಃಸ್ಮರಣೀಯ ಬರಹಗಾರರೊಬ್ಬರಿಗೆ ಸುವರ್ಣ ಕರ್ನಾಟಕ ಮಹೋತ್ಸವ ವರ್ಷದ ಸಂದರ್ಭದಲ್ಲಿ ನಾವು ನೀಡುತ್ತಿರುವ ಗೌರವಾದರದ ಪರಿಯಿದು. ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ಅ.ನ.ಕೃಷ್ಣರಾಯರ ಮನೆ ೫೦ರ ದಶಕದಲ್ಲಿ ಸಾಹಿತ್ಯಕ ಚಟುವಟಿಕೆಗಳ ಕೇಂದ್ರ. ಸದಾ ಸಾಹಿತಿಗಳಿಂದ ತುಂಬಿ ತುಳುಕುತ್ತಿದ್ದ ಅವರ ಮನೆಯಂಗಳದಲ್ಲಿ ಈಗ ಉಳಿದಿರುವುದು ಒಣಗಿದ ಎಲೆಗಳು, ಕಸ-ಕಡ್ಡಿಗಳ ರಾಶಿ ಮಾತ್ರ. ಅದು ಬಿಟ್ಟರೆ, ಪ್ರತಿಷ್ಠಿತ ಪಾದರಕ್ಷೆ ಅಂಗಡಿಯೊಂದರ ಗೋದಾಮು ಎಂಬ ಕೆಂಪು ಫಲಕ ರಾರಾಜಿಸುತ್ತಿದೆ.

ಮುಂದಿನ ವರ್ಷ ಅನಕೃ ಶತಮಾನೋತ್ಸವ. ಅವರ ಹೆಸರಲ್ಲಿ ರಾಜ್ಯದೆಲ್ಲೆಡೆ ನೂರಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದರೂ ಮನೆಯ ಕಡೆ ಯಾರಿಗೂ ಗಮನವಿಲ್ಲ. “ರಾಜ್ಯದ ಸಾಹಿತಿಗಳಿಗೆಲ್ಲರಿಗೂ ಅವರ ಮನೆ ಸಾಹಿತ್ಯದ ನೆಲೆ ವೀಡಾಗಿತ್ತು. ಆದರಿಂದು ಪಾಳು ಬಿದ್ದ ಮನೆಯನ್ನು ನೋಡಿದರೆ ಮರುಕ ಹುಟ್ಟುತ್ತದೆ. ಸರಸ್ವತಿ ನೆಲೆಸಿದ್ದ ಆ ಮನೆ ಪಾದರಕ್ಷೆಗಳನ್ನಿಡುವ ಗೂಡಾಗಿದೆ. ಯಾವ್ಯಾವುದೋ ಹೆಸರಲ್ಲಿ ಕನ್ನಡ ಪರ ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಇಂಥ ಸಾರಸ್ವತ ದಿಗ್ಗಜರ ಮನೆಯ ಕುರಿತು ಎಂಥ ನಿರ್ಲಕ್ಷ ನೋಡಿ” ಎಂದು ಬರಹಗಾರ ಕೋ. ಚೆನ್ನಬಸಪ್ಪ ಅವರು ಬೇಸರಿಸುತ್ತಾರೆ. “ಮಹಾನಗರ ಪಾಲಿಕೆ ಅಥವಾ ಸಂಬಂಧಿಸಿದ ಇಲಾಖೆ ಬೇರೆಯವರ ಸ್ವತ್ತಾಗಿರುವ ಆ ಮನೆಯನ್ನು ಪುನಃ ಪಡೆದು ಸ್ಮಾರಕ ನಿರ್ಮಿಸಲು ಮನಸ್ಸು ಮಾಡಬೇಕು. ಸಂಸ್ಕೃತಿ ಇಲಾಖೆಯು ಅವರ ಸಾಹಿತ್ಯ ಕೃತಿಗಳನ್ನು ಮರು ಪ್ರಕಟಿಸಬೇಕು” ಎಂಬ ಸಲಹೆ ಅನಕೃ ಪ್ರತಿಷ್ಠಾನದ ಖಚಾಂಚಿ ಆಗಿರುವ ಬರಹ ಕನ್ನಡ ತಂತ್ರಾಂಶದ ನಿರ್ಮಾತೃ ಶೇಷಾದ್ರಿವಾಸು ಅವರ ತಂದೆ ಕೆ.ಟಿ. ಚಂದ್ರಶೇಖರ್ ಅವರದು.

ಸರಕಾರದ ನಿರ್ಲಕ್ಷ್ಯ: ಪ್ರತಿವರ್ಷ ಅನಕೃ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವ, ಮನೆಯನ್ನು ಪುನರುಜ್ಜೀವನಗೊಳಿಸುವ ಆಶ್ವಾಸನೆ ಸುಮಾರು ಹತ್ತು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆದರೆ ಫಲ ಮಾತ್ರ ಕಂಡಿಲ್ಲ. ಪ್ರತಿಷ್ಠಾನ ಸೇರಿದಂತೆ ಕನ್ನಡ ಅಭಿಮಾನಿಗಳ ಸಂಘಗಳು ಹಲವು ವರ್ಷಗಳಿಂದ ಈ ಸಂಬಂಧ ಧ್ವನಿ ಎತ್ತಿ ಪ್ರಯತ್ನಮುಖಿಯಾಗಿವೆ. ಆದರೆ ಸರಕಾರವನ್ನು ಓಲೈಸುವ ಅವರ ಪ್ರಯತ್ನ ಕೋಣನ ಮುಂದೆ ಕಿಂದರಿಯನ್ನು ಭಾರಿಸಿದಂತಾಗಿದೆ.

“ಅನಕೃ ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ಅವರ ಕಾದಂಬರಿಯೊಂದರ ಪ್ರಭಾವದಿಂದ ಮನುಷ್ಯತ್ವದ ಅರಿವು ನನ್ನ ನ್ನಾವರಿಸಿತ್ತು” ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂದರ್ಶನ ವೊಂದರಲಿಹೇಳಿದ್ದರು. ಈ ಹಿನ್ನೆಲೆಯಲ್ಲೇ ಅನಕೃ ಮನೆ ಇರುವ ಪರಿಸ್ಥಿತಿ ಕುರಿತು ಪ್ರತಿಷ್ಠಾನ ವಿವರಿಸಿ ಪುನರುಜ್ಜೀವನಗೊಳಿಸುವ ಆಶಾಭಾವನೆಯಿಂದ ಸಹಾಯಹಸ್ತ ಚಾಚಿದರೆ ‘ಕೆಲಸದ ಒತ್ತಡದ ನಡುವೆ ಆ ಕುರಿತು ವಿಚಾರಿಸಲು ಸಮಯವಿಲ್ಲ’ ಎಂದಿದ್ದರು. ಅನಕೃ ಅವರ ಮತ್ತೊಬ್ಬ ಕಟ್ಟಾ ಅಭಿಮಾನಿ, ಎಂ.ಪಿ. ಪ್ರಕಾಶ್, ತಮ್ಮ ಅಧಿಕಾರಾವಧಿಯಲ್ಲಿ ಸಹಾಯ ಕೇಳಲು ಬಂದವರನ್ನು ಅವಮಾನಿಸಿ ಕಳುಹಿಸಿದ್ದರು. ತಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳಲು ಕಂಡಕಂಡಲ್ಲಿ ಭಾಷಣ ಮಾಡುವ ಗಣ್ಯರ ನಿಜ ಮುಖ ಹೀಗಿದೆ. “ಯಾರ ಸಹಕಾರವೂ ಇಲ್ಲದೆ ಅವರ ಹೆಸರು ಸಾಹಿತ್ಯ ವಲಯದಲ್ಲಿ ಅಳಿಯದಂತೆ ಪ್ರತಿಷ್ಠಾನ ಕಾರ್ಯ ನಿರ್ವಹಿಸುತ್ತಿದೆ” ಎನ್ನುತ್ತಾರೆ ಚಂದ್ರಶೇಖರ್.

“ನಮ್ಮ ತಂದೆಯವರ ಸಾಹಿತ್ಯದ ಸೊಗಡು ಹೊರಹೊಮ್ಮುತ್ತಿದ್ದುದೇ ಇದೇ ವಿವಿಪುರಂನ ಓಣಿಯ ಮನೆಯಿಂದ. ಆದರೆ ಅವರ ಸಾವಿನೊಂದಿಗೆ ಆ ಮನೆಯೂ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಆರ್ಥಿಕ ಮುಗ್ಗಟ್ಟಿನ ಕಾರಣ ಮನೆಯನ್ನು ಮಾರಲಾಯಿತು. ಸರಕಾರ ಇದನ್ನು ವಶಪಡಿಸಿಕೊಂಡು ಸ್ಮಾರಕ ನಿರ್ಮಿಸುವ ಆಸಕ್ತಿಯನ್ನೂ ತೋರಲಿಲ್ಲ. ಸಾಹಿತ್ಯ, ಸಂಸ್ಕೃತಿಗೆ ಮೀಸಲಾಗಿರುವ ಸಾಹಿತ್ಯಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಈ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿಲ್ಲ. ಪಾಲಿಕೆಗೆ ಈ ಕುರಿತು ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅದೇ ಜಾಗದಲ್ಲೀಗ ಸ್ಮಾರಕ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಸೂಕ್ತ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡಿದರೆ ಶತಮಾನೋತ್ಸವ ಸಂದರ್ಭದಲಾದರೂ ಕಾದಂಬರಿಕಾರನೊಬ್ಬನ ಹೆಸರನ್ನು ಚಿರಸ್ಥಾಯಿಯಾಗಿಸುವ ಯೋಜನೆ ಇದೆ” ಎಂದು ಅನಕೃ ಅವರ ಪುತ್ರ ಗೌತಮ್ ಅಭಿಪ್ರಾಯ ಪಡುತ್ತಾರೆ.

-ಶುಭಾ ಕಡಬಾಳ
ವಿಜಯ ಕರ್ನಾಟಕ, ಮೇ ೧೫ ೨೦೦೬.